ಪ್ರಧಾನಿ ಮೋದಿಗೆ ಕರೆ ಮಾಡಿದ ಅಮೆರಿಕ ಅಧ್ಯಕ್ಷ ಟ್ರಂಪ್: ಹಾರ್ಮುಜ್ ಜಲಸಂಧಿ-ದ್ವಿಪಕ್ಷೀಯ ಸಹಕಾರದ ಕುರಿತು ಚರ್ಚೆ

ನವದೆಹಲಿ: ಇರಾನ್‌ ಮತ್ತು ಅಮೆರಿಕದ ನಡುವೆ ತಾತ್ಕಾಲಿಕ ಕದನ ವಿರಾಮ ಒಪ್ಪಂದ ಏರ್ಪಟ್ಟ ನಂತರ, ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮೊದಲ ಬಾರಿಗೆ ದೂರವಾಣಿ ಮೂಲಕ ಸುದೀರ್ಘ ಮಾತುಕತೆ ನಡೆಸಿದ್ದಾರೆ. ಸುಮಾರು 40 ನಿಮಿಷಗಳ ಕಾಲ ನಡೆದ ಈ ಸಂಭಾಷಣೆಯಲ್ಲಿ ಪಶ್ಚಿಮ ಏಷ್ಯಾದ ಪ್ರಸ್ತುತ ಸ್ಥಿತಿಗತಿ ಮತ್ತು ಭಾರತ-ಅಮೆರಿಕ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯ ಕುರಿತು ಮಹತ್ವದ ಚರ್ಚೆಗಳು ನಡೆದಿವೆ.
ಜಾಗತಿಕ ವ್ಯಾಪಾರಕ್ಕೆ ಅತ್ಯಂತ ನಿರ್ಣಾಯಕವಾಗಿರುವ ಹಾರ್ಮುಜ್ ಜಲಸಂಧಿಯನ್ನು (Strait of Hormuz) ಮುಕ್ತವಾಗಿ ಮತ್ತು ಸುರಕ್ಷಿತವಾಗಿರಿಸುವ ಅಗತ್ಯವನ್ನು ಉಭಯ ನಾಯಕರು ಒತ್ತಿಹೇಳಿದ್ದಾರೆ. ಇರಾನ್ ಆಯ್ದ ಹಡಗುಗಳನ್ನು ತಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಚರ್ಚೆ ಮಹತ್ವ ಪಡೆದಿದೆ.

“ನನ್ನ ಸ್ನೇಹಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ ಕರೆ ಬಂದಿದೆ. ವಿವಿಧ ಕ್ಷೇತ್ರಗಳಲ್ಲಿ ನಮ್ಮ ದ್ವಿಪಕ್ಷೀಯ ಸಹಕಾರದಲ್ಲಿ ಸಾಧಿಸಲಾದ ಗಣನೀಯ ಪ್ರಗತಿಯನ್ನು ನಾವು ಪರಿಶೀಲಿಸಿದ್ದೇವೆ” ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ. “ಎಲ್ಲಾ ಕ್ಷೇತ್ರಗಳಲ್ಲಿ ನಮ್ಮ ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ನಾವು ಬದ್ಧರಾಗಿದ್ದೇವೆ. ಪಶ್ಚಿಮ ಏಷ್ಯಾದ ಪರಿಸ್ಥಿತಿಯನ್ನು ಸಹ ನಾವು ಚರ್ಚಿಸಿದ್ದೇವೆ ಮತ್ತು ಹಾರ್ಮುಜ್ ಜಲಸಂಧಿಯನ್ನು ಮುಕ್ತ ಮತ್ತು ಸುರಕ್ಷಿತವಾಗಿಡುವ ಮಹತ್ವವನ್ನು ಒತ್ತಿ ಹೇಳಿದ್ದೇವೆ” ಎಂದು ಮೋದಿ ಹೇಳಿದ್ದಾರೆ.
ಸಂಭಾಷಣೆಯ ವೇಳೆ ಅಧ್ಯಕ್ಷ ಟ್ರಂಪ್ ಅವರು ಪ್ರಧಾನಿ ಮೋದಿಯವರನ್ನು ಶ್ಲಾಘಿಸುತ್ತಾ, “ನಾವೆಲ್ಲರೂ ನಿಮ್ಮನ್ನು ಪ್ರೀತಿಸುತ್ತೇವೆ ಎಂಬುದು ನಿಮಗೆ ತಿಳಿದಿರಲಿ ಎಂದು ನಾನು ಬಯಸುತ್ತೇನೆ” ಎಂದು ಪ್ರೀತಿಯ ಮಾತುಗಳನ್ನಾಡಿದ್ದಾರೆ ಎಂದು ಅಮೆರಿಕದ ರಾಯಭಾರಿ ಸೆರ್ಗಿಯೋ ಗೋರ್ ತಿಳಿಸಿದ್ದಾರೆ.
ವಿವಿಧ ವಲಯಗಳಲ್ಲಿ ಭಾರತ ಮತ್ತು ಅಮೆರಿಕ ನಡುವಿನ ಸಹಕಾರದ ಪ್ರಗತಿಯನ್ನು ಉಭಯ ನಾಯಕರು ಪರಿಶೀಲಿಸಿದ್ದು, ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಬದ್ಧತೆ ಪ್ರದರ್ಶಿಸಿದ್ದಾರೆ.

ಪಶ್ಚಿಮ ಏಷ್ಯಾದಲ್ಲಿ ಶಾಂತಿ ಪ್ರಕ್ರಿಯೆ ಮತ್ತು ಭಾರತದ ಪಾತ್ರ:
ಅಮೆರಿಕ ಮತ್ತು ಇರಾನ್ ನಡುವೆ ಪ್ರಸ್ತುತ ಎರಡು ವಾರಗಳ ಕಾಲದ ದುರ್ಬಲ ಕದನ ವಿರಾಮ ಜಾರಿಯಲ್ಲಿದೆ. ಪಾಕಿಸ್ತಾನದಲ್ಲಿ ನಡೆದ ಮಾತುಕತೆ ವಿಫಲವಾದ ನಂತರ ಈಗ ಎರಡನೇ ಸುತ್ತಿನ ಮಾತುಕತೆಗೆ ಪ್ರಯತ್ನಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ ಶಾಂತಿ ಸ್ಥಾಪನೆಯಲ್ಲಿ ಭಾರತದ ಪಾತ್ರದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅಮೆರಿಕದ ರಾಯಭಾರಿ ಗೋರ್, “ಶಾಂತಿ ಪ್ರಕ್ರಿಯೆಯಲ್ಲಿ ಭಾರತದ ಪಾಲ್ಗೊಳ್ಳುವಿಕೆಯನ್ನು ಅಮೆರಿಕ ಸ್ವಾಗತಿಸುತ್ತದೆ” ಎಂದು ಹೇಳಿದ್ದಾರೆ.
“ಅಧ್ಯಕ್ಷ ಟ್ರಂಪ್ ಅವರು ಪ್ರಧಾನಿ ಮೋದಿಯವರಿಗೆ ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಮತ್ತು ವಾಷಿಂಗ್ಟನ್‌ನಲ್ಲಿ ನಡೆಯುತ್ತಿರುವ ಪ್ರಮುಖ ವಿಷಯಗಳ ಬಗ್ಗೆ ನಿಯಮಿತವಾಗಿ ಅಪ್‌ಡೇಟ್ ನೀಡುತ್ತಿರುತ್ತಾರೆ ಎಂದು ಭಾರತಕ್ಕೆ ಅಮೆರಿಕದ ರಾಯಭಾರಿಯಾಗಿರುವ ಸೆರ್ಗಿಯೋ ಗೋರ್ ಹೇಳಿದ್ದಾರೆ.
ಇದಕ್ಕೂ ಮುನ್ನ ಮಾರ್ಚ್ 24ರಂದು ಉಭಯ ನಾಯಕರು ಮಾತನಾಡಿದ್ದರು. ಆಗ ಮೋದಿ ಅವರು ಪಶ್ಚಿಮ ಏಷ್ಯಾದಲ್ಲಿ ಶೀಘ್ರವಾಗಿ ಶಾಂತಿ ಮರುಸ್ಥಾಪನೆಯಾಗಬೇಕು ಎಂಬ ಭಾರತದ ನಿಲುವನ್ನು ಸ್ಪಷ್ಟಪಡಿಸಿದ್ದರು.
ಅಮೆರಿಕವು ಇರಾನ್ ಬಂದರುಗಳ ಮೇಲೆ ಹೊಸ ದಿಗ್ಬಂಧನವನ್ನು ಹೇರಿದ ಮರುದಿನವೇ ಈ ದೂರವಾಣಿ ಕರೆ ಬಂದಿರುವುದು ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ಕುತೂಹಲ ಮೂಡಿಸಿದೆ.

ಪ್ರಮುಖ ಸುದ್ದಿ :-   ಕೇವಲ 23ನೇ ವಯಸ್ಸಿಗೆ 19 ಸರ್ಕಾರಿ ಪರೀಕ್ಷೆ ಪಾಸ್ ! ರಾಷ್ಟ್ರಪತಿಯಿಂದ 'ಅಟ್-ಹೋಮ್' ಗೌರವಕ್ಕೆ ಆಯ್ಕೆಯಾದ ಯುವತಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement