ಪಿಒಕೆ ಮೇಲೆ ಭಾರತದ ಹಕ್ಕು ಪ್ರತಿಪಾದನೆ ; ಪಾಕ್ ಆಕ್ರಮಿತ ಕಾಶ್ಮೀರಕ್ಕೂ ಅನ್ವಯವಾಗಲಿದೆ ಡಿಲಿಮಿಟೇಶನ್ ಮಸೂದೆ ; ಕ್ಷೇತ್ರಗಳು ನಿಗದಿ..!

ನವದೆಹಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರ (PoK) ಒಂದು ವೇಳೆ ಭಾರತದ ನಿಯಂತ್ರಣಕ್ಕೆ ಮರಳಿದರೆ, ಅಲ್ಲಿನ ಚುನಾವಣಾ ಕ್ಷೇತ್ರಗಳ ಮರುವಿಂಗಡಣೆ ಪ್ರಕ್ರಿಯೆಯನ್ನು ನಡೆಸಲು ಅಗತ್ಯವಿರುವ ಕಾನೂನು ಚೌಕಟ್ಟನ್ನು ರೂಪಿಸುವ ‘ಡಿಲಿಮಿಟೇಶನ್ ಬಿಲ್ 2026’ (ಕ್ಷೇತ್ರ ಮರುವಿಂಗಡಣೆ ವಿಧೇಯಕ) ಅನ್ನು ಕೇಂದ್ರ ಸರ್ಕಾರ ಈ ವಾರ ಸಂಸತ್ತಿನಲ್ಲಿ ಮಂಡಿಸಲು ಸಜ್ಜಾಗಿದೆ. ಈ ಪ್ರದೇಶದ ಮೇಲಿನ ಭಾರತದ ದೀರ್ಘಕಾಲದ ಸಾಂವಿಧಾನಿಕ ಹಕ್ಕನ್ನು ಮತ್ತೊಮ್ಮೆ ದೃಢೀಕರಿಸುವ ಉದ್ದೇಶದಿಂದ ಈ ಕ್ರಮಕ್ಕೆ ಸರ್ಕಾರ ಮುಂದಾಗಿದೆ ಎನ್ನಲಾಗಿದೆ.
ಪ್ರಸ್ತಾವಿತ ಕಾನೂನು, ಪಾಕಿಸ್ತಾನದ ಆಕ್ರಮಣದಲ್ಲಿರುವ ಪ್ರದೇಶಗಳ ಸ್ಥಿತಿಗತಿ ಬದಲಾದ ತಕ್ಷಣ, ಅಲ್ಲಿ ಕ್ಷೇತ್ರ ಮರುವಿಂಗಡಣಾ ಆಯೋಗವಾಗಿ ಕಾರ್ಯನಿರ್ವಹಿಸಲು ಭಾರತೀಯ ಚುನಾವಣಾ ಆಯೋಗಕ್ಕೆ ಅಧಿಕಾರ ನೀಡುತ್ತದೆ. ಪ್ರಸ್ತುತ, ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ 24 ಸ್ಥಾನಗಳನ್ನು ಈ ಪ್ರದೇಶಗಳಿಗಾಗಿ ಮೀಸಲಿಡಲಾಗಿದೆ. ಆದರೆ, ಈವರೆಗೆ ಅಲ್ಲಿ ಯಾವುದೇ ಚುನಾವಣೆಗಳು ನಡೆದಿಲ್ಲ.

ಸಂಸತ್ತಿನ ಕಾರ್ಯಸೂಚಿ ಮತ್ತು ಬಹುಮತದ ಲೆಕ್ಕಾಚಾರ
ವಿಸ್ತರಿಸಲಾದ ಮೂರು ದಿನಗಳ ಬಜೆಟ್ ಅಧಿವೇಶನದಲ್ಲಿ ಈ ವಿಧೇಯಕವನ್ನು ಚರ್ಚೆಗೆ ತೆಗೆದುಕೊಳ್ಳುವ ಸಾಧ್ಯತೆಯಿದೆ. ಸರ್ಕಾರದ ಮೂಲಗಳ ಪ್ರಕಾರ ಈ ವಿಧೇಯಕಕ್ಕೆ ಕೇವಲ ಸಾಮಾನ್ಯ ಬಹುಮತದ (Simple Majority) ಅಗತ್ಯವಿದ್ದು, ಆಡಳಿತಾರೂಢ ಮೈತ್ರಿಕೂಟವು ಇದನ್ನು ಸುಲಭವಾಗಿ ಅಂಗೀಕರಿಸುವ ವಿಶ್ವಾಸದಲ್ಲಿದೆ.
ಆದರೆ, ಇದರ ಜೊತೆಗಿರುವ ಸಂವಿಧಾನದ (131ನೇ ತಿದ್ದುಪಡಿ) ವಿಧೇಯಕ 2026 ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳ (ತಿದ್ದುಪಡಿ) ವಿಧೇಯಕ 2026 ಅನ್ನು ಅಂಗೀಕರಿಸಲು ವಿಶೇಷ ಬಹುಮತದ ಅಗತ್ಯವಿದೆ.
ಐತಿಹಾಸಿಕ ಹಿನ್ನೆಲೆ ಮತ್ತು ಭಾರತದ ನಿಲುವು
ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೇಲಿನ ಭಾರತದ ಹಕ್ಕು 1947ರಲ್ಲಿ ಮಹಾರಾಜ ಹರಿ ಸಿಂಗ್ ಅವರು ಸಹಿ ಮಾಡಿದ ‘ಇನ್‌ಸ್ಟ್ರುಮೆಂಟ್ ಆಫ್ ಅಕ್ಸೆಶನ್’ (ವಿಲೀನ ಒಪ್ಪಂದ) ಮೇಲೆ ಆಧಾರಿತವಾಗಿದೆ. 1994ರಲ್ಲಿ ಸಂಸತ್ತು ಸರ್ವಾನುಮತದಿಂದ ಅಂಗೀಕರಿಸಿದ ನಿರ್ಣಯವು ಪಾಕಿಸ್ತಾನವು ಆಕ್ರಮಿತ ಕಾಶ್ಮೀರದ ಪ್ರದೇಶಗಳನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿತ್ತು.

ಪ್ರಮುಖ ಸುದ್ದಿ :-   ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅಧ್ಯಾಯ; ಕಕ್ಷೆ ತಲುಪಿದ ಸ್ಕೈರೂಟ್‌ನ ಖಾಸಗಿ ರಾಕೆಟ್ ‘ವಿಕ್ರಂ-1’

ಆಡಳಿತಾತ್ಮಕ ನಿಯಂತ್ರಣವಿಲ್ಲದಿದ್ದರೂ, ಭಾರತವು ಸಾಂಸ್ಥಿಕವಾಗಿ ಈ ಹಕ್ಕನ್ನು ಉಳಿಸಿಕೊಂಡು ಬಂದಿದೆ. ಜಮ್ಮು ಮತ್ತು ಕಾಶ್ಮೀರದ ಒಟ್ಟು ಸ್ಥಾನಗಳ ಸಂಖ್ಯೆ ಕಾಲಕಾಲಕ್ಕೆ ಬದಲಾಗಿದ್ದರೂ, ಪಾಕ್‌ ಆಕ್ರಮಿತ ಕಾಶ್ಮೀರ(PoK)ಕ್ಕಾಗಿ ಮೀಸಲಿಟ್ಟ 24 ಸ್ಥಾನಗಳಲ್ಲಿ ಯಾವುದೇ ಬದಲಾವಣೆ ಮಾಡದೆ ಹಾಗೆಯೇ ಉಳಿಸಿಕೊಳ್ಳಲಾಗಿದೆ.
2019 ರಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ, ಜಮ್ಮು ಮತ್ತು ಕಾಶ್ಮೀರವನ್ನು ಸಂಪೂರ್ಣವಾಗಿ ಸಂಯೋಜಿಸುವ ಸರ್ಕಾರದ ಬದ್ಧತೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಪುನರುಚ್ಚರಿಸಿದ್ದಾರೆ. ಹಿಂದಿನ ಎಲ್ಲಾ ಸರ್ಕಾರಗಳು ಸಹ ಪಾಕ್‌ ಆಕ್ರಮಿತ ಕಾಶ್ಮೀರ(PoK) ವಿಷಯದಲ್ಲಿ ಪಕ್ಷಾತೀತವಾಗಿ ಇದೇ ನಿಲುವನ್ನು ತಳೆದಿವೆ.

ವಿಪಕ್ಷಗಳ ಪ್ರಶ್ನೆ
ಮತ್ತೊಂದೆಡೆ, ವಿರೋಧ ಪಕ್ಷಗಳು ಈ ವಿಧೇಯಕ ಮಂಡನೆಯ ಸಮಯದ ಬಗ್ಗೆ ಪ್ರಶ್ನೆ ಎತ್ತಿವೆ. ಯಾವುದೇ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯು ಹೊಸ ಜನಗಣತಿಯ (Census) ಆಧಾರದ ಮೇಲೆ ನಡೆಯಬೇಕು ಮತ್ತು ಇದರ ರಾಜಕೀಯ ಪರಿಣಾಮಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಅವು ವಾದಿಸಿವೆ. ಆದರೆ, ಸಾಂವಿಧಾನಿಕ ಚೌಕಟ್ಟನ್ನು ಪೂರ್ಣಗೊಳಿಸಲು ಮತ್ತು ಭಾರತದ ಪ್ರಾದೇಶಿಕ ನಿಲುವನ್ನು ಬಲಪಡಿಸಲು ಈ ಶಾಸನ ಅಗತ್ಯ ಎಂದು ಸರ್ಕಾರ ಪ್ರತಿಪಾದಿಸಿದೆ.

ಪ್ರಮುಖ ಸುದ್ದಿ :-   8 ವರ್ಷಗಳ ಪ್ರೇಮದಲ್ಲಿ ಬಿರುಕು ; ಯುವತಿ ಆತ್ಮಹತ್ಯೆ, ಮೃತದೇಹಕ್ಕೆ ಪ್ರಿಯಕರ ಮಂಗಳಸೂತ್ರ ಕಟ್ಟಬೇಕು ಎಂದು ಕುಟುಂಬಸ್ಥರ ಪಟ್ಟು...

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement