ತೆಹ್ರಾನ್/ವಾಷಿಂಗ್ಟನ್: ಪಶ್ಚಿಮ ಏಷ್ಯಾದಲ್ಲಿ ಉಂಟಾಗಿದ್ದ ಉದ್ವಿಗ್ನತೆಯ ನಡುವೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಲೆಬನಾನ್ ಮತ್ತು ಇಸ್ರೇಲ್ ನಡುವಿನ ಕದನ ವಿರಾಮದ ಹಿನ್ನೆಲೆಯಲ್ಲಿ, ವಿಶ್ವದ ಪ್ರಮುಖ ತೈಲ ಸಾಗಾಣಿಕಾ ಮಾರ್ಗವಾದ ‘ಹಾರ್ಮುಜ್ ಜಲಸಂಧಿ’ಯನ್ನು (Strait of Hormuz) ವಾಣಿಜ್ಯ ಹಡಗುಗಳ ಸಂಚಾರಕ್ಕಾಗಿ ಸಂಪೂರ್ಣವಾಗಿ ಮುಕ್ತಗೊಳಿಸಲಾಗಿದೆ ಎಂದು ಇರಾನ್ ಘೋಷಿಸಿದೆ.
ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಅವರು ಸಾಮಾಜಿಕ ಜಾಲತಾಣ ‘X’ ನಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ. “ಲೆಬನಾನ್ನಲ್ಲಿನ ಕದನ ವಿರಾಮಕ್ಕೆ ಅನುಗುಣವಾಗಿ, ಹಾರ್ಮುಜ್ ಜಲಸಂಧಿಯ ಮೂಲಕ ಎಲ್ಲಾ ವಾಣಿಜ್ಯ ನೌಕೆಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಇರಾನ್ನ ಬಂದರು ಮತ್ತು ಕಡಲ ಸಂಸ್ಥೆ ಈಗಾಗಲೇ ಸೂಚಿಸಿರುವ ಸಮನ್ವಯ ಮಾರ್ಗದ ಮೂಲಕ ಈ ಸಂಚಾರ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯೆ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಈ ಸುದ್ದಿಯನ್ನು ದೃಢಪಡಿಸಿದ್ದು, “ಇರಾನ್ ಜಲಸಂಧಿಯನ್ನು ಸಂಪೂರ್ಣವಾಗಿ ತೆರೆದಿದೆ, ಧನ್ಯವಾದಗಳು!” ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಆದರೆ, ಮತ್ತೊಂದು ಪೋಸ್ಟ್ನಲ್ಲಿ ಟ್ರಂಪ್ ಒಂದು ಪ್ರಮುಖ ಎಚ್ಚರಿಕೆಯನ್ನೂ ನೀಡಿದ್ದಾರೆ. “ಜಲಸಂಧಿ ಮುಕ್ತವಾಗಿದ್ದರೂ ಸಹ, ಇರಾನ್ ಜೊತೆಗಿನ ‘ವ್ಯವಹಾರ’ (transaction) ಪೂರ್ಣಗೊಳ್ಳುವವರೆಗೆ ಅಮೆರಿಕದ ನೌಕಾ ದಿಗ್ಬಂಧನ (Naval Blockade) ಮುಂದುವರಿಯಲಿದೆ ಎಂದು ಅವರು ತಿಳಿಸಿದ್ದಾರೆ. ಅಲ್ಲದೆ, ಇರಾನ್ ಇನ್ನು ಮುಂದೆ ಎಂದಿಗೂ ಹಾರ್ಮುಜ್ ಜಲಸಂಧಿಯನ್ನು ಮುಚ್ಚುವುದಿಲ್ಲ ಮತ್ತು ಅದನ್ನು ಜಗತ್ತಿನ ವಿರುದ್ಧ ‘ಆಯುಧ’ವಾಗಿ ಬಳಸುವುದಿಲ್ಲ ಎಂದು ಒಪ್ಪಿಕೊಂಡಿದೆ ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ.
ಕುಸಿದ ಕಚ್ಚಾ ತೈಲ ಬೆಲೆ
ಹಾರ್ಮುಜ್ ಜಲಸಂಧಿ ಮುಕ್ತಗೊಂಡ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಶೇ. 10 ರಷ್ಟು ಕುಸಿತ ಕಂಡಿದೆ ಎಂದು ‘ಅಸೋಸಿಯೇಟೆಡ್ ಪ್ರೆಸ್’ ವರದಿ ಮಾಡಿದೆ. ಇದು ಜಾಗತಿಕ ಆರ್ಥಿಕತೆಗೆ ದೊಡ್ಡ ಸಮಾಧಾನ ತಂದಿದೆ.
ಇಸ್ರೇಲ್-ಲೆಬನಾನ್ 10 ದಿನಗಳ ಕದನ ವಿರಾಮ ಒಪ್ಪಂದ
ಇಸ್ರೇಲ್ ಮತ್ತು ಲೆಬನಾನ್ ನಡುವೆ 10 ದಿನಗಳ ಕಾಲ ಸಂಘರ್ಷ ಸ್ಥಗಿತಗೊಳಿಸುವ ಕದನ ವಿರಾಮ ಒಪ್ಪಂದಕ್ಕೆ ಅಮೆರಿಕ ಅಧ್ಯಕ್ಷ ಟ್ರಂಪ್ ಗುರುವಾರ ಚಾಲನೆ ನೀಡಿದ್ದಾರೆ. ಇತಿಹಾಸದಲ್ಲೇ ಮೊದಲ ಬಾರಿಗೆ ಈ ಎರಡೂ ದೇಶಗಳ ನಾಯಕರ ನಡುವೆ ಸಭೆ ನಡೆಸಲು ಪ್ರಯತ್ನಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ಇರಾನ್ ಜೊತೆಗಿನ ಯುದ್ಧವನ್ನು ಕೊನೆಗೊಳಿಸುವ ಅಮೆರಿಕದ ಪ್ರಯತ್ನದ ಭಾಗವಾಗಿ ಈ ಒಪ್ಪಂದ ನಡೆದಿದೆ. ಯಾವುದೇ ಒಪ್ಪಂದ ನಡೆಯಬೇಕಿದ್ದರೂ ಲೆಬನಾನ್ನಲ್ಲಿ ಕದನ ವಿರಾಮ ಅತ್ಯಗತ್ಯ ಎಂದು ಇರಾನ್ ಪಟ್ಟು ಹಿಡಿದಿತ್ತು. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಲೆಬನಾನ್ ಅಧ್ಯಕ್ಷ ಜೋಸೆಫ್ ಔನ್ ಅವರೊಂದಿಗೆ ನಡೆಸಿದ ಸುದೀರ್ಘ ದೂರವಾಣಿ ಮಾತುಕತೆಯ ನಂತರ ಈ ಒಪ್ಪಂದ ಸಾಧ್ಯವಾಗಿದೆ. ಮುಂದಿನ 4-5 ದಿನಗಳಲ್ಲಿ ಈ ಇಬ್ಬರೂ ನಾಯಕರು ಅಮೆರಿಕದಶ್ವೇತ ಭವನಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ.
ಬ್ರಿಟನ್ ಮತ್ತು ಫ್ರಾನ್ಸ್ ಸ್ವಾಗತ
ಹಾರ್ಮುಜ್ ಜಲಸಂಧಿಯ ಪುನರಾರಂಭವನ್ನು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಮತ್ತು ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಸ್ವಾಗತಿಸಿದ್ದಾರೆ. ಆದರೆ ಈ ಮುಕ್ತ ಸಂಚಾರವು ಕೇವಲ ತಾತ್ಕಾಲಿಕವಾಗದೆ ಕಾಯಂ ಆಗಿರಬೇಕು ಎಂದು ಅವರು ಒತ್ತಾಯಿಸಿದ್ದಾರೆ.
“ಎಲ್ಲಾ ಕಡೆಯಿಂದಲೂ ಜಲಸಂಧಿಯನ್ನು ಬೇಷರತ್ತಾಗಿ ಮತ್ತು ತಕ್ಷಣವೇ ಮುಕ್ತಗೊಳಿಸಬೇಕು ಎಂಬುದು ನಮ್ಮ ಆಗ್ರಹ ಎಂದು ಮ್ಯಾಕ್ರನ್ ಹೇಳಿದ್ದಾರೆ. “ಜಲಸಂಧಿ ತೆರೆದಿರುವುದು ಒಂದು ಸುಸ್ಥಿರ ಮತ್ತು ಕಾರ್ಯಸಾಧ್ಯವಾದ ಪ್ರಸ್ತಾವನೆಯಾಗಬೇಕು. ಸಮುದ್ರ ಸಂಚಾರದ ಸುರಕ್ಷತೆಗಾಗಿ ನಮ್ಮ ಬಹುರಾಷ್ಟ್ರೀಯ ಮಿಷನ್ ಸಿದ್ಧತೆ ಮುಂದುವರಿಯಲಿದೆ ಎಂದು ಕೀರ್ ಸ್ಟಾರ್ಮರ್ ಹೇಳಿದ್ದಾರೆ.
ಮುಂದಿನ ವಾರ ಲಂಡನ್ನಲ್ಲಿ ನಡೆಯಲಿರುವ ಮಿಲಿಟರಿ ಯೋಜಕರ ಸಭೆಯಲ್ಲಿ ಸಮುದ್ರ ಭದ್ರತೆಯನ್ನು ಮರುಸ್ಥಾಪಿಸುವ ಕುರಿತು ಅಂತಾರಾಷ್ಟ್ರೀಯ ಮಿಷನ್ ಬಗ್ಗೆ ಚರ್ಚಿಸಲು ಉಭಯ ದೇಶಗಳು ನಿರ್ಧರಿಸಿವೆ.


ನಿಮ್ಮ ಕಾಮೆಂಟ್ ಬರೆಯಿರಿ