ಹಾರ್ಮುಜ್ ಜಲಸಂಧಿಯಲ್ಲಿ ಭಾರತದ ಧ್ವಜವಿದ್ದ ಹಡಗುಗಳ ಮೇಲೆ ಇರಾನಿನ ಗನ್ ಬೋಟ್ ಗಳಿಂದ ಗುಂಡಿನ ದಾಳಿ

ದುಬೈ/ನವದೆಹಲಿ: ಜಾಗತಿಕ ತೈಲ ವ್ಯಾಪಾರದ ಪ್ರಮುಖ ಕೇಂದ್ರವಾಗಿರುವ ಹಾರ್ಮುಜ್ ಜಲಸಂಧಿಯಲ್ಲಿ ಶನಿವಾರ ಭಾರೀ ಉದ್ವಿಗ್ನತೆ ಸೃಷ್ಟಿಯಾಗಿದೆ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಪಡೆಯು ಎರಡು ಭಾರತೀಯ ಧ್ವಜ ಹೊಂದಿರುವ ವಾಣಿಜ್ಯ ಹಡಗುಗಳ ಮೇಲೆ ಗುಂಡಿನ ದಾಳಿ ನಡೆಸಿದ್ದು, ಹಡಗುಗಳು ಅನಿವಾರ್ಯವಾಗಿ ತಮ್ಮ ಪಯಣವನ್ನು ಅರ್ಧಕ್ಕೇ ನಿಲ್ಲಿಸಿ ಹಿಂತಿರುಗಿವೆ ಎಂದು ಸಮುದ್ರ ಭದ್ರತಾ ಮೂಲಗಳು ಖಚಿತಪಡಿಸಿವೆ ಎಂದು ವರದಿಯಾಗಿದೆ.
ದಾಳಿಗೊಳಗಾದ ಹಡಗುಗಳಲ್ಲಿ ಸುಮಾರು 20 ಲಕ್ಷ ಬ್ಯಾರೆಲ್ ಇರಾಕಿ ತೈಲವನ್ನು ಹೊತ್ತೊಯ್ಯುತ್ತಿದ್ದ ಭಾರತೀಯ ಸೂಪರ್ ಟ್ಯಾಂಕರ್ ಕೂಡ ಸೇರಿದೆ. ಶಿಪ್ಪಿಂಗ್ ಮಾನಿಟರ್ ‘ಟ್ಯಾಂಕರ್‌ಟ್ರಾಕರ್ಸ್’ ವರದಿ ಮಾಡಿರುವಂತೆ, ಇರಾನ್‌ನ ಕ್ರಾಂತಿಕಾರಿ ಪಡೆಯ ಗನ್‌ಬೋಟ್‌ಗಳು ಗುಂಡು ಹಾರಿಸಿ ಹಡಗುಗಳನ್ನು ಪಶ್ಚಿಮದ ಕಡೆಗೆ ತಿರುಗುವಂತೆ ಮಾಡಿವೆ. ಯುನೈಟೆಡ್ ಕಿಂಗ್‌ಡಮ್ ಮ್ಯಾರಿಟೈಮ್ ಟ್ರೇಡ್ ಆಪರೇಷನ್ಸ್ (UKMTO) ಕೂಡ ಈ ಗುಂಡಿನ ಚಕಮಕಿಯನ್ನು ದೃಢಪಡಿಸಿದೆ.
ಕೀಶ್ಮ್ (Qeshm) ಮತ್ತು ಲಾರಕ್ ದ್ವೀಪಗಳ ನಡುವಿನ ಸಮುದ್ರದಲ್ಲಿ ಈ ಘಟನೆ ನಡೆದಿದ್ದು, ಒಂದು ಕಂಟೇನರ್ ಹಡಗಿನ ಮೇಲೂ ದಾಳಿಯಾಗಿದೆ ಎಂದು ತಿಳಿದುಬಂದಿದೆ.

ಹಾರ್ಮುಜ್ ಜಲಸಂಧಿ ಸಂಪೂರ್ಣ ಬಂದ್” – ಇರಾನ್
ಘಟನೆಯ ವೇಳೆ ರೇಡಿಯೋ ಸಂದೇಶಗಳ (VHF) ಮೂಲಕ ಇರಾನ್ ಕಠಿಣ ಎಚ್ಚರಿಕೆ ನೀಡಿದೆ. ಅಮೆರಿಕ ಸರ್ಕಾರವು ಮಾತುಕತೆಯಲ್ಲಿ ನೀಡಿದ್ದ ಭರವಸೆಯನ್ನು ಈಡೇರಿಸಲು ವಿಫಲವಾಗಿರುವ ಕಾರಣ, ಹಾರ್ಮುಜ್ ಜಲಸಂಧಿಯನ್ನು “ಸಂಪೂರ್ಣವಾಗಿ ಮುಚ್ಚಲಾಗಿದೆ” ಎಂದು ಇರಾನ್ ಘೋಷಿಸಿದೆ. ಯಾವುದೇ ದೇಶದ ಅಥವಾ ಯಾವುದೇ ರೀತಿಯ ಹಡಗುಗಳು ಈ ಮಾರ್ಗದಲ್ಲಿ ಚಲಿಸುವಂತಿಲ್ಲ ಎಂದು ಇರಾನ್ ಸೇನೆ ಸ್ಪಷ್ಟಪಡಿಸಿದೆ.
ಭಾರತೀಯ ಹಡಗುಗಳ ಸ್ಥಿತಿ ಮತ್ತು ಸಿಬ್ಬಂದಿ ಸುರಕ್ಷತೆ
ಶನಿವಾರ ಬೆಳಿಗ್ಗೆ ಎಂಟು ಭಾರತಕ್ಕೆ ಬರಬೇಕಿದ್ದ ಹಡಗುಗಳು ಈ ಮಾರ್ಗವಾಗಿ ಬರಲು ಪ್ರಯತ್ನಿಸಿದ್ದವು. ಆದರೆ, ‘ದೇಶ ಗರಿಮಾ’ ಎಂಬ ಹಡಗನ್ನು ಹೊರತುಪಡಿಸಿ ಉಳಿದ ಏಳು ಹಡಗುಗಳು ಉದ್ವಿಗ್ನತೆಯ ಕಾರಣ ಹಿಂತಿರುಗಿವೆ.

ಪ್ರಮುಖ ಸುದ್ದಿ :-   ಉಪವಾಸ ಸತ್ಯಾಗ್ರಹದ 21ನೇ ದಿನ : ಜಂತರ್ ಮಂತರ್‌ನಿಂದ ಸೋನಂ ವಾಂಗ್ಚುಕ್‌ರನ್ನು ಆಸ್ಪತ್ರೆಗೆ ಕರೆದೊಯ್ದ ಪೊಲೀಸರು

ಭಾರತ ಸರ್ಕಾರದ ಪ್ರತಿಕ್ರಿಯೆ:
ದಾಳಿಗೊಳಗಾದ ಹಡಗಿನಲ್ಲಿದ್ದ ಎಲ್ಲಾ ಭಾರತೀಯ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಮತ್ತು ಹಡಗಿಗೆ ಯಾವುದೇ ಹೆಚ್ಚಿನ ಹಾನಿಯಾಗಿಲ್ಲ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಭಾರತ, ಇರಾನ್ ರಾಯಭಾರಿಗೆ ಸಮನ್ಸ್ ನೀಡಿ ಅಧಿಕೃತವಾಗಿ ತನ್ನ ಪ್ರತಿಭಟನೆ ದಾಖಲಿಸಿದೆ. ಡೈರೆಕ್ಟರೇಟ್ ಜನರಲ್ ಆಫ್ ಶಿಪ್ಪಿಂಗ್ (DGS) ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಸಮುದ್ರಯಾನಿಗಳ ಸುರಕ್ಷತೆಗೆ ಆದ್ಯತೆ ನೀಡಿದೆ.
ಉಲ್ಬಣಗೊಂಡ ಇರಾನ್-ಅಮೆರಿಕ ಸಂಘರ್ಷ
ಅಮೆರಿಕವು ಇರಾನ್‌ನ ಬಂದರು ಮತ್ತು ಹಡಗುಗಳ ಮೇಲೆ ದಿಗ್ಬಂಧನ ಹೇರಿರುವುದಕ್ಕೆ ಪ್ರತಿಯಾಗಿ ಇರಾನ್ ಈ ಕ್ರಮ ಕೈಗೊಂಡಿದೆ. ಇರಾನ್ ಸಂಸತ್ತಿನ ರಾಷ್ಟ್ರೀಯ ಭದ್ರತಾ ಆಯೋಗದ ಮುಖ್ಯಸ್ಥ ಇಬ್ರಾಹಿಂ ಅಜೀಜಿ ಮಾತನಾಡಿ, “ಹಾರ್ಮುಜ್ ಜಲಸಂಧಿಯು ಹಳೆಯ ಸ್ಥಿತಿಗೆ ಮರಳುತ್ತಿದೆ. ಇನ್ನು ಮುಂದೆ ಈ ಮಾರ್ಗದಲ್ಲಿ ಸಂಚರಿಸುವ ಹಡಗುಗಳು ಇರಾನ್ ನೌಕಾಪಡೆಯ ಅನುಮತಿ ಪಡೆಯಬೇಕು ಮತ್ತು ಕಡ್ಡಾಯವಾಗಿ ಸುಂಕ ಪಾವತಿಸಬೇಕು,” ಎಂದು ತಿಳಿಸಿದ್ದಾರೆ.

ಜಾಗತಿಕ ಇಂಧನ ಬಿಕ್ಕಟ್ಟಿನ ಭೀತಿ
ವಿಶ್ವದ ಒಟ್ಟು ತೈಲ ವ್ಯಾಪಾರದ ಸುಮಾರು ಐದನೇ ಒಂದು ಭಾಗ ಹಾರ್ಮುಜ್ ಜಲಸಂಧಿಯ ಮೂಲಕವೇ ನಡೆಯುತ್ತದೆ. ಕೇವಲ ಒಂದು ದಿನದ ಹಿಂದಷ್ಟೇ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಜಲಸಂಧಿಯನ್ನು ಮುಕ್ತಗೊಳಿಸುವುದಾಗಿ ಹೇಳಿದ್ದರು. ಆದರೆ, ಅಮೆರಿಕದ ಜೊತೆಗಿನ ಉದ್ವಿಗ್ನತೆ ಹೆಚ್ಚಾದ ಬೆನ್ನಲ್ಲೇ ಇರಾನ್‌ನ ಪರಮೋಚ್ಚ ನಾಯಕ ಮೊಜ್ತಾಬಾ ಖಮೇನಿ, ಶತ್ರುಗಳಿಗೆ “ಹೊಸ ಕಹಿ ಸೋಲುಗಳನ್ನು” ಉಣಿಸುವುದಾಗಿ ಎಚ್ಚರಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಾತುಕತೆಯ ಮೂಲಕ ಶುಭ ಸುದ್ದಿಯ ಭರವಸೆ ನೀಡಿದ್ದರೂ, ಏಪ್ರಿಲ್ 22ರೊಳಗೆ ಒಪ್ಪಂದ ಏರ್ಪಡದಿದ್ದರೆ ಸಂಘರ್ಷ ಮುಂದುವರಿಯುವ ಸಾಧ್ಯತೆ ಇದೆ. ಈ ಬೆಳವಣಿಗೆಯಿಂದಾಗಿ ಜಾಗತಿಕ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಆತಂಕ ಎದುರಾಗಿದೆ.

ಪ್ರಮುಖ ಸುದ್ದಿ :-   ವಿಡಿಯೊ | ಸಿಜೆಪಿ ಸಂಸ್ಥಾಪಕ ಅಭಿಜೀತ ದೀಪ್ಕೆ ಮುಖಕ್ಕೆ ಶಾಯಿ ಎಸೆದ ಮಹಿಳೆ ; ಹೈಡ್ರಾಮಾಕ್ಕೆ ಸಾಕ್ಷಿಯಾದ ಜಂತರ್ ಮಂತರ್‌ ಪ್ರತಿಭಟನೆ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement