ತೆಹ್ರಾನ್: ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC), ಬುಧವಾರ ಹಾರ್ಮುಜ್ ಜಲಸಂಧಿಯಲ್ಲಿ ಹಾದುಹೋಗುತ್ತಿದ್ದ ಎಂಎಸ್ಸಿ (MSC) ಫ್ರಾನ್ಸೆಸ್ಕಾ ಮತ್ತು ಎಪಾಮಿನೋಂಡಾಸ್ ಎಂಬ ಎರಡು ಬೃಹತ್ ಸರಕು ಹಡಗುಗಳನ್ನು ತಡೆಹಿಡಿದ ಕಾರ್ಯಾಚರಣೆಯ ವಿಡಿಯೋವನ್ನು ಬಿಡುಗಡೆ ಮಾಡಿದೆ. ಈ ಹಡಗುಗಳು ಹಾರ್ಮುಜ್ ಜಲಸಂಧಿಯನ್ನು ದಾಟಲು ಪ್ರಯತ್ನಿಸುತ್ತಿದ್ದಾಗ ಇರಾನ್ ಪಡೆಗಳು ಗುಂಡಿನ ದಾಳಿ ನಡೆಸಿವೆ ಎಂದು ಅಲ್ಲಿನ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ.
ಈ ಕಾರ್ಯಾಚರಣೆಯ ಕುರಿತು ಅಧಿಕೃತ ಹೇಳಿಕೆ ನೀಡಿರುವ ಇರಾನ್ನ ಐಆರ್ಜಿಸಿ ನೌಕಾಪಡೆ, “ಸಾಗರ ಸುರಕ್ಷತೆಗೆ ಧಕ್ಕೆ ತಂದಿರುವ ಹಿನ್ನೆಲೆಯಲ್ಲಿ ಈ ಎರಡು ಹಡಗುಗಳನ್ನು ವಶಕ್ಕೆ ಪಡೆಯಲಾಗಿದೆ. ಇವುಗಳು ಅಗತ್ಯ ಪರವಾನಗಿಗಳಿಲ್ಲದೆ ಸಂಚರಿಸುತ್ತಿದ್ದುದಲ್ಲದೆ, ನ್ಯಾವಿಗೇಷನ್ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದವು” ಎಂದು ಆರೋಪಿಸಿದೆ. ಸದ್ಯ ಈ ಹಡಗುಗಳನ್ನು ಇರಾನ್ ಕರಾವಳಿಯತ್ತ ಕೊಂಡೊಯ್ಯಲಾಗಿದೆ ಎಂದು ಇರಾನ್ ತಿಳಿಸಿದೆ.
ಇರಾನ್ನ ಉನ್ನತ ರಾಷ್ಟ್ರೀಯ ಭದ್ರತಾ ಮಂಡಳಿಗೆ ಸಂಯೋಜಿತವಾಗಿರುವ ‘ನೂರ್ ನ್ಯೂಸ್’ ಪ್ರಕಾರ, ಇರಾನ್ ಸಶಸ್ತ್ರ ಪಡೆಗಳ ಎಚ್ಚರಿಕೆಗಳನ್ನು ನಿರ್ಲಕ್ಷಿಸಿದ ಕಾರಣ “ಎಪಾಮಿನೋಂಡಾಸ್” ಹಡಗಿನ ಮೇಲೆ ಮೊದಲು ಗುಂಡಿನ ದಾಳಿ ನಡೆಸಲಾಯಿತು.
ವಿಡಿಯೋದಲ್ಲೇನಿದೆ?
ಬಿಡುಗಡೆಯಾಗಿರುವ ವಿಡಿಯೋದಲ್ಲಿ ಸಶಸ್ತ್ರ ಸಿಬ್ಬಂದಿಯನ್ನು ಹೊತ್ತ ಇರಾನ್ನ ಸಣ್ಣ ಬೋಟ್ಗಳು ಎರಡು ಬೃಹತ್ ಹಡಗುಗಳನ್ನು ಸಮೀಪಿಸುತ್ತಿರುವುದು ಕಂಡುಬಂದಿದೆ. ವಿಶೇಷವೆಂದರೆ, ಎಪಾಮಿನೋಂಡಾಸ್ ಹಡಗು ಗುಜರಾತ್ನ ಮುದ್ರಾ ಬಂದರಿನತ್ತ ಪ್ರಯಾಣ ಬೆಳೆಸುತ್ತಿತ್ತು.
ಬಿಬಿಸಿ ಪರಿಶೀಲನೆ (BBC Verify) – ವಿಡಿಯೋ ಸತ್ಯಾಸತ್ಯತೆ ಬಗ್ಗೆ ಸಂಶಯ
ಇರಾನ್ ಬಿಡುಗಡೆ ಮಾಡಿರುವ ಈ ವಿಡಿಯೋವನ್ನು ವಿಶ್ಲೇಷಿಸಿರುವ ಬಿಬಿಸಿ ವೆರಿಫೈ (BBC Verify), ಇದರಲ್ಲಿ ಕೆಲವು ಸಂಶಯಾಸ್ಪದ ಅಂಶಗಳನ್ನು ಪತ್ತೆಹಚ್ಚಿದೆ.
ಹಡಗುಗಳ ಸಂಚಾರ ದತ್ತಾಂಶದ ಪ್ರಕಾರ, ಈ ವಿಡಿಯೋವನ್ನು ದಾಳಿ ನಡೆದ ಹಲವು ಗಂಟೆಗಳ ನಂತರ, ಅಂದರೆ ಸಂಜೆ 5 ಗಂಟೆಯ ಸುಮಾರಿಗೆ ಚಿತ್ರೀಕರಿಸಲಾಗಿದೆ ಎಂದು ಬಿಬಿಸಿ ಹೇಳಿದೆ. ವಿಡಿಯೋದ ಕೆಲವು ಭಾಗಗಳು ಪೂರ್ವಯೋಜಿತ (Staged) ಎಂದು ಬಿಬಿಸಿ ಶಂಕಿಸಿದೆ. ಐಆರ್ಜಿಸಿ ಸಿಬ್ಬಂದಿ MSC ಫ್ರಾನ್ಸೆಸ್ಕಾ ಹಡಗನ್ನು ಏರುವ ಮೊದಲೇ ಅದರ ಹ್ಯಾಚ್ (ಬಾಗಿಲು) ತೆರೆದಿರುವುದು ಕಂಡುಬಂದಿದೆ. ಅಲ್ಲದೆ, ಹಡಗಿನ ಒಳಗಿನ ದೃಶ್ಯಗಳನ್ನು ಹಡಗಿನಲ್ಲೇ ಇದ್ದ ವ್ಯಕ್ತಿಯೊಬ್ಬರು ಚಿತ್ರೀಕರಿಸಿರುವಂತೆ ತೋರುತ್ತಿದೆ.
ಗ್ರೀಸ್ ನಿರಾಕರಣೆ
ಎಪಾಮಿನೋಂಡಾಸ್ ಹಡಗಿನ ಮಾಲೀಕತ್ವ ಹೊಂದಿರುವ ಗ್ರೀಸ್ ಅಧಿಕಾರಿಗಳು, ತಮ್ಮ ಹಡಗನ್ನು ಇರಾನ್ ವಶಪಡಿಸಿಕೊಂಡಿದೆ ಎಂಬ ಸುದ್ದಿಯನ್ನು ನಿರಾಕರಿಸಿದ್ದಾರೆ. ಹಡಗಿನ ಕ್ಯಾಪ್ಟನ್ ಇನ್ನೂ ಹಡಗಿನ ನಿಯಂತ್ರಣದಲ್ಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಶಿಪ್-ಟ್ರ್ಯಾಕಿಂಗ್ ಪ್ಲಾಟ್ಫಾರ್ಮ್ ‘ಮರಿನ್ ಟ್ರಾಫಿಕ್’ ಪ್ರಕಾರ, ಎಪಾಮಿನೋಂಡಾಸ್ ಪ್ರಸ್ತುತ ಓಮನ್ ಕೊಲ್ಲಿಯಲ್ಲಿದೆ. ಆದರೆ, ಬಿಬಿಸಿ ಟ್ರ್ಯಾಕಿಂಗ್ ಅಂಕಿಅಂಶಗಳ ಪ್ರಕಾರ, ಹಡಗು ಮೊದಲು ವಾಯುವ್ಯ ದಿಕ್ಕಿನ ಕೇಶಮ್ ದ್ವೀಪದತ್ತ ಚಲಿಸಿತ್ತು, ನಂತರ ಅದರ ಟ್ರಾನ್ಸ್ಪಾಂಡರ್ಗಳನ್ನು (ಸಂಪರ್ಕ ಸಾಧನ) ಆಫ್ ಮಾಡಲಾಗಿದೆ ಎಂದು ತಿಳಿದುಬಂದಿದೆ.


ನಿಮ್ಮ ಕಾಮೆಂಟ್ ಬರೆಯಿರಿ