ಬ್ಯಾಂಕಿನಲ್ಲಿದ್ದ ಹಣ ಪಡೆಯಲು ಮೃತ ಅಕ್ಕನ ಅಸ್ಥಿಪಂಜರವನ್ನೇ ಹೊತ್ತು 3 ಕಿಮೀ ನಡೆದು ಬ್ಯಾಂಕಿಗೆ ಬಂದ ಅಸಹಾಯಕ ತಮ್ಮ…!

ಕಿಯೋಂಜರ್ (ಒಡಿಶಾ): ಹಸಿವು ಮತ್ತು ಬಡತನ ಮನುಷ್ಯನನ್ನು ಎಂತಹ ಪರಿಸ್ಥಿತಿಗೆ ತಳ್ಳುತ್ತದೆ ಎನ್ನುವುದಕ್ಕೆ ಒಡಿಶಾದ ಕಿಯೋಂಜರ್ ಜಿಲ್ಲೆಯಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. ಮೃತಪಟ್ಟ ತನ್ನ ಅಕ್ಕನ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಪಡೆಯಲು, ವ್ಯಕ್ತಿಯೊಬ್ಬ ಅಕ್ಕನ ಅಸ್ಥಿಪಂಜರವನ್ನೇ ಹೆಗಲ ಮೇಲೆ ಹೊತ್ತು ಸುಡುವ ಬಿಸಿಲಿನಲ್ಲಿ 3 ಕಿಲೋಮೀಟರ್ ನಡೆದುಕೊಂಡು ಬ್ಯಾಂಕ್‌ಗೆ ಬಂದಿರುವ ಘಟನೆ ನಾಗರಿಕ ಸಮಾಜವನ್ನು ಬೆಚ್ಚಿಬೀಳಿಸಿದೆ.
ಒಡಿಶಾದ ಕಿಯೋಂಜರ್ ಜಿಲ್ಲೆಯ ದಿಯಾನಾಲಿ ಗ್ರಾಮದ ನಿವಾಸಿ ಜಿತು ಮುಂಡಾ ಎಂಬವರ ಅಕ್ಕನಾದ ಕಾಕ್ರಾ ಮುಂಡಾ ಎರಡು ತಿಂಗಳ ಹಿಂದೆ ನಿಧನರಾಗಿದ್ದರು. ಆಕೆಯ ಪತಿ ಮತ್ತು ಮಗು ಾದಕ್ಕೂ ಮೊದಲೇ ಮೃತಪಟ್ಟಿದ್ದರಿಂದ, ಜಿತು ಅವರೇ ಅಕ್ಕನ ಏಕೈಕ ವಾರಸುದಾರರಾಗಿದ್ದರು. ಮಲ್ಲಿಪಾಸಿಯ ಒಡಿಶಾ ಗ್ರಾಮೀಣ ಬ್ಯಾಂಕ್‌ನಲ್ಲಿ ಕಾಕ್ರಾ ಅವರ ಖಾತೆಯಿದ್ದು, ಅದರಲ್ಲಿ ₹19,300 ಹಣವಿತ್ತು.

ತನ್ನ ಅಕ್ಕನ ಖಾತೆಯಲ್ಲಿದ್ದ ಹಣವನ್ನು ವಿತ್‌ಡ್ರಾ ಮಾಡಲು ಜಿತು ಬ್ಯಾಂಕ್‌ಗೆ ಹೋದಾಗ, ಮ್ಯಾನೇಜರ್ ಹಣ ನೀಡಲು ನಿರಾಕರಿಸಿದ್ದರು. “ಹಣ ಬೇಕಿದ್ದರೆ ಖಾತೆದಾರರು ಖುದ್ದಾಗಿ ಬರಬೇಕು ಅಥವಾ ಕಾನೂನುಬದ್ಧ ವಾರಸುದಾರರ ದಾಖಲೆಗಳನ್ನು (Succession Certificate) ಸಲ್ಲಿಸಬೇಕು” ಎಂದು ನಿಯಮ ಪಾಲನೆಗೆ ಪಟ್ಟು ಹಿಡಿದಿದ್ದರು. ಅನಕ್ಷರಸ್ಥ ಬುಡಕಟ್ಟು ವ್ಯಕ್ತಿಯಾಗಿದ್ದ ಜಿತುಗೆ ಮರಣ ಪ್ರಮಾಣಪತ್ರವಾಗಲಿ ಅಥವಾ ಕಾನೂನು ದಾಖಲೆಗಳ ಬಗ್ಗೆಯಾಗಲಿ ಯಾವುದೇ ಅರಿವಿರಲಿಲ್ಲ.
ಮಸಣದಿಂದ ಅಸ್ಥಿ ತೆಗೆದ ತಮ್ಮ:
ಹಲವು ಬಾರಿ ಅಲೆದಾಡಿ ಸುಸ್ತಾದ ಜಿತು, ಕೊನೆಗೆ ಸೋಮವಾರ ಗ್ರಾಮದ ಸ್ಮಶಾನಕ್ಕೆ ಹೋಗಿದ್ದಾರೆ. ಅಲ್ಲಿ ಹೂತುಹಾಕಿದ್ದ ಅಕ್ಕನ ಅಸ್ಥಿಪಂಜರವನ್ನು ಅಗೆದು ತೆಗೆದು, ಬಟ್ಟೆಯಲ್ಲಿ ಸುತ್ತಿಕೊಂಡು ಸುಡುವ ಬಿಸಿಲಿನಲ್ಲಿ 3 ಕಿ.ಮೀ ನಡೆದುಕೊಂಡು ಬ್ಯಾಂಕ್‌ಗೆ ತಲುಪಿದ್ದಾರೆ.

ಪ್ರಮುಖ ಸುದ್ದಿ :-   ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅಧ್ಯಾಯ; ಕಕ್ಷೆ ತಲುಪಿದ ಸ್ಕೈರೂಟ್‌ನ ಖಾಸಗಿ ರಾಕೆಟ್ ‘ವಿಕ್ರಂ-1’

ಸ್ಥಳೀಯರ ಆಕ್ರೋಶ:
ಬ್ಯಾಂಕ್ ಮುಂಭಾಗ ಈ ದೃಶ್ಯ ಕಂಡ ಸ್ಥಳೀಯರು ಸ್ತಬ್ಧರಾಗಿದ್ದಾರೆ. ಕೆಲವರು ಕಣ್ಣೀರು ಹಾಕಿದರೆ, ಇನ್ನೂ ಕೆಲವರು ಬ್ಯಾಂಕ್ ಅಧಿಕಾರಿಗಳ ಮನುಷ್ಯತ್ವವಿಲ್ಲದ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಒಬ್ಬ ಬಡವನಿಗೆ ತನ್ನದೇ ಹಣ ಪಡೆಯಲು ಇಷ್ಟೊಂದು ಕಷ್ಟವೇ? ಬ್ಯಾಂಕ್ ಅಧಿಕಾರಿಗಳು ಸ್ಥಳೀಯ ಸರಪಂಚರ ಬಳಿ ವಿಚಾರಿಸಿ ಅಥವಾ ಸ್ಥಳಕ್ಕೆ ಭೇಟಿ ನೀಡಿ ಖಚಿತಪಡಿಸಿಕೊಳ್ಳಬಹುದಿತ್ತು. ಮಾನವೀಯತೆಗಿಂತ ಕಾಗದದ ದಾಖಲೆಗಳೇ ಮುಖ್ಯವಾಯಿತೇ?” ಎಂದು ಜನರು ಪ್ರಶ್ನಿಸಿದ್ದಾರೆ.
ಪೊಲೀಸರ ಮಧ್ಯಪ್ರವೇಶ:
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಜಿತು ಮುಂಡಾ ಅವರನ್ನು ಸಮಾಧಾನಪಡಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಈ ಪ್ರಕರಣವನ್ನು ಮಾನವೀಯತೆಯ ಆಧಾರದ ಮೇಲೆ ಪರಿಹರಿಸಲಾಗುವುದು ಎಂದು ಭರವಸೆ ನೀಡಿದ ಪೊಲೀಸರು, ಈ ಬಗ್ಗೆ ಬ್ಯಾಂಕ್‌ನಿಂದ ಸ್ಪಷ್ಟನೆ ಕೇಳಿದ್ದಾರೆ.

3 / 5. 2

ಶೇರ್ ಮಾಡಿ :

  1. G B Naravani.

    ಡಿಜಿಟಲ್ ಯುಗದಲ್ಲಿ ಮಾನವೀಯತೆ ಸತ್ತು ಹೋಗಿದೆ. 👆

ನಿಮ್ಮ ಕಾಮೆಂಟ್ ಬರೆಯಿರಿ

advertisement