“ಪೆಟ್ರೋಲ್‌-ಡೀಸೆಲ್‌ ಉಳಿಸಿ, ವರ್ಕ್ ಫ್ರಮ್ ಹೋಮ್‌ಗೆ ಆದ್ಯತೆ ನೀಡಿ, 1 ವರ್ಷ ಚಿನ್ನ ಖರೀದಿಸಬೇಡಿ”: ಇರಾನ್‌-ಅಮೆರಿಕ ಯುದ್ಧದ ನಡುವೆ ಪ್ರಧಾನಿ ಮೋದಿ ಕರೆ

ಹೈದರಾಬಾದ್‌: ಇರಾನ್‌-ಅಮೆರಿಕ ನಡುವೆ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಜಾಗತಿಕವಾಗಿ ತೈಲ ಬೆಲೆ ಏರಿಕೆಯಾಗುತ್ತಿದ್ದು, ದೇಶದ ವಿದೇಶಿ ವಿನಿಮಯವನ್ನು ಉಳಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ವಿಶೇಷ ಮನವಿ ಮಾಡಿದ್ದಾರೆ.
ಭಾನುವಾರ ನಗರದಲ್ಲಿ ಆಯೋಜಿಸಿದ್ದ ಬೃಹತ್‌ ರ್ಯಾಲಿಯಲ್ಲಿ ಮಾತನಾಡಿದ ಅವರು, ಇಂಧನ ಬಳಕೆ ಕಡಿಮೆ ಮಾಡಲು ಮತ್ತೆ ‘ವರ್ಕ್ ಫ್ರಮ್ ಹೋಮ್’ ಅನ್ನು ಜಾರಿಗೆ ತರುವಂತೆ ಮತ್ತು ಮದುವೆಗಳಿಗಾಗಿ ಚಿನ್ನ ಖರೀದಿಸುವುದನ್ನು ಒಂದು ವರ್ಷ ಮುಂದೂಡುವಂತೆ ಜನತೆಗೆ ಮನವಿ ಮಾಡಿದ್ದಾರೆ.
ಇರಾನ್ ಯುದ್ಧದ ಪರಿಣಾಮವಾಗಿ ಜಾಗತಿಕವಾಗಿ ಇಂಧನ ಬೆಲೆ ದಾಖಲೆ ಮಟ್ಟಕ್ಕೆ ಏರಿದೆ. ಈ ಸವಾಲನ್ನು ಎದುರಿಸಲು ಕೊರೊನಾ ಕಾಲದ ಜೀವನಶೈಲಿಯನ್ನು ನೆನಪಿಸಿದ ಪ್ರಧಾನಿ, “ಕೊರೊನಾ ಸಮಯದಲ್ಲಿ ನಾವು ಮನೆಯಿಂದಲೇ ಕೆಲಸ (WFH), ಆನ್‌ಲೈನ್ ಸಭೆಗಳು ಮತ್ತು ವಿಡಿಯೋ ಕಾನ್ಫರೆನ್ಸ್‌ಗಳಿಗೆ ಒಗ್ಗಿಕೊಂಡಿದ್ದೆವು. ಈಗ ರಾಷ್ಟ್ರದ ಹಿತದೃಷ್ಟಿಯಿಂದ ಆ ಪದ್ಧತಿಗಳನ್ನು ಮತ್ತೆ ಆರಂಭಿಸುವುದು ಇಂದಿನ ಅಗತ್ಯವಾಗಿದೆ,” ಎಂದು ಒತ್ತಿ ಹೇಳಿದರು.
ಅವರು ಇಂಧನ ಉಳಿತಾಯವನ್ನು ರಾಷ್ಟ್ರೀಯ ಹಿತಾಸಕ್ತಿಗೆ ಪ್ರಧಾನಿ ಮೋದಿ ಕನೆಕ್ಟ್‌ ಮಾಡಿದ್ದಾರೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ $70 ರಿಂದ $126ಕ್ಕೆ  ಏರಿರುವ ಸಮಯದಲ್ಲಿ ಪ್ರಧಾನಿಯವರ ಈ ಮನವಿ ಬಂದಿದೆ. ಜಾಗತಿಕವಾಗಿ ಇಂಧನ ಬೆಲೆ ಹೆಚ್ಚುತ್ತಿರುವ ವೇಳೆ ಪ್ರಧಾನಿ ಮೋದಿ ಪೆಟ್ರೋಲ್ ಮತ್ತು ಡೀಸೆಲ್ ಬಳಕೆಯನ್ನು ಕಡಿಮೆ ಮಾಡುವ ಅಗತ್ಯವನ್ನು ಪದೇ ಪದೇ ಒತ್ತಿ ಹೇಳಿದರು.
“ಪ್ರಪಂಚದಾದ್ಯಂತ ಪೆಟ್ರೋಲ್-ಡೀಸೆಲ್ ತುಂಬಾ ದುಬಾರಿಯಾಗಿದೆ. ಪೆಟ್ರೋಲ್-ಡೀಸೆಲ್ ಅನ್ನು ಸಂರಕ್ಷಿಸುವ ಮೂಲಕ ಪೆಟ್ರೋಲ್-ಡೀಸೆಲ್ ಖರೀದಿಸಲು ಖರ್ಚು ಮಾಡುವ ವಿದೇಶಿ ವಿನಿಮಯವನ್ನು ಸಹ ಉಳಿಸಬೇಕು” ಎಂದು ಅವರು ಹೇಳಿದರು.
ಭಾರತದಲ್ಲಿ ಕಳೆದ ನಾಲ್ಕು ವರ್ಷಗಳಿಂದ ತೈಲ ಬೆಲೆ ಸ್ಥಿರವಾಗಿದ್ದರೂ, ಮೇ 15ರ ಒಳಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ ₹4 ರಿಂದ ₹5 ರಷ್ಟು ಮತ್ತು ಎಲ್‌ಪಿಜಿ ಸಿಲಿಂಡರ್ ಬೆಲೆ ₹40 ರಿಂದ ₹50 ರಷ್ಟು ಏರಿಕೆಯಾಗಬಹುದು ಎಂದು ಹೇಳಲಾಗುತ್ತಿದೆ.
 ತೈಲ ಮಾರುಕಟ್ಟೆ ಕಂಪನಿಗಳಾದ ಇಂಡಿಯನ್ ಆಯಿಲ್, ಬಿಪಿಪಿಎಲ್ ಮತ್ತು ಎಚ್‌ಪಿಸಿಎಲ್ ತಿಂಗಳಿಗೆ ಸುಮಾರು ₹30,000 ಕೋಟಿ ನಷ್ಟ ಅನುಭವಿಸುತ್ತಿವೆ.
ಮದುವೆಗೆ ಚಿನ್ನ ಖರೀದಿಸಬೇಡಿ: ಪ್ರಧಾನಿ ಮನವಿ
ದೇಶದ ವಿದೇಶಿ ವಿನಿಮಯದ ಮೇಲೆ ಆಗುತ್ತಿರುವ ಒತ್ತಡವನ್ನು ಕಡಿಮೆ ಮಾಡಲು ಪ್ರಧಾನಿ ಒಂದು ಅಚ್ಚರಿಯ ಮನವಿ ಮಾಡಿದರು. “ಕನಿಷ್ಠ ಒಂದು ವರ್ಷದವರೆಗೆ ಮದುವೆಗಳಿಗಾಗಿ ಚಿನ್ನ ಖರೀದಿಸುವುದನ್ನು ಬಿಟ್ಟುಬಿಡಿ” ಎಂದು ಅವರು ಜನತೆಯಲ್ಲಿ ವಿನಂತಿಸಿದರು. ಅನಿವಾರ್ಯವಲ್ಲದ ಖರ್ಚುಗಳನ್ನು ಕಡಿತಗೊಳಿಸುವುದು ದೇಶದ ಆರ್ಥಿಕತೆಗೆ ಸಹಕಾರಿ ಎಂದು ಅವರು ತಿಳಿಸಿದರು.
ಇಂಧನ ಮಾತ್ರವಲ್ಲದೆ, ಆಮದು ಮಾಡಿಕೊಳ್ಳುವ ಇತರ ವಸ್ತುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಮೋದಿ ಸಲಹೆ ನೀಡಿದರು.
“ಪ್ರತಿ ಮನೆಯೂ ಅಡುಗೆ ಎಣ್ಣೆಯ ಬಳಕೆಯನ್ನು ಕಡಿಮೆ ಮಾಡಿದರೆ, ಅದು ದೇಶದ ಬೊಕ್ಕಸ ಮತ್ತು ಕುಟುಂಬದ ಆರೋಗ್ಯ ಎರಡಕ್ಕೂ ರೈತರು ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಅರ್ಧದಷ್ಟು ಕಡಿತಗೊಳಿಸಿ, ನೈಸರ್ಗಿಕ ಕೃಷಿಯತ್ತ ಮುಖ ಮಾಡಬೇಕು. ಇದರಿಂದ ವಿದೇಶಕ್ಕೆ ಹರಿದು ಹೋಗುವ ಹಣವನ್ನು ಉಳಿಸಬಹುದು ಮತ್ತು ಭೂಮಿಯನ್ನು ರಕ್ಷಿಸಬಹುದು ಎಂದು ಕರೆ ನೀಡಿದರು.
ನೆರೆಯ ರಾಷ್ಟ್ರಗಳಾದ ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳು ಈಗಾಗಲೇ ಇಂಧನ ರೇಷನಿಂಗ್ ಮತ್ತು ಕೆಲಸದ ದಿನಗಳ ಕಡಿತದಂತಹ ಕ್ರಮಗಳನ್ನು ಕೈಗೊಂಡಿವೆ. ಆದರೆ ಭಾರತವು ಇಲ್ಲಿಯವರೆಗೆ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದೆ.
ಎಲ್‌ಪಿಜಿ ಉತ್ಪಾದನೆಯನ್ನು ದಿನಕ್ಕೆ 36,000 ಟನ್‌ನಿಂದ 54,000 ಟನ್‌ಗೆ ಹೆಚ್ಚಿಸಲಾಗಿದೆ. ರಷ್ಯಾ, ಅಮೆರಿಕ ಮತ್ತು ಪಶ್ಚಿಮ ಆಫ್ರಿಕಾದಿಂದ ಕಚ್ಚಾ ತೈಲ ಆಮದನ್ನು ಮಾಡಿಕೊಳ್ಳಲಾಗುತ್ತಿದೆ.
ಕೇಂದ್ರ ಸರ್ಕಾರವು ಈ ಹಿಂದೆ ಅಬಕಾರಿ ಸುಂಕವನ್ನು ಕಡಿತಗೊಳಿಸುವ ಮೂಲಕ ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟದಂತೆ ನೋಡಿಕೊಂಡಿತ್ತು.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement