ನವದೆಹಲಿ: ಜಾಗತಿಕ ಅನಿಶ್ಚಿತತೆ ಮತ್ತು ಹೆಚ್ಚುತ್ತಿರುವ ಇಂಧನ ದರಗಳ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದ ಕರೆಗೆ ಓಗೊಟ್ಟಿರುವ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ, ದೆಹಲಿಯಲ್ಲಿ ಕಠಿಣ ಇಂಧನ ಸಂರಕ್ಷಣಾ ಕ್ರಮಗಳನ್ನು ಪ್ರಕಟಿಸಿದ್ದಾರೆ. ಸರ್ಕಾರಿ ಕಚೇರಿಗಳಿಗೆ ವಾರದಲ್ಲಿ ಎರಡು ದಿನ ‘ವರ್ಕ್ ಫ್ರಮ್ ಹೋಮ್’ ಸೇರಿದಂತೆ ಹಲವು ಮಹತ್ವದ ನಿರ್ಧಾರಗಳು ಶುಕ್ರವಾರದಿಂದ (ಮೇ 15) ಜಾರಿಗೆ ಬರಲಿವೆ.
ಇಂಧನ ಉಳಿತಾಯದ ನಿಟ್ಟಿನಲ್ಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ತಮ್ಮ ಅಧಿಕೃತ ಬೆಂಗಾವಲು ಪಡೆಯ (Carcade) ಶೇ. 60ರಷ್ಟು ಕಡಿತಗೊಳಿಸಿದ್ದಾರೆ. ಈ ಹಿಂದೆ ಇದ್ದ ವಾಹನಗಳ ಸಂಖ್ಯೆಯನ್ನು ಕೇವಲ ನಾಲ್ಕಕ್ಕೆ ಇಳಿಸಲಾಗಿದೆ. ವಿಶೇಷವೆಂದರೆ, ಈ ನಾಲ್ಕು ವಾಹನಗಳಲ್ಲಿ ಎರಡು ಎಲೆಕ್ಟ್ರಿಕ್ ವಾಹನಗಳಾಗಿದ್ದು (EV), ಸುಸ್ಥಿರ ಸಾರಿಗೆಗೆ ಅವರು ಮುಂದಾಗಿದ್ದಾರೆ.
“ಮೇರಾ ಭಾರತ್ ಮೇರಾ ಯೋಗದಾನ” ಅಭಿಯಾನ
ಇಂಧನ ಉಳಿತಾಯ ಮತ್ತು ದಕ್ಷ ಆಡಳಿತವನ್ನು ಉತ್ತೇಜಿಸಲು ದೆಹಲಿಯಲ್ಲಿ “ಮೇರಾ ಭಾರತ್ ಮೇರಾ ಯೋಗದಾನ” (ನನ್ನ ಭಾರತ ನನ್ನ ಕೊಡುಗೆ) ಎಂಬ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದೆ.
ಇದರ ಅಡಿಯಲ್ಲಿ ಪ್ರತಿ ಸೋಮವಾರ ಸಚಿವರು, ಅಧಿಕಾರಿಗಳು ಮತ್ತು ಎಲ್ಲಾ ಸರ್ಕಾರಿ ನೌಕರರು ಕಡ್ಡಾಯವಾಗಿ ಮೆಟ್ರೋದಲ್ಲೇ ಪ್ರಯಾಣಿಸಬೇಕು ಎಂದು ಸೂಚಿಸಲಾಗಿದೆ.
ಸಾರ್ವಜನಿಕರು ಕೂಡ ವಾರದಲ್ಲಿ ಒಂದು ದಿನ ವಾಹನ ಬಳಸದೆ ಇಂಧನ ಉಳಿತಾಯಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಲಾಗಿದೆ.
ಮುಂದಿನ 6 ತಿಂಗಳವರೆಗೆ ಸರ್ಕಾರದಿಂದ ಯಾವುದೇ ಹೊಸ ಪೆಟ್ರೋಲ್, ಡೀಸೆಲ್ ಅಥವಾ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸದಿರಲು ನಿರ್ಧರಿಸಲಾಗಿದೆ.
ವಿದೇಶಿ ಪ್ರವಾಸಕ್ಕೆ ಬ್ರೇಕ್ ಮತ್ತು ಭತ್ಯೆ ಏರಿಕೆ
ಸರ್ಕಾರಿ ವೆಚ್ಚಕ್ಕೆ ಕಡಿವಾಣ ಹಾಕಲು ದೆಹಲಿ ಸರ್ಕಾರದ ಯಾವುದೇ ಸಚಿವರು ಅಥವಾ ಅಧಿಕಾರಿಗಳು ಮುಂದಿನ ಒಂದು ವರ್ಷದವರೆಗೆ ಅಧಿಕೃತ ವಿದೇಶಿ ಪ್ರವಾಸ ಕೈಗೊಳ್ಳುವಂತಿಲ್ಲ. ಸಂಚಾರ ವೆಚ್ಚವನ್ನು ಸರಿದೂಗಿಸಲು ನೌಕರರ ಸಾರಿಗೆ ಭತ್ಯೆಯನ್ನು (Transport Allowance) ಶೇ. 10ರಷ್ಟು ಹೆಚ್ಚಳ ಮಾಡಲಾಗಿದೆ.
ವಿದ್ಯುತ್ ಉಳಿತಾಯಕ್ಕೆ ಕಟ್ಟುನಿಟ್ಟಿನ ಕ್ರಮ
ಕೇವಲ ಇಂಧನ ಮಾತ್ರವಲ್ಲದೆ ವಿದ್ಯುತ್ ಉಳಿತಾಯಕ್ಕೂ ಸರ್ಕಾರ ಆದ್ಯತೆ ನೀಡಿದೆ. ಸರ್ಕಾರಿ ಕಚೇರಿಗಳಲ್ಲಿ ಎಸಿ (AC) ತಾಪಮಾನವನ್ನು ಕಡ್ಡಾಯವಾಗಿ 24 ರಿಂದ 26 ಡಿಗ್ರಿ ಸೆಲ್ಸಿಯಸ್ ನಡುವೆ ಇರಿಸಬೇಕು. ಅಗತ್ಯವಿಲ್ಲದಿದ್ದಾಗ ವಿದ್ಯುತ್ ವ್ಯಯವಾಗುವುದನ್ನು ತಡೆಯಲು ಎಲ್ಲಾ ಕಚೇರಿಗಳಲ್ಲಿ ‘ಮಾಸ್ಟರ್ ಸ್ವಿಚ್’ ಅಳವಡಿಸಲಾಗುತ್ತದೆ.
“ಇದು ಮಿತವ್ಯಯವಲ್ಲ (Austerity), ಬದಲಿಗೆ ಆರ್ಥಿಕ ವಿವೇಕ (Economic Prudence). ಸರ್ಕಾರವು ವೆಚ್ಚವನ್ನು ಕಡಿತಗೊಳಿಸುತ್ತಿಲ್ಲ, ಬದಲಿಗೆ ಸಂಪನ್ಮೂಲಗಳನ್ನು ಸರಿಯಾಗಿ ಬಳಸುತ್ತಿದೆ ಎಂದು ತಜ್ಞರು ಹೇಳಿದ್ದಾರೆ.
ಪ್ರಧಾನಿ ಮೋದಿಯವರ ಕರೆ ಏನು?
ಇತ್ತೀಚೆಗೆ ಸಿಕಂದರಾಬಾದ್ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಪಶ್ಚಿಮ ಏಷ್ಯಾದ ಸಂಘರ್ಷಗಳಿಂದ ಭಾರತದ ಆರ್ಥಿಕತೆಯ ಮೇಲೆ ಉಂಟಾಗುವ ಪರಿಣಾಮಗಳನ್ನು ಎದುರಿಸಲು ಸಜ್ಜಾಗುವಂತೆ ಕರೆ ನೀಡಿದ್ದರು. ಇಂಧನ ಉಳಿತಾಯ, ಸಾರ್ವಜನಿಕ ಸಾರಿಗೆ ಬಳಕೆ, ಕಾರ್-ಪೂಲಿಂಗ್ ಮತ್ತು ಆನ್ಲೈನ್ ಸಭೆಗಳನ್ನು ಉತ್ತೇಜಿಸುವಂತೆ ಅವರು ಆಶಿಸಿದ್ದರು. ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೂಡ ಈಗಾಗಲೇ ತಮ್ಮ ಬೆಂಗಾವಲು ಪಡೆಯ ವಾಹನಗಳ ಸಂಖ್ಯೆಯನ್ನು ಕಡಿಮೆ ಮಾಡುವ ಮೂಲಕ ಈ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.
ಈ ನಿಟ್ಟಿನಲ್ಲಿ ದೆಹಲಿ ಸರ್ಕಾರವು 90 ದಿನಗಳ ಕಾಲ ಜನಜಾಗೃತಿ ಅಭಿಯಾನವನ್ನು ನಡೆಸಲಿದ್ದು, ನಾಗರಿಕರಿಗೆ ದೇಶ ಕಟ್ಟುವ ಮತ್ತು ಉಳಿತಾಯ ಮಾಡುವ ಪ್ರತಿಜ್ಞಾ ವಿಧಿಯನ್ನು ಬೋಧಿಸಲಿದೆ.


ನಿಮ್ಮ ಕಾಮೆಂಟ್ ಬರೆಯಿರಿ