ಮತ್ತೆ ಯುದ್ಧ ಭೀತಿ..? ಸೌದಿ ಅರೇಬಿಯಾಕ್ಕೆ 8,000 ಸೈನಿಕರು, ಯುದ್ಧ ವಿಮಾನಗಳನ್ನು ರವಾನಿಸಿದ ಪಾಕಿಸ್ತಾನ

ಇಸ್ಲಾಮಾಬಾದ್: ಇರಾನ್ ಯುದ್ಧದಲ್ಲಿ ಸಂಧಾನಕಾರನ ಪಾತ್ರ ವಹಿಸುತ್ತಿರುವ ಬೆನ್ನಲ್ಲೇ, ಪಾಕಿಸ್ತಾನವು ಸೌದಿ ಅರೇಬಿಯಾದ ಜೊತೆ ಸೇನಾ ಸಹಕಾರವನ್ನು ಮತ್ತಷ್ಟು ತೀವ್ರಗೊಳಿಸಿದೆ. ಸೆಪ್ಟೆಂಬರ್ 2025 ರಲ್ಲಿ ಮಾಡಿಕೊಂಡ ಪರಸ್ಪರ ರಕ್ಷಣಾ ಒಪ್ಪಂದದ ಅನ್ವಯ, ಪಾಕಿಸ್ತಾನವು ಸೌದಿ ಅರೇಬಿಯಾಗೆ ಬರೋಬ್ಬರಿ 8,000 ಸೈನಿಕರು, ಪೂರ್ಣ ಪ್ರಮಾಣದ ಫೈಟರ್ ಜೆಟ್ ಸ್ಕ್ವಾಡ್ರನ್ ಮತ್ತು ವಾಯು ರಕ್ಷಣಾ ವ್ಯವಸ್ಥೆಯನ್ನು ರವಾನಿಸಿದೆ ಎಂದು ವರದಿಯಾಗಿದೆ.
 ರಾಯಿಟರ್ಸ್ ವರದಿ ಪ್ರಕಾರ, ಸೌದಿ ಅರೇಬಿಯಾದ ಮೇಲೆ ಮುಂದಿನ ದಿನಗಳಲ್ಲಿ ಯಾವುದೇ ದಾಳಿ ನಡೆದರೆ, ಅಲ್ಲಿನ ಸೇನೆಗೆ ನೆರವು ನೀಡಲು ಈ ಪ್ರಬಲ ಮತ್ತು ಯುದ್ಧ-ಸಮರ್ಥ ಪಡೆಯನ್ನು ಕಳುಹಿಸಲಾಗಿದೆ ಎಂದು ಪಾಕಿಸ್ತಾನದ ಮೂವರು ಭದ್ರತಾ ಅಧಿಕಾರಿಗಳು ಮತ್ತು ಇಬ್ಬರು ಸರ್ಕಾರಿ ಮೂಲಗಳು ಖಚಿತಪಡಿಸಿವೆ. ಆದರೆ, ಈ ನಿಯೋಜನೆಯ ಕುರಿತು ಪ್ರತಿಕ್ರಿಯೆ ನೀಡಲು ಪಾಕಿಸ್ತಾನದ ಸೇನೆ, ವಿದೇಶಾಂಗ ಕಚೇರಿ ಹಾಗೂ ಸೌದಿ ಅರೇಬಿಯಾದ ಸರ್ಕಾರಿ ಮಾಧ್ಯಮ ಕಚೇರಿ ನಿರಾಕರಿಸಿವೆ ಎಂದು ವರದಿ ಹೇಳಿದೆ.
ರಹಸ್ಯ ಒಪ್ಪಂದ ಮತ್ತು ಪಾಕಿಸ್ತಾನದ ‘ಪರಮಾಣು ಛತ್ರಿ’
ಕಳೆದ ವರ್ಷ ಸೆಪ್ಟೆಂಬರ್ 17 ರಂದು ಸಹಿ ಮಾಡಲಾದ ಈ ರಕ್ಷಣಾ ಒಪ್ಪಂದದ ಸಂಪೂರ್ಣ ನಿಯಮಗಳನ್ನು ರಹಸ್ಯವಾಗಿ ಇಡಲಾಗಿದೆ. ಆದಾಗ್ಯೂ, ಇವೆರಡರಲ್ಲಿ ಯಾವುದೇ ದೇಶದ ಮೇಲೆ ದಾಳಿಯಾದರೂ ಪರಸ್ಪರ ರಕ್ಷಣೆಗೆ ಧಾವಿಸುವುದು ಈ ಒಪ್ಪಂದದ ಮುಖ್ಯ ಉದ್ದೇಶ ಎಂದು ಉಭಯ ದೇಶಗಳು ತಿಳಿಸಿವೆ. ಈ ಒಪ್ಪಂದದ ಮೂಲಕ ಸೌದಿ ಅರೇಬಿಯಾವನ್ನು ಪಾಕಿಸ್ತಾನದ ‘ಪರಮಾಣು ಛತ್ರಿ’ (Nuclear Umbrella) ಅಡಿಗೆ ತರಲಾಗಿದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಈ ಹಿಂದೆ ಪರೋಕ್ಷವಾಗಿ ಸೂಚಿಸಿದ್ದರು.
ಮೂಲಗಳ ಪ್ರಕಾರ, ಏಪ್ರಿಲ್ ಆರಂಭದಲ್ಲಿ ಪಾಕಿಸ್ತಾನವು ಚೀನಾ ಜೊತೆ ಜಂಟಿಯಾಗಿ ತಯಾರಿಸಿದ ಸುಮಾರು 16 ‘ಜೆಎಫ್-17’ (JF-17) ಯುದ್ಧ ವಿಮಾನಗಳ ಪೂರ್ಣ ಪ್ರಮಾಣದ ಸ್ಕ್ವಾಡ್ರನ್ ಅನ್ನು ಸೌದಿಗೆ ರವಾನಿಸಿದೆ. ಇದರ ಜೊತೆಗೆ 8,000 ಸೈನಿಕರನ್ನು ನಿಯೋಜನೆ (ಅಗತ್ಯ ಬಿದ್ದರೆ ಇನ್ನಷ್ಟು ಸೈನಿಕರನ್ನು ಕಳುಹಿಸುವ ಭರವಸೆ ನೀಡಲಾಗಿದೆ) ಮಾಡಲಾಗಿದೆ. ಎರಡು ಸ್ಕ್ವಾಡ್ರನ್ ಡ್ರೋನ್‌ಗಳು, ಚೀನಾ ನಿರ್ಮಿತ HQ-9 ಏರ್ ಡಿಫೆನ್ಸ್ ಸಿಸ್ಟಮ್ ಅನ್ನು ಸಹ ರವಾನಿಸಲಾಗಿದೆ. ಈ ಎಲ್ಲಾ ಉಪಕರಣಗಳನ್ನು ಪಾಕಿಸ್ತಾನಿ ಸಿಬ್ಬಂದಿಯೇ ನಿರ್ವಹಿಸುತ್ತಿದ್ದು, ಇದಕ್ಕೆ ಸೌದಿ ಅರೇಬಿಯಾ ಸಂಪೂರ್ಣ ಹಣಕಾಸು ಒದಗಿಸುತ್ತಿದೆ.
ಹೆಚ್ಚುವರಿ ಪಡೆಗಳು:
ಈ ಇರಾನ್ ಸಂಘರ್ಷದ ಸಮಯದಲ್ಲಿ ನಿಯೋಜನೆಗೊಂಡಿರುವ ಪಾಕಿಸ್ತಾನಿ ಮಿಲಿಟರಿ ಮತ್ತು ವಾಯುಪಡೆ ಸಿಬ್ಬಂದಿ ಪ್ರಾಥಮಿಕವಾಗಿ ಸಲಹೆ ಮತ್ತು ತರಬೇತಿ ಪಾತ್ರವನ್ನು ಹೊಂದಿರುತ್ತಾರೆ ಎಂದು ಇಬ್ಬರು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ. ಈ ಹೊಸ ಪಡೆಯು, ಹಿಂದಿನ ಒಪ್ಪಂದಗಳ ಅಡಿಯಲ್ಲಿ ಈಗಾಗಲೇ ಸೌದಿಯಲ್ಲಿ ಯುದ್ಧದ ಪಾತ್ರದಲ್ಲಿ ನಿಯೋಜನೆಗೊಂಡಿರುವ ಸಾವಿರಾರು ಪಾಕಿಸ್ತಾನಿ ಸೈನಿಕರ ಜೊತೆಗೆ ಹೆಚ್ಚುವರಿಯಾಗಿ ಸೇರಿಕೊಳ್ಳಲಿದೆ.
ರಹಸ್ಯ ಒಪ್ಪಂದದ ಪಠ್ಯವನ್ನು ಬಲ್ಲ ಸರ್ಕಾರಿ ಮೂಲವೊಂದರ ಪ್ರಕಾರ, ಸೌದಿ ಪಡೆಗಳೊಂದಿಗೆ ಸೇರಿ ಅಲ್ಲಿನ ಗಡಿಗಳನ್ನು ರಕ್ಷಿಸಲು ಭವಿಷ್ಯದಲ್ಲಿ ಗರಿಷ್ಠ 80,000 ಪಾಕಿಸ್ತಾನಿ ಸೈನಿಕರನ್ನು ನಿಯೋಜಿಸಲು ಈ ಒಪ್ಪಂದದಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂಬ ವರದಿಗಳಿವೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement