ವಿಶ್ವದಲ್ಲೇ ಅತ್ಯಂತ ಬಿಸಿ ನಗರ ಎಂಬ ಕುಖ್ಯಾತಿಗೆ ಪಾತ್ರವಾದ ಭಾರತದ ʼಬಂಡಾʼ ನಗರ

ಉತ್ತರ ಪ್ರದೇಶದ ಬುಂದೇಲಖಂಡ ಜಿಲ್ಲೆಯ ‘ಬಂಡಾ’  ಪ್ರದೇಶವು  ಜಗತ್ತಿನಲ್ಲೇ ಅತ್ಯಂತ ಹೆಚ್ಚು ಉಷ್ಣಾಂಶ ದಾಖಲಾಗುವ ಭೀಕರ ಪ್ರದೇಶವಾಗಿ ಪದೇ ಪದೇ ಹೊರಹೊಮ್ಮುತ್ತಿದೆ. ಇತ್ತೀಚೆಗೆ ಇಲ್ಲಿ ಬರೋಬ್ಬರಿ 48.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ಮೂಲಕ ದೇಶದಲ್ಲೇ ಅತಿ ಹೆಚ್ಚು ಮತ್ತು ಜಗತ್ತಿನಲ್ಲೇ ಅತ್ಯಂತ ಗರಿಷ್ಠ ಉಷ್ಣಾಂಶ ಹೊಂದಿದ ನಗರಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.
ಇದಕ್ಕೂ ಎರಡು ದಿನ ಮುನ್ನ ಇಲ್ಲಿ 47.6 ಡಿಗ್ರಿ ಸೆಲ್ಸಿಯಸ್ ತಾಪಮಾನವಿತ್ತು. ಜೂನ್ 10, 2019 ರಂದು ದಾಖಲಾಗಿದ್ದ 49.2 ಡಿಗ್ರಿ ಸೆಲ್ಸಿಯಸ್ ಸಾರ್ವಕಾಲಿಕ ದಾಖಲೆಯನ್ನು ಬಂಡಾ ನಗರ ಶೀಘ್ರದಲ್ಲೇ ಮುರಿಯಬಹುದು ಎಂಬ ಭೀತಿ ಈಗ ಎದುರಾಗಿದೆ.
ವಿಜ್ಞಾನಿಗಳ ಪ್ರಕಾರ ಇದು ಕೇವಲ ತಾತ್ಕಾಲಿಕ ಶಾಖದ ಅಲೆ (Heatwave) ಅಲ್ಲ. ಕಡಿಮೆಯಾಗುತ್ತಿರುವ ಕಾಡುಗಳು, ಒಣಗುತ್ತಿರುವ ನದಿಗಳು, ಮಿತಿಮೀರಿದ ಮರಳು ಗಣಿಗಾರಿಕೆ ಮತ್ತು ಜಾಗತಿಕ ತಾಪಮಾನ ಏರಿಕೆಯಿಂದಾಗಿ ಬಂಡಾ ಜಿಲ್ಲೆ “ಮನುಷ್ಯ ನಿರ್ಮಿತ ಹೀಟ್ ಐಲ್ಯಾಂಡ್” (Man-made Heat Island) ಆಗಿ, ಅಂದರೆ ಶಾಖದ ದ್ವೀಪವಾಗಿ ಬದಲಾಗುತ್ತಿದೆ.

ಭಾರತೀಯ ಹವಾಮಾನ ಇಲಾಖೆ (IMD) ಬಂಡಾ ಸೇರಿದಂತೆ ದಕ್ಷಿಣ ಉತ್ತರ ಪ್ರದೇಶದ ಹಲವು ಜಿಲ್ಲೆಗಳಿಗೆ ‘ರೆಡ್ ಅಲರ್ಟ್’ ಘೋಷಿಸಿದೆ. ಐಎಂಡಿ ಲಕ್ನೋ ಕೇಂದ್ರದ ಹಿರಿಯ ವಿಜ್ಞಾನಿ ಮೊಹಮ್ಮದ್ ಡ್ಯಾನಿಶ್ ಅವರ ಪ್ರಕಾರ, ಉತ್ತರ ಭಾರತದ ಇತರೆ ಭಾಗಗಳಿಗೆ ತಾತ್ಕಾಲಿಕ ತಂಪು ನೀಡಿದ ‘ವೆಸ್ಟರ್ನ್ ಡಿಸ್ಟರ್ಬನ್ಸ್’ (ಪಶ್ಚಿಮದ ಮಾರುತಗಳ ಪ್ರಭಾವ) ಬುಂದೇಲಖಂಡದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಹೀಗಾಗಿ ಬಂಡಾ ಜಿಲ್ಲೆಯು ಮೊದಲೇ ಏರಿದ್ದ ತಾಪಮಾನದ ಜೊತೆಗೆ ಪ್ರಸ್ತುತ ಶಾಖದ ಅಲೆಯನ್ನು ಎದುರಿಸುತ್ತಿದೆ.
ಇಲ್ಲಿನ ಕಲ್ಲಿನ ಭೂಪ್ರದೇಶವು ಹಗಲಿನಲ್ಲಿ ಶಾಖವನ್ನು ವೇಗವಾಗಿ ಹೀರಿಕೊಳ್ಳುತ್ತದೆ ಮತ್ತು ರಾತ್ರಿಯಲ್ಲಿ ಅತ್ಯಂತ ನಿಧಾನವಾಗಿ ಹೊರಸೂಸುತ್ತದೆ. ಇದರೊಂದಿಗೆ ಥಾರ್ ಮರುಭೂಮಿಯಿಂದ ಬೀಸುವ ಒಣ ಮತ್ತು ಕಡು ಬಿಸಿ ಗಾಳಿ (ಗಂಟೆಗೆ 20-40 ಕಿಮೀ ವೇಗ) ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದೆ. ರಾತ್ರಿಯ ಅವಧಿಯಲ್ಲೂ ಉಷ್ಣಾಂಶ ತಗ್ಗದಿರುವುದರಿಂದ ಜನರಿಗೆ ಯಾವುದೇ ವಿಶ್ರಾಂತಿ ಸಿಗದಂತಾಗಿದೆ.

ಪ್ರಮುಖ ಸುದ್ದಿ :-   8 ವರ್ಷಗಳ ಪ್ರೇಮದಲ್ಲಿ ಬಿರುಕು ; ಯುವತಿ ಆತ್ಮಹತ್ಯೆ, ಮೃತದೇಹಕ್ಕೆ ಪ್ರಿಯಕರ ಮಂಗಳಸೂತ್ರ ಕಟ್ಟಬೇಕು ಎಂದು ಕುಟುಂಬಸ್ಥರ ಪಟ್ಟು...

ಪರಿಸರ ನಾಶ ಮತ್ತು ಮರಳು ಮಾಫಿಯಾ
ಬಂಡಾ ಕೃಷಿ ವಿಶ್ವವಿದ್ಯಾಲಯದ ಹವಾಮಾನ ಇಲಾಖೆಯ ಮುಖ್ಯಸ್ಥ ಪ್ರೊ. ದಿನೇಶ ಸಹಾ ಪ್ರಕಾರ, ಕಳೆದ ಎರಡು ದಶಕಗಳಲ್ಲಿ ಇಲ್ಲಿನ ಪರಿಸರ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಬಂದಾ ಜಿಲ್ಲೆಯಲ್ಲಿ ಪ್ರಸ್ತುತ ಕೇವಲ 3%ರಷ್ಟು ಮಾತ್ರ ಹಸಿರು ಹೊದಿಕೆ (ಗ್ರೀನ್ ಕವರ್) ಉಳಿದಿದೆ, ಇದು ಇಡೀ ಉತ್ತರ ಪ್ರದೇಶದಲ್ಲೇ ಅತ್ಯಂತ ಕಡಿಮೆ.
ಬಂಡಾ ಕೃಷಿ ವಿವಿ, ಲಕ್ನೋ ವಿವಿ, ಬನಾರಸ್‌ ಹಿಂದು ವಿಶ್ವ ವಿದ್ಯಾಲಯ ಮತ್ತು ರೋಹಿಲ್‌ಖಂಡವಿವಿ ಜಂಟಿಯಾಗಿ ನಡೆಸಿದ ಅಧ್ಯಯನದ ಪ್ರಕಾರ, 2005 ರಲ್ಲಿ 120 ಚದರ ಕಿಲೋಮೀಟರ್ ಇದ್ದ ಬಂಡಾದ ಅರಣ್ಯ ಪ್ರದೇಶವು ಈಗ 95 ಚದರ ಕಿಲೋಮೀಟರ್‌ಗೆ (15% ಕ್ಕಿಂತ ಹೆಚ್ಚು ಕುಸಿತ) ಇಳಿಕೆಯಾಗಿದೆ. ಕಲ್ಲು ಪುಡಿ ಮಾಡುವ ಕ್ರಷರ್ ಘಟಕಗಳಿಂದ ಏಳುವ ಧೂಳು ಮಣ್ಣು ಮತ್ತು ಗಿಡಗಳ ಮೇಲೆ ಕುಳಿತು ತೇವಾಂಶವನ್ನು ಹೀರುತ್ತಿದೆ.
ಕೇನ್ ನದಿಯ ಲೂಟಿ: ತಾಪಮಾನ ಏರಿಕೆಗೆ ಮತ್ತೊಂದು ಪ್ರಮುಖ ಕಾರಣ ಕೇನ್ ನದಿ ಪಾತ್ರದಲ್ಲಿ ನಡೆಯುತ್ತಿರುವ ಬೃಹತ್ ಪ್ರಮಾಣದ ಮರಳು ಗಣಿಗಾರಿಕೆ. ಪ್ರತಿದಿನ ಸುಮಾರು 2,000 ದಿಂದ 3,000 ಟ್ರಕ್‌ಗಳಷ್ಟು ಮರಳು ಮತ್ತು ಮೊರಂ ಅನ್ನು ಇಲ್ಲಿಂದ ಸಾಗಿಸಲಾಗುತ್ತಿದೆ. ಪದ್ಮಶ್ರೀ ಪುರಸ್ಕೃತ ಮತ್ತು ಜಲ ಸಂರಕ್ಷಕ ಉಮಾಶಂಕರ ಪಾಂಡೆ ಪ್ರಕಾರ, “ಅತಿಯಾದ ಗಣಿಗಾರಿಕೆಯಿಂದ ನದಿಯ ನೈಸರ್ಗಿಕ ತಂಪಾಗಿಸುವ ವ್ಯವಸ್ಥೆಯೇ ನಾಶವಾಗಿದೆ. ಮರಳು ಇಲ್ಲದೆ ಕಲ್ಲುಗಳು ತೆರೆದುಕೊಂಡಿರುವುದರಿಂದ ನೀರು ಇಂಗುತ್ತಿಲ್ಲ, ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿಯುತ್ತಿದೆ ಎಂದು ಎಚ್ಚರಿಸಿದ್ದಾರೆ.

ಪ್ರಮುಖ ಸುದ್ದಿ :-   ವಿಡಿಯೊ | ಸಿಜೆಪಿ ಸಂಸ್ಥಾಪಕ ಅಭಿಜೀತ ದೀಪ್ಕೆ ಮುಖಕ್ಕೆ ಶಾಯಿ ಎಸೆದ ಮಹಿಳೆ ; ಹೈಡ್ರಾಮಾಕ್ಕೆ ಸಾಕ್ಷಿಯಾದ ಜಂತರ್ ಮಂತರ್‌ ಪ್ರತಿಭಟನೆ

ಕೊನೆ ಇಲ್ಲದ ‘ಬಿಸಿಲಿನ ವಿಷವರ್ತುಲ’
ಲಕ್ನೋ ವಿಶ್ವವಿದ್ಯಾಲಯದ ಭೂವಿಜ್ಞಾನ ವಿಭಾಗದ ಪ್ರೊ. ಧ್ರುವ ಸೇನ ಸಿಂಗ್ ಅವರು ಈ ಪರಿಸ್ಥಿತಿಯನ್ನು “ವಿಷವರ್ತುಲ” (Vicious Circle of Heat) ಎಂದು ಕರೆದಿದ್ದಾರೆ. “ಹಸಿರು ನಾಶ, ತೇವಾಂಶದ ಕೊರತೆ, ಮರಳು ಮತ್ತು ಕಲ್ಲಿನ ಮೇಲ್ಮೈ ಹೆಚ್ಚಳ ಹಾಗೂ ಥಾರ್ ಮರುಭೂಮಿಯ ಗಾಳಿಯಿಂದಾಗಿ ಬಂಡಾ ಪ್ರದೇಶವು ಕರಗುವ ಕುಲುಮೆಯಾಗಿದೆ. ಹಗಲಿನಲ್ಲಿ ಕಾಯುವ ಭೂಮಿ ರಾತ್ರಿ ತಣ್ಣಗಾಗುವ ಮುನ್ನವೇ ಮತ್ತೊಂದು ಭೀಕರ ಬೆಳಗು ಆರಂಭವಾಗಿಬಿಡುತ್ತದೆ. ಗಾಳಿಯಲ್ಲಿ ಆರ್ದ್ರತೆ (Humidity) ಸಂಪೂರ್ಣ ಶೂನ್ಯವಾಗಿದೆ. ಕೇನ್ ಮತ್ತು ಬಘೈನ್ ನದಿಗಳು ಒಣಗುತ್ತಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಭಯಾನಕವಾಗಿಸಿದೆ,” ಎಂದು ಅವರು ಹೇಳುತ್ತಾರೆ.
ಮುಂದಿನ ದಿನಗಳು ಮತ್ತಷ್ಟು ಭೀಕರ?
ಸಂಶೋಧಕರು ಎಚ್ಚರಿಸುವ ಪ್ರಕಾರ, ಪರಿಸರ ನಾಶ ಇದೇ ವೇಗದಲ್ಲಿ ಮುಂದುವರಿದರೆ ಮುಂದಿನ ಎರಡು ದಶಕಗಳಲ್ಲಿ ಬಂಡಾದ ಹಲವು ಭಾಗಗಳು ಸಂಪೂರ್ಣವಾಗಿ ಬಂಜರು ಭೂಮಿಯಾಗಲಿವೆ. ಸದ್ಯಕ್ಕೆ ಹವಾಮಾನ ಇಲಾಖೆಯು ಮುಂಬರುವ ದಿನಗಳಲ್ಲಿ ತಾಪಮಾನ 44 ರಿಂದ 48 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲೇ ಇರಲಿದ್ದು, ತಕ್ಷಣಕ್ಕೆ ಯಾವುದೇ ಉಪಶಮನ ಸಿಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಹಗಲು-ರಾತ್ರಿ ಒಲೆಯಲ್ಲಿ ಬೆಂದಂತೆ ಬೇಯುತ್ತಿರುವ ಬಂಡಾ ಜನತೆ, ಮುಂದಿನ ದಿನಗಳು ಇನ್ನೆಷ್ಟು ದಾರುಣವಾಗಿರಲಿವೆಯೋ ಎಂಬ ಭೀತಿಯಲ್ಲಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement