ಕಠ್ಮಂಡು: ಸೋಲು ಒಪ್ಪಿಕೊಳ್ಳದ ಛಲ, ಅದಮ್ಯ ಸಾಹಸ ಮನೋಭಾವವಿದ್ದರೆ ಪ್ರಕೃತಿಯ ಅತಿ ಎತ್ತರದ ಸವಾಲನ್ನೂ ಮೆಟ್ಟಿ ನಿಲ್ಲಬಹುದು ಎಂಬುದನ್ನು ಮಾಜಿ ಸೈನಿಕರೊಬ್ಬರು ಜಗತ್ತಿಗೆ ಸಾಬೀತುಪಡಿಸಿದ್ದಾರೆ. ನೇಪಾಳದಲ್ಲಿ ಪ್ರಸ್ತುತ ನಡೆಯುತ್ತಿರುವ ವಸಂತಕಾಲದ ಪರ್ವತಾರೋಹಣ ಋತುವಿನಲ್ಲಿ ಹೊಸ ಇತಿಹಾಸವೊಂದು ಸೃಷ್ಟಿಯಾಗಿದೆ. ಮೇ 20ರದು, ಎರಡು ಕಾಲುಗಳನ್ನು ಕಳೆದುಕೊಂಡಿರುವ ಮಾಜಿ ಪ್ಯಾರಾಟ್ರೂಪರ್ (ಸೈನಿಕ) ರುಸ್ತಮ್ ನಬೀವ್, ಯಾವುದೇ ಕೃತಕ ಕಾಲುಗಳ (Prosthetic limbs) ನೆರವಿಲ್ಲದೆ, ಕೇವಲ ತಮ್ಮ ತೋಳ್ಬಲದಿಂದಲೇ ವಿಶ್ವದ ಅತಿ ಎತ್ತರದ ಮೌಂಟ್ ಎವರೆಸ್ಟ್ ಶಿಖರವನ್ನು ಏರಿ ಜಗತ್ತಿನಲ್ಲೇ ಈ ಸಾಧನೆ ಮಾಡಿದ ಮೊದಲ ‘ಡಬಲ್ ಆಂಪುಟಿ’ (ಎರಡೂ ಕಾಲುಗಳಿಲ್ಲದ ಸಾಧಕ) ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಮೇ 20ರಂದು ನೇಪಾಳದ ಸ್ಥಳೀಯ ಸಮಯ ಮುಂಜಾನೆ 8:16ಕ್ಕೆ ಎವರೆಸ್ಟ್ ಶಿಖರದ ತುತ್ತತುದಿಯನ್ನು ತಲುಪಿದ ನಬೀವ್, ಅಲ್ಲಿ ಹೆಮ್ಮೆಯಿಂದ ಫಲಕ ಹಿಡಿದು ನಿಂತಿರುವ ಮನಸೆಳೆಯುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆ ಫಲಕದ ಮೇಲೆ ಮೂಡಿಬಂದಿರುವ ಸಾಲುಗಳು ಪ್ರತಿಯೊಬ್ಬರ ಕಣ್ಣಾಲಿಗಳನ್ನು ಒದ್ದೆಯಾಗಿಸುವಂತಿವೆ. “ಜೀವನದಲ್ಲಿ ಎಲ್ಲವೂ ಮುಗಿದುಹೋಯಿತು ಎಂದು ಭಾವಿಸಿದವರಿಗೆ… ರುಸ್ತಮ್ ನಬೀವ್, ಎವರೆಸ್ಟ್ 2026 ಎಂದು ಅವರು ಬರೆದಿದ್ದಾರೆ.
ತಮ್ಮ ಈ ಐತಿಹಾಸಿಕ ವಿಜಯವನ್ನು ವಿಶ್ವದಾದ್ಯಂತ ಇರುವ ಕೋಟ್ಯಂತರ ಬೆಂಬಲಿಗರು ಮತ್ತು ಅಭಿಮಾನಿಗಳಿಗೆ ಅರ್ಪಿಸಿರುವ ಅವರು, “ಪರ್ವತಾರೋಹಣದ ಇತಿಹಾಸದಲ್ಲಿ, ಇಡೀ ಮಾನವ ಕುಲದ ಚರಿತ್ರೆಯಲ್ಲೇ ಇದೇ ಮೊದಲ ಬಾರಿಗೆ, ನಾನು ಕೇವಲ ನನ್ನ ಕೈಗಳನ್ನು ಬಳಸಿಕೊಂಡು ಎವರೆಸ್ಟ್ ಶಿಖರದ ನೆತ್ತಿಯ ಮೇಲೆ ನಿಂತಿದ್ದೇನೆ! ನನ್ನನ್ನು ನೋಡುತ್ತಿರುವ, ನನ್ನಿಂದ ಸ್ಫೂರ್ತಿ ಪಡೆಯುತ್ತಿರುವ ಪ್ರತಿಯೊಬ್ಬರಿಗೂ ನಾನು ಈ ಸಾಧನೆಯನ್ನು ಸಮರ್ಪಿಸುತ್ತೇನೆ. ಈ ಮೂಲಕ ನಾನು ಜಗತ್ತಿಗೆ ಹೇಳಬಯಸುವುದು ಒಂದೇ: ನಿಮ್ಮಲ್ಲಿ ಜೀವವಿರುವವರೆಗೂ ಹೋರಾಡಿ! ಕೊನೆಯ ಉಸಿರಿರುವವರೆಗೂ ಹೋರಾಡಿ, ದಯವಿಟ್ಟು! ಆ ಹೋರಾಟಕ್ಕೆ ಖಂಡಿತವಾಗಿಯೂ ಒಂದು ದಿನ ಬೆಲೆ ಸಿಕ್ಕೇ ಸಿಗುತ್ತದೆ” ಎಂದು ಅವರ ತಮ್ಮ ಸಾಮಾಜಿಕ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ರುಸ್ತಮ್ ನಬೀವ್ ಅವರ ಈ ಅಪ್ರತಿಮ ಯಶಸ್ಸನ್ನು ಎವರೆಸ್ಟ್ ಬೇಸ್ ಕ್ಯಾಂಪ್‌ನ ಫೀಲ್ಡ್ ಆಫೀಸ್ ಸಂಯೋಜಕರಾದ ಖಿಮ್ ಲಾಲ ಗೌತಮ ಅಧಿಕೃತವಾಗಿ ದೃಢಪಡಿಸಿದ್ದು, “ರುಸ್ತಮ್ ನಬೀವ್ ಅವರು ಯಶಸ್ವಿಯಾಗಿ ಎವರೆಸ್ಟ್ ಏರಿದ್ದಾರೆ. ಹಾಗೂ ಪ್ರಸ್ತುತ ಅವರು ಸುರಕ್ಷಿತವಾಗಿ ಇಳಿದು ಬೇಸ್ ಕ್ಯಾಂಪ್‌ನತ್ತ ಬರುತ್ತಿದ್ದಾರೆ” ಎಂದು ಹೆಮ್ಮೆಯಿಂದ ತಿಳಿಸಿದ್ದಾರೆ.
ದುರಂತವನ್ನೇ ಮೆಟ್ಟಿ ನಿಂತ ಧೀರ
2015ರಲ್ಲಿ ಸಂಭವಿಸಿದ ಭೀಕರ ದುರಂತವೊಂದು ನಬೀವ್ ಅವರ ಜೀವನವನ್ನು ಸಂಪೂರ್ಣವಾಗಿ ತಲೆಕೆಳಗಾಗಿಸಿತ್ತು. ಅವರು ಮಲಗಿದ್ದ ಮಿಲಿಟರಿ ಬ್ಯಾರಾಕ್ ಕಟ್ಟಡವು ಇದ್ದಕ್ಕಿದ್ದಂತೆ ಕುಸಿದು ಬಿದ್ದಾಗ, ಅವರು ತಮ್ಮ ಎರಡೂ ಕಾಲುಗಳನ್ನು ಕಳೆದುಕೊಳ್ಳಬೇಕಾಯಿತು. ಆ ಅಪಘಾತದ ನಂತರ ಅವರು ಎರಡು ಬಾರಿ ಕ್ಲಿನಿಕಲ್ ಸಾವು (Clinical Death) ಕಂಡು, ಸಾವಿನ ದವಡೆಯಿಂದ ಪವಾಡಸದೃಶವಾಗಿ ಬದುಕುಳಿದಿದ್ದರು.
ಆದರೆ, ಈ ವಿಧಿಯ ಆಟಕ್ಕೆ ಮಣಿಯದ ನಬೀವ್, ಕಾಲು ಕಳೆದುಕೊಂಡ ನಂತರದ ದಿನಗಳಲ್ಲಿ ಸಾಹಸ ಮತ್ತು ಪರ್ವತಾರೋಹಣದತ್ತ ತಮ್ಮ ಗಮನ ಹರಿಸಿದರು. “ಮನಸ್ಸಿದ್ದರೆ ಮಾರ್ಗ” ಎಂಬಂತೆ, ಇಡೀ ಜಗತ್ತೇ ಅಸಾಧ್ಯವೆಂದುಕೊಂಡಿದ್ದನ್ನು ಸಾಧಿಸಲು ಸಜ್ಜಾದರು.
ನಬೀವ್ ಸಾಹಸ ಯಾತ್ರೆಯ ಮೈಲಿಗಲ್ಲುಗಳು:
ಅಪಘಾತದಿಂದ ಚೇತರಿಸಿಕೊಂಡ ಬಳಿಕ ಮೊಟ್ಟಮೊದಲ ಬಾರಿಗೆ ಯುರೋಪ್‌ನ ಅತ್ಯುನ್ನತ ಶಿಖರವಾದ ಮೌಂಟ್ ಎಲ್ಬ್ರಸ್(6,470 ಮೀ ಎತ್ತರ) ಶಿಖರವನ್ನು ಏರಿ ಸೈ ಎನಿಸಿಕೊಂಡರು.
ಅಕ್ಟೋಬರ್ 2021 ರಲ್ಲಿ, ‘ಇಮ್ಯಾಜಿನ್ ನೇಪಾಳ ಟ್ರೆಕ್ಸ್’ನ ಐದು ಜನ ಶೆರ್ಪಾ ಮಾರ್ಗದರ್ಶಿಗಳ ಜೊತೆಗೂಡಿ
ಮನಸ್ಲು ಶಿಖರ (8,163 ಮೀ ಎತ್ತರ)ದ ತುತ್ತ ತುದಿ ತಲುಪುವ ಮೂಲಕ, ಕಾಲುಗಳಿಲ್ಲದೆ ಈ ಸಾಧನೆ ಮಾಡಿದ ವಿಶ್ವದ ಮೊದಲ ಅಂಗವಿಕಲ ಎಂಬ ಕೀರ್ತಿಗೆ ಭಾಜನರಾದರು.
ಇದೇ ವರ್ಷ ಏಪ್ರಿಲ್ 22 ರಂದು ರಾಮ್ ಕಾಜಿ ಶ್ರೇಷ್ಠ ಅವರ ಮಾರ್ಗದರ್ಶನದಲ್ಲಿ ಮೇರಾ ಶಿಖರ(6,470 ಮೀ ಎತ್ತರ)ವನ್ನು ಯಶಸ್ವಿಯಾಗಿ ಏರಿದರು.
ಮೇರಾ ಶಿಖರವನ್ನು ಏರಿದ ತಕ್ಷಣವೇ ‘ಸೆವೆನ್ ಸಮ್ಮಿಟ್ಸ್ ಕ್ಲಬ್’ ಜೊತೆಗೂಡಿ ಎವರೆಸ್ಟ್ ಏರುವ ಮಹತ್ವಾಕಾಂಕ್ಷೆಯ ಪ್ರಯತ್ನಕ್ಕೆ ಕೈಹಾಕಿ, ಈಗ ಮೌಂಟ್ ಎವರೆಸ್ಟ್ (8,848.86 ಮೀ) ಶಿಖರವನ್ನೂ ಏರರುವ ಮೂಲಕ ಇತಿಹಾಸದ ಪುಟಗಳಲ್ಲಿ ತಮ್ಮ ಹೆಸರನ್ನು ಸುವರ್ಣಾಕ್ಷರಗಳಲ್ಲಿ ಬರೆದಿದ್ದಾರೆ.
ದೇಹದ ಅಂಗವೈಕಲ್ಯಕ್ಕಿಂತ ಮನಸ್ಸಿನ ವೈಕಲ್ಯವೇ ದೊಡ್ಡದು, ದೃಢಸಂಕಲ್ಪವಿದ್ದರೆ ಇಡೀ ಜಗತ್ತನ್ನೇ ಗೆಲ್ಲಬಹುದು ಎಂಬುದಕ್ಕೆ ರುಸ್ತಮ್ ನಬೀವ್ ಅವರ ಈ ಸಾಹಸಗಾಥೆಯೇ ಜೀವಂತ ಸಾಕ್ಷಿ.


ನಿಮ್ಮ ಕಾಮೆಂಟ್ ಬರೆಯಿರಿ