ಮುಂಬೈ: ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿ ಶುಕ್ರವಾರ (ಮೇ 22) ಅತ್ಯಂತ ದುರದೃಷ್ಟಕರ ಘಟನೆಯೊಂದು ಸಂಭವಿಸಿದೆ. ಅರಣ್ಯ ಪ್ರದೇಶಕ್ಕೆ ತೇಂದು ಎಲೆಗಳನ್ನು ಸಂಗ್ರಹಿಸಲು ಹೋಗಿದ್ದ 13 ಮಹಿಳೆಯರ ಗುಂಪಿನ ಮೇಲೆ ಹುಲಿ ದಾಳಿ ನಡೆಸಿದ್ದು, ನಾಲ್ವರು ಮಹಿಳೆಯರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
ಜಿಲ್ಲಾ ಕೇಂದ್ರದಿಂದ ಸುಮಾರು 70 ಕಿಲೋಮೀಟರ್ ದೂರದಲ್ಲಿರುವ ಸಿಂದೇವಾಹಿ ತಹಸಿಲ್‌ನ ಗುಂಜೆವಾಹಿ ಗ್ರಾಮದ ನಿವಾಸಿಗಳಾದ 13 ಮಹಿಳೆಯರ ಗುಂಪೊಂದು ಬೀಡಿ ತಯಾರಿಕೆಗೆ ಬಳಸುವ ತೇಂದು ಎಲೆಗಳನ್ನು ಸಂಗ್ರಹಿಸಲು ಅರಣ್ಯ ಪ್ರದೇಶಕ್ಕೆ ತೆರಳಿತ್ತು. ಈ ವೇಳೆ ಪೊದೆಯೊಳಗೆ ಅಡಗಿ ಕುಳಿತಿದ್ದ ಹುಲಿ ದಿಢೀರನೆ ಮಹಿಳೆಯರ ಮೇಲೆ ದಾಳಿ ಮಾಡಿದ್ದು, ಈ ವೇಳೆ ನಾಲ್ವರು ಮಹಿಳೆಯರು ಮೃತಪಟ್ಟಿದ್ದಾರೆ.
ಮೃತ ಮಹಿಳೆಯರನ್ನು ಕವಡಾಬಾಯಿ ಮೋಹುರ್ಲೆ (45), ಅನಿತಾಬಾಯಿ ಮೋಹುರ್ಲೆ (40), ಸುನಿತಾ ಮೋಹುರ್ಲೆ (38) ಹಾಗೂ ಸಂಗೀತಾ ಚೌಧರಿ (50) ಎಂದು ಗುರುತಿಸಲಾಗಿದೆ.
ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಮತ್ತು ಪೊಲೀಸ್ ಅಧಿಕಾರಿಗಳ ಪ್ರಕಾರ, ಹುಲಿ ದಾಳಿಯಿಂದಾಗಿ ಈ ನಾಲ್ವರು ಮಹಿಳೆಯರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ದಾಳಿಯಿಂದ ಆಘಾತಕ್ಕೊಳಗಾದ ಗುಂಪಿನ ಉಳಿದ ಮಹಿಳೆಯರು ಕಿರುಚುತ್ತಾ, ಪ್ರಾಣಭಯದಿಂದ ಓಡಿ ಬಂದು ಪಾರಾಗಿದ್ದಾರೆ. ಘಟನೆಯ ನಂತರ ಹುಲಿ ಮತ್ತೆ ದಟ್ಟ ಅರಣ್ಯದೊಳಗೆ ಮರೆಯಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಅಧಿಕಾರಿಗಳು, ಹುಲಿಯನ್ನು ಪತ್ತೆಹಚ್ಚಿ ಪರಿಸ್ಥಿತಿಯನ್ನು ಹತೋಟಿಗೆ ತರುವವರೆಗೆ ಗ್ರಾಮಸ್ಥರು ಅರಣ್ಯದ ಆಳ ಪ್ರದೇಶಗಳಿಗೆ ತೆರಳದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.
ಪ್ರಸಿದ್ಧ ‘ತಾಡೋಬಾ-ಅಂಧಾರಿ ಹುಲಿ ಸಂರಕ್ಷಿತ ಪ್ರದೇಶ’ವನ್ನು ಹೊಂದಿರುವ ಚಂದ್ರಾಪುರ ಜಿಲ್ಲೆಯು, ಸಂರಕ್ಷಿತ ವಲಯಗಳ ಹೊರಗೆ ದೇಶದಲ್ಲೇ ಅತಿ ಹೆಚ್ಚು ಹುಲಿ ಜನಸಂಖ್ಯೆಯನ್ನು ಹೊಂದಿರುವ ಪ್ರದೇಶಗಳಲ್ಲಿ ಒಂದಾಗಿದೆ. ಅಧಿಕೃತ ಅಂಕಿ-ಅಂಶಗಳ ಪ್ರಕಾರ, ಚಂದ್ರಾಪುರದಲ್ಲಿ ಕಳೆದ ಐದು ವರ್ಷಗಳಲ್ಲಿ ವನ್ಯಜೀವಿಗಳ ದಾಳಿಗೆ ಸಿಲುಕಿ ಸುಮಾರು 200 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಆತಂಕಕಾರಿ ವಿಷಯವೆಂದರೆ, ಕಳೆದ ಕೇವಲ ಐದು ತಿಂಗಳುಗಳಲ್ಲೇ 19 ಜನರು ಹುಲಿ ಸೇರಿದಂತೆ ಇತರೆ ವನ್ಯಜೀವಿಗಳ ದಾಳಿಗೆ ಪ್ರಾಣ ಕಳೆದುಕೊಂಡಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ