ವಿಯೆನ್ನಾ: ಆಸ್ಟ್ರಿಯಾದ ಆಲ್ಪ್ಸ್ ಪರ್ವತ ಶ್ರೇಣಿಯಲ್ಲಿ ಹಾರಾಟ ನಡೆಸುತ್ತಿದ್ದ ಪ್ಯಾರಾಗ್ಲೈಡರ್‌ಗೆ ಸಣ್ಣ ಪ್ರವಾಸಿ ವಿಮಾನವೊಂದು ನೇರವಾಗಿ ಢಿಕ್ಕಿ ಹೊಡೆದ ಅತ್ಯಂತ ಭಯಾನಕ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ವಿಮಾನದ ರೆಕ್ಕೆ ಬಡಿದ ರಭಸಕ್ಕೆ ಪ್ಯಾರಾಗ್ಲೈಡರ್‌ನ ಕ್ಯಾನೋಪಿ (ಮೇಲ್ಛಾವಣಿ) ಎರಡು ಭಾಗಗಳಾಗಿ ಸೀಳಿದ್ದು, ಪ್ಯಾರಾಗ್ಲೈಡರ್ ಸವಾರಿ ಮಾಡುತ್ತಿದ್ದ ಮಹಿಳೆ ಕಿರುಚುತ್ತಾ ಆಕಾಶದಿಂದ ಕೆಳಗೆ ಬಂದು ಭೂಮಿ ಮೇಲೆ ಬಿದ್ದಿದ್ದಾರೆ. ಆದರೆ, ಬೀಳುವ ವೇಳೆ ತಕ್ಷಣವೇ ಕಾರ್ಯಪ್ರವೃತ್ತರಾದ ಅವರು ತುರ್ತು ಪ್ಯಾರಾಚೂಟ್ ಸಮಪರ್ಕವಾಗಿ ಬಳಸಿ ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ‘ನ್ಯೂಯಾರ್ಕ್ ಪೋಸ್ಟ್’ ವರದಿ ಮಾಡಿದೆ.
ಉತ್ತರ ಆಸ್ಟ್ರಿಯಾದ ಪ್ರಸಿದ್ಧ ಪ್ಯಾರಾಗ್ಲೈಡಿಂಗ್ ತಾಣವಾದ ‘ಶ್ಮಿಟ್ಟೆನ್‌ಹೋಹೆ’ (Schmittenhohe) ಪರ್ವತದ ಬಳಿ ಶನಿವಾರ ಮಧ್ಯಾಹ್ನ ಈ ರೋಮಾಂಚಕ ಅಪಘಾತ ಸಂಭವಿಸಿದೆ.
ಸಲ್ಜ್‌ಬರ್ಗ್ ರಾಜ್ಯ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, 44 ವರ್ಷದ ಅನುಭವಿ ಪ್ಯಾರಾಗ್ಲೈಡರ್ ಸಬ್ರಿನಾ ಅವರು ತಮ್ಮ ಪ್ಯಾರಾಗ್ಲೈಡರ್‌ಗೆ ಕ್ಯಾಮೆರಾ ಅಳವಡಿಸಿಕೊಂಡು ಹಾರಾಟ ನಡೆಸುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಬಂದ ಸಣ್ಣ ಸೈಟ್‌ಸೀಯಿಂಗ್ (ಪ್ರವಾಸಿ) ವಿಮಾನವೊಂದು ಸಬ್ರಿನಾ ಅವರ ತಲೆಯ ಕೆಲವೇ ಅಡಿಗಳ ಮೇಲಿಂದ, ಅವರ ಪ್ಯಾರಾಗ್ಲೈಡರಗೆ ಡಿಕ್ಕಿ ಹೊಡೆದು ಅದರ ರೆಕ್ಕೆಯನ್ನು ಸೀಳಿಕೊಂಡು ಹೋಗಿದೆ.
ಕ್ಯಾಮೆರಾದಲ್ಲಿ ಸೆರೆಯಾಗಿರುವ ವಿಡಿಯೋ ದೃಶ್ಯಾವಳಿಗಳಲ್ಲಿ, ವಿಮಾನದ ಪ್ರೊಪೆಲ್ಲರ್ ತಗುಲಿದ ತಕ್ಷಣ ಪ್ಯಾರಾಗ್ಲೈಡರ್ ರೆಕ್ಕೆ ಎರಡು ಭಾಗಗಳಾಗಿ ಹರಿದುಹೋಗಿರುವುದು ಕಂಡುಬಂದಿದೆ. ರೆಕ್ಕೆ ಹರಿದ ತಕ್ಷಣ ನಿಯಂತ್ರಣ ಕಳೆದುಕೊಂಡ ಸಬ್ರಿನಾ ಆಕಾಶದಲ್ಲಿ ವೇಗವಾಗಿ ಸುತ್ತುತ್ತಾ, ಜೋರಾಗಿ ಕಿರುಚುತ್ತಾ ಕೆಳಗೆ ಬೀಳಲು ಆರಂಭಿಸಿದ್ದಾರೆ. ಆದರೆ, ಅತ್ಯಂತ ಆತಂಕದ ಕ್ಷಣದಲ್ಲೂ ಧೈರ್ಯ ಕಳೆದುಕೊಳ್ಳದ ಅವರು, ತಕ್ಷಣವೇ ತಮ್ಮಲ್ಲಿದ್ದ ‘ರಿಸರ್ವ್ ಪ್ಯಾರಾಚೂಟ್’ (ತುರ್ತು ಚೂಟ್) ಅನ್ನು ಎಳೆದು ತೆರೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದಾಗಿ ಅವರು ಭೂಮಿಗೆ ಬಂದುಬಿದ್ದರೂ ಸುರಕ್ಷಿತವಾಗಿದ್ದಾರೆ.
ಹೆಲಿಕಾಪ್ಟರ್ ಮೂಲಕ ರಕ್ಷಣೆ
ಘಟನೆ ನಡೆದ ತಕ್ಷಣ ಆಸ್ಟ್ರಿಯನ್ ಪೊಲೀಸರು ಹೆಲಿಕಾಪ್ಟರ್ ಮೂಲಕ ಸ್ಥಳಕ್ಕೆ ಧಾವಿಸಿ, ಸಬ್ರಿನಾ ಅವರನ್ನು ರಕ್ಷಿಸಿ ವೈದ್ಯಕೀಯ ತಪಾಸಣೆಗಾಗಿ ಸ್ಥಳೀಯ ವಿಮಾನ ನಿಲ್ದಾಣಕ್ಕೆ ರವಾನಿಸಿದ್ದಾರೆ. “ಮೋಟರ್ ವಿಮಾನದ ಪ್ರೊಪೆಲ್ಲರ್ ಪ್ಯಾರಾಗ್ಲೈಡರ್‌ಗೆ ತೀವ್ರ ಹಾನಿ ಮಾಡಿತ್ತು. ಆದರೆ ಅನುಭವಿ ಪ್ಯಾರಾಗ್ಲೈಡರ್ ತಕ್ಷಣವೇ ರಿಸರ್ವ್ ಪ್ಯಾರಾಚೂಟ್ ಬಳಸಿದ್ದರಿಂದ ಅಪಾಯ ತಪ್ಪಿದೆ,” ಎಂದು ಪೊಲೀಸರು ತಿಳಿಸಿರುವುದಾಗಿ ‘ಎನ್‌ಬಿಸಿ ನ್ಯೂಸ್’ ವರದಿ ಮಾಡಿದೆ.
ಅದೃಷ್ಟವಶಾತ್ ಈ ಘಟನೆಯಲ್ಲಿ ಪ್ಯಾರಾಗ್ಲೈಡರ್ ಸಬ್ರಿನಾ ಮತ್ತು ವಿಮಾನದಲ್ಲಿದ್ದ 28 ವರ್ಷದ ಪೈಲಟ್ ಇಬ್ಬರೂ ಯಾವುದೇ ಗಂಭೀರ ಗಾಯಗಳಿಲ್ಲದೆ ಪಾರಾಗಿದ್ದಾರೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ‘ಜೆಲ್ ಆಮ್ ಸೀ’ (Zell am See) ವಿಮಾನ ನಿಲ್ದಾಣದಲ್ಲಿ ಇಳಿದ ನಂತರ ಮಾತನಾಡಿದ ಪೈಲಟ್, ತಮಗೆ ಘರ್ಷಣೆಯನ್ನು ತಪ್ಪಿಸಲು ಸಾಧ್ಯವಾಗಲಿಲ್ಲ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾನೆ.
ಪ್ರಸ್ತುತ ಈ ಭೀಕರ ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಒಂದೇ ವಾಯುಪ್ರದೇಶವನ್ನು ಹಂಚಿಕೊಳ್ಳುವಾಗ ಎದುರಾಗುವ ಅಪಾಯಗಳು ಮತ್ತು ಸಾಹಸ ಕ್ರೀಡೆಗಳ ಸಂದರ್ಭದಲ್ಲಿ ತುರ್ತು ಸುರಕ್ಷತಾ ಸಲಕರಣೆಗಳನ್ನು ಹೊಂದುವ ಪ್ರಾಮುಖ್ಯತೆಯ ಬಗ್ಗೆ ಒತ್ತಿ ಹೇಳಿದೆ.


ನಿಮ್ಮ ಕಾಮೆಂಟ್ ಬರೆಯಿರಿ