ಸರ್ಕಾರಕ್ಕೆ ಯಾರು ಅಪಾಯ? ಯಾರು ಪ್ರತಿಭಟನೆ ಮಾಡ್ತಾರೆ ಅಂತ ಮೊದಲೇ ಹೇಳುತ್ತದೆ ಎಐ(AI) ; ಚೀನಾದಲ್ಲಿ ರೆಡಿಯಾಗ್ತಿದೆ ಬೆಚ್ಚಿಬೀಳುಸುವ ತಂತ್ರಜ್ಞಾನ..!

ಮಾರ್ವೆಲ್ ಸಿನೆಮಾದ ‘ಕ್ಯಾಪ್ಟನ್ ಅಮೆರಿಕ: ದಿ ವಿಂಟರ್ ಸೋಲ್ಜರ್’ ಎಂಬ ಚಲನಚಿತ್ರದಲ್ಲಿ ‘ಹೈಡ್ರಾ’ ಎಂಬ ಖಳನಾಯಕರ ಸಂಘಟನೆಯು ನಾಗರಿಕರ ಡಿಜಿಟಲ್ ಇತಿಹಾಸವನ್ನು ಜಾಲಾಡಿ, ಭವಿಷ್ಯದಲ್ಲಿ ಯಾರು ಸರ್ಕಾರಕ್ಕೆ ಧಕ್ಕೆಯಾಗಬಹುದು ಎಂಬುದನ್ನು ಮುನ್ಸೂಚನೆ ನೀಡುವ ಅತ್ಯಾಧುನಿಕ ಕಂಪ್ಯೂಟರ್ ಅಲ್ಗಾರಿದಮ್ ಒಂದನ್ನು ಸಿದ್ಧಪಡಿಸುತ್ತದೆ. I ಈ ಸಿಎನಮಾದಕಲ್ಪಿತ ವಿಜ್ಞಾನದ (Science Fiction) ಕಥೆ ಈಗ ನಿಜವಾಗುವ ಕಾಲ ದೂರವಿಲ್ಲ. ಸರ್ವಾಧಿಕಾರಿ ಸರ್ಕಾರಗಳಿಗೆ ನಾಗರಿಕರನ್ನು ಕೇವಲ ಕಣ್ಗಾವಲಿನಲ್ಲಿ ಇಡುವುದಷ್ಟೇ ಅಲ್ಲದೆ, ಭವಿಷ್ಯದಲ್ಲಿ ಯಾರು ಸರ್ಕಾರದ ವಿರುದ್ಧ ಧ್ವನಿ ಎತ್ತಬಹುದು, ಸರ್ಕಾರದ ವಿರುದ್ಧ ಯಾರು ಕೆಲಸ ಮಾಡಬಹುದು ಎಂಬುದನ್ನು ಮುಂಚಿತವಾಗಿಯೇ ಊಹಿಸುವ ಕೃತಕ ಬುದ್ಧಿಮತ್ತೆ (AI) ಆಧಾರಿತ ತಂತ್ರಜ್ಞಾನವೊಂದನ್ನು ಚೀನಾದ ಕಂಪನಿಯೊಂದು ಅಭಿವೃದ್ಧಿಪಡಿಸುತ್ತಿದೆ.
ಚೀನಾ ಸರ್ಕಾರವು ತನ್ನ ದೇಶದ ಇಂಟರ್ನೆಟ್ ಚಟುವಟಿಕೆಗಳನ್ನು ನಿಯಂತ್ರಿಸಲು ಮತ್ತು ಸೆನ್ಸಾರ್ ಮಾಡಲು ಬಳಸುವ ಕಣ್ಗಾವಲು ಸಾಫ್ಟ್‌ವೇರ್‌ನ ವಾಣಿಜ್ಯ ಆವೃತ್ತಿಯನ್ನು ಮಾರಾಟ ಮಾಡುವ ‘ಗೀಡ್ಜ್ ನೆಟ್‌ವರ್ಕ್ಸ್’ (Geedge Networks) ಎಂಬ ಕಂಪನಿಯೇ ಈ ಆತಂಕಕಾರಿ ಬೆಳವಣಿಗೆಯ ಹಿಂದಿದೆ. ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿರುವಂತೆ, ಸೋರಿಕೆಯಾಗಿರುವ ಕಂಪನಿಯ ಆಂತರಿಕ ದಾಖಲೆಗಳು ಈ ರಹಸ್ಯ ಯೋಜನೆಯನ್ನು ಬಹಿರಂಗಪಡಿಸಿವೆ. ಈ ಹೊಸ ತಂತ್ರಜ್ಞಾನವು ನಾಗರಿಕರ ಸ್ಥಳದ ಮಾಹಿತಿ (Location Data) ಮತ್ತು ಇಂಟರ್ನೆಟ್ ಬಳಕೆಯ ಮಾದರಿಗಳನ್ನು AI ಮೂಲಕ ವಿಶ್ಲೇಷಿಸಿ, ಭವಿಷ್ಯದಲ್ಲಿ ಯಾರು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಬಹುದು, ಬಂಡಾಯ ಏಳಬಹುದು ಎಂಬುದನ್ನು ಮೊದಲೇ ಊಹಿಸಲಿದೆ.

ಸಾಮೂಹಿಕ ಕಣ್ಗಾವಲು ಮತ್ತು ಎಐ ಸಂಯೋಜನೆ:
“ಸಾಮೂಹಿಕ ಕಣ್ಗಾವಲು ವ್ಯವಸ್ಥೆಯು ಕೃತಕ ಬುದ್ಧಿಮತ್ತೆಯೊಂದಿಗೆ ಕೈಜೋಡಿಸಿದಾಗ ಏನಾಗುತ್ತದೆ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆ. ಯಾವುದೇ ನಿಯಂತ್ರಣ ಅಥವಾ ತಡೆ ಇಲ್ಲದಿದ್ದರೆ, ಚೀನಾ ತನ್ನ ನಾಗರಿಕರ ಮೇಲೆ ಮಾಡುತ್ತಿರುವ ಈ ಪ್ರಯೋಗವು, ಇಂತಹ ತಂತ್ರಜ್ಞಾನಗಳು ಮುಕ್ತವಾಗಿ ಸಿಗುವ ವಿಶ್ವದ ಯಾವುದೇ ದೇಶದಲ್ಲಾದರೂ ಸಂಭವಿಸಬಹುದಾದ ಭವಿಷ್ಯದ ದಿಕ್ಸೂಚಿಯಾಗಿದೆ,” ಎಂದು ವ್ಯಾಂಡರ್‌ಬಿಲ್ಟ್‌ನ ಇನ್‌ಸ್ಟಿಟ್ಯೂಟ್ ಆಫ್ ನ್ಯಾಷನಲ್ ಸೆಕ್ಯುರಿಟಿಯ ‘ವಿಕೆಡ್ ಪ್ರಾಬ್ಲಮ್ಸ್ ಲ್ಯಾಬ್’ ನಿರ್ದೇಶಕರಾದ ಬ್ರೆಟ್ ಜೆ. ಗೋಲ್ಡ್‌ಸ್ಟೈನ್ ಕಳವಳ ವ್ಯಕ್ತಪಡಿಸಿದ್ದಾರೆ.
ವ್ಯಾಂಡರ್‌ಬಿಲ್ಟ್ ಸಂಶೋಧಕರ ಪ್ರಕಾರ, ಗೀಡ್ಜ್ ಕಂಪನಿ ಅಭಿವೃದ್ಧಿಪಡಿಸುತ್ತಿರುವ ಈ ತಂತ್ರಜ್ಞಾನವು ಚೀನಾ ನಾಗರಿಕರ ಸಮಗ್ರ ಪ್ರೊಫೈಲ್‌ಗಳನ್ನು (Profile) ಸಿದ್ಧಪಡಿಸುತ್ತದೆ. ತದನಂತರ ಎಐ (AI) ಮಾದರಿಗಳನ್ನು ಬಳಸಿ ಅದರಲ್ಲಿ ಯಾರು ಸರ್ಕಾರಕ್ಕೆ ‘ಸಂಭವನೀಯ ಅಪಾಯ’ ತಂದೊಡ್ಡಬಹುದು ಎಂಬುದನ್ನು ಗುರುತಿಸುತ್ತದೆ.

ಪ್ರಮುಖ ಸುದ್ದಿ :-   ಹಾರುವ ಕಾರಿನ ಅದ್ಭುತ ವಿಡಿಯೊಗಳು | ಗಾಳಿಯಲ್ಲಿ ಹಾರುವ, ತಲೆಕೆಳಗಾಗಿ ಚಲಿಸುವ, ಪಲ್ಟಿ ಹೊಡೆದು ಮತ್ತೆ ಓಡುವ ಟೆಸ್ಲಾ ಕಾರು

ವರ್ತನೆಗಳ ಆಧಾರದ ಮೇಲೆ ಪ್ರೊಫೈಲಿಂಗ್:
ಗೀಡ್ಜ್ ಸಂಶೋಧಕರು 2024 ರಲ್ಲೇ ದೂರಸಂಪರ್ಕ, ಸಾಮಾಜಿಕ ಮಾಧ್ಯಮ ಮತ್ತು ಸ್ಥಳದ ಡೇಟಾವನ್ನು ಆಧರಿಸಿ ಜನರ ವರ್ತನೆಯ ಪ್ರೊಫೈಲ್‌ಗಳನ್ನು ಅಭಿವೃದ್ಧಿಪಡಿಸುವ ಕೆಲಸವನ್ನು ಪ್ರಾರಂಭಿಸಿದ್ದರು. ಈ ಡೇಟಾವನ್ನು AI ಮಾದರಿಗಳ ಮೂಲಕ ವರ್ಗೀಕರಿಸಿ, ಸರ್ಕಾರಕ್ಕೆ ‘ಹಾನಿಕಾರಕ’ ಎನಿಸುವ ಮಾಹಿತಿಯನ್ನು ಗುರುತಿಸುವುದು ಅವರ ಉದ್ದೇಶವಾಗಿತ್ತು.
“ಗೀಡ್ಜ್ ಸಂಶೋಧನಾ ತಂಡವು ಕೇವಲ ಜನರ ವರ್ತನೆಯ ಮಾದರಿಗಳನ್ನು ದಾಖಲಿಸುತ್ತಿರಲಿಲ್ಲ. ಬದಲಿಗೆ ನಾಗರಿಕರು ಮುಂದೆ ಏನು ಮಾಡಬಹುದು ಮತ್ತು ಯಾರೊಂದಿಗೆ ಸಂಪರ್ಕದಲ್ಲಿ ಇರಬಹುದು ಎಂಬುದನ್ನು ಊಹಿಸಲು ಪ್ರಯತ್ನಿಸುತ್ತಿತ್ತು. ಸಾಮಾನ್ಯ ವಿಷಯಗಳ ಬಗ್ಗೆ ಸಂಗ್ರಹಿಸಲಾದ ಈ ಅಗಾಧ ಪ್ರಮಾಣದ ಡೇಟಾವೇ, ನೀವು ಯಾರು ಮತ್ತು ಭವಿಷ್ಯದಲ್ಲಿ ಏನು ಮಾಡುತ್ತೀರಿ ಎಂಬುದನ್ನು ನಿರ್ಧರಿಸುವ ಪ್ರೊಫೈಲ್‌ಗಳನ್ನು ಸಿದ್ಧಪಡಿಸಲು ಬಳಕೆಯಾಗುತ್ತಿರುವ ಕಚ್ಚಾ ಸಾಮಗ್ರಿಯಾಗಿದೆ,” ಎಂದು ವ್ಯಾಂಡರ್‌ಬಿಲ್ಟ್‌ನ ರಾಜಕೀಯ ವಿಜ್ಞಾನ ಪ್ರಾಧ್ಯಾಪಕ ಬ್ರೆಟ್ ವಿ. ಬೆನ್ಸನ್ ವಿವರಿಸಿದ್ದಾರೆ.

ಸೋರಿಕೆಯಾದ ದಾಖಲೆಗಳ ಪ್ರಕಾರ, ಗೀಡ್ಜ್ ಕಂಪನಿಯು ವ್ಯಕ್ತಿಯೊಬ್ಬನ ಭೌತಿಕ ಚಲನವಲನಗಳನ್ನು ಆತನ ಆನ್‌ಲೈನ್ ಚಟುವಟಿಕೆಗಳೊಂದಿಗೆ (ಅಂದರೆ ಆತ ಯಾವ ಸಿನೆಮಾ ವೀಕ್ಷಿಸುತ್ತಾನೆ ಮತ್ತು ಯಾವ ಪುಸ್ತಕಗಳನ್ನು ಓದುತ್ತಾನೆ ಎಂಬ ಮಾಹಿತಿ) ಜೋಡಿಸಲು ಪ್ರಯತ್ನಿಸುತ್ತಿರುವುದು ಬೆಳಕಿಗೆ ಬಂದಿದೆ.
ಅಮೆರಿಕದ ಚಿಪ್ ನಿರ್ಬಂಧ ಮತ್ತು ರಾಜಕೀಯ ನಂಟು:
AI ತಂತ್ರಜ್ಞಾನಕ್ಕೆ ಶಕ್ತಿ ನೀಡುವ ಅಮೆರಿಕ ವಿನ್ಯಾಸದ ಕಂಪ್ಯೂಟರ್ ಚಿಪ್‌ಗಳ ರಫ್ತಿನ ಮೇಲೆ ಬೈಡನ್ ಆಡಳಿತಾವಧಿಯಲ್ಲಿ ಹೇರಲಾಗಿದ್ದ ಕಠಿಣ ನಿರ್ಬಂಧಗಳಿಂದಾಗಿ ಗೀಡ್ಜ್ ಕಂಪನಿಯ ಈ ಸಂಶೋಧನೆಯ ವೇಗ ಸ್ವಲ್ಪ ಕುಂಠಿತಗೊಂಡಿತ್ತು. ಆದರೆ, ಇತ್ತೀಚಿನ ರಾಜಕೀಯ ವಿದ್ಯಮಾನಗಳ ಪ್ರಕಾರ, ಟ್ರಂಪ್ ಆಡಳಿತವು ಎನ್ವಿಡಿಯಾ (Nvidia) ಕಂಪನಿಯ ಅತ್ಯಾಧುನಿಕ ಪ್ರೊಸೆಸರ್‌ಗಳನ್ನು ಚೀನಾಕ್ಕೆ ಸಿಗದಂತೆ ನಿರ್ಬಂಧಿಸಿದ್ದರೂ, ಇತ್ತೀಚೆಗೆ ಅಧ್ಯಕ್ಷ ಟ್ರಂಪ್ ಅವರು ಬೀಜಿಂಗ್‌ಗೆ ಭೇಟಿ ನೀಡಿದ ಬೆನ್ನಲ್ಲೇ ಚೀನಾಕ್ಕೆ ಎನ್ವಿಡಿಯಾದ ಹೆಚ್ಚು ಸುಧಾರಿತ ಆವೃತ್ತಿಯ ಚಿಪ್‌ಗಳು ಲಭ್ಯವಾಗಲಿವೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ. ಇದು ಚೀನಾದ ಈ ಅಪಾಯಕಾರಿ AI ಕಣ್ಗಾವಲು ಯೋಜನೆಗೆ ಮತ್ತಷ್ಟು ವೇಗ ನೀಡುವ ಸಾಧ್ಯತೆಯಿದೆ.

ಪ್ರಮುಖ ಸುದ್ದಿ :-   ಹಾರುವ ಕಾರಿನ ಅದ್ಭುತ ವಿಡಿಯೊಗಳು | ಗಾಳಿಯಲ್ಲಿ ಹಾರುವ, ತಲೆಕೆಳಗಾಗಿ ಚಲಿಸುವ, ಪಲ್ಟಿ ಹೊಡೆದು ಮತ್ತೆ ಓಡುವ ಟೆಸ್ಲಾ ಕಾರು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement