ಕುವೈತ್ ವಿಮಾನ ನಿಲ್ದಾಣದ ಮೇಲೆ ಇರಾನ್ ದಾಳಿ: ಬೆಂಕಿ ಉಂಡೆಯಾದ ಟರ್ಮಿನಲ್, ವಿನಾಶದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಕುವೈತ್ ಸಿಟಿ: ಇರಾನ್ ಮತ್ತು ಅಮೆರಿಕ ನಡುವಿನ ಕದನ ವಿರಾಮದ ನಡುವೆಯೇ ಕುವೈತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-1 ರ ಮೇಲೆ ಭೀಕರ ಡ್ರೋನ್ ದಾಳಿ ನಡೆದಿದೆ. ಈ ಘಟನೆಯಲ್ಲಿ ಓರ್ವ ಭಾರತೀಯ ನಾಗರಿಕ ಮೃತಪಟ್ಟಿದ್ದು, ಕನಿಷ್ಠ 63 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ದಾಳಿಯ ಬೆನ್ನಲ್ಲೇ ಕುವೈತ್ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಸ್ಫೋಟದ ಸಿಸಿಟಿವಿ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿದೆ.
ಜೂನ್ 3 ರಂದು ನಡೆದ ಈ ದಾಳಿಯು ಇರಾನ್ ಮತ್ತು ಅಮೆರಿಕ ನಡುವೆ ಏರ್ಪಟ್ಟಿದ್ದ ಸೂಕ್ಷ್ಮ ಕದನ ವಿರಾಮಕ್ಕೆ ದೊಡ್ಡ ಧಕ್ಕೆ ತಂದಿದೆ.
ಕುವೈತ್‌ನ  ಡಿಜಿಸಿಎ (DGCA) ತನ್ನ ಅಧಿಕೃತ ‘X’ (ಟ್ವಿಟರ್) ಖಾತೆಯಲ್ಲಿ ದಾಳಿಯ ಭೀಕರ ಸಿಸಿಟಿವಿ ದೃಶ್ಯಾವಳಿಗಳನ್ನು ಹಂಚಿಕೊಂಡಿದೆ. ಕ್ಷಿಪಣಿಯಂತಹ ವಸ್ತುವೊಂದು ನೇರವಾಗಿ ಟರ್ಮಿನಲ್ ಕಟ್ಟಡಕ್ಕೆ ಅಪ್ಪಳಿಸುತ್ತಿದ್ದಂತೆ ಪ್ರಚಂಡ ಸ್ಫೋಟ ಸಂಭವಿಸುವುದು ಮತ್ತು ವಿಮಾನ ನಿಲ್ದಾಣದ ಮೇಲ್ಛಾವಣಿಯ ಒಂದು ಭಾಗ ಕುಸಿದು ಬೀಳುವ ದೃಶ್ಯಗಳು ಅದರಲ್ಲಿ ಸೆರೆಯಾಗಿವೆ.
ಘಟನೆಯ ನಂತರ ವಿಮಾನ ನಿಲ್ದಾಣದ ಮೂಲಸೌಕರ್ಯಗಳಿಗೆ ಭಾರಿ ಹಾನಿಯಾಗಿದ್ದು, ಭದ್ರತಾ ಕಾರಣಗಳಿಗಾಗಿ ಈ ನಿಲ್ದಾಣದ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.
ಕುವೈತ್ ನಾಗರಿಕ ವಿಮಾನಯಾನ ಸಂಸ್ಥೆಯ ಪ್ರಕಟಣೆ:
“ಜೂನ್ 3, 2026 ರಂದು ಕುವೈತ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 1 ರ ಮೇಲೆ ಇರಾನ್ ನಡೆಸಿದ ಕ್ರೂರ ಡ್ರೋನ್ ದಾಳಿಯ ಮೊದಲ ಕ್ಷಣಗಳಿವು. ಈ ದಾಳಿಯು ಅಮಾಯಕ ಜೀವವನ್ನು ಬಲಿಪಡೆದಿದೆ, ಹಲವರಿಗೆ ಗಂಭೀರ ಗಾಯಗಳಾಗಿವೆ ಮತ್ತು ಅಪಾರ ಪ್ರಮಾಣದ ಆಸ್ತಿಪಾಸ್ತಿ ನಷ್ಟ ಸಂಭವಿಸಿದೆ” ಎಂದು ಕುವೈತ್‌ ನಾಗರಿಕ ವಿಮಾನಯಾನ ಸಂಸ್ಥೆ ಹೇಳಿದೆ.
ದಾಳಿಯಲ್ಲಿ ಮೃತಪಟ್ಟ ವ್ಯಕ್ತಿ ಭಾರತೀಯ ನಾಗರಿಕ ಎಂದು ಭಾರತದ ವಿದೇಶಾಂಗ ಸಚಿವಾಲಯ (MEA) ಖಚಿತಪಡಿಸಿದೆ. ಅಲ್ಲದೆ, ಗಾಯಗೊಂಡವರಲ್ಲಿಯೂ ಹಲವರು ಭಾರತೀಯರಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಕುವೈತ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ, “ನಾವು ಕುವೈತ್ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಮೃತರ ಕುಟುಂಬಕ್ಕೆ ಮತ್ತು ಗಾಯಗೊಂಡ ಭಾರತೀಯರಿಗೆ ಅಗತ್ಯವಿರುವ ಎಲ್ಲಾ ರೀತಿಯ ಕಾನೂನು ಹಾಗೂ ವೈದ್ಯಕೀಯ ನೆರವನ್ನು ಒದಗಿಸಲಾಗುತ್ತಿದೆ” ಎಂದು ತಿಳಿಸಿದೆ.
ಆರೋಪ-ಪ್ರತ್ಯಾರೋಪ: ಇರಾನ್ ನಿರಾಕರಣೆ
ಕುವೈತ್ ಮಿಲಿಟರಿ ಈ ದಾಳಿಯನ್ನು “ಇರಾನಿನ ಅಪರಾಧಿಕ ಆಕ್ರಮಣ” ಎಂದು ತೀವ್ರವಾಗಿ ಖಂಡಿಸಿದೆ ಮತ್ತು ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸುವುದಾಗಿ ಹೇಳಿದೆ.
ಆದರೆ, ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಈ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದೆ. ನಾವು ವಿಮಾನ ನಿಲ್ದಾಣವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿಲ್ಲ ಎಂದು ಇರಾನ್ ವಾದಿಸಿದೆ. ಅಮೆರಿಕ ನಿರ್ಮಿತ ‘ಪೇಟ್ರಿಯಾಟ್ ಇಂಟರ್‌ಸೆಪ್ಟರ್’ (Patriot Interceptor) ಕ್ಷಿಪಣಿಯು ಇರಾನ್‌ನ ಇತರೆ ಕ್ಷಿಪಣಿಗಳನ್ನು ತಡೆಯಲು ವಿಫಲವಾಗಿ, ತಾಂತ್ರಿಕ ದೋಷದಿಂದ ವಿಮಾನ ನಿಲ್ದಾಣದ ಮೇಲೆ ಬಿದ್ದಿದ್ದರಿಂದ ಈ ಹಾನಿ ಸಂಭವಿಸಿದೆ ಎಂದು ಇರಾನ್ ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ. ಆದರೆ ಕುವೈತ್ ಈ ವಾದವನ್ನು ತಿರಸ್ಕರಿಸಿದ್ದು, ಇದು ನೇರ ಇರಾನ್ ಡ್ರೋನ್ ದಾಳಿ ಎಂದೇ ಪ್ರತಿಪಾದಿಸಿದೆ.
ಪ್ರಾದೇಶಿಕ ಉದ್ವಿಗ್ನತೆ ಹೆಚ್ಚಳ
ಕಳೆದ ಏಪ್ರಿಲ್ 8 ರಂದು ಅಮೆರಿಕ-ಇಸ್ರೇಲ್ ಪಡೆಗಳು ಇರಾನ್ ಮೇಲೆ ನಡೆಸಿದ ಜಂಟಿ ದಾಳಿಯ ನಂತರ, ಕದನ ವಿರಾಮ ಘೋಷಿಸಲಾಗಿತ್ತು. ಈ ಕದನ ವಿರಾಮದ ನಂತರ ನಡೆದ ಅತ್ಯಂತ ಗಂಭೀರವಾದ ದಾಳಿ ಇದಾಗಿದೆ. ಕ್ವೆಶ್ಮ್ ದ್ವೀಪದಲ್ಲಿರುವ ಇರಾನ್‌ನ ತೈಲ ಟ್ಯಾಂಕರ್ ಮತ್ತು ಸಂವಹನ ಗೋಪುರವನ್ನು ಅಮೆರಿಕ ಗುರಿಯಾಗಿಸಿಕೊಂಡು ದಾಳಿ ಮಾಡಿ ಯುದ್ಧಕ್ಕೆ ಪ್ರಚೋದನೆ ನೀಡಿದೆ ಎಂದು ಇರಾನ್ ಆರೋಪಿಸಿದೆ.
ಇಷ್ಟು ದಿನ ಪ್ರಾದೇಶಿಕ ಸಂಘರ್ಷಗಳಿಂದ ದೂರವಿದ್ದ ಕುವೈತ್‌ನಂತಹ ಗಲ್ಫ್ ರಾಷ್ಟ್ರಗಳಿಗೂ ಈಗ ಯುದ್ಧದ ಭೀತಿ ಎದುರಾಗಿದೆ. ಕುವೈತ್ ತನ್ನ ದೇಶದಲ್ಲಿ ಪ್ರಮುಖ ಮೂಲಸೌಕರ್ಯಗಳು ಮತ್ತು ವಿದೇಶಿ ಮಿಲಿಟರಿ ನೆಲೆಗಳನ್ನು ಹೊಂದಿರುವುದರಿಂದ, ಅಮೆರಿಕ-ಇರಾನ್ ನಡುವಿನ ಜಿದ್ದಾಜಿದ್ದಿಗೆ ತೊಂದರೆ ಎದುರಿಸುವ ಆತಂಕ ಎದುರಾಗಿದೆ. ಪ್ರಸ್ತುತ ಮಧ್ಯಸ್ಥಿಕೆ ವಹಿಸಿರುವ ರಾಷ್ಟ್ರಗಳು ಕದನ ವಿರಾಮವನ್ನು ಮುಂದುವರಿಸಲು ಹರಸಾಹಸ ಪಡುತ್ತಿವೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement