ಇರಾನ್‌ನಿಂದ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ : ಪ್ರತಿಯಾಗಿ ಇರಾನ್ ಮೇಲೆ ಇಸ್ರೇಲ್ ವಾಯುದಾಳಿ ; ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಭೀತಿ

ಟೆಲ್ ಅವಿವ್/ತೆಹರಾನ್‌ : ತನ್ನ ಮೇಲೆ ಇರಾನ್‌ ನಡೆಸಿದ ಕ್ಷಿಪಣಿ ದಾಳಿಗೆ ಪ್ರತಿಯಾಗಿ ಇಸ್ರೇಲ್‌ ಸಹ ಮಧ್ಯ ಮತ್ತು ಪಶ್ಚಿಮ ಇರಾನ್ ಅನ್ನು ಗುರಿಯಾಗಿಸಿಕೊಂಡು ವಾಯುದಾಳಿ (Airstrikes) ನಡೆಸಿದೆ. ಇದರಿಂದಾಗಿ ಉಭಯ ದೇಶಗಳ ನಡುವೆ ಮತ್ತೆ ಭೀಕರ ಯುದ್ಧ ಆರಂಭವಾಗುವ ಸಾಧ್ಯತೆ ದಟ್ಟವಾಗಿದ್ದು, ಇರಾನ್ ಮತ್ತು ಅಮೆರಿಕ-ಇಸ್ರೇಲ್ ನಡುವಿನ ಯುದ್ಧವನ್ನು ಕೊನೆಗಾಣಿಸಲು ನಡೆಯುತ್ತಿದ್ದ ಸಂಧಾನ ಯತ್ನಗಳಿಗೆ ಭಾರಿ ಹಿನ್ನಡೆಯಾಗಿದೆ.
ಇರಾನ್‌ನ ಇರ್ನಾ (IRNA) ಸುದ್ದಿ ಸಂಸ್ಥೆಯ ಪ್ರಕಾರ, ಇರಾನ್‌ ರಾಜಧಾನಿ ತೆಹರಾನ್‌ನಲ್ಲಿ ಕನಿಷ್ಠ ಎರಡು ಭೀಕರ ಸ್ಫೋಟದ ಶಬ್ದ ಕೇಳಿಬಂದಿದ್ದು, ಇಸ್ಫಹಾನ್, ಕರಾಜ್ ಮತ್ತು ತಬ್ರಿಜ್ ನಗರಗಳಲ್ಲಿ ಕನಿಷ್ಠ ಮೂರು ಸ್ಫೋಟಗಳು ಸಂಭವಿಸಿವೆ ಎನ್ನಲಾಗಿದೆ.
ಇಸ್ರೇಲ್ ದಾಳಿಯ ಬೆನ್ನಲ್ಲೇ ಇರಾನ್ ತನ್ನ ಪ್ರಮುಖ ವಿಮಾನ ನಿಲ್ದಾಣವಾದ ತೆಹರಾನ್‌ನ ಇಮಾಮ್ ಖೊಮೇನಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಲಿನ ವಾಯುಪ್ರದೇಶವನ್ನು (Airspace) ಮುಚ್ಚಿದೆ. ಅಲ್ಲದೆ, ಇಸ್ರೇಲ್ ತನ್ನ ಭೂಪ್ರದೇಶದ ಮೇಲೆ ದಾಳಿ ಮುಂದುವರಿಸಿದರೆ ಗಲ್ಫ್ ರಾಷ್ಟ್ರಗಳಲ್ಲಿರುವ ಎಲ್ಲಾ ಅಮೆರಿಕನ್ ಸೇನಾ ನೆಲೆಗಳನ್ನು ಅಧಿಕೃತ ಟಾರ್ಗೆಟ್‌ಗಳು ಎಂದು ಪರಿಗಣಿಸಲಾಗುವುದು ಎಂದು ಇರಾನ್‌ ಎಚ್ಚರಿಸಿದೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಏಪ್ರಿಲ್ ಆರಂಭದಲ್ಲಿ ಜಾರಿಗೆ ಬಂದಿದ್ದ ಕದನ ವಿರಾಮದ ನಂತರ ಇರಾನ್ ಇಸ್ರೇಲ್ ಮೇಲೆ ಮೊದಲ ಬಾರಿಗೆ ಕ್ಷಿಪಣಿ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಈಗ ಇರಾನ್ ಮೇಲೆ ಪ್ರತಿಕಾರದ ದಾಳಿ ನಡೆಸಿದೆ. ಇಸ್ರೇಲ್ ಭಾನುವಾರ ಯಾವುದೇ ಮುನ್ಸೂಚನೆ ನೀಡದೆ ಬೈರುತ್‌ನ ದಕ್ಷಿಣ ಉಪನಗರಗಳ ಮೇಲೆ ದಾಳಿ ನಡೆಸಿತ್ತು. ದಾಳಿ ನಡೆಸದಂತೆ ಕೆಲವು ದಿನಗಳ ಹಿಂದಷ್ಟೇ ಅಮೆರಿಕ ಮಾಡಿದ್ದ ಮನವಿಯನ್ನು ಧಿಕ್ಕರಿಸಿ ಇಸ್ರೇಲ್ ಈ ದಾಳಿ ಮಾಡಿತ್ತು. ಇದಕ್ಕೆ ಪ್ರತಿಕಾರ ತೀರಿಸಿಕೊಳ್ಳುವುದಾಗಿ ಇರಾನ್‌ ಎಚ್ಚರಿಸಿದ ಮರುದಿನವೇ ಈ ಬೆಳವಣಿಗೆ ನಡೆದಿದೆ.
ಇಸ್ರೇಲ್‌ ನಿಂದ ಯಾವ ಸ್ಥಳಗಳ ಮೇಲೆ ದಾಳಿ ನಡೆದಿದೆ ಅಥವಾ ಎಷ್ಟು ಹಾನಿಯಾಗಿದೆ ಎಂಬ ಬಗ್ಗೆ ಇರಾನ್ ಅಧಿಕಾರಿಗಳು ಯಾವುದೇ ಮಾಹಿತಿ ನೀಡಿಲ್ಲ. ಆದರೆ, ಸೋಮವಾರ ಮುಂಜಾನೆ ನಡೆದ ದಾಳಿಯಲ್ಲಿ ಇಸ್ರೇಲ್ ಗಾಳಿಯಿಂದ ಉಡಾಯಿಸುವ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು (Air-launched ballistic missiles) ಬಳಸಿದೆ ಎಂದು ಇರಾನ್‌ನ ಅರೆಸೇನಾ ಕ್ರಾಂತಿಕಾರಿ ಗಾರ್ಡ್ (Revolutionary Guard) ವಿವರಣೆ ನೀಡದೆ ತಿಳಿಸಿದೆ.
ದಾಳಿ ಆರಂಭವಾಗುತ್ತಿದ್ದಂತೆ ಇರಾನ್‌ನಲ್ಲಿ ಮುಂಜಾನೆ ಇಸ್ರೇಲ್ ಸೇನೆಯು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, “ಸ್ವಲ್ಪ ಸಮಯದ ಹಿಂದೆ ಇಸ್ರೇಲ್ ವಾಯುಪಡೆಯು ಪಶ್ಚಿಮ ಮತ್ತು ಮಧ್ಯ ಇರಾನ್‌ನಲ್ಲಿರುವ ಇರಾನ್ ಭಯೋತ್ಪಾದಕ ಆಡಳಿತಕ್ಕೆ ಸೇರಿದ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿದೆ” ಎಂದು ಹೇಳಿದೆ. ಆದರೆ ಹೆಚ್ಚಿನ ವಿವರಗಳನ್ನು ಹಂಚಿಕೊಂಡಿಲ್ಲ.

ಪ್ರತಿಕಾರದ ಎಚ್ಚರಿಕೆ ನೀಡಿದ ಇಸ್ರೇಲ್:
ಇತ್ತ ಇಸ್ರೇಲ್‌ನ ಹಲವು ಪ್ರದೇಶಗಳಲ್ಲಿ ಸೈರನ್‌ಗಳು ಮೊಳಗಿದ್ದು, ಲಕ್ಷಾಂತರ ಜನರು ರಕ್ಷಣಾ ಬಂಕರ್‌ಗಳತ್ತ ಓಡಿದ್ದಾರೆ. ಕನಿಷ್ಠ ಮೂರು ಕಡೆಗಳಿಂದ ಬಂದ ಕ್ಷಿಪಣಿಗಳನ್ನು ತಡೆದು ಹೊಡೆದುರುಳಿಸಲಾಗಿದೆ ಎಂದು ಇಸ್ರೇಲ್ ಸೇನೆ ತಿಳಿಸಿದ್ದು, ಉತ್ತರದ ಭಾಗದಲ್ಲಿ ಸರಣಿ ಸ್ಫೋಟದ ಶಬ್ದಗಳು ಕೇಳಿಬಂದಿವೆ. ಸಿಎನ್‌ಎನ್ ವರದಿ ಪ್ರಕಾರ, ಕನಿಷ್ಠ 10 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಇಸ್ರೇಲ್ ಮಧ್ಯದಲ್ಲೇ ಹೊಡೆದುರುಳಿಸಿದೆ.
ಇಸ್ರೇಲ್‌ಗೆ ಟ್ರಂಪ್ ಎಚ್ಚರಿಕೆ:
ಇಸ್ರೇಲ್‌ನ ಈ ದಾಳಿಯು ಇರಾನ್ ಮತ್ತು ಅಮೆರಿಕ ನಡುವಿನ ಮಾತುಕತೆಯನ್ನು ಮತ್ತಷ್ಟು ಜಟಿಲಗೊಳಿಸಿದೆ. ಇರಾನ್‌ನ ಕ್ಷಿಪಣಿ ದಾಳಿಯ ವಿರುದ್ಧ ಪ್ರತೀಕಾರ ತೀರಿಸಬೇಡಿ ಮತ್ತು ರಾಜತಾಂತ್ರಿಕತೆಗೆ ಹೆಚ್ಚಿನ ಸಮಯವನ್ನು ನೀಡಬೇಡಿ ಎಂದು ಟ್ರಂಪ್ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹುಗೆ ಹೇಳಿದ್ದಾರೆ ಎಂದು ಅಮೇರಿಕನ್ ಪ್ರಕಟಣೆ ಆಕ್ಸಿಯೋಸ್ ವರದಿ ಮಾಡಿದೆ.
ಇರಾನ್‌ನ ಕ್ಷಿಪಣಿ ದಾಳಿಗೆ ಇಸ್ರೇಲ್ ಪ್ರತಿಕಾರ ತೀರಿಸಿಕೊಳ್ಳಬಾರದು ಮತ್ತು ರಾಜತಾಂತ್ರಿಕತೆಗೆ ಹೆಚ್ಚಿನ ಸಮಯ ನೀಡಬೇಕು ಎಂದು ಟ್ರಂಪ್ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ತಿಳಿಸಿದ್ದಾರೆ ಎಂದು ಅಮೆರಿಕದ ಪ್ರಸಿದ್ಧ ಮಾಧ್ಯಮ ‘ಆಕ್ಸಿಯೋಸ್’ ವರದಿ ಮಾಡಿದೆ.

ಅಲ್ಲದೆ, ಲೆಬನಾನಿನ ಬೈರುತ್ ಮೇಲೆ ಇಸ್ರೇಲ್ ನಡೆಸಿದ ದಾಳಿಗೆ ಟ್ರಂಪ್ ಆಡಳಿತವು ಅದಕ್ಕೆ ಯಾವುದೇ ಹಸಿರು ನಿಶಾನೆ (Green Light) ನೀಡಿರಲಿಲ್ಲ ಎಂದು ಹಿರಿಯಅಮೆರಿಕ ಅಧಿಕಾರಿಯೊಬ್ಬರು ಆಕ್ಸಿಯೋಸ್‌ಗೆ ದೃಢಪಡಿಸಿದ್ದಾರೆ. ಇಸ್ರೇಲ್‌ನ ಮರುದಾಳಿಯನ್ನು ತಡೆಯಲು ಟ್ರಂಪ್ ಪ್ರಯತ್ನಿಸುತ್ತಿರುವುದು, ಇಸ್ರೇಲ್-ಇರಾನ್ ನಡುವಿನ ಉದ್ವಿಗ್ನತೆಯು ಇರಾನ್‌ ಜೊತೆ ಅಮೆರಿಕ ನಡೆಸುತ್ತಿರುವ ಮಾತುಕತೆಗೆ ಅಡ್ಡಿಯಾಗಬಾರದು ಎಂಬ ಉದ್ದೇಶವನ್ನು ಸ್ಪಷ್ಟಪಡಿಸುತ್ತದೆ.
ಕಳೆದ ಕೆಲವು ದಿನಗಳಿಂದ ಇರಾನ್ ಮತ್ತು ಅಮೆರಿಕ ನಡುವೆ ಕದನ ವಿರಾಮಕ್ಕೆ ನಡೆಯುತ್ತಿದ್ದ ಮಾತುಕತೆಗಳು ಇಸ್ರೇಲ್ ಮತ್ತು ಲೆಬನಾನ್‌ನ ಶಿಯಾ ಉಗ್ರಗಾಮಿ ಸಂಘಟನೆ ಹಿಜ್ಬುಲ್ಲಾ ನಡುವಿನ ಯುದ್ಧದಿಂದಾಗಿ ಸ್ಥಗಿತಗೊಂಡಿದ್ದವು.
ಲೆಬನಾನ್ ಮೇಲೆ ದಾಳಿ ನಡೆಸಿದರೆ ಇಡೀ ಮಧ್ಯಪ್ರಾಚ್ಯದಲ್ಲಿ ಮತ್ತೆ ಪೂರ್ಣ ಪ್ರಮಾಣದ ಯುದ್ಧ ಆರಂಭವಾಗುತ್ತದೆ ಎಂದು ಇರಾನ್ ಎಚ್ಚರಿಸಿತ್ತು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement