
ನವದೆಹಲಿ: ಭಾರತದಲ್ಲಿ ಜನನ ಪ್ರಮಾಣವು ಜನಸಂಖ್ಯೆಯನ್ನು ಯಥಾಸ್ಥಿತಿಯಲ್ಲಿ ಕಾಯ್ದುಕೊಳ್ಳಲು ಅಗತ್ಯವಿರುವ ಕನಿಷ್ಠ ಮಟ್ಟಕ್ಕಿಂತ (Replacement Level) ಕೆಳಗೆ ಕುಸಿದಿದೆ ಎಂದು ಸ್ಪೇಸ್ಎಕ್ಸ್ ಸಿಇಒ ಹಾಗೂ ಬಿಲಿಯನೇರ್ ಉದ್ಯಮಿ ಎಲಾನ್ ಮಸ್ಕ್ ಶನಿವಾರ ಸಾಮಾಜಿಕ ಮಾಧ್ಯಮದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಕುರಿತು ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, “ಭಾರತದ ಜನನ ಪ್ರಮಾಣವು ಮರುಸ್ಥಾಪನೆ ಅಥವಾ ಬದಲಿ ಮಟ್ಟಕ್ಕಿಂತ ((Replacement Level) ಕೆಳಗೆ ಕುಸಿದಿದೆ. ಅದರಲ್ಲೂ ವಿಶೇಷವಾಗಿ, ಭಾರತದ ಹೆಚ್ಚು ಸುಶಿಕ್ಷಿತ ಜನಸಂಖ್ಯೆಯಲ್ಲಿ ಜನನ ಪ್ರಮಾಣವು ಹಲವು ವರ್ಷಗಳ ಹಿಂದೆಯೇ ಈ ಮಟ್ಟಕ್ಕಿಂತ ಕೆಳಕ್ಕೆ ಇಳಿದಿದೆ” ಎಂದು ಉಲ್ಲೇಖಿಸಿದ್ದಾರೆ.
ಮಾಧ್ಯಮ ಸಂಸ್ಥೆಯಾದ ‘ಎಎಫ್ ಪೋಸ್ಟ್’ (AF Post) ಹಂಚಿಕೊಂಡಿದ್ದ ದತ್ತಾಂಶವನ್ನು ಉಲ್ಲೇಖಿಸಿ ಮಸ್ಕ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆ ವರದಿಯ ಪ್ರಕಾರ, “ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಫಲವತ್ತತೆ ದರವು (Fertility Rate) ಮರುಸ್ಥಾಪನೆ ಮಟ್ಟಕ್ಕಿಂತ ಕೆಳಕ್ಕೆ ಕುಸಿದಿದೆ. ಕೇವಲ ಒಂದು ದಶಕದಲ್ಲಿ ಒಟ್ಟು ಫಲವತ್ತತೆ ದರವು (TFR) 2.3 ರಿಂದ 1.9 ಕ್ಕೆ ಇಳಿಕೆಯಾಗಿದೆ. ದೇಶದ ರಾಜಧಾನಿ ದೆಹಲಿಯ ಫಲವತ್ತತೆ ದರವು ಪ್ರಸ್ತುತ 1.2 ರಷ್ಟಿದ್ದು, ಇದು ಫಿನ್ಲೆಂಡ್ ದೇಶಕ್ಕಿಂತಲೂ ಕಡಿಮೆಯಾಗಿದೆ” ಎಂದು ತಿಳಿಸಲಾಗಿದೆ. ಜೂನ್ 4 ರಂದು ‘ದಿ ಎಕನಾಮಿಸ್ಟ್’ ಪತ್ರಿಕೆಯಲ್ಲಿ ಪ್ರಕಟವಾದ ‘ಭಾರತದ ಜನಸಂಖ್ಯೆಯು ಶೀಘ್ರದಲ್ಲೇ ಕುಸಿಯಲಿದೆ- ಬಹುಶಃ ಅತ್ಯಂತ ವೇಗವಾಗಿ’ ಎಂಬ ಲೇಖನವನ್ನು ಆಧರಿಸಿ ಎಎಫ್ ಪೋಸ್ಟ್ ಈ ಮಾಹಿತಿ ನೀಡಿತ್ತು.

ವಿಶ್ವಸಂಸ್ಥೆಯ ವರದಿಯಲ್ಲೂ ದೃಢ:
ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿ (UNFPA) ಬಿಡುಗಡೆ ಮಾಡಿರುವ 2025 ರ ‘ವಿಶ್ವ ಜನಸಂಖ್ಯಾ ಸ್ಥಿತಿಗತಿ’ (SOWP) ವರದಿಯು ಸಹ ಇದೇ ಅಂಶವನ್ನು ದೃಢಪಡಿಸಿದೆ. ಭಾರತದ ಒಟ್ಟು ಫಲವತ್ತತೆ ದರವು ಪ್ರತಿ ಮಹಿಳೆಗೆ 1.9 ಜನನಗಳಿಗೆ ಇಳಿಕೆಯಾಗಿದೆ. ಇದು ಜನಸಂಖ್ಯೆಯನ್ನು ಸ್ಥಿರವಾಗಿ ಕಾಯ್ದುಕೊಳ್ಳಲು ಅಗತ್ಯವಿರುವ 2.1 ರ ‘ಮರುಸ್ಥಾಪನೆ ಮಟ್ಟ’ಕ್ಕಿಂತ (Replacement Level) ಕಡಿಮೆಯಾಗಿದೆ. ಇದರರ್ಥ, ವಲಸೆಯನ್ನು ಹೊರತುಪಡಿಸಿ, ಮುಂದಿನ ಪೀಳಿಗೆಯಲ್ಲಿ ಜನಸಂಖ್ಯೆಯ ಗಾತ್ರವನ್ನು ಹಾಗೇ ಉಳಿಸಿಕೊಳ್ಳಲು ಬೇಕಾಗುವ ಸರಾಸರಿ ಮಕ್ಕಳ ಸಂಖ್ಯೆಗಿಂತ ಭಾರತೀಯ ಮಹಿಳೆಯರು ಕಡಿಮೆ ಮಕ್ಕಳಿಗೆ ಜನ್ಮ ನೀಡುತ್ತಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ