ಕೋವಿಡ್ ಲೀಕ್‌ ಆರೋಪ ಹೊತ್ತ ಚೀನಾ ಲ್ಯಾಬ್‌ಗೆ ಅಮೆರಿಕ ವಿಜ್ಞಾನಿಯಿಂದ ಆರ್ಥಿಕ ನೆರವು? ಅಮೆರಿಕ ಗುಪ್ತಚರ ಮುಖ್ಯಸ್ಥೆಯಿಂದ ರಹಸ್ಯ ದಾಖಲೆ ಬಹಿರಂಗ

 ವಾಷಿಂಗ್ಟನ್: ಅಮೆರಿಕದ ಗುಪ್ತಚರ ವಿಭಾಗದ ಮುಖ್ಯಸ್ಥೆಯಾಗಿ (US Spy Chief) ತಮ್ಮ ಅಧಿಕಾರದ ಕೊನೆಯ ದಿನ ತುಳಸಿ ಗಬ್ಬಾರ್ಡ್ ಅವರು ಭಾರಿ ಸಂಚಲನ ಮೂಡಿಸಿದ್ದಾರೆ. ಕೋವಿಡ್-19 ಸಾಂಕ್ರಾಮಿಕದ ‘ಲ್ಯಾಬ್-ಲೀಕ್’ (ಪ್ರಯೋಗಾಲಯದಿಂದ ಸೋರಿಕೆ) ಸಿದ್ಧಾಂತದ ಕೇಂದ್ರಬಿಂದುವಾಗಿರುವ ಚೀನಾದ ವುಹಾನ್ ಸಂಶೋಧನಾ ಪ್ರಯೋಗಾಲಯಕ್ಕೆ ಅಮೆರಿಕದ ಪ್ರಸಿದ್ಧ ವಿಜ್ಞಾನಿ ಡಾ. ಆಂಥೋನಿ ಫೌಸಿ ಹಣಕಾಸಿನ ನೆರವು ನೀಡಿದ್ದರು ಎಂದು ಗಬ್ಬಾರ್ಡ್ ಗಂಭೀರ ಆರೋಪ ಮಾಡಿದ್ದಾರೆ.
ಇದುವರೆಗೆ ಯಾರಿಗೂ ತಿಳಿಯದ, ಅತ್ಯಂತ ರಹಸ್ಯವಾಗಿದ್ದ (Classified) ದಾಖಲೆಗಳನ್ನು ಬಹಿರಂಗಪಡಿಸಿರುವ ತುಳಸಿ ಗಬ್ಬಾರ್ಡ್, ವುಹಾನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (WIV) ಯಲ್ಲಿ ಬಾವಲಿಗಳ ಕೊರೊನಾ ವೈರಸ್ ಕುರಿತು ನಡೆಸಲಾದ ಅಪಾಯಕಾರಿ ‘ಗೇನ್-ಆಫ್-ಫಂಕ್ಷನ್’ (Gain-of-Function) ಸಂಶೋಧನೆಗಾಗಿ ಡಾ. ಫೌಸಿ ಲಕ್ಷಾಂತರ ಡಾಲರ್ ಒದಗಿಸಿದ್ದರು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಕೋವಿಡ್-19 ರ ಉಗಮಕ್ಕೆ ಸಂಬಂಧಿಸಿದಂತೆ ಗುಪ್ತಚರ ಇಲಾಖೆಯ ಮೌಲ್ಯಮಾಪನ ವರದಿಗಳ ಮೇಲೆ ಫೌಸಿ ಪ್ರಭಾವ ಬೀರಿದ್ದರು ಎಂದೂ ಅವರು ಆರೋಪಿಸಿದ್ದಾರೆ.
ಎಕ್ಸ್ (X) ನಲ್ಲಿ ವೀಡಿಯೊ ಸಂದೇಶ: ‘ಡೀಪ್ ಸ್ಟೇಟ್ ಪ್ಲೇಬುಕ್’ ತಂತ್ರ
ತಮ್ಮ ಐದು ನಿಮಿಷಗಳ ಸುದೀರ್ಘ ವೀಡಿಯೊ ಸಂದೇಶವನ್ನು ಸಾಮಾಜಿಕ ಮಾಧ್ಯಮವಾದ ‘ಎಕ್ಸ್’ ನಲ್ಲಿ ಹಂಚಿಕೊಂಡಿರುವ ಗಬ್ಬಾರ್ಡ್, ಡಾ. ಫೌಸಿ ಅವರು ತಮ್ಮ ತಪ್ಪುಗಳನ್ನು ಮರೆಮಾಚಲು ಗುಪ್ತಚರದ ಒಳಗಿರುವ ರಾಜಕೀಯ ಪ್ರೇರಿತ ಶಕ್ತಿಗಳೊಂದಿಗೆ ಕೈಜೋಡಿಸಿದ್ದರು ಎಂದು ದೂರಿದ್ದಾರೆ.
“ಡಾ. ಫೌಸಿ ಅವರು ವುಹಾನ್ ಲ್ಯಾಬ್‌ನಲ್ಲಿ ಅಪಾಯಕಾರಿ ಗೇನ್-ಆಫ್-ಫಂಕ್ಷನ್ ಸಂಶೋಧನೆಗೆ ಧನಸಹಾಯ ನೀಡಲು ಅಮೆರಿಕದ ತೆರಿಗೆದಾರರ ಲಕ್ಷಾಂತರ ಡಾಲರ್ ಹಣವನ್ನು ಹೇಗೆ ಬಳಸಿದ್ದಾರೆ ಎಂಬುದನ್ನು ಬಹಿರಂಗಪಡಿಸುವ ಸಂವಹನ ಮತ್ತು ದಾಖಲೆಗಳನ್ನು ನಾನು ಬಿಡುಗಡೆ ಮಾಡುತ್ತಿದ್ದೇನೆ. ತಮ್ಮದೇ ತಪ್ಪುಗಳು ಮತ್ತು ಅಧಿಕಾರ ದುರುಪಯೋಗವನ್ನು ಮುಚ್ಚಿಡಲು, ಗುಪ್ತಚರ ಮಾಹಿತಿಯನ್ನು ತಿರುಚಲು ಹಾಗೂ ಅಮೆರಿಕ ಕಾಂಗ್ರೆಸ್‌ಗೆ ಸುಳ್ಳು ಹೇಳಲು ಫೌಸಿಯಂತಹ ಸ್ವಾರ್ಥಿ ನಾಯಕರು ‘ಡೀಪ್ ಸ್ಟೇಟ್ ಪ್ಲೇಬುಕ್’ ತಂತ್ರಗಳನ್ನು ಬಳಸಿದ್ದಾರೆ,” ಎಂದು ಗಬ್ಬಾರ್ಡ್ ಕಿಡಿಕಾರಿದ್ದಾರೆ.
ಡಿಸೆಂಬರ್ 2022ರಲ್ಲಿ ನಿವೃತ್ತರಾಗುವ ಮುನ್ನ ಸತತ 38 ವರ್ಷಗಳ ಕಾಲ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಲರ್ಜಿ ಅಂಡ್ ಇನ್ಫೆಕ್ಷಿಯಸ್ ಡಿಸೀಸಸ್ (NIAID) ಮುಖ್ಯಸ್ಥರಾಗಿದ್ದ 85 ವರ್ಷದ ಫೌಸಿ, ದೊಡ್ಡ ಫಾರ್ಮಾ ಕಂಪನಿಗಳು ಮತ್ತು ಟ್ರಿಲಿಯನ್ ಡಾಲರ್ ಮೌಲ್ಯದ ‘ಸಾರ್ವತ್ರಿಕ ಲಸಿಕೆಗಳ’ (universal vaccines) ಹುಡುಕಾಟಕ್ಕೆ ಸಂಬಂಧಿಸಿದ “ಅಪಾಯಕಾರಿ ಕೊರೊನಾ ವೈರಸ್ ಸಂಶೋಧನೆ”ಗೆ ಧನಸಹಾಯ ನೀಡಿದ್ದರು ಎಂದು ಗಬ್ಬಾರ್ಡ್ ಕಚೇರಿ ಗಂಭೀರವಾಗಿ ಆರೋಪಿಸಿದೆ.
‘ಫೌಸಿ ಸಂಸತ್ತಿಗೆ ಸುಳ್ಳು ಹೇಳಿದ್ದಾರೆ’
ತಮ್ಮ ಅನಾರೋಗ್ಯ ಪೀಡಿತ ಪತಿಯ ಆರೈಕೆಗಾಗಿ ಕಳೆದ ತಿಂಗಳು ಡೊನಾಲ್ಡ್ ಟ್ರಂಪ್ ಅವರ ಗುಪ್ತಚರ ಮುಖ್ಯಸ್ಥೆ ಹುದ್ದೆಯನ್ನು ತ್ಯಜಿಸಿದ ತುಳಸಿ ಗಬ್ಬಾರ್ಡ್, ಸತ್ಯವನ್ನು ಮರೆಮಾಚಲು ಆಂಥೋನಿ ಫೌಸಿ ಬಳಸಿದ ತಂತ್ರಗಳು “ಡೀಪ್ ಸ್ಟೇಟ್” (deep state – ತೆರೆಮರೆಯ ಗುಪ್ತ ರಾಜಕೀಯ ಜಾಲ) ಶೈಲಿಯದ್ದಾಗಿವೆ ಎಂದು ಕಿಡಿಕಾರಿದ್ದಾರೆ.
“ಕೋವಿಡ್-19 ಸಾಂಕ್ರಾಮಿಕ ರೋಗವು ಲಕ್ಷಾಂತರ ಅಮೆರಿಕನ್ನರಿಗೆ ಮತ್ತು ಪ್ರಪಂಚದಾದ್ಯಂತದ ಅಸಂಖ್ಯಾತ ಜನರಿಗೆ ಅಪಾರ ಕಷ್ಟ ಮತ್ತು ನೋವನ್ನು ಉಂಟುಮಾಡಿದೆ. ವರ್ಷಗಳ ಸುಳ್ಳುಗಳು, ಸೆನ್ಸಾರ್‌ಶಿಪ್ ಮತ್ತು ಮುಚ್ಚಿಡುವಿಕೆಗಳ ನಂತರ, ಅಮೆರಿಕದ ಜನತೆಗೆ ಪಾರದರ್ಶಕತೆ, ಸತ್ಯ ಮತ್ತು ಹೊಣೆಗಾರಿಕೆಯ ಅಗತ್ಯವಿದೆ” ಎಂದು ಅವರು ಹೇಳಿದ್ದಾರೆ.
ಕಳೆದ ವಾರವಷ್ಟೇ ಮತ್ತೊಂದು ರಹಸ್ಯ ದಾಖಲೆಯನ್ನು ಬಿಡುಗಡೆ ಮಾಡಿದ್ದ ಗಬ್ಬಾರ್ಡ್, ಅಮೆರಿಕವು ಇತಿಹಾಸದಲ್ಲಿ ವಿಶ್ವದ 30 ಕ್ಕೂ ಹೆಚ್ಚು ದೇಶಗಳ ಸುಮಾರು 120 ಪ್ರಯೋಗಾಲಯಗಳಿಗೆ ಧನಸಹಾಯ ನೀಡಿದೆ ಮತ್ತು ಇವುಗಳಲ್ಲಿ ಹಲವಾರು ಪ್ರಯೋಗಾಲಯಗಳು ಅತ್ಯಂತ ಅಪಾಯಕಾರಿ ಹಾಗೂ ಸಾಂಕ್ರಾಮಿಕ ರೋಗಕಾರಕಗಳ (Pathogens) ಸಂಶೋಧನೆಯಲ್ಲಿ ತೊಡಗಿಸಿಕೊಂಡಿವೆ ಎಂದು ಬಹಿರಂಗಪಡಿಸಿದ್ದರು.
ಫೌಸಿ ಮೇಲಿರುವ ಆರೋಪಗಳು
ಕೋವಿಡ್ ಸಾಂಕ್ರಾಮಿಕದ ಅವಧಿಯಲ್ಲಿ ಅಮೆರಿಕದ ಹೋರಾಟದ ಪ್ರಮುಖ ಮುಖವಾಗಿ ಮೂಡಿಬಂದಿದ್ದ ಡಾ. ಆಂಥೋನಿ ಫೌಸಿ, ದೈನಂದಿನ ಸುದ್ದಿಗೋಷ್ಠಿಗಳು ಮತ್ತು ಸುರಕ್ಷತಾ ಮಾರ್ಗಸೂಚಿಗಳ ಮೂಲಕ ಜಾಗತಿಕವಾಗಿ ಗಮನ ಸೆಳೆದಿದ್ದರು. ಸಾಂಕ್ರಾಮಿಕ ರೋಗ ತಜ್ಞರಾಗಿದ್ದ ಅವರು ಅಂದಿನ ಅಧ್ಯಕ್ಷ ಜೋ ಬೈಡನ್ ಅವರ ಮುಖ್ಯ ವೈದ್ಯಕೀಯ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದರು. ಆದರೆ, ವುಹಾನ್‌ನಲ್ಲಿ ನಡೆದ ಅಪಾಯಕಾರಿ ಸಂಶೋಧನೆಗೆ ಧನಸಹಾಯ ನೀಡಿದ ವಿಷಯದ ಕುರಿತು ಅಮೆರಿಕ ಕಾಂಗ್ರೆಸ್‌ಗೆ ಸುಳ್ಳು ಹೇಳಿದ ಆರೋಪದ ಮೇಲೆ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸಿದ ನಂತರ ಅವರ ವರ್ಚಸ್ಸಿಗೆ ಭಾರಿ ಧಕ್ಕೆ ಉಂಟಾಗಿತ್ತು.
ಪ್ರಸ್ತುತ ಗಬ್ಬಾರ್ಡ್ ಮಾಡಿರುವ ಆರೋಪಗಳಿಗೆ ಡಾ. ಫೌಸಿ ಇನ್ನೂ ಪ್ರತಿಕ್ರಿಯಿಸಿಲ್ಲ. ಆದರೆ, ಜೂನ್ 2024 ರಲ್ಲಿ ನಡೆದ ವಿಚಾರಣೆಯ ಸಂದರ್ಭದಲ್ಲಿ ತಾವು ಕೋವಿಡ್-19 ರ ಉಗಮವನ್ನು ಮುಚ್ಚಿಡಲು ಪ್ರಯತ್ನಿಸಿಲ್ಲ ಎಂದು ಹೇಳಿದ್ದ ಅವರು, ಈ ಆರೋಪಗಳು “ಹಾಸ್ಯಾಸ್ಪದ” ಎಂದು ತಳ್ಳಿಹಾಕಿದ್ದರು.
ಗೇನ್-ಆಫ್-ಫಂಕ್ಷನ್ (GoF) ಸಂಶೋಧನೆಗೆ ತಡೆ
ಈ ವಿವಾದ ತಾರಕಕ್ಕೇರುತ್ತಿದ್ದಂತೆ, ಡೊನಾಲ್ಡ್ ಟ್ರಂಪ್ ಆಡಳಿತವು ಕಳೆದ ವರ್ಷವೇ ‘ಗೇನ್-ಆಫ್-ಫಂಕ್ಷನ್’ ಸಂಶೋಧನೆಗೆ ನೀಡಲಾಗುತ್ತಿದ್ದ ಎಲ್ಲಾ ಸರ್ಕಾರಿ ಧನಸಹಾಯವನ್ನು ಸ್ಥಗಿತಗೊಳಿಸಿತು. ಈ ಸಂಶೋಧನೆಯು ವೈರಸ್ ಅಥವಾ ಜೀವಿಗಳ ಜೀನ್ ಅನ್ನು ಮಾರ್ಪಡಿಸಿ, ವೈದ್ಯಕೀಯ ಅಥವಾ ಕೃಷಿ ಕ್ಷೇತ್ರದಲ್ಲಿ ಬಳಸಲು ಹೊಸ ಕಾರ್ಯಗಳನ್ನು ನೀಡುವ ಪ್ರಕ್ರಿಯೆಯಾಗಿದೆ. ಆದರೆ, ಇದು ಅತ್ಯಂತ ಅಪಾಯಕಾರಿಯಾಗಿದ್ದು, ವೈರಸ್‌ಗಳನ್ನು ಹೆಚ್ಚು ಮಾರಕ ಮತ್ತು ಸಾಂಕ್ರಾಮಿಕವಾಗಿ ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.
ಜಾಗತಿಕವಾಗಿ 7.1 ದಶಲಕ್ಷಕ್ಕೂ ಹೆಚ್ಚು (71 ಲಕ್ಷಕ್ಕೂ ಹೆಚ್ಚು) ಜನರ ಸಾವಿಗೆ ಕಾರಣವಾದ ಕೋವಿಡ್-19 (SARS-CoV-2) ವೈರಸ್‌ನ ನಿಖರವಾದ ಉಗಮ ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಆದಾಗ್ಯೂ, ಸಿಐಎ (CIA) ವರದಿ ಸೇರಿದಂತೆ ಹಲವು ಗುಪ್ತಚರ ಸಂಸ್ಥೆಗಳು, ಈ ವೈರಸ್ ಪ್ರಾಣಿಗಳಿಂದ ಹರಡಿರುವುದಕ್ಕಿಂತ ಹೆಚ್ಚಾಗಿ ವುಹಾನ್ ಪ್ರಯೋಗಾಲಯದಿಂದಲೇ ಸೋರಿಕೆಯಾಗಿರುವ ಸಾಧ್ಯತೆ “ಹೆಚ್ಚಾಗಿದೆ” ಎಂದು ಅಭಿಪ್ರಾಯಪಟ್ಟಿವೆ.
ರಹಸ್ಯ ಬಯಲು ಮಾಡಿದ ವಿಸ್ಲ್‌ಬ್ಲೋವರ್‌ಗಳ (Whistleblowers) ಸಾಕ್ಷ್ಯ
ರಾಷ್ಟ್ರೀಯ ಗುಪ್ತಚರ ನಿರ್ದೇಶಕರ ಕಚೇರಿ (ODNI) ಬಿಡುಗಡೆ ಮಾಡಿರುವ ದಾಖಲೆಯ ಪ್ರಕಾರ, ಡಾ. ಫೌಸಿ ಅವರು ‘ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಲರ್ಜಿ ಅಂಡ್ ಇನ್‌ಫೆಕ್ಷಿಯಸ್ ಡಿಸೀಸ್’ (NIAID) ಮುಖ್ಯಸ್ಥರಾಗಿದ್ದಾಗ ವುಹಾನ್ ಲ್ಯಾಬ್‌ನ ಧನಸಹಾಯದ ಮೇಲ್ವಿಚಾರಣೆ ನಡೆಸುತ್ತಿದ್ದರು. ಅವರು 2022 ರಲ್ಲಿ ಈ ಹುದ್ದೆಯಿಂದ ಕೆಳಗಿಳಿದಿದ್ದರು.
ರಾಷ್ಟ್ರೀಯ ಗುಪ್ತಚರ ನಿರ್ದೇಶಕರ ಕಚೇರಿ (ODNI)  ತನ್ನ ಹೇಳಿಕೆಯಲ್ಲಿ, ಈ ವುಹಾನ್ ಸಂಶೋಧನೆಯೇ ಕೋವಿಡ್ ಸಾಂಕ್ರಾಮಿಕಕ್ಕೆ ಕಾರಣವಾದ “ಅಚಾತುರ್ಯದ ಲ್ಯಾಬ್ ಸೋರಿಕೆಯ ಮೂಲ” ಎಂದು ಈಗ ವ್ಯಾಪಕವಾಗಿ ನಂಬಲಾಗಿದೆ ಎಂದು ಹೇಳಿದೆ.
ಅತ್ಯಂತ ಗಮನಾರ್ಹ ಸಂಗತಿಯೆಂದರೆ, ರಾಷ್ಟ್ರೀಯ ಗುಪ್ತಚರ ನಿರ್ದೇಶಕರ ಕಚೇರಿ (ODNI)  ವರದಿಯು ಹಲವು ವಿಸ್ಲ್‌ಬ್ಲೋವರ್‌ಗಳ (ರಹಸ್ಯ ಮಾಹಿತಿ ಬಹಿರಂಗಪಡಿಸುವವರು) ಸಾಕ್ಷ್ಯಗಳನ್ನು ಒಳಗೊಂಡಿದೆ. ಕೋವಿಡ್ ಮೂಲದ ಕುರಿತು ಡಾ. ಫೌಸಿ ಅವರ ಮೌಲ್ಯಮಾಪನವನ್ನು ಪ್ರಶ್ನಿಸಿದ ಗುಪ್ತಚರ ವಿಶ್ಲೇಷಕರು ತೀವ್ರ ಪ್ರತಿಕಾರವನ್ನು ಎದುರಿಸಬೇಕಾಯಿತು, ಅವರನ್ನು ಮೂಲೆಗುಂಪು ಮಾಡಲಾಯಿತು ಮತ್ತು ಅವರ ವೃತ್ತಿಜೀವನಕ್ಕೆ ಭಾರಿ ಹಿನ್ನಡೆಯಾಯಿತು ಎಂದು ಈ ಸಾಕ್ಷ್ಯಗಳು ಬಹಿರಂಗಪಡಿಸಿವೆ. ಈಗ ತುಳಸಿ ಗಬ್ಬಾರ್ಡ್‌  ಅವರು ಆರೋಪಗಳು ಇಡೀ ಪ್ರಕರಣಕ್ಕೆ ಈಗ ಹೊಸ ತಿರುವು ನೀಡಿವೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement