ಬೆಂಗಳೂರು ಮೂಲದ ಹೆಸರಾಂತ ಗಿಟಾರ್ ವಾದಕ ಮತ್ತು ಜಾಗತಿಕ ಪ್ರವಾಸಿ ಬೆನ್ನಿ ಪ್ರಸಾದ (Benny Prasad) ಅವರು ತಮ್ಮ ಜೀವಮಾನದ ಅಪರೂಪದ ಪ್ರವಾಸದ ದಾಖಲೆಯನ್ನು ಹಂಚಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದಾರೆ. ಜಗತ್ತಿನ ಒಟ್ಟು 245 ದೇಶ ಹಾಗೂ ಪ್ರಾಂತ್ಯಗಳಿಗೆ ಭೇಟಿ ನೀಡಿರುವ ಅವರು, ಅದಕ್ಕೆ ಪುರಾವೆಯಾಗಿ ವೀಸಾ ಮತ್ತು ಸೀಲ್ಗಳಿಂದ ತುಂಬಿ ತುಳುಕುತ್ತಿರುವ ತಮ್ಮ 16 ಭಾರತೀಯ ಪಾಸ್ಪೋರ್ಟ್ಗಳನ್ನು ಹೆಮ್ಮೆಯಿಂದ ಪ್ರದರ್ಶಿಸಿದ್ದಾರೆ.
‘ಮೋಸ್ಟ್ ಟ್ರಾವೆಲ್ಡ್ ಪೀಪಲ್’ (MTP) ಇನ್ಸ್ಟಾಗ್ರಾಮ್ ಹಾಗೂ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ, ವಯಸ್ಸಿನ ಕಾರಣದಿಂದ ಹಳದಿಯಾಗಿರುವ ಮತ್ತು ಅಂಟಾರ್ಕ್ಟಿಕಾ ಸೇರಿದಂತೆ ಆರು ಖಂಡಗಳ ಪ್ರವೇಶ ಮುದ್ರೆಗಳು, ವೀಸಾಗಳಿಂದ ದಟ್ಟವಾಗಿ ತುಂಬಿರುವ ತಮ್ಮ ಪಾಸ್ಪೋರ್ಟ್ ಪುಟಗಳನ್ನು ಬೆನ್ನಿ ತಿರುಗಿ ಹಾಕುತ್ತಿರುವುದನ್ನು ಕಾಣಬಹುದು.
“ನಾನು ಭಾರತದವನು. ಅತ್ಯಂತ ಕಡಿಮೆ ಅವಧಿಯಲ್ಲಿ ವಿಶ್ವದ ಪ್ರತಿಯೊಂದು ದೇಶಕ್ಕೂ ಭೇಟಿ ನೀಡಿದ ಹೆಗ್ಗಳಿಕೆ ನನ್ನದಾಗಿದೆ. ಅಂಟಾರ್ಕ್ಟಿಕಾ ಸೇರಿದಂತೆ ಒಟ್ಟು 245 ದೇಶಗಳನ್ನು ನಾನು ಕೇವಲ 6 ವರ್ಷ, 6 ತಿಂಗಳು ಮತ್ತು 22 ದಿನಗಳಲ್ಲಿ ಮುಟ್ಟಿದ್ದೇನೆ,” ಎಂದು ಬೆನ್ನಿ ಪ್ರಸಾದ ಈ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಕಠಿಣ ವೀಸಾ ಪ್ರಕ್ರಿಯೆ ಮತ್ತು ಜಾಗತಿಕ ಮನ್ನಣೆ
ವಿಶ್ವದಾದ್ಯಂತ ಸಂಗೀತ ಪ್ರದರ್ಶನಗಳನ್ನು ನೀಡುತ್ತಲೇ ಈ ಅದ್ಭುತ ಮೈಲಿಗಲ್ಲನ್ನು ಸಾಧಿಸಿದ ಬೆನ್ನಿ, ಗಡಿ ದಾಟುವಾಗ ಎದುರಾಗುವ ವೀಸಾ ನಿಯಮಗಳು ಮತ್ತು ದಾಖಲೆಗಳ ಕಾಗದಪತ್ರಗಳ ನಿರ್ವಹಣೆಯ ಸವಾಲುಗಳ ಬಗ್ಗೆಯೂ ಮಾತನಾಡಿದ್ದಾರೆ.
ಯಾರು ಈ ಬೆನ್ನಿ ಪ್ರಸಾದ್? ಆಶಾಭಂಗದಿಂದ ಜಾಗತಿಕ ಯಶಸ್ಸಿನತ್ತ…
ಬೆನ್ನಿ ಪ್ರಸಾದ್ ಅವರು ಕೇವಲ ಗಿಟಾರ್ ವಾದಕರಲ್ಲ, ಬದಲಿಗೆ ಅಪ್ರತಿಮ ಛಲಗಾರ. ಆಗಸ್ಟ್ 6, 1975 ರಂದು ಬೆಂಗಳೂರಿನಲ್ಲಿ ಜನಿಸಿದ ಇವರು, ಕುಟುಂಬದ ಆ ಪೀಳಿಗೆಯ ಮೊದಲ ಮಗುವಾಗಿದ್ದರಿಂದ ಹೆತ್ತವರು ಇವರ ಮೇಲೆ ಅಪಾರ ಭರವಸೆ ಇಟ್ಟುಕೊಂಡಿದ್ದರು. ಆದರೆ ಅವರ ಆರಂಭದ ದಿನಗಳು ಅತ್ಯಂತ ಕಠಿಣವಾಗಿದ್ದವು.
ಬೆನ್ನಿ ಅವರ ಅಧಿಕೃತ ವೆಬ್ಸೈಟ್ ಪ್ರಕಾರ,ಅವರು ತೀವ್ರವಾದ ಆಸ್ತಮಾ (ದಮ್ಮು) ಕಾಯಿಲೆಯಿಂದ ಬಳಲುತ್ತಿದ್ದರು. ಅದಕ್ಕಾಗಿ ಅವರು ತರಹೇವಾರಿ ಕಾರ್ಟಿಸೋನ್ ಸ್ಟೀರಾಯ್ಡ್ಗಳನ್ನು ತೆಗೆದುಕೊಳ್ಳಬೇಕಾಯಿತು.
ಇದರ ಅಡ್ಡಪರಿಣಾಮವಾಗಿ ಅವರಿಗೆ ‘ರುಮಟಾಯ್ಡ್ ಸಂಧಿವಾತ’ (Rheumatoid arthritis) ಕಾಣಿಸಿಕೊಂಡಿತು ಮತ್ತು ಶೇಕಡಾ 60 ರಷ್ಟು ಶ್ವಾಸಕೋಶ ಹಾನಿಗೊಳಗಾಯಿತು. ರೋಗನಿರೋಧಕ ಶಕ್ತಿ ಸಂಪೂರ್ಣವಾಗಿ ಕ್ಷೀಣಿಸಿತು. ಈ ಆರೋಗ್ಯದ ತೊಂದರೆಗಳು ಇಂದಿಗೂ ಅವರ ಜೀವಕ್ಕೆ ಮುಳ್ಳಾಗಿವೆ.
ಮಗ ಓದಿನಲ್ಲಿ ಮುಂದಿರಬೇಕು, ಗಣಿತ ಮತ್ತು ವಿಜ್ಞಾನದಲ್ಲಿ ಸಾಧನೆ ಮಾಡಬೇಕೆಂದು ಪೋಷಕರು ಬಯಸಿದ್ದರು. ಆದರೆ ಬೆನ್ನಿ ಅವರಿಗೆ ಅದು ಸಾಧ್ಯವಾಗಲಿಲ್ಲ. ಇದರಿಂದ ತೀವ್ರ ನಿರಾಶೆ ಮತ್ತು ಖಿನ್ನತೆಗೆ ಒಳಗಾದ ಅವರು, ತಮ್ಮ 16ನೇ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನವನ್ನೂ ಮಾಡಿದ್ದರಂತೆ.
ಆದರೆ, ಯಾವಾಗ ಅವರ ಒಲವು ಸಂಗೀತದ ಕಡೆಗೆ ತಿರುಗಿತೋ, ಅಲ್ಲಿಂದ ಅವರ ಜೀವನವೇ ಬದಲಾಯಿತು. ಇಂದು ತಮ್ಮ ಸಂಗೀತದ ಮೂಲಕ ಜಗತ್ತಿನಾದ್ಯಂತ ಜನಪ್ರಿಯರಾಗಿರುವ ಬೆನ್ನಿ ಪ್ರಸಾದ, ಪ್ರತಿ ವರ್ಷ 40 ರಿಂದ 50 ದೇಶಗಳಿಗೆ ಪ್ರಯಾಣಿಸುತ್ತಾರೆ.


ನಿಮ್ಮ ಕಾಮೆಂಟ್ ಬರೆಯಿರಿ