ವಯನಾಡು ಭೂಕುಸಿತ | ಹಲವರು ಮೃತಪಟ್ಟಿರುವ ಶಂಕೆ : ಆ ಕ್ಷಣದ ಭಯಾನಕ ವಿಡಿಯೋ ವೈರಲ್ ; ಕೊಚ್ಚಿಹೋದ ಜನರು-ವಾಹನಗಳು

ವಯನಾಡು : ಕೇರಳದ ವಯನಾಡು ಜಿಲ್ಲೆಯ ಮೆಪ್ಪಾಡಿ ಸಮೀಪದ ಕಲ್ಲಾಡಿ ಪ್ರದೇಶದಲ್ಲಿ ಮಂಗಳವಾರ ಸಂಭವಿಸಿದ ಭಾರೀ ಭೂಕುಸಿತದಲ್ಲಿ ಐವರು ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ಹಲವರು ಇನ್ನೂ ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಸಾವಿನ ಸಂಖ್ಯೆ ಎಷ್ಟೆಂಬುದು ಇನ್ನೂ ದೃಢಪಟ್ಟಿಲ್ಲ.
ಮಲಪ್ಪುರಂ ಮತ್ತು ವಯನಾಡು ಜಿಲ್ಲೆಗಳನ್ನು ಸಂಪರ್ಕಿಸುವ ಸುರಂಗ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಮೀನಾಕ್ಷಿ ಸೇತುವೆ ಸಮೀಪ ಈ ದುರ್ಘಟನೆ ಸಂಭವಿಸಿದೆ. ಘಟನೆ ಕುರಿತು ಮಾಹಿತಿ ದೊರೆಯುತ್ತಿದ್ದಂತೆಯೇ ಕಲ್ಪೆಟ್ಟದಿಂದ ಅಗ್ನಿಶಾಮಕ ಮತ್ತು ರಕ್ಷಣಾ ದಳದ ಸಿಬ್ಬಂದಿಯನ್ನು ತಕ್ಷಣ ಸ್ಥಳಕ್ಕೆ ರವಾನಿಸಿ ರಕ್ಷಣಾ ಕಾರ್ಯ ಆರಂಭಿಸಲಾಯಿತು.
ಭೂಕುಸಿತದಿಂದ ಪ್ರಮುಖ ಸಂಪರ್ಕ ಸೇತುವೆಯೊಂದು ಸಂಪೂರ್ಣವಾಗಿ ಮಣ್ಣಿನಡಿ ಹೂತುಹೋಗಿದೆ. ಇದರಿಂದ ಪೀಡಿತ ಪ್ರದೇಶಕ್ಕೆ ತುರ್ತು ರಕ್ಷಣಾ ಸಿಬ್ಬಂದಿ ಹಾಗೂ ಭಾರೀ ಯಂತ್ರೋಪಕರಣಗಳು ತಲುಪುವುದು ಕಷ್ಟಕರವಾಗಿದ್ದು, ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ.

ಈ ಭಾರೀ ಭೂಕುಸಿತದ ಭಯಾನಕ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೊದಲ್ಲಿ ಎತ್ತರದಿಂದ ಮಣ್ಣು ಕುಸಿದು ಬಿದ್ದ ಕೆಲವೇ ಕ್ಷಣಗಳಲ್ಲಿ ಟ್ಯಾಂಕರ್ ಸೇರಿದಂತೆ ಹಲವು, ಜನರು ಹಾಗೂ ಮಣ್ಣಿನ ಸಮೇತ ವಾಹನಗಳು ಕೊಚ್ಚಿಕೊಂಡು ಹೋಗುವ ದೃಶ್ಯ ಸೆರೆಯಾಗಿದೆ.
ವಿಡಿಯೊದಲ್ಲಿ ಕೆಲವರು ಕೊಡೆ ಹಿಡಿದು ದೂರದಿಂದ ಘಟನೆಯನ್ನು ವೀಕ್ಷಿಸುತ್ತಿರುವಾಗ, ಏಕಾಏಕಿ ಗುಡ್ಡ ಕುಸಿದು ಸಾವಿರಾರು ಟನ್‌ಗಳಷ್ಟು ಮಣ್ಣು ಮತ್ತು ಬಂಡೆಗಳು ಗುಡ್ಡದಿಂದ ಕೆಳಕ್ಕೆ ಧುಮ್ಮಿಕ್ಕುವ ದೃಶ್ಯ ಕಂಡುಬರುತ್ತದೆ. ಟ್ಯಾಂಕರ್ ಸುಮಾರು 100 ಅಡಿ ದೂರಕ್ಕೆ ಉರುಳಿಬಿದ್ದಿದ್ದು, ಅದರಲ್ಲಿದ್ದ ಮೂವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ.
ಭಾರೀ ಮಳೆಯಿಂದ ಭೂಕುಸಿತ; ಮಣ್ಣಿನಡಿ ಸಿಲುಕಿದ ಚರ್ಚ್ ಹಾಗೂ ಮನೆ
ನಿರಂತರ ಸುರಿದ ಭಾರೀ ಮಳೆಯ ಬಳಿಕ ಈ ಭೂಕುಸಿತ ಸಂಭವಿಸಿದ್ದು, ವ್ಯಾಪಕ ಪ್ರಮಾಣದ ಹಾನಿ ಉಂಟಾಗಿದೆ. ಸುರಂಗ ರಸ್ತೆ ಯೋಜನೆಯ ಒಂದು ಭಾಗ ಮಣ್ಣಿನಡಿ ಹೂತುಹೋಗಿರುವುದರ ಜೊತೆಗೆ ಸಮೀಪದ ಚರ್ಚ್ ಹಾಗೂ ಒಂದು ಮನೆ ಕೂಡ ಭೂಕುಸಿತಕ್ಕೆ ಸಿಲುಕಿವೆ.
ಮನೆಯ ನಿವಾಸಿಗಳು ಹಜ್ ಯಾತ್ರೆಗಾಗಿ ಮಕ್ಕಾಗೆ ತೆರಳಿದ್ದರಿಂದ ಮನೆಗೆ ಬೀಗ ಹಾಕಲಾಗಿತ್ತು. ಭೂಕುಸಿತ ಸಂಭವಿಸಿದ ವೇಳೆ ಚರ್ಚ್‌ನಲ್ಲೂ ಯಾರೂ ಇರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯ ಗಂಭೀರತೆಯನ್ನು ಪರಿಗಣಿಸಿದ ಮುಖ್ಯಮಂತ್ರಿ ವಿ.ಡಿ. ಸತೀಶನ್ ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ತುರ್ತು ಸಭೆ ನಡೆಸಿ, ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯನ್ನು ಯುದ್ಧೋಪಾದಿಯಲ್ಲಿ ನಡೆಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಮುಖ್ಯಮಂತ್ರಿ ಕಚೇರಿ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಸಚಿವರಾದ ಎ.ಪಿ. ಅನಿಲಕುಮಾರ್ ಹಾಗೂ ಟಿ. ಸಿದ್ದೀಕ್ ಅವರು ತಕ್ಷಣ ವಯನಾಡಿಗೆ ತೆರಳಿ ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆಯ ಮೇಲ್ವಿಚಾರಣೆ ವಹಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದೆ.
ಭಾರೀ ಮಳೆಯ ಹಿನ್ನೆಲೆಯಲ್ಲಿ ಸುರಂಗ ರಸ್ತೆ ಕಾಮಗಾರಿಯನ್ನು ಸೋಮವಾರದಿಂದಲೇ ಸ್ಥಗಿತಗೊಳಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ 24 ಗಂಟೆಗಳಲ್ಲಿ ಈ ಪ್ರದೇಶದಲ್ಲಿ ಸುಮಾರು 265 ಮಿಲಿಮೀಟರ್ ಮಳೆಯಾಗಿದ್ದು, ತೀವ್ರ ಮಳೆಯು ಭೂಕುಸಿತಕ್ಕೆ ಪ್ರಮುಖ ಕಾರಣವಾಗಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ಪ್ರಮುಖ ಸುದ್ದಿ :-   ರಾಮ ಮಂದಿರ ಟ್ರಸ್ಟ್‌ನಿಂದ ಚಂಪತ್ ರಾಯ್‌ ರಾಜೀನಾಮೆ ಅಂಗೀಕಾರ; ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿ ಕೃಷ್ಣ ಮೋಹನ ನೇಮಕ

ಸ್ಥಳೀಯರಿಂದ ಆರು ಮಂದಿಯ ರಕ್ಷಣೆ
ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಆಗಮಿಸುವ ಮುನ್ನವೇ ಸ್ಥಳೀಯ ನಿವಾಸಿಗಳು ಭೂಕುಸಿತ ಸಂಭವಿಸಿದ ಪ್ರದೇಶದಿಂದ ಆರು ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಇವರು ಸುರಂಗ ರಸ್ತೆ ಕಾಮಗಾರಿಗೆ ಸಂಬಂಧಿಸಿದ ಕಾರ್ಮಿಕರಾಗಿದ್ದು ತಂಗಿದ್ದ ವಸತಿ ಕಟ್ಟಡದಲ್ಲಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೂ ಹೆಚ್ಚಿನ ಕಾರ್ಮಿಕರು ಅಥವಾ ಸ್ಥಳೀಯ ನಿವಾಸಿಗಳು ಮಣ್ಣಿನಡಿ ಸಿಲುಕಿರುವ ಸಾಧ್ಯತೆಯ ಬಗ್ಗೆ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಭೂಕುಸಿತ ಸಂಭವಿಸಿದ ಪ್ರದೇಶದಲ್ಲಿ ಕೆಲವು ವಸತಿ ಮನೆಗಳು ಹಾಗೂ ಹೋಂಸ್ಟೇಗಳೂ ಇರುವುದರಿಂದ ಅಲ್ಲಿನ ನಿವಾಸಿಗಳ ಸುರಕ್ಷತೆಯ ಬಗ್ಗೆ ಆತಂಕ ಹೆಚ್ಚಿದೆ. ಸುರಂಗ ರಸ್ತೆ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯನ್ನು ಸಾಗಿಸಲು ಬಳಸಲಾಗುತ್ತಿದ್ದ ಹಲವು ವಾಹನಗಳು ಭೂಕುಸಿತದಲ್ಲಿ ಸಿಲುಕಿ ಹಾನಿಗೊಳಗಾಗಿವೆ. ಒಟ್ಟು ನಷ್ಟದ ಪ್ರಮಾಣದ ಬಗ್ಗೆ ಇನ್ನಷ್ಟೇ ಸಮಗ್ರ ಮಾಹಿತಿ ಲಭ್ಯವಾಗಬೇಕಿದೆ.

ಪೊಲೀಸ್, ಎನ್‌ಡಿಆರ್‌ಎಫ್‌ ತಂಡಗಳ ಭಾಗಿ
ಅಗ್ನಿಶಾಮಕ ಮತ್ತು ರಕ್ಷಣಾ ದಳದ ಜೊತೆಗೆ ಪೊಲೀಸ್ ಇಲಾಖೆ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌) ಸಿಬ್ಬಂದಿಯನ್ನೂ ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. ಸಚಿವ ಟಿ. ಸಿದ್ದೀಕ್ ಹಾಗೂ ವಯನಾಡು ಜಿಲ್ಲಾಧಿಕಾರಿ ಸ್ಥಳದಲ್ಲಿಯೇ ಪರಿಸ್ಥಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಿ ರಕ್ಷಣಾ ಕಾರ್ಯಕ್ಕೆ ಸಮನ್ವಯ ಕಲ್ಪಿಸುತ್ತಿದ್ದಾರೆ. ಮಣ್ಣಿನಡಿ ಇನ್ನೂ ಹೆಚ್ಚಿನ ಜನರು ಸಿಲುಕಿರುವರೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಅನಕ್ಕಂಪೊಯಿಲ್–ಮೆಪ್ಪಾಡಿ ಸುರಂಗ ರಸ್ತೆ ಯೋಜನೆ
ಭೂಕುಸಿತ ಸಂಭವಿಸಿರುವ ಪ್ರದೇಶವು ಅನಕ್ಕಂಪೊಯಿಲ್–ಮೆಪ್ಪಾಡಿ ಸುರಂಗ ರಸ್ತೆ ಯೋಜನೆಯ ಸಮೀಪದಲ್ಲಿದೆ. ಮಲಪ್ಪುರಂ ಮತ್ತು ವಯನಾಡು ಜಿಲ್ಲೆಗಳ ನಡುವಿನ ಸಂಪರ್ಕವನ್ನು ಮತ್ತಷ್ಟು ಸುಧಾರಿಸುವ ಉದ್ದೇಶದಿಂದ ಕೈಗೆತ್ತಿಕೊಳ್ಳಲಾಗಿರುವ ಈ ಮಹತ್ವದ ಮೂಲಸೌಕರ್ಯ ಯೋಜನೆಯ ಕಾಮಗಾರಿ ಕಳೆದ ವರ್ಷ ಆರಂಭಗೊಂಡಿತ್ತು. ಭೂಕುಸಿತದಿಂದ ಯೋಜನೆಗೆ ಯಾವುದೇ ಹಾನಿಯಾಗಿದೆಯೇ ಹಾಗೂ ಕಾಮಗಾರಿಯ ಮೇಲೆ ಪರಿಣಾಮ ಬೀರಿದೆಯೇ ಎಂಬುದರ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ.

ಪ್ರಮುಖ ಸುದ್ದಿ :-   ಮೈ ಜುಂ ಎನ್ನುವ ವಿಡಿಯೋ : ದಾಳಿ ನಡೆಸಿ ರೈತನನ್ನು ಅರ್ಧ ಗಂಟೆ ಕಾಲ ಕಚ್ಚಿ ಹಿಡಿದ ಸಿಂಹ ; ಪಾರಾಗಿದ್ದೇ ಪವಾಡ

ವಯನಾಡು: ಭೂಕುಸಿತಗಳ ಕರಾಳ ಇತಿಹಾಸ
ವಯನಾಡು ಜಿಲ್ಲೆ ಹಲವು ದಶಕಗಳಿಂದ ಭೂಕುಸಿತಗಳಿಗೆ ಸಾಕ್ಷಿಯಾಗಿದ್ದು, ಕೇರಳದಲ್ಲೇ ಅತ್ಯಂತ ಭೂಕುಸಿತ ಪೀಡಿತ ಜಿಲ್ಲೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.
ಇತ್ತೀಚಿನ ಅತ್ಯಂತ ಭೀಕರ ದುರಂತ 2024ರ ಜುಲೈ 30ರಂದು ಸಂಭವಿಸಿತ್ತು. ಆ ಭೂಕುಸಿತದಲ್ಲಿ 298 ಮಂದಿ ಮೃತಪಟ್ಟಿದ್ದರು. ಸುಮಾರು 86 ಸಾವಿರ ಚದರ ಮೀಟರ್ ಪ್ರದೇಶ ಈ ದುರಂತದಿಂದ ಬಾಧಿತವಾಗಿತ್ತು.
1984ರಲ್ಲಿ ಸಂಭವಿಸಿದ ಮುಂಡಕ್ಕೈ ಭೂಕುಸಿತದಲ್ಲಿ 14 ಮಂದಿ, 1992ರಲ್ಲಿ ನಡೆದ ಕಪ್ಪಿಕ್ಕಲಂ ಭೂಕುಸಿತದಲ್ಲಿ 11 ಮಂದಿ, ಹಾಗೂ 2007ರಲ್ಲಿ ಸಂಭವಿಸಿದ ವಳಂತೋಡೆ ಭೂಕುಸಿತದಲ್ಲಿ ನಾಲ್ವರು ಮೃತಪಟ್ಟಿದ್ದರು.

ಪಶ್ಚಿಮ ಘಟ್ಟದ ಅಪಾಯದ ವಲಯ
ಪಶ್ಚಿಮ ಘಟ್ಟದಲ್ಲಿರುವ ವಯನಾಡು ಜಿಲ್ಲೆ, ವಿಶೇಷವಾಗಿ ವಯನಾಡ್-ಮಲಪ್ಪುರಂ-ಕೋಝಿಕೋಡ್ ಗಡಿ ಭಾಗದ ಬೆಟ್ಟಗುಡ್ಡಗಳು ಭೂಕುಸಿತಕ್ಕೆ ಅತ್ಯಂತ ಹೆಚ್ಚು ಒಳಗಾಗುವ ಪ್ರದೇಶಗಳಾಗಿವೆ. ಕೇರಳದಲ್ಲಿ ಸುಮಾರು 17 ಸಾವಿರ ಚದರ ಕಿಲೋಮೀಟರ್ ಪ್ರದೇಶವನ್ನು, ಮುಖ್ಯವಾಗಿ ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ, ಭೂಕುಸಿತ ಅಪಾಯದ ವಲಯ ಎಂದು ಗುರುತಿಸಲಾಗಿದೆ. ಅಲ್ಲದೆ, ವಯನಾಡು ಜಿಲ್ಲೆ ಮಧ್ಯಮ ಮಟ್ಟದ ಭೂಕಂಪ ಅಪಾಯ ವಲಯದಲ್ಲಿಯೂ ಸೇರಿದೆ.
ಭೂಕುಸಿತವು ಕೇವಲ ಕೇರಳಕ್ಕಷ್ಟೇ ಸೀಮಿತವಾಗಿಲ್ಲ; ಇದು ದೇಶವ್ಯಾಪಿ ಆತಂಕದ ವಿಷಯವಾಗಿದೆ. ವಿಶ್ವದಲ್ಲೇ ಭೂಕುಸಿತಕ್ಕೆ ಹೆಚ್ಚು ತುತ್ತಾಗುವ ಐದು ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದೆ. ದೇಶದ ಸುಮಾರು 4.2 ಲಕ್ಷ ಚದರ ಕಿಲೋಮೀಟರ್, ಅಂದರೆ ಒಟ್ಟು ಭೂಪ್ರದೇಶದ ಸುಮಾರು 12.6 ಶೇಕಡಾ ಭಾಗ, ಭೂಕುಸಿತದ ಅಪಾಯಕ್ಕೆ ಒಳಗಾಗುವ ಸಾಧ್ಯತೆ ಇರುವ ಪ್ರದೇಶವೆಂದು ಗುರುತಿಸಲಾಗಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement