ಇರಾನಿನ 80ಕ್ಕೂ ಹೆಚ್ಚು ಟಾರ್ಗೆಟ್‌ಗಳ ಮೇಲೆ ಅಮೆರಿಕದಿಂದ ಭೀಕರ ವೈಮಾನಿಕ ದಾಳಿ : ಇರಾನ್‌ ಪ್ರತಿದಾಳಿ

ತೆಹ್ರಾನ್: ಹಾರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನತೆ ಮತ್ತೆ ಹೆಚ್ಚಾಗಿದ್ದು, ಇರಾನಿನ ನೆಲೆಗಳ ಮೇಲೆ ಅಮೆರಿಕದ ಭಾರೀ ವೈಮಾನಿಕ ದಾಳಿ ನಡೆಸಿದೆ. 80ಕ್ಕೂ ಹೆಚ್ಚು ಟಾರ್ಗೆಟ್‌ಗಳ ಮೇಲೆ ಅಮೆರಿಕ  ನಿಖರ ದಾಳಿ ನಡೆಸಿದ್ದು, ಇರಾನ್‌ ಮಧ್ಯಪ್ರಾಚ್ಯದಲ್ಲಿರುವ ಅಮೆರಿಕ ಸೇನಾ ನೆಲೆಗಳ ಮೇಲೆ ಪ್ರತಿದಾಳಿ ನಡೆಸಿದೆ.
ಹಾರ್ಮುಜ್ ಜಲಸಂಧಿ ಪ್ರದೇಶದಲ್ಲಿನ ಇರಾನ್‌ನ ಸೇನಾ ಗುರಿಗಳ ಮೇಲೆ ಅಮೆರಿಕ ನಡೆಸಿರುವ ಹೊಸ ವೈಮಾನಿಕ ದಾಳಿಯು ಹತ್ತು ದಿನಗಳ ಹಿಂದೆ ನಡೆದಿದ್ದ ದಾಳಿಗಳಿಗಿಂತ ನಾಲ್ಕು ರಿಂದ ಐದು ಪಟ್ಟು ಹೆಚ್ಚು ವ್ಯಾಪ್ತಿ ಮತ್ತು ಪ್ರಬಲತೆಯನ್ನು ಹೊಂದಿದೆ ಎಂದು ಆಕ್ಸಿಯೊಸ್ (Axios) ವರದಿ ತಿಳಿಸಿದೆ.
ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಆಕ್ಸಿಯೊಸ್‌ಗೆ ನೀಡಿದ ಮಾಹಿತಿಯ ಪ್ರಕಾರ, ಹಾರ್ಮುಜ್‌ ಜಲಸಂಧಿ ಮೂಲಕ ಹೋಗುವ ವಾಣಿಜ್ಯ ಹಡಗುಗಳ ಮೇಲೆ ಇರಾನ್ ಪುನಃ ದಾಳಿ ನಡೆಸಿದ್ದಕ್ಕೆ  ಪ್ರತಿಯಾಗಿ ಈ ಕಾರ್ಯಾಚರಣೆ ಆರಂಭಿಸಲಾಗಿದ್ದು, ಇದು ಇನ್ನೂ ಹಲವು ಗಂಟೆಗಳ ಕಾಲ ಮುಂದುವರಿಯುವ ಸಾಧ್ಯತೆಯಿದೆ.
ಹಾರ್ಮುಜ್ ಜಲಸಂಧಿಯ ಪ್ರಮುಖ ಸಾಗಣೆ ಮಾರ್ಗದಲ್ಲಿ ಮೂರು ತೈಲ ಟ್ಯಾಂಕರ್‌ಗಳ ಮೇಲೆ ದಾಳಿ ನಡೆದ ನಂತರ, ಇರಾನ್‌ಗೆ ನೀಡಲಾಗಿದ್ದ ತಾತ್ಕಾಲಿಕ ತೈಲ ನಿರ್ಬಂಧ ವಿನಾಯಿತಿಯನ್ನು ಅಮೆರಿಕ ರದ್ದುಪಡಿಸಿದೆ. ಮಧ್ಯಪ್ರಾಚ್ಯ ಯುದ್ಧ ಅಂತ್ಯಗೊಳಿಸುವ ಕುರಿತು ನಡೆಯುತ್ತಿರುವ ಮಾತುಕತೆಗಳ ನಡುವೆಯೇ ಈ ಕ್ರಮದಿಂದ ಇರಾನ್‌ ಮೇಲಿನ ಒತ್ತಡ ಮತ್ತಷ್ಟು ಹೆಚ್ಚಾಗಿದೆ.
ಅಧಿಕಾರಿಗಳ ಪ್ರಕಾರ, ಏಪ್ರಿಲ್‌ನಲ್ಲಿ ಜಾರಿಗೆ ಬಂದಿದ್ದ ಕದನ ವಿರಾಮದ ನಂತರ ಇದು ಇರಾನ್ ವಿರುದ್ಧ ಅಮೆರಿಕ ನಡೆಸಿದ ಅತ್ಯಂತ ತೀವ್ರ ದಾಳಿಯಾಗಿದೆ. ಮೂರು ವಾರಗಳ ಹಿಂದಷ್ಟೇ ಉಭಯ ದೇಶಗಳ ನಡುವೆ ಮಾಡಿಕೊಂಡಿದ್ದ ತಿಳಿವಳಿಕೆ ಒಪ್ಪಂದ (MoU) ಅಪಾಯದಲ್ಲಿದ್ದು, ಹೊಸದಾಗಿ ಸಂಘರ್ಷ ಆರಂಭವಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
80ಕ್ಕೂ ಹೆಚ್ಚು ಗುರಿಗಳ ಮೇಲೆ ದಾಳಿ
ಆಕ್ಸಿಯೊಸ್ ವರದಿ ಪ್ರಕಾರ, ಈ ದಾಳಿಯಲ್ಲಿ ಇರಾನ್‌ನ ವಾಯು ರಕ್ಷಣಾ ವ್ಯವಸ್ಥೆಗಳು, ಸರ್ಫೇಸ್-ಟು-ಏರ್ ಕ್ಷಿಪಣಿ ತಾಣಗಳು, ಕರಾವಳಿ ನಿಗಾ ವ್ಯವಸ್ಥೆಗಳು, ಹಡಗು ವಿರೋಧಿ ಕ್ರೂಸ್ ಕ್ಷಿಪಣಿ ನೆಲೆಗಳು, ಬಂದರು ಸೌಲಭ್ಯಗಳು ಹಾಗೂ ಡ್ರೋನ್ ಉಡಾವಣೆ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಲಾಗಿದೆ.
ಇರಾನ್ ಮಾಧ್ಯಮಗಳ ಪ್ರಕಾರ, ಬಂದರ್ ಅಬ್ಬಾಸ್, ಸಿರಿಕ್ ಮತ್ತು ಕ್ವೆಶ್ಮ್ (Qeshm) ದ್ವೀಪದಲ್ಲಿ ಭಾರೀ ಸ್ಫೋಟಗಳು ಸಂಭವಿಸಿವೆ. ಅಲ್ ಜಝೀರಾ ವರದಿ ಪ್ರಕಾರ, ಕ್ವೆಶ್ಮ್ ದ್ವೀಪದಲ್ಲಿ ಕನಿಷ್ಠ ಆರು ಸ್ಫೋಟಗಳು, ಸಿರಿಕ್‌ನಲ್ಲಿ ಏಳುರಿಂದ ಒಂಬತ್ತು ಸ್ಫೋಟಗಳು ಹಾಗೂ ಬಂದರ್ ಅಬ್ಬಾಸ್‌ನಲ್ಲಿ ಸುಮಾರು ಹತ್ತು ಸ್ಫೋಟಗಳ ಶಬ್ದ ಕೇಳಿಬಂದಿದೆ.
ಅಸೋಸಿಯೇಟೆಡ್ ಪ್ರೆಸ್ (AP) ಗೆ ಅಮೆರಿಕದ ಅಧಿಕಾರಿಯೊಬ್ಬರು ನೀಡಿದ ಮಾಹಿತಿಯಂತೆ, ಜೂನ್ ಅಂತ್ಯದಲ್ಲಿ ನಡೆದ  ದಾಳಿಗಳಿಗಿಂತ ಸುಮಾರು ಎಂಟು ಪಟ್ಟು ಹೆಚ್ಚು ಟಾರ್ಗೆಟ್‌ಗಳನ್ನು ಈ ಬಾರಿ ಹೊಡೆಯುವ ಉದ್ದೇಶ ಹೊಂದಲಾಗಿತ್ತು.
“ಇರಾನ್ ನಮ್ಮ ಎಚ್ಚರಿಕೆಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಆದ್ದರಿಂದ ನಾವು ಒತ್ತಡವನ್ನು ಇನ್ನಷ್ಟು ಹೆಚ್ಚಿಸುತ್ತಿದ್ದೇವೆ” ಎಂದು ಅವರು ತಿಳಿಸಿದ್ದಾರೆ.
“ಹಾರ್ಮುಜ್ ಜಲಸಂಧಿಯ ಸಮೀಪ ವಾಣಿಜ್ಯ ಹಡಗುಗಳ ಮೇಲೆ ನಡೆದ ದಾಳಿಗಳಿಗೆ ಶಿಕ್ಷೆಯಾಗಿ ಈ ಕಾರ್ಯಾಚರಣೆ ನಡೆಸಲಾಗಿದೆ” ಎಂದು ಸಿಎನ್‌ಎನ್‌ಗೆ ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.
ಸೆಂಟ್‌ಕಾಂ ಅಧಿಕೃತ ಘೋಷಣೆ
ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಪ್ರಕಟಿಸಿದ ಹೇಳಿಕೆಯಲ್ಲಿ, ಇರಾನ್ ಇತ್ತೀಚೆಗೆ ವಾಣಿಜ್ಯ ಹಡಗುಗಳ ಮೇಲೆ ನಡೆಸಿದ ದಾಳಿಗಳಿಗೆ ತಕ್ಷಣದ ಪ್ರತಿಕ್ರಿಯೆಯಾಗಿ 80ಕ್ಕೂ ಹೆಚ್ಚು ಗುರಿಗಳ ಮೇಲೆ ನಿಖರ ಶಸ್ತ್ರಾಸ್ತ್ರಗಳನ್ನು ಬಳಸಿ ದಾಳಿ ನಡೆಸಲಾಗಿದೆ ಎಂದು ತಿಳಿಸಿದೆ.
ಈ ದಾಳಿಯಲ್ಲಿ ಇರಾನ್‌ನ ವಾಯು ರಕ್ಷಣಾ ವ್ಯವಸ್ಥೆಗಳು, ಕಮಾಂಡ್ ಮತ್ತು ಕಂಟ್ರೋಲ್ ಜಾಲಗಳು, ಕರಾವಳಿ ರಾಡಾರ್ ಕೇಂದ್ರಗಳು, ಹಡಗು ವಿರೋಧಿ ಕ್ಷಿಪಣಿ ಸಾಮರ್ಥ್ಯಗಳು ಹಾಗೂ ಹಾರ್ಮುಜ್ ಜಲಸಂಧಿಯ ಸುತ್ತಮುತ್ತ ಕಾರ್ಯನಿರ್ವಹಿಸುತ್ತಿದ್ದ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಗೆ ಸೇರಿದ 60ಕ್ಕೂ ಹೆಚ್ಚು ಸಣ್ಣ ಯುದ್ಧ ದೋಣಿಗಳನ್ನು ಗುರಿಯಾಗಿಸಲಾಗಿದೆ ಎಂದು ಸೆಂಟ್‌ಕಾಂ ತಿಳಿಸಿದೆ.
ಅಂತಾರಾಷ್ಟ್ರೀಯ ವಾಣಿಜ್ಯ ಸಾಗಣೆಗೆ ಅಡ್ಡಿಯಾಗುವ ಇರಾನ್‌ನ ಸಾಮರ್ಥ್ಯವನ್ನು ಕುಗ್ಗಿಸುವುದು ಈ ಕಾರ್ಯಾಚರಣೆಯ ಉದ್ದೇಶ ಎಂದು ಸಂಸ್ಥೆ ಹೇಳಿದೆ.
https://x.com/CENTCOM/status/2074670840893870433?ref_src=twsrc%5Etfw%7Ctwcamp%5Etweetembed%7Ctwterm%5E2074670840893870433%7Ctwgr%5E092f32c6bea527d9ddb40630b7f61c038fc4e337%7Ctwcon%5Es1_&ref_url=https%3A%2F%2Fwww.ndtv.com%2Fworld-news%2Fali-khamenei-funeral-news-us-plans-to-hit-8-times-more-iran-targets-as-punishment-for-ship-attacks-in-hormuz-11741799
ಟ್ರಂಪ್ ಅನುಮತಿ
ಆಕ್ಸಿಯೊಸ್ ವರದಿ ಪ್ರಕಾರ, ನ್ಯಾಟೋ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಟರ್ಕಿಗೆ ತೆರಳಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ವಿರುದ್ಧದ ಹೊಸ ದಾಳಿ ಯೋಜನೆಗೆ ಅನುಮೋದನೆ ನೀಡಿ ಕಾರ್ಯಾಚರಣೆಗೆ ಆದೇಶ ನೀಡಿದ್ದಾರೆ.
“ಹಾರ್ಮುಜ್ ಜಲಸಂಧಿಯಲ್ಲಿ  ವಾಣಿಜ್ಯ ಹಡಗುಗಳ ಮೇಲೆ ಇರಾನ್ ನಡೆಸಿದ ಅಂತಾರಾಷ್ಟ್ರೀಯ ಭಯೋತ್ಪಾದಕ ಕೃತ್ಯಗಳಿಗೆ ಇದು ನೇರ ಪ್ರತಿಕ್ರಿಯೆ. ಪರಿಣಾಮಗಳು ಗೊತ್ತಿದ್ದರೂ ಇರಾನ್ ಈ ದಾಳಿಗಳನ್ನು ಮುಂದುವರಿಸಿದೆ” ಎಂದು ಅಮೆರಿಕದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇದರ ನಡುವೆ, ಫೆಬ್ರವರಿ 28ರಂದು ನಡೆದ ಅಮೆರಿಕ–ಇರಾನ್ ಸಂಘರ್ಷದಲ್ಲಿ ಮೃತಪಟ್ಟ ಮಾಜಿ ಪರಮೋಚ್ಚ ನಾಯಕ ಅಲಿ ಖಮೆನಿಯವರ ಅಂತ್ಯಕ್ರಿಯೆ ಪೂರ್ಣಗೊಳ್ಳುವವರೆಗೆ ಅಮೆರಿಕ–ಇರಾನ್ ಮಾತುಕತೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಅಮೆರಿಕದ ದಾಳಿಗೆ ಇರಾನ್ ಕಿಡಿ; ಪ್ರತಿ ದಾಳಿ
ಇರಾನ್‌ನ ಖಾತಮ್ ಅಲ್-ಅನ್ಬಿಯಾ ಕೇಂದ್ರ ಕಮಾಂಡ್ ಅಮೆರಿಕದ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದು, ಮಾಜಿ ಪರಮೋಚ್ಚ ನಾಯಕ ಅಲಿ ಖಾಮೆನಿಯವರ ಪಾರ್ಥಿವ ಶರೀರಕ್ಕೆ ಇರಾಕ್‌ನಲ್ಲಿ ಅಂತಿಮ ಗೌರವ ಸಲ್ಲಿಸಲಾಗುತ್ತಿದ್ದ ಸಂದರ್ಭದಲ್ಲಿ ನಡೆದಿರುವ ಈ ದಾಳಿ “ಬಹಿರಂಗ ಆಕ್ರಮಣ” ಎಂದು ಆರೋಪಿಸಿದೆ.
ಅಲ್ಲದೆ, ಅಮೆರಿಕ ದಾಳಿಗೆ ಪ್ರತಿಯಾಗಿ ಬಹ್ರೇನ್ ಮತ್ತು ಕುವೈತ್‌ನಲ್ಲಿರುವ 85 ಅಮೆರಿಕದ ಮಿಲಿಟರಿ ಟಾರ್ಗೆಟ್‌ಗಳ ಮೇಲೆ  ದಾಳಿ ನಡೆಸಲಾಗಿದೆ ಎಂದು ಇರಾನ್‌ ಹೇಳಿಕೊಂಡಿದೆ.
ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC), ತನ್ನ ನೌಕಾ ಮತ್ತು ಏರೋಸ್ಪೇಸ್ ಪಡೆಗಳು ಬಹ್ರೇನ್ ಮತ್ತು ಕುವೈತ್‌ನಲ್ಲಿರುವ ಪ್ರಮುಖ ಅಮೆರಿಕದ ಮಿಲಿಟರಿ ನೆಲೆಗಳಿಗೆ ಸಂಬಂಧಿಸಿದ 85 ತಾಣಗಳನ್ನು ಗುರಿಯಾಗಿಸಿಕೊಂಡು ಜಂಟಿ ಕ್ಷಿಪಣಿ ಮತ್ತು ಡ್ರೋನ್ ಕಾರ್ಯಾಚರಣೆಯನ್ನು ನಡೆಸಿವೆ ಎಂದು ಹೇಳಿಕೊಂಡಿದೆ.
 IRGC ಪ್ರಕಾರ, ಬಹ್ರೇನ್‌ನಲ್ಲಿರುವ ಅಮೆರಿಕದ ಐದನೇ ನೌಕಾಪಡೆಯ ಪ್ರಧಾನ ಕಚೇರಿ ಮತ್ತು ಕುವೈತ್‌ನಲ್ಲಿರುವ ಅಲಿ ಅಲ್-ಸೇಲಂ ವಾಯುನೆಲೆಯ ಮೇಲೆ ದಾಳಿಗಳು ನಡೆದವು. ಹಾರ್ಮೋಜ್‌ಗನ್ ಮತ್ತು ಮಹ್‌ಶಹರ್‌ನಲ್ಲಿರುವ ಕರಾವಳಿ ನೆಲೆಗಳು ಮತ್ತು ಮಿಲಿಟರಿಯೇತರ ತಾಣಗಳ ಮೇಲೆ ಅಮೆರಿಕ ವಾಯುದಾಳಿ ನಡೆಸಿದ ನಂತರ ಒಪ್ಪಂದ ಮತ್ತು ಕದನ ವಿರಾಮದ ಅಮೆರಿಕದ ಉಲ್ಲಂಘನೆಗೆ “ಆರಂಭಿಕ ಪ್ರತಿಕ್ರಿಯೆ” ಎಂದು ಅದು ಹೇಳಿದೆ.
ಇರಾನ್‌ನ ದಿವಂಗತ ನಾಯಕನ ಅಂತ್ಯಕ್ರಿಯೆಯ ಮೆರವಣಿಗೆಯನ್ನು ಮರೆಮಾಚಲು ಅಮೆರಿಕ ದಾಳಿಗಳನ್ನು ನಡೆಸಿದೆ ಎಂದು IRGC ಆರೋಪಿಸಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement