ಇಂಡೋನೇಷ್ಯಾದ 1000 ವರ್ಷಗಳ ಹಿಂದಿನ ಶಿವ ದೇವಾಲಯದ ಪುನರುಜ್ಜೀವನಕ್ಕೆ ಭಾರತದ ನೆರವು ಘೋಷಿಸಿದ ಮೋದಿ; ಈ ದೇಗುಲದ ಮಹತ್ವವೇನು?

ನವದೆಹಲಿ/ಜಕಾರ್ತಾ : ಪ್ರಧಾನಿ ನರೇಂದ್ರ ಮೋದಿ ಅವರ ಇಂಡೋನೇಷ್ಯಾದ ಮೂರು ದಿನಗಳ ಅಧಿಕೃತ ಭೇಟಿ ಹಲವು ಮಹತ್ವದ ಫಲಿತಾಂಶಗಳನ್ನು ನೀಡಿದ್ದು, ರಕ್ಷಣೆ, ಸಾಗರ ಸಹಕಾರ, ಅಪರೂಪದ ಖನಿಜಗಳು, ತಂತ್ರಜ್ಞಾನ, ಡಿಜಿಟಲ್ ಪಾವತಿ ವ್ಯವಸ್ಥೆ ಹಾಗೂ ಶಿಕ್ಷಣ ಸೇರಿದಂತೆ 20ಕ್ಕೂ ಹೆಚ್ಚು ಒಪ್ಪಂದಗಳಿಗೆ ಉಭಯ ದೇಶಗಳು ಸಹಿ ಹಾಕಿವೆ.
ಈ ಮಹತ್ವದ ಒಪ್ಪಂದಗಳ ನಡುವೆ ವಿಶೇಷ ಸಾಂಸ್ಕೃತಿಕ ಮಹತ್ವ ಹೊಂದಿರುವ ಒಂದು ನಿರ್ಧಾರವೂ ಹೊರಬಂದಿದೆ. ಇಂಡೋನೇಷ್ಯಾದ ಯೋಗ್ಯಕರ್ತದಲ್ಲಿರುವ ಸುಮಾರು 1,000 ವರ್ಷಗಳ ಇತಿಹಾಸ ಹೊಂದಿರುವ ಪ್ರಸಿದ್ಧ ಪ್ರಂಬನನ್ ಹಿಂದೂ ದೇವಾಲಯದ ಪುನಃಸ್ಥಾಪನೆ ಮತ್ತು ಸಂರಕ್ಷಣೆಗೆ ಭಾರತ ನೆರವು ನೀಡಲು ಮುಂದಾಗಿದೆ. ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂಡೋನೇಷ್ಯಾದ ಪ್ರವಾಸದ ವೇಳೆ ಅಧ್ಯಕ್ಷ ಪ್ರಬೋವೊ ಸುಬಿಯಾಂತೊ ಅವರ ಜೊತೆಗೆ ಪ್ರಂಬನನ್ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

ಪ್ರಂಬನನ್ ದೇವಾಲಯದ ಇತಿಹಾಸ
9ನೇ ಶತಮಾನದಲ್ಲಿ ನಿರ್ಮಾಣಗೊಂಡಿರುವ ಈ ಪ್ರಂಬನನ್ ದೇವಾಲಯವು ಇಂಡೋನೇಷ್ಯಾದ ಅತಿದೊಡ್ಡ ಹಿಂದೂ ದೇವಾಲಯ ಸಂಕೀರ್ಣವಾಗಿದೆ. ಬೌದ್ಧರ ಪ್ರಸಿದ್ಧ ಬೊರೋಬುದುರ್ ದೇವಾಲಯದ ಸಮೀಪದಲ್ಲಿರುವ ಈ ದೇವಾಲಯವು ಜಾವಾ ದ್ವೀಪದಲ್ಲಿ ಹಿಂದೂ ಧರ್ಮ ಮತ್ತು ಬೌದ್ಧ ಧರ್ಮಗಳು ಶಾಂತಿಯುತವಾಗಿ ಪರಸ್ಪರ ಸಹಕಾರದಲ್ಲಿ ಇದ್ದವು ಎಂಬುದಕ್ಕೆ ಸಾಕ್ಷಿಯಾಗಿದೆ.
ಪ್ರಂಬನನ್ ಕೇವಲ ಒಂದು ದೇವಾಲಯವಲ್ಲ; ಇದು ಅದ್ಭುತ ಹಿಂದೂ ವಾಸ್ತುಶಿಲ್ಪದ ಮಾದರಿಯಾಗಿರುವ ವಿಶಾಲ ದೇವಾಲಯ ಸಂಕೀರ್ಣವಾಗಿದೆ. ಇದನ್ನು ಜಾವಾದ ರಾಜರಾದ ರಕೈ ಪಿಕಾತನ್ ಹಾಗೂ ರಕೈ ಬಾಲಿತುಂಗ ಅವರ ಆಳ್ವಿಕೆಯಲ್ಲಿ ನಿರ್ಮಿಸಲಾಯಿತು. ಈ ಸಂಕೀರ್ಣದಲ್ಲಿ ಶಿವ, ವಿಷ್ಣು ಮತ್ತು ಬ್ರಹ್ಮ ದೇವರಿಗೆ ಸಮರ್ಪಿತವಾಗಿರುವ ಒಟ್ಟು 240 ದೇವಾಲಯಗಳಿವೆ.
ರೋರೋ ಜೋಂಗ್ರಾಂಗ್‌ನ ಪೌರಾಣಿಕ ಕಥೆ
ಪ್ರಂಬನನ್ ದೇವಾಲಯಕ್ಕೆ ಸಂಬಂಧಿಸಿದಂತೆ ಜಾವಾದ ಪ್ರಸಿದ್ಧ ಜನಪದ ಕಥೆಯೂ ಇದೆ. ಬಾಂಡುಂಗ್ ಬೊಂಡೋವೊಸೊ ಎಂಬ ಯುವಕ ರೋರೋ ಜೋಂಗ್ರಾಂಗ್ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ. ಆದರೆ ತನ್ನ ಪ್ರೀತಿಯನ್ನು ಸಾಬೀತುಪಡಿಸಲು ಒಂದೇ ರಾತ್ರಿಯಲ್ಲಿ 1,000 ಪ್ರತಿಮೆಗಳಿರುವ ದೇವಾಲಯವನ್ನು ನಿರ್ಮಿಸುವಂತೆ ಆತನಿಗೆ ಆಕೆ ಸವಾಲು ಹಾಕಿದಳು.
ಬೊಂಡೋವೊಸೊ ತನ್ನ ಕಾರ್ಯಕ್ಕಾಗಿ ದೈವಿಕ ಶಕ್ತಿಗಳ ಸಹಾಯ ಪಡೆದ. ದೇವಾಲಯದ ನಿರ್ಮಾಣ ಬಹುತೇಕ ಪೂರ್ಣಗೊಳ್ಳುತ್ತಿದ್ದಾಗ, ಯುವತಿ ಜೋಂಗ್ರಾಂಗ್ ಗ್ರಾಮಸ್ಥರಿಗೆ ಅಕ್ಕಿ ಕುಟ್ಟುವಂತೆ ಹಾಗೂ ಬೆಂಕಿ ಉರಿಸುವಂತೆ ಹೇಳಿ ಬೆಳಗಾಗಿದೆ ಎಂಬ ಭ್ರಮೆ ಮೂಡಿಸಿದಳು. ವಂಚನೆಗೆ ಒಳಗಾದ ಬೊಂಡೋವೊಸೊ ಕೇವಲ 999 ಪ್ರತಿಮೆಗಳನ್ನು ಮಾತ್ರ ಪೂರ್ಣಗೊಳಿಸಲು ಸಾಧ್ಯವಾಯಿತು. ಇದರಿಂದ ಕೋಪಗೊಂಡ ಆತ ಜೋಂಗ್ರಾಂಗ್‌ಳನ್ನೇ ಸಾವಿರನೇ ಪ್ರತಿಮೆಯಾಗು ಎಂದು ಶಪಿಸಿದನೆಂದು ಜನಪ್ರಿಯ ಕಥೆ ಹೇಳುತ್ತದೆ.

ಪ್ರಮುಖ ಸುದ್ದಿ :-   ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿ ಮೇಲೆ ಹಲ್ಲೆ : ಕಾರ್ಪೊರೇಟರ್ ಬಂಧನ

ವಿಶಿಷ್ಟ ವಾಸ್ತುಶಿಲ್ಪ
ಪ್ರಂಬನನ್ ದೇವಾಲಯ ಸಂಕೀರ್ಣವು ಮೂರು ಸಮಕೇಂದ್ರಿತ ಚೌಕಗಳ ವಿನ್ಯಾಸವನ್ನು ಹೊಂದಿದೆ. ಒಳಗಿನ ಚೌಕದಲ್ಲಿ 16 ಪ್ರಮುಖ ದೇವಾಲಯಗಳಿದ್ದು, ಅವುಗಳಲ್ಲಿ 47 ಮೀಟರ್ ಎತ್ತರದ ಶಿವ ದೇವಾಲಯವೇ ಅತ್ಯಂತ ಪ್ರಮುಖವಾಗಿದೆ. ಇದರ ಉತ್ತರ ಭಾಗದಲ್ಲಿ ಬ್ರಹ್ಮ ದೇವಾಲಯ ಮತ್ತು ದಕ್ಷಿಣ ಭಾಗದಲ್ಲಿ ವಿಷ್ಣು ದೇವಾಲಯಗಳಿವೆ.
ಶಿವ ದೇವಾಲಯದ ಒಳಭಾಗವು ನಾಲ್ಕು ಕೊಠಡಿಗಳಾಗಿ ವಿಭಾಗಗೊಂಡಿದೆ. ಮುಖ್ಯ ಗರ್ಭಗುಡಿಯಲ್ಲಿ ಶಿವನ ಮೂರ್ತಿಯಿದ್ದು, ಉಳಿದ ಮೂರು ಕೊಠಡಿಗಳಲ್ಲಿ ದುರ್ಗಾ (ಶಿವನ ಪತ್ನಿ), ಅಗಸ್ತ್ಯ (ಶಿವನ ಗುರು) ಹಾಗೂ ಗಣೇಶ (ಶಿವನ ಪುತ್ರ) ಅವರ ಪ್ರತಿಮೆಗಳಿವೆ.
ರಾಮಾಯಣದ ಕಥೆ ಹೇಳುವ ಶಿಲ್ಪಕಲೆ
ಪ್ರಂಬನನ್ ದೇವಾಲಯದ ಗೋಡೆಗಳ ಮೇಲೆ ಭಾರತದ ಮಹಾಕಾವ್ಯವಾದ ರಾಮಾಯಣದ ಕಥೆಯನ್ನು ಅತ್ಯಂತ ಸುಂದರ ಶಿಲ್ಪಕಲೆಯ ಮೂಲಕ ಚಿತ್ರಿಸಲಾಗಿದೆ. ದೇವಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಈ ಕೆತ್ತನೆಗಳ ಮೂಲಕ ರಾಮಾಯಣದ ಸಂಪೂರ್ಣ ಕಥೆಯನ್ನು ವಿವರಿಸಲಾಗುತ್ತದೆ.

ಯುನೆಸ್ಕೋ ವಿಶ್ವ ಪರಂಪರೆ ತಾಣ
10ನೇ ಶತಮಾನದಲ್ಲಿ ಈ ದೇವಾಲಯವನ್ನು ತೊರೆದುಹೋಗಲಾಗಿತ್ತು. ನಂತರ ಸಂಭವಿಸಿದ ಪ್ರಬಲ ಭೂಕಂಪಗಳಿಂದ ದೇವಾಲಯದ ಅನೇಕ ಭಾಗಗಳು ಹಾನಿಗೊಳಗಾದವು. ಆದಾಗ್ಯೂ, ಅದರ ಅಪಾರ ಸಾಂಸ್ಕೃತಿಕ ಮೌಲ್ಯ ಹಾಗೂ ಅದ್ಭುತ ವಾಸ್ತುಶಿಲ್ಪವನ್ನು ಪರಿಗಣಿಸಿ 1991ರಲ್ಲಿ ಯುನೆಸ್ಕೋ ಪ್ರಂಬನನ್ ದೇವಾಲಯವನ್ನು ವಿಶ್ವ ಪರಂಪರೆ ತಾಣವೆಂದು ಘೋಷಿಸಿತು.
ಪ್ರಸ್ತುತ ಈ ದೇವಾಲಯವು ಇಂಡೋನೇಷ್ಯಾದ ಪ್ರಮುಖ ಪ್ರವಾಸಿ ತಾಣವಾಗಿದ್ದು, ಅಲ್ಲಿನ ಹಿಂದೂಗಳಿಗೆ ಪೂಜಾ ಸ್ಥಳವೂ ಆಗಿದೆ. ಪ್ರತಿ ವರ್ಷ ಮೇ ತಿಂಗಳಿಂದ ಅಕ್ಟೋಬರ್‌ ವರೆಗೆ ಹುಣ್ಣಿಮೆಯ ರಾತ್ರಿ ದೇವಾಲಯದ ದಕ್ಷಿಣ ಭಾಗದಲ್ಲಿರುವ ತೆರೆದ ರಂಗಮಂದಿರದಲ್ಲಿ ರಾಮಾಯಣ ಬ್ಯಾಲೆ ನೃತ್ಯನಾಟಕ ಪ್ರದರ್ಶನ ನಡೆಯುತ್ತದೆ.
ದೇವಾಲಯ ಸಂರಕ್ಷಣೆಗೆ ಭಾರತದ ನೆರವು
ಭಾರತ ಮತ್ತು ಇಂಡೋನೇಷ್ಯಾ ನಡುವಿನ ದ್ವಿಪಕ್ಷೀಯ ಮಾತುಕತೆಗಳ ಬಳಿಕ ಪ್ರಧಾನಿ ಮೋದಿ ಅವರು ಪ್ರಂಬನನ್ ದೇವಾಲಯದ ಸಂರಕ್ಷಣೆ ಹಾಗೂ ಪುನಃಸ್ಥಾಪನೆಗೆ ಭಾರತ ನೆರವು ನೀಡುವುದಾಗಿ ಘೋಷಿಸಿದರು. ಈ ದೇವಾಲಯವು ಭಾರತ ಮತ್ತು ಇಂಡೋನೇಷ್ಯಾದ ನಡುವಿನ ಹಂಚಿಕೊಂಡಿರುವ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿದೆ ಎಂದು ಅವರು ಹೇಳಿದರು.
ನಂತರ ಪ್ರಕಟವಾದ ಜಂಟಿ ಹೇಳಿಕೆಯಲ್ಲಿ, “ಯೋಗ್ಯಕರ್ತದಲ್ಲಿರುವ ಯುನೆಸ್ಕೋ ವಿಶ್ವ ಪರಂಪರೆ ತಾಣವಾದ ಪ್ರಂಬನನ್ ದೇವಾಲಯ ಸಂಕೀರ್ಣದ ಪುನಃಸ್ಥಾಪನೆ ಮತ್ತು ಸಂರಕ್ಷಣೆಗೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಬೆಂಬಲಿತ ಯೋಜನೆ ಉದ್ಘಾಟನೆಯಾಗಿರುವುದನ್ನು ಉಭಯ ನಾಯಕರು ಸ್ವಾಗತಿಸಿದರು” ಎಂದು ತಿಳಿಸಲಾಗಿದೆ.

ಎಎಸ್‌ಐ ಸಮೀಕ್ಷೆ
ಕಳೆದ ಮಾರ್ಚ್‌ನಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ತಜ್ಞರ ತಂಡ ದೇವಾಲಯ ಪ್ರದೇಶದ ಸಮೀಕ್ಷೆ ನಡೆಸಿತ್ತು. ಈ ವೇಳೆ ದೇವಾಲಯದ ಪುನಃಸ್ಥಾಪನೆ ಮತ್ತು ಸಂರಕ್ಷಣೆಯನ್ನು ಅನಾಸ್ಟೈಲೋಸಿಸ್ (Anastylosis) ತಂತ್ರಜ್ಞಾನದ ಮೂಲಕ ಕೈಗೊಳ್ಳಲು ನಿರ್ಧರಿಸಲಾಯಿತು. ಈ ವಿಧಾನದಲ್ಲಿ ಸ್ಥಳದಲ್ಲಿಯೇ ದೊರಕುವ ಮೂಲ ಕಲ್ಲುಗಳನ್ನು ಬಳಸಿಕೊಂಡು ಕಟ್ಟಡವನ್ನು ಮರುಜೋಡಣೆ ಮಾಡಲಾಗುತ್ತದೆ.
ಆದರೆ ದೇವಾಲಯದ ಆವರಣದಲ್ಲಿ ಚದುರಿಹೋಗಿರುವ ಅನೇಕ ವಾಸ್ತುಶಿಲ್ಪದ ಕಲ್ಲುಗಳನ್ನು ಸರಿಯಾದ ದೇವಾಲಯಗಳಿಗೆ ಹೊಂದಿಸುವುದು ಅತ್ಯಂತ ಸೂಕ್ಷ್ಮ ಹಾಗೂ ಸಂಕೀರ್ಣ ಕಾರ್ಯವಾಗಿದ್ದು, ಪ್ರತಿಯೊಂದು ಕಲ್ಲಿನ ನಿಖರ ದಾಖಲಾತಿ ಮತ್ತು ವರ್ಗೀಕರಣ ಅಗತ್ಯವಿದೆ ಎಂದು ಎಎಸ್‌ಐ ತಜ್ಞರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಸರ್ಕಾರಿ ಹುದ್ದೆ-ಕುಟುಂಬದ ಆಸ್ತಿ ಲಾಲಸೆಗೆ ತಾಯಿಯನ್ನೇ ಕೊಲೆ ಮಾಡಿಸಿ ರಸ್ತೆ ಅಪಘಾತವೆಂದು ಕಥೆ ಹೆಣೆದ ಮಗಳು !

ಭಾರತದ ಸಾಂಸ್ಕೃತಿಕ ರಾಜತಾಂತ್ರಿಕತೆ
ಪ್ರಂಬನನ್ ದೇವಾಲಯದ ಸಂರಕ್ಷಣೆಗೆ ಭಾರತ ಮುಂದಾಗಿರುವುದು, ವಿಶ್ವದ ವಿವಿಧ ದೇಶಗಳಲ್ಲಿರುವ ಭಾರತದ ಜೊತೆ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂಬಂಧ ಹೊಂದಿರುವ ಪರಂಪರೆಯ ತಾಣಗಳನ್ನು ಪುನರುಜ್ಜೀವನಗೊಳಿಸುವ ನೀತಿಯ ಭಾಗವಾಗಿದೆ.
ಈ ದಿಸೆಯಲ್ಲಿ ಮೊದಲ ಮಹತ್ವದ ಹೆಜ್ಜೆಯಾಗಿ 2014ರಲ್ಲಿ ಭಾರತವು ವಿಯೆಟ್ನಾಂ ಜತೆ ಒಪ್ಪಂದ ಮಾಡಿಕೊಂಡು ಯುನೆಸ್ಕೋ ವಿಶ್ವ ಪರಂಪರೆ ತಾಣವಾದ ಮೈ ಸನ್ ರಕ್ಷಿತ ಪ್ರದೇಶದ ಪುನಃಸ್ಥಾಪನೆ ಕೈಗೊಂಡಿತ್ತು. ಕ್ರಿ.ಶ. 4ನೇ ಶತಮಾನದಿಂದ 13ನೇ ಶತಮಾನದವರೆಗೆ ನಿರ್ಮಾಣಗೊಂಡಿದ್ದ ಇಲ್ಲಿನ ದೇವಾಲಯ ಸಂಕೀರ್ಣವು ಶೈವ ಸಂಪ್ರದಾಯದ ಪ್ರಮುಖ ಧಾರ್ಮಿಕ ಕೇಂದ್ರವಾಗಿದ್ದು, ಚಂಪಾ ಸಾಮ್ರಾಜ್ಯದ ಧಾರ್ಮಿಕ ನೆಲೆಯಾಗಿತ್ತು. ಇಲ್ಲಿ 7ರಿಂದ 11ನೇ ಶತಮಾನದಲ್ಲಿ ನಿರ್ಮಾಣವಾದ ಚಾಮ್ ಬೌದ್ಧ ಗೋಪುರಗಳೂ ಇವೆ.
2017ರಲ್ಲಿ 2016ರ ಭೂಕಂಪದಿಂದ ಹಾನಿಗೊಳಗಾದ ಮ್ಯಾನ್ಮಾರ್‌ನ ಯುನೆಸ್ಕೋ ವಿಶ್ವ ಪರಂಪರೆ ತಾಣವಾದ ಬಗಾನ್ ಪುರಾತತ್ವ ವಲಯದ ಸ್ಮಾರಕಗಳ ಪುನಃಸ್ಥಾಪನೆಗೂ ಭಾರತ ಒಪ್ಪಂದ ಮಾಡಿಕೊಂಡಿತ್ತು.
ಅದರ ಜೊತೆಗೆ ಕಾಂಬೋಡಿಯಾದ ಸೀಮ್ ರೀಪ್‌ನಲ್ಲಿರುವ ವಿಶ್ವಪ್ರಸಿದ್ಧ ಅಂಕೋರ್ ವಾಟ್ ದೇವಾಲಯ ಸಂಕೀರ್ಣದ ಸಂರಕ್ಷಣೆಯಲ್ಲಿ ಭಾರತ ಮಹತ್ವದ ಪಾತ್ರವಹಿಸಿದೆ. ಲಾವೋಸ್‌ನಲ್ಲಿರುವ ಸುಮಾರು 1,000 ವರ್ಷಗಳ ಇತಿಹಾಸ ಹೊಂದಿರುವ ಶಿವನಿಗೆ ಸಮರ್ಪಿತ ವಾಟ್ ಫು ದೇವಾಲಯದ ಪುನಃಸ್ಥಾಪನಾ ಕಾರ್ಯವನ್ನು ಭಾರತವು 2024ರಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಶ್ರೀಲಂಕಾ ಮತ್ತು ಬಾಂಗ್ಲಾದೇಶದಲ್ಲಿಯೂ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಸ್ಮಾರಕಗಳ ಸಂರಕ್ಷಣಾ ಕಾರ್ಯಗಳನ್ನು ಭಾರತ ಕೈಗೊಂಡಿದ್ದು, ಸಾಂಸ್ಕೃತಿಕ ರಾಜತಾಂತ್ರಿಕತೆಯ ಮೂಲಕ ಜಾಗತಿಕ ಮಟ್ಟದಲ್ಲಿ ತನ್ನ ಪರಂಪರೆಯ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುತ್ತಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement