ವಿಡಿಯೊ | ವಿಶ್ವಕಪ್ ವಿಜಯೋತ್ಸವ ಪೋಡಿಯಂನಲ್ಲಿ ಟ್ರಂಪ್ ವರ್ತನೆ ಚರ್ಚೆಗೆ ಗ್ರಾಸ ; ಪರಿಸ್ಥಿತಿ ನಿಭಾಯಿಸಿದ ಫಿಫಾ ಮುಖ್ಯಸ್ಥ

ನ್ಯೂಯಾರ್ಕ್: ಫಿಫಾ ವಿಶ್ವಕಪ್ 2026ರ ಫೈನಲ್ ಪಂದ್ಯದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವರ್ತನೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಟ್ರಂಪ್ ಅವರಿಗೆ ಸದಾ ಜನರ ಗಮನ ಸೆಳೆಯುವ ತವಕವಿದೆ ಎಂಬ ಮಾತುಗಳ ನಡುವೆ, ವಿಶ್ವಕಪ್ ವಿಜೇತ ಸ್ಪೇನ್ ತಂಡದ ಸಂಭ್ರಮಾಚರಣೆಯ ವೇಳೆ ಅವರು ಕ್ಯಾಮೆರಾ ಚೌಕಟ್ಟಿನಲ್ಲೇ ಉಳಿಯಲು ಪ್ರಯತ್ನಿಸಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್ ಆಗಿದೆ.
ಸ್ಪೇನ್ ತಂಡದ ನಾಯಕ ರೊಡ್ರಿಗೆ ವಿಶ್ವಕಪ್ ಟ್ರೋಫಿಯನ್ನು ಹಸ್ತಾಂತರಿಸಿದ ಬಳಿಕ ಟ್ರಂಪ್ ತಕ್ಷಣವೇ ವೇದಿಕೆಯಿಂದ ಹಿಂದೆ ಸರಿಯದೆ ಅಲ್ಲೇ ನಿಂತಿದ್ದರು. ಆರಂಭದಲ್ಲಿ ರೊಡ್ರಿ ಅವರು ಟ್ರಂಪ್ ಅವರನ್ನು ಸೌಮ್ಯವಾಗಿ ಪಕ್ಕಕ್ಕೆ ಸರಿಯುವಂತೆ ಸೂಚಿಸಿದರೂ, ಟ್ರಂಪ್ ಅಲ್ಲಿಂದ ತೆರಳಲು ವಿಳಂಬ ಮಾಡಿದರು. ಪರಿಸ್ಥಿತಿ ಮುಜುಗರದ ಹಂತಕ್ಕೆ ತಲುಪಿದಾಗ ಫಿಫಾ ಅಧ್ಯಕ್ಷ ಜಿಯಾನಿ ಇನ್ಫಾಂಟಿನೋ ಮಧ್ಯಪ್ರವೇಶಿಸಿ, ಟ್ರಂಪ್ ಅವರ ಕೈ ಹಿಡಿದು ವೇದಿಕೆಯ ಒಂದು ಮೂಲೆಗೆ ಕರೆದುಕೊಂಡು ಹೋದರು.

ಆದರೂ ಟ್ರಂಪ್ ಸಂಪೂರ್ಣವಾಗಿ ವೇದಿಕೆಯಿಂದ ಹೊರಬರದೆ, ಸ್ಪೇನ್ ಆಟಗಾರರ ಸಾಲಿನ ಕೊನೆಯ ಆಟಗಾರನ ಪಕ್ಕದಲ್ಲೇ ನಿಂತಿದ್ದರು. ಇದರಿಂದ ಸ್ಪೇನ್ ತಂಡದ ವಿಜಯೋತ್ಸವ ಕ್ಷಣಗಳು ಕೆಲಕಾಲ ವಿಳಂಬಗೊಂಡವು. ಟ್ರಂಪ್ ಕೂಡ ವಿಶ್ವಕಪ್ ವಿಜಯೋತ್ಸವದ ಭಾಗವಾಗಲು ಬಯಸಿದಂತೆ ಈ ದೃಶ್ಯ ಕಂಡುಬಂದಿದ್ದು, ರೊಡ್ರಿ ಅವರ ಮುಖಭಾವದಲ್ಲಿ ಅಸಮಾಧಾನ ಸ್ಪಷ್ಟವಾಗಿ ಗೋಚರಿಸಿತು.
ಇದರ ನಡುವೆಯೇ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೊಂದು ವಿಡಿಯೊ ಕೂಡ ವೈರಲ್ ಆಗಿದೆ. ಅದರಲ್ಲಿ ಅರ್ಜೆಂಟಿನಾ ತಂಡದ ರಕ್ಷಣಾ ಆಟಗಾರ ಕ್ರಿಸ್ಟಿಯನ್ ರೊಮೆರೊ ಮತ್ತು ಡೊನಾಲ್ಡ್ ಟ್ರಂಪ್ ನಡುವೆ ಯಾವುದೇ ಹಸ್ತಲಾಘವ ನಡೆದಿಲ್ಲ. ಈ ಘಟನೆಯೂ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಇದೇ ವೇಳೆ, ಸ್ಪೇನ್ ವಿಶ್ವಕಪ್ ಪ್ರಶಸ್ತಿ ಗೆದ್ದ ಬಳಿಕ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಟ್ರಂಪ್ ಹಾಗೂ ಫಿಫಾ ಅಧ್ಯಕ್ಷ ಜಿಯಾನಿ ಇನ್ಫಾಂಟಿನೋ ಮೈದಾನಕ್ಕೆ ಪ್ರವೇಶಿಸುತ್ತಿದ್ದಾಗ ಪ್ರೇಕ್ಷಕರಿಂದ ಜೋರಾದ ಬೂ ಕೂಗು (ಬೂಸ್) ಕೇಳಿಬಂದಿತು.
ಫೈನಲ್ ಪಂದ್ಯಾವಳಿಯ ವೇಳೆ ಟ್ರಂಪ್ ತಮ್ಮ ಆಪ್ತ ಸ್ನೇಹಿತ ಹಾಗೂ ಫಿಫಾ ಅಧ್ಯಕ್ಷ ಜಿಯಾನಿ ಇನ್ಫಾಂಟಿನೋ ಅವರ ಪಕ್ಕದಲ್ಲೇ ಕುಳಿತು ಪಂದ್ಯ ವೀಕ್ಷಿಸಿದರು. ನ್ಯೂಯಾರ್ಕ್ ಹೊರವಲಯದ 80 ಸಾವಿರ ಪ್ರೇಕ್ಷಕರ ಸಾಮರ್ಥ್ಯದ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟಿನಾವನ್ನು ಸ್ಪೇನ್ 1-0 ಗೋಲುಗಳಿಂದ ಮಣಿಸಿ ವಿಶ್ವಕಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement