ಟೋಕಿಯೊ: ಜಪಾನ್‌ನ ದಕ್ಷಿಣ ಭಾಗದ ಪ್ರಮುಖ ದ್ವೀಪ ‘ಕ್ಯೂಷು'(Kyushu)d ಕುಮಮೊಟೊ (Kumamoto) ಪ್ರಾಂತ್ಯದಲ್ಲಿ ಮಂಗಳವಾರ ರಿಕ್ಟರ್ ಮಾಪಕದಲ್ಲಿ 7.1 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಭೂಕಂಪದ ಕೇಂದ್ರಬಿಂದು ಸಮುದ್ರದ ಮೇಲ್ಮೈಯಿಂದ 10 ಕಿಲೋಮೀಟರ್ ಆಳದಲ್ಲಿ ದಾಖಲಾಗಿರುವುದಾಗಿ ಜಪಾನ್ ಹವಾಮಾನ ಇಲಾಖೆ (Japan Meteorological Agency – JMA) ತಿಳಿಸಿದೆ.
ಭೂಕಂಪದ ಪರಿಣಾಮವಾಗಿ ಹಲವರಿಗೆ ಗಾಯಗಳಾಗಿರುವುದಾಗಿ ಹಾಗೂ ಒಂದು ಕಟ್ಟಡ ಕುಸಿದಿರುವುದಾಗಿ ಜಪಾನ್‌ನ ಪ್ರಧಾನಮಂತ್ರಿ ಸನಾಯೆ ತಕೈಚಿ (Sanae Takaichi) ತಿಳಿಸಿದ್ದಾರೆ.
ಭೂಕಂಪದ ಬಳಿಕ ಅಧಿಕಾರಿಗಳು ಸುನಾಮಿ ಎಚ್ಚರಿಕೆ ಜಾರಿಗೊಳಿಸಿದ್ದು, ಒಂದು ಮೀಟರ್ (3.28 ಅಡಿ) ಎತ್ತರದ ಅಲೆಗಳು ಅಪ್ಪಳಿಸುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ್ದಾರೆ. ಕರಾವಳಿ ಪ್ರದೇಶಗಳ ನಿವಾಸಿಗಳು ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ, ವಿಶೇಷವಾಗಿ ಎತ್ತರದ ಪ್ರದೇಶಗಳಿಗೆ ತೆರಳಿ, ಅಧಿಕಾರಿಗಳ ಸ್ಥಳಾಂತರ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮನವಿ ಮಾಡಲಾಗಿದೆ.
ಜಪಾನ್‌ನ ಸಾರ್ವಜನಿಕ ಪ್ರಸಾರ ಸಂಸ್ಥೆ ಎನ್‌ಎಚ್‌ಕೆ (NHK) ವರದಿ ಪ್ರಕಾರ, ಸುಮಾರು ಒಂದು ಮೀಟರ್ ಎತ್ತರದ ಅಲೆಗಳು ಈಗಾಗಲೇ ಕೆಲವು ಪ್ರದೇಶಗಳಲ್ಲಿ ಉಂಟಾಗಿರಬಹುದು ಎಂದು ತಿಳಿಸಲಾಗಿದೆ.
ಈ ನಡುವೆ, ಜಪಾನ್ ಪ್ರಧಾನಮಂತ್ರಿಯವರ ಕಚೇರಿ ಭೂಕಂಪದಿಂದ ಉಂಟಾಗಿರುವ ಹಾನಿಯ ಸಂಪೂರ್ಣ ಮಾಹಿತಿಯನ್ನು ಸಾಧ್ಯವಾದಷ್ಟು ಬೇಗ ಸಂಗ್ರಹಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಅಲ್ಲದೆ, ಮಾನವ ಜೀವ ರಕ್ಷಣೆಗೆ ಅತ್ಯುನ್ನತ ಆದ್ಯತೆ ನೀಡಿ, ತುರ್ತು ವಿಪತ್ತು ನಿರ್ವಹಣೆಯಲ್ಲಿ ಯಾವುದೇ ಕೊರತೆ ಉಂಟಾಗದಂತೆ ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ.
ಇದೇ ವೇಳೆ, ಭೂಕಂಪದ ಬಳಿಕ ನೈಋತ್ಯ ಜಪಾನ್‌ನ ಅಣು ವಿದ್ಯುತ್ ಸ್ಥಾವರಗಳಲ್ಲಿ ಯಾವುದೇ ತಕ್ಷಣದ ಅಸಹಜ ಪರಿಸ್ಥಿತಿ ಕಂಡುಬಂದಿಲ್ಲ ಎಂದು ಜಪಾನ್ ಅಣು ನಿಯಂತ್ರಣ ಪ್ರಾಧಿಕಾರ (Nuclear Regulation Authority) ಸ್ಪಷ್ಟಪಡಿಸಿದೆ.
ಭೂಕಂಪದ ಹಿನ್ನೆಲೆಯಲ್ಲಿ ಜಪಾನ್ ಸರ್ಕಾರವು ಕುಮಮೊಟೊ, ನಾಗಾಸಾಕಿ, ಕಗೋಶಿಮಾ, ಫುಕುವೋಕಾ, ಸಾಗಾ, ಓಯಿಟಾ ಹಾಗೂ ಮಿಯಾಜಾಕಿ ಸೇರಿದಂತೆ ಕ್ಯೂಷು ದ್ವೀಪದ ಹಲವು ಪ್ರಾಂತ್ಯಗಳಿಗೆ ತುರ್ತು ಭೂಕಂಪ ಎಚ್ಚರಿಕೆ ನೀಡಿದೆ.
https://x.com/AlArabiya_Eng/status/2082050644718829655
https://x.com/ravindraJourno/status/2082045565253423332
ಒಂದು ವಾರದೊಳಗೆ ಎರಡನೇ ಪ್ರಬಲ ಭೂಕಂಪ
ಕಳೆದ ಜೂನ್ 25ರಂದು ಉತ್ತರ ಜಪಾನ್‌ನಲ್ಲಿ 7.2 ತೀವ್ರತೆಯ ಭೂಕಂಪ ಸಂಭವಿಸಿತ್ತು. ಆದರೆ ಆ ಘಟನೆಯಲ್ಲಿ ಯಾವುದೇ ಸಾವು-ನೋವು ಅಥವಾ ದೊಡ್ಡ ಪ್ರಮಾಣದ ಹಾನಿ ವರದಿಯಾಗಿರಲಿಲ್ಲ.ಇದು ವಾರದಲ್ಲಿ ಎರಡನೇ ಭೂಕಂಪವಾಗಿದೆ.
ಜಪಾನ್ ವಿಶ್ವದಲ್ಲೇ ಅತ್ಯಂತ ಭೂಕಂಪ ಪೀಡಿತ ರಾಷ್ಟ್ರಗಳಲ್ಲಿ ಒಂದಾಗಿದೆ. ಪೆಸಿಫಿಕ್ ಮಹಾಸಾಗರದ ಪಶ್ಚಿಮ ಅಂಚಿನಲ್ಲಿರುವ “ರಿಂಗ್ ಆಫ್ ಫೈರ್” (Ring of Fire) ಪ್ರದೇಶದಲ್ಲಿ ನಾಲ್ಕು ಪ್ರಮುಖ ಟೆಕ್ಟೋನಿಕ್ ಫಲಕಗಳ ಸಂಗಮದಲ್ಲಿ ಇರುವುದರಿಂದ ಇಲ್ಲಿ ಆಗಾಗ ಭೂಕಂಪಗಳು ಸಂಭವಿಸುತ್ತವೆ.
ಸುಮಾರು 12.5 ಕೋಟಿ ಜನಸಂಖ್ಯೆ ಹೊಂದಿರುವ ಜಪಾನ್‌ನಲ್ಲಿ ಪ್ರತಿವರ್ಷ ನೂರಾರು ಭೂಕಂಪಗಳು ದಾಖಲಾಗುತ್ತವೆ. ಜಗತ್ತಿನ ಒಟ್ಟು ಭೂಕಂಪಗಳಲ್ಲಿ ಸುಮಾರು 18 ಶೇಕಡಾ ಭೂಕಂಪಗಳು ಜಪಾನ್‌ನಲ್ಲೇ ಸಂಭವಿಸುತ್ತವೆ. ಹೆಚ್ಚಿನವು ಸೌಮ್ಯವಾಗಿದ್ದರೂ, ಅವುಗಳ ತೀವ್ರತೆ, ಸಂಭವಿಸುವ ಸ್ಥಳ ಹಾಗೂ ಭೂಕಂಪದ ಕೇಂದ್ರದ ಆಳವನ್ನು ಅವಲಂಬಿಸಿ ಹಾನಿಯ ಪ್ರಮಾಣ ಬದಲಾಗುತ್ತದೆ.
2011ರ ಮಹಾವಿಪತ್ತಿನ ನೆನಪು ಇನ್ನೂ ಹಸಿರು
2011ರಲ್ಲಿ ಜಪಾನ್‌ನಲ್ಲಿ ಸಂಭವಿಸಿದ್ದ 9.0 ತೀವ್ರತೆಯ ಸಮುದ್ರದಡಿಯ ಭೂಕಂಪ ಭಾರೀ ಸುನಾಮಿಗೆ ಕಾರಣವಾಗಿತ್ತು. ಆ ದುರಂತದಲ್ಲಿ ಸುಮಾರು 18,500 ಮಂದಿ ಮೃತಪಟ್ಟಿದ್ದರು ಅಥವಾ ನಾಪತ್ತೆಯಾಗಿದ್ದರು. ಇದೇ ವೇಳೆ ಫುಕುಶಿಮಾ ಅಣು ವಿದ್ಯುತ್ ಸ್ಥಾವರಕ್ಕೂ ತೀವ್ರ ಹಾನಿಯಾಗಿತ್ತು.
ಇದೇ ವರ್ಷದ ಏಪ್ರಿಲ್ 20ರಂದು ಜಪಾನ್‌ನ ಉತ್ತರ ಭಾಗದಲ್ಲಿ 7.7 ತೀವ್ರತೆಯ ಭೂಕಂಪ ಸಂಭವಿಸಿತ್ತು. ಈ ಘಟನೆಯಲ್ಲಿ ಕನಿಷ್ಠ 10 ಮಂದಿ ಗಾಯಗೊಂಡಿದ್ದು, ಟೋಕಿಯೊದಲ್ಲಿಯೂ ಎತ್ತರದ ಕಟ್ಟಡಗಳು ತೀವ್ರವಾಗಿ ನಡುಗಿದ್ದವು. ಇದರ ಬೆನ್ನಲ್ಲೇ 8.0 ಅಥವಾ ಅದಕ್ಕಿಂತ ಹೆಚ್ಚಿನ ತೀವ್ರತೆಯ ಭೂಕಂಪ ಸಂಭವಿಸುವ ಅಪಾಯ ಹೆಚ್ಚಿದೆ ಎಂದು ಸರ್ಕಾರ ವಿಶೇಷ ಸಲಹೆ (Special Advisory) ಹೊರಡಿಸಿತ್ತು. ಬಳಿಕ ಒಂದು ವಾರದ ನಂತರ ಆ ಎಚ್ಚರಿಕೆಯನ್ನು ಹಿಂತೆಗೆದುಕೊಳ್ಳಲಾಗಿತ್ತು.


ನಿಮ್ಮ ಕಾಮೆಂಟ್ ಬರೆಯಿರಿ