ವಿಡಿಯೋ | ಮಧ್ಯರಾತ್ರಿ ಬಾತ್‌ರೂಮಿಗೆ ಹೋದಾಗ 7 ಅಡಿ ಉದ್ದದ ಮೊಸಳೆ ಕಂಡು ಬೆಚ್ಚಿಬಿದ್ದ ವ್ಯಕ್ತಿ…!

ಆನಂದ್ (ಗುಜರಾತ್) : ಗುಜರಾತ್‌ನ ಆನಂದ್ ಜಿಲ್ಲೆಯಲ್ಲಿ ಕುಟುಂಬವೊಂದು ತಮ್ಮ ಮನೆಯ ಸ್ನಾನಗೃಹದಲ್ಲಿ ಏಳು ಅಡಿ ಉದ್ದದ ಮೊಸಳೆಯನ್ನು ಕಂಡು ಬೆಚ್ಚಿಬಿದ್ದ ಘಟನೆ ಈ ವಾರದ ಆರಂಭದಲ್ಲಿ ನಡೆದಿದೆ.
ಮನೆಯ ಮಾಲೀಕ ಬಾಲಭಾಯಿ ಚೌಹಾಣ ಅವರು ಮಧ್ಯರಾತ್ರಿ ವೇಳೆ ಮನೆಯ ಹೊರಭಾಗದಲ್ಲಿ ನಾಯಿಗಳು ನಿರಂತರವಾಗಿ ಬೊಗಳುತ್ತಿದ್ದ ಕಾರಣ ಎಚ್ಚರಗೊಂಡರು. ನಾಯಿಗಳು ಏಕೆ ಬೊಗಳುತ್ತಿವೆ ಎಂಬುದನ್ನು ಪರಿಶೀಲಿಸಲು ಎದ್ದುಬಂದ ಅವರು ಮನೆಯ ಸ್ನಾನಗೃಹದೊಳಗೆ ಸುಮಾರು ಏಳು ಅಡಿ ಉದ್ದದ ಬೃಹತ್ ಮೊಸಳೆಯನ್ನು ಕಂಡು ಕ್ಷಣಕಾಲ ಬೆಚ್ಚಿಬಿದ್ದರು. ನಂತರ ಇದನ್ನು ನೋಡಿದ ಕುಟುಂಬದವರ ನಿದ್ದೆ ಹಾರಿಹೋಗಿತ್ತು. ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ತಕ್ಷಣ ಕುಟುಂಬದ ಸದಸ್ಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಕುಟುಂಬದವರು ನಿದ್ರೆಯಲ್ಲಿದ್ದ ಸಮಯದಲ್ಲೇ ಮೊಸಳೆ ಮನೆಯೊಳಗೆ ನುಗ್ಗಿತ್ತು.

ಒಂದು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ
ಮಾಹಿತಿ ಪಡೆದ ತಕ್ಷಣ ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ನಿಲೇಶ್ ಭರವಾಡ್ ಮತ್ತು ಮನೀಶ್ ಪ್ರಜಾಪತಿ, ದಯಾ ಫೌಂಡೇಶನ್ ಅಧ್ಯಕ್ಷ ನಿತೇಶ್ ಚೌಹಾಣ ಹಾಗೂ ಸ್ವಯಂಸೇವಕ ತುಷಾರ್ ರಾಣಾ ಸ್ಥಳಕ್ಕೆ ಧಾವಿಸಿದರು. ಸುಮಾರು ಒಂದು ಗಂಟೆ ಕಾಲ ಅತ್ಯಂತ ಎಚ್ಚರಿಕೆಯಿಂದ ಕಾರ್ಯಾಚರಣೆ ನಡೆಸಿದ ರಕ್ಷಣಾ ತಂಡ, ಮೊಸಳೆಗೆ ಯಾವುದೇ ಹಾನಿಯಾಗದಂತೆ ಸುರಕ್ಷಿತವಾಗಿ ಸೆರೆಹಿಡಿಯುವಲ್ಲಿ ಯಶಸ್ವಿಯಾಯಿತು. ಬಳಿಕ ಅದನ್ನು ಸಮೀಪದ ಕೆರೆಯಲ್ಲಿ ಬಿಡಲಾಯಿತು.
ದಯಾ ಫೌಂಡೇಶನ್ ಅಧ್ಯಕ್ಷ ನಿತೇಶ್ ಚೌಹಾಣ ಮಾತನಾಡಿ, ಅರಣ್ಯ ಇಲಾಖೆಯಿಂದ ಮಾಹಿತಿ ಬಂದ ತಕ್ಷಣ ತಮ್ಮ ತಂಡ ಸ್ಥಳಕ್ಕೆ ತೆರಳಿ ಯಶಸ್ವಿಯಾಗಿ ಮೊಸಳೆಯನ್ನು ರಕ್ಷಿಸಿ ಸುರಕ್ಷಿತವಾಗಿ ಸಮೀಪದ ಕೆರೆಯಲ್ಲಿ ಬಿಟ್ಟಿರುವುದಾಗಿ ತಿಳಿಸಿದ್ದಾರೆ.

 

ಪ್ರಮುಖ ಸುದ್ದಿ :-   'ಇದು ನನ್ನ ಮೊದಲ ಮತ್ತು ಕೊನೆಯ ತಪ್ಪು' : ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಘೋಷಣೆ ಕೂಗಿದ್ದ 15 ವರ್ಷದ ಬಾಲಕಿಯ ಕ್ಷಮೆಯಾಚನೆ

ಮಳೆಗಾಲದಲ್ಲಿ ಏಕೆ ಜನವಸತಿ ಪ್ರದೇಶಗಳಿಗೆ ಬರುತ್ತಿವೆ ಮೊಸಳೆಗಳು?
ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಮಳೆಗಾಲದಲ್ಲಿ ಕೆರೆ, ಕೊಳ ಸೇರಿದಂತೆ ಜಲಮೂಲಗಳು ತುಂಬಿ ಹರಿಯುವುದರಿಂದ ಮೊಸಳೆ ತಮ್ಮ ಸಹಜ ವಾಸಸ್ಥಳವನ್ನು ತೊರೆದು ಹೊರಬರಬಂದಿದೆ. ಭಾರಿ ಮಳೆಯಿಂದಾಗಿ ಜನವಸತಿ ಪ್ರದೇಶಗಳಲ್ಲಿ ಮೊಸಳೆ ಕಾಣಿಸಿಕೊಳ್ಳುವ ಘಟನೆಗಳು ಹೆಚ್ಚಾಗುತ್ತಿವೆ.
ಆಹಾರದ ಹುಡುಕಾಟ ಹಾಗೂ ತಮ್ಮ ದೇಹದ ಉಷ್ಣತೆಯನ್ನು ನಿಯಂತ್ರಿಸಿಕೊಳ್ಳುವ ಉದ್ದೇಶದಿಂದ ಮೊಸಳೆಗಳು ಸಮೀಪದ ಮಾನವ ವಸತಿ ಪ್ರದೇಶಗಳತ್ತ ಸಾಗುತ್ತವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಲ್ಲದೆ, ಸಮೀಪದ ಮಲತಾಜ್ ಗ್ರಾಮದ ಕೆರೆಯಲ್ಲಿ 100ಕ್ಕೂ ಹೆಚ್ಚು ಮೊಸಳೆಗಳು ವಾಸಿಸುತ್ತಿದ್ದು, ಮಳೆ ಮತ್ತು ಪ್ರವಾಹದ ಸಂದರ್ಭದಲ್ಲಿ ಅವು ರಸ್ತೆ ಹಾಗೂ ವಸತಿ ಪ್ರದೇಶಗಳಿಗೆ ಅಡ್ಡಾಡುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ತಿಳಿಸಿದ್ದಾರೆ.
ಸಾರ್ವಜನಿಕರಿಗೆ ಅರಣ್ಯ ಇಲಾಖೆಯ ಎಚ್ಚರಿಕೆ
ಮೊಸಳೆಗಳ ಸಂಚಾರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಅರಣ್ಯ ಇಲಾಖೆ ಮನವಿ ಮಾಡಿದೆ. ರಾತ್ರಿ ವೇಳೆ ಅನಗತ್ಯವಾಗಿ ಹೊರಗೆ ಸಂಚರಿಸುವುದನ್ನು ತಪ್ಪಿಸಬೇಕು, ವಾಹನ ಚಾಲನೆ ಮಾಡುವಾಗ ಹೆಚ್ಚಿನ ಜಾಗ್ರತೆ ವಹಿಸಬೇಕು. ಮೊಸಳೆ ಕಂಡುಬಂದರೆ ಅದರ ಸಮೀಪ ಹೋಗಲು ಅಥವಾ ಅದನ್ನು ಹಿಡಿಯಲು, ಕಿರಿಕಿರಿಗೊಳಿಸಲು ಪ್ರಯತ್ನಿಸದೆ ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ.

ಪ್ರಮುಖ ಸುದ್ದಿ :-   ಹವಾಮಾನ ಇಲಾಖೆಯಿಂದ ಸಿಹಿ ಸುದ್ದಿ; ಕರ್ನಾಟಕ ಸೇರಿ ದಕ್ಷಿಣ ಭಾರತದಲ್ಲಿ ಭಾರಿ ಮಳೆ ಸಾಧ್ಯತೆ !

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement