ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳು

ಒಳಚರಂಡಿ ಕಾಮಗಾರಿ ವೇಳೆ 18 ವರ್ಷದ ಕಾರ್ಮಿಕನಿಗೆ ಸಿಕ್ಕಿತು 98 ಕೋಟಿ ರೂ. ಮೌಲ್ಯದ ನಿಧಿ….!

ಬ್ರಸೆಲ್ಸ್: ಒಳಚರಂಡಿ ಮಾರ್ಗದ ಕಾಮಗಾರಿ ನಡೆಸುತ್ತಿದ್ದ ನಿರ್ಮಾಣ ಕಾರ್ಮಿಕರಿಗೆ ಬರೋಬ್ಬರಿ 9 ಮಿಲಿಯನ್ ಯುರೋ (ಸುಮಾರು ₹98 ಕೋಟಿ) ಮೌಲ್ಯದ ಚಿನ್ನದ ಗಟ್ಟಿ, ಅಪರೂಪದ ನಾಣ್ಯಗಳು ಹಾಗೂ ಚಿನ್ನದ ತುಂಡುಗಳ ಭಾರೀ ನಿಧಿಯೊಂದು ಪತ್ತೆಯಾದವಿದ್ಯಮಾನ ಬೆಲ್ಜಿಯಂನಲ್ಲಿ ನಡೆದಿದೆ. ಇದೀಗ ಅದರ ಮಾಲೀಕರು ಯಾರು ಎಂಬುದರ ಕುರಿತು ತನಿಖೆ ಆರಂಭವಾಗಿದೆ.
ಬ್ರಸೆಲ್ಸ್‌ನಿಂದ ಸುಮಾರು 30 ಕಿ.ಮೀ. ವಾಯವ್ಯಕ್ಕೆ ಇರುವ ಸಿಂಟ್-ಗಿಲ್ಲಿಸ್-ಡೆಂಡರ್ಮೋಂಡೆ ಪ್ರದೇಶದಲ್ಲಿ ಒಳಚರಂಡಿ ಪೈಪ್‌ಗಳನ್ನು ಬದಲಾಯಿಸುವ ಕಾಮಗಾರಿ ನಡೆಯುತ್ತಿತ್ತು. ಇದೇ ವೇಳೆ 18 ವರ್ಷದ ಕೋಬೆ ಎಂಬ ರಜಾಕಾಲದ ಅವಧಿಯ ಕಾರ್ಮಿಕನಿಗೆ ಮಂಗಳವಾರ ಇದು ಕಣ್ಣಿಗೆ ಬಿದ್ದಿದೆ. ಸಹೋದ್ಯೋಗಿಗಳ ಜೊತೆ ಕೆಲಸ ಮಾಡುತ್ತಿದ್ದ ಆತ ಮೊದಲು ಅಲ್ಲಿ ಬಿದ್ದಿದ್ದ ವಸ್ತುಗಳನ್ನು ಸಾಮಾನ್ಯ €1 ನಾಣ್ಯಗಳು ಎಂದು ಭಾವಿಸಿದ್ದನಂತೆ.

ಬೆಲ್ಜಿಯಂನ ವಿಟಿಎಂ (VTM) ನೆಟ್‌ವರ್ಕ್‌ಗೆ ಮಾತನಾಡಿದ ಕೋಬೆ, “ಹಠಾತ್ತನೆ ಅಲ್ಲಿ ಏನೋ ಬಿದ್ದಿರುವುದು ಕಾಣಿಸಿತು. ಮೊದಲಿಗೆ ಅದು €1 ನಾಣ್ಯಗಳು ಎಂದುಕೊಂಡೆವು. ನಂತರ ಒಂದು ಚಿನ್ನದ ಗಟ್ಟಿ ಕಾಣಿಸಿತು. ಆಗ ಇದು ನಾವು ಅಂದುಕೊಂಡಿದ್ದಕ್ಕಿಂತ ಸ್ವಲ್ಪ ಹೆಚ್ಚೇ ಇದೆ ಎಂದು ತಿಳಿಯಿತು,” ಎಂದು ಹೇಳಿದ್ದಾನೆ.

ಗೋಡೆಯೊಳಗೆ ಅಡಗಿಸಿಟ್ಟಿದ್ದ ಚಿನ್ನ!
ಈ ನಿಧಿಯಲ್ಲಿ ಚಿನ್ನದ ನಾಣ್ಯಗಳು, ಚಿನ್ನದ ತುಂಡುಗಳು ಮತ್ತು ಕ್ರಮಸಂಖ್ಯೆ ಹೊಂದಿರುವ ಚಿನ್ನದ ಗಟ್ಟಿಗಳು (bullion bars) ಇದ್ದವು. ಇವೆಲ್ಲವನ್ನೂ ಒಂದು ಚೀಲದಲ್ಲಿ ತುಂಬಿ, ಅದನ್ನು ಭದ್ರವಾಗಿ ಮುಚ್ಚಿ, ಹಳೆಯ ಕಟ್ಟಡದ ನೆಲಮಾಳಿಗೆಯ ಗೋಡೆಯೊಳಗೆ ಇಟ್ಟಿಗೆಗಳಿಂದ ಮುಚ್ಚಲಾಗಿತ್ತು.
ಈ ಕಟ್ಟಡವು 19ನೇ ಶತಮಾನದ ಕೊನೆಯಲ್ಲಿ ಸ್ಥಳೀಯ ಬಿಯರ್ ಉದ್ಯಮಿ ಥಿಯೋಫಿಲಸ್ ವಾನ್ ಅಶೆ (Theophilus Van Assche) ಅವರಿಗಾಗಿ ನಿರ್ಮಿಸಲಾದ ಭವ್ಯ ವಿಲ್ಲಾ ಆಗಿತ್ತು. ಚಿನ್ನವನ್ನು ಗೋಡೆಯೊಳಗೆ ಈ ರೀತಿ ಅಡಗಿಸಿರುವುದನ್ನು ನೋಡಿದ ತನಿಖಾಧಿಕಾರಿಗಳು, ನಿಧಿಯನ್ನು ಉದ್ದೇಶಪೂರ್ವಕವಾಗಿಯೇ ರಹಸ್ಯವಾಗಿ ಮುಚ್ಚಿಡಲಾಗಿತ್ತು ಎಂದು ಶಂಕಿಸಿದ್ದಾರೆ.
ಕಟ್ಟಡದ ಸ್ಥಳದಲ್ಲಿ 1899ರಲ್ಲಿ ಮದ್ಯ ತಯಾರಿಕೆ ಆರಂಭವಾಗಿತ್ತು ಮತ್ತು ಅದು 1970ರವರೆಗೆ ಮುಂದುವರಿದಿತ್ತು. ಪಾರಂಪರಿಕ ಕಟ್ಟಡವಾಗಿ ದಾಖಲಾಗಿರುವ ಈ ಆಸ್ತಿಯ ಕಬ್ಬಿಣದ ಗೇಟ್‌ಗಳ ಮೇಲೂ ಇಂದಿಗೂ “VA” ಎಂಬ ಅಕ್ಷರಗಳು ಕಾಣಿಸುತ್ತವೆ.
ಸದ್ಯ ಕಟ್ಟಡವನ್ನು ಸಂಪೂರ್ಣವಾಗಿ ನವೀಕರಿಸಲಾಗುತ್ತಿದೆ. ಸಾಮಾಜಿಕ ಕಲ್ಯಾಣ ಸಂಸ್ಥೆ CAW Oost-Vlaanderen ಇಲ್ಲಿ ಹೊಸ ಕಚೇರಿಗಳು ಹಾಗೂ ವಸತಿ ವ್ಯವಸ್ಥೆಗಳನ್ನು ನಿರ್ಮಿಸಲು ಮುಂದಾಗಿದೆ.
ಸಿಎಡಬ್ಲ್ಯು (CAW)ನ ಜೀಟ್ ಹಿಲ್ಲರ್ಟ್, ಎಚ್‌ಎಲ್‌ಎನ್‌ (HLN) ಜೊತೆ ಮಾತನಾಡುತ್ತಾ, “ಬ್ರೂವರ್ಸ್‌ಹುಯಿಸ್ ಒಂದು ಸುಂದರ ಕಟ್ಟಡವಾಗಿತ್ತು. ಆದರೆ ಈಗ ಅದನ್ನು ಸಂಪೂರ್ಣವಾಗಿ ಕೆಡವಲಾಗುತ್ತಿದೆ. ಕೊನೆಗೆ ಗೋಡೆಗಳು ಮಾತ್ರ ಉಳಿಯಲಿವೆ,” ಎಂದು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಯುರೋಪ್‌ನಲ್ಲಿ ತೀವ್ರ ಬಿಸಿಗಾಳಿ ಪರಿಣಾಮ : ಒಂದೇ ವಾರದಲ್ಲಿ 16 ಸಾವಿರಕ್ಕೂ ಅಧಿಕ ಸಾವು !

ಅಧಿಕಾರಿಗಳ ವಶಕ್ಕೆ ಚಿನ್ನ
ನಿಧಿ ಪತ್ತೆಯಾದ ಸುದ್ದಿ ಹೊರಬಿದ್ದ ತಕ್ಷಣ ಅಧಿಕಾರಿಗಳು ಕಾಮಗಾರಿ ಸ್ಥಳವನ್ನು ಭದ್ರಪಡಿಸಿ, ಚಿನ್ನ ಮತ್ತು ಇತರ ಅಮೂಲ್ಯ ವಸ್ತುಗಳನ್ನು ವಸಕ್ಕೆ ತೆಗೆದುಕೊಂಡು ಬ್ರಸೆಲ್ಸ್‌ನ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ. ಈಗ ತನಿಖಾಧಿಕಾರಿಗಳು ಈ ಚಿನ್ನದ ಮೂಲವೇನು, ಅದು ಹಿಂದೆ ಕಳ್ಳತನವಾಗಿತ್ತೇ ಅಥವಾ ಯಾವುದೇ ಅಪರಾಧಕ್ಕೆ ಸಂಬಂಧಿಸಿದೆಯೇ ಎಂಬುದನ್ನು ಪರಿಶೀಲಿಸುತ್ತಿದ್ದಾರೆ.
ಈಸ್ಟ್ ಫ್ಲಾಂಡರ್ಸ್ ಪ್ರಾಸಿಕ್ಯೂಟರ್ ಕಚೇರಿಯ ಹ್ಯಾನ್ನೆ ಒಲಿವಿಯರ್ ಪ್ರಕಾರ, ಮೊದಲು ಚಿನ್ನವು ಕಳ್ಳತನವಾಗಿಲ್ಲ ಅಥವಾ ಯಾವುದೇ ಅಪರಾಧ ಚಟುವಟಿಕೆಗೆ ಸಂಬಂಧಿಸಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಅದರ ನಂತರವೇ ಕಾನೂನುಬದ್ಧ ಮಾಲೀಕತ್ವದ ಪ್ರಶ್ನೆ ಎದುರಾಗಲಿದೆ. ಈ ಪ್ರಕರಣವು ಮುಂದಿನ ದಿನಗಳಲ್ಲಿ ಸಂಕೀರ್ಣ ನಾಗರಿಕ ಕಾನೂನು ವಿವಾದಕ್ಕೆ ಕಾರಣವಾಗುವ ಸಾಧ್ಯತೆಯೂ ಇದೆ.

ಚಿನ್ನ ಯಾರಿಗೆ ಸೇರಬೇಕು?
ಪತ್ತೆಯಾದ ನಿಧಿಯ ಮೇಲೆ ಹಕ್ಕು ಸಾಧಿಸಬಹುದಾದವರ ಪಟ್ಟಿಯೂ ಕುತೂಹಲ ಮೂಡಿಸಿದೆ. ಕಟ್ಟಡದ ನಿರ್ಮಾಣ ಗುತ್ತಿಗೆದಾರರು, ಪ್ರಸ್ತುತ ಆಸ್ತಿಯನ್ನು ನವೀಕರಿಸುತ್ತಿರುವ CAW Oost-Vlaanderen, ಹಾಗೂ ಹಳೆಯ ಮಾಲೀಕ ಥಿಯೋಫಿಲಸ್ ವಾನ್ ಅಶೆ ಅವರ ವಂಶಸ್ಥರು—ಇವರೆಲ್ಲರೂ ಸಂಭಾವ್ಯ ಹಕ್ಕುದಾರರಾಗಬಹುದು. ಬೆಲ್ಜಿಯಂನ ಕಾನೂನಿನ ಪ್ರಕಾರ, ಇಂತಹ ನಿಧಿ ಪತ್ತೆಯಾದಾಗ ಅದರ ನಿಜವಾದ ಮಾಲೀಕರು ಮುಂದೆ ಬರುವುದಕ್ಕಾಗಿ ಕನಿಷ್ಠ ಐದು ವರ್ಷಗಳವರೆಗೆ ಕಾಯಬೇಕಾಗುತ್ತದೆ.
ಕಾರ್ಮಿಕರಿಗೆ ಸಿಗುತ್ತದೆಯೇ ಬಹುಮಾನ?
ಇಷ್ಟೊಂದು ದೊಡ್ಡ ಮೊತ್ತದ ನಿಧಿ ಸಿಕ್ಕರೂ ಅದನ್ನು ತಮ್ಮಲ್ಲೇ ಇಟ್ಟುಕೊಳ್ಳುವ ಬದಲು ಅಧಿಕಾರಿಗಳಿಗೆ ಒಪ್ಪಿಸಬೇಕೆಂಬುದು ಕಾರ್ಮಿಕರಿಗೆ ತಿಳಿದಿತ್ತು ಎಂದು ಕೋಬೆ ಹೇಳಿದ್ದಾರೆ. “ಕೆಲವೇ ಕೆಲವು ನಾಣ್ಯಗಳು ಸಿಕ್ಕಿದ್ದರೆ ಬಹುಶಃ ಪರಿಸ್ಥಿತಿ ಬೇರೆ ಇರುತ್ತಿತ್ತು. ಆದರೆ ಇಷ್ಟೊಂದು ದೊಡ್ಡ ನಿಧಿ ಸಿಕ್ಕಿರುವುದರಿಂದ ಅದನ್ನು ಒಪ್ಪಿಸಲೇಬೇಕೆಂದು ನಮಗೆ ಗೊತ್ತಿತ್ತು. ಮುಂದೆ ನಮಗೆ ಯಾವುದಾದರೂ ಹುಡುಕಿದವರಿಗೆ ನೀಡುವ ಬಹುಮಾನ (finder’s reward) ಸಿಗಬಹುದು,” ಎಂದು 18 ವರ್ಷದ ಕೋಬೆ ಹೇಳಿದ್ದಾರೆ.
ಸಾಮಾನ್ಯ ಒಳಚರಂಡಿ ಪೈಪ್ ಬದಲಾವಣೆ ಕಾಮಗಾರಿಯ ವೇಳೆ ಗೋಡೆಯೊಳಗೆ ಸಿಕ್ಕ ಈ ₹98 ಕೋಟಿ ಮೌಲ್ಯದ ಚಿನ್ನದ ಖಜಾನೆ, ಇದೀಗ ಅದರ ರಹಸ್ಯಮಯ ಇತಿಹಾಸ ಮತ್ತು ಕಾನೂನುಬದ್ಧ ಮಾಲೀಕರು ಯಾರು ಎಂಬ ಪ್ರಶ್ನೆಗಳಿಂದ ಬೆಲ್ಜಿಯಂನಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ಪ್ರಮುಖ ಸುದ್ದಿ :-   ಯುರೋಪ್‌ನಲ್ಲಿ ತೀವ್ರ ಬಿಸಿಗಾಳಿ ಪರಿಣಾಮ : ಒಂದೇ ವಾರದಲ್ಲಿ 16 ಸಾವಿರಕ್ಕೂ ಅಧಿಕ ಸಾವು !

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement