ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳು

ವಿಡಿಯೋ | ಮೇಕೆ ಬೇಟೆಗೆ ಮಾಂಸದ ಅಂಗಡಿಗೆ ನುಗ್ಗಿದ ಹೆಬ್ಬಾವು; ಕುತ್ತಿಗೆಗೆ ಸುತ್ತಿಕೊಂಡು ಆಟವಾಡಿದ ಕುಡುಕ!

ಮೇಕೆ ಹಿಡಿಯಲು ಸುಮಾರು 15 ಅಡಿ ಉದ್ದದ ಬೃಹತ್ ಹೆಬ್ಬಾವೊಂದು ಮಾಂಸದ ಅಂಗಡಿಯೊಳಗೆ ನುಗ್ಗಿದಾಗ ಕುಡಿದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ಹೆಬ್ಬಾವನ್ನು ಬರಿಗೈಯಲ್ಲಿ ಹಿಡಿದು, ಅದನ್ನು ಮೈಗೆ ಸುತ್ತಿಕೊಂಡು ಅದರೊಂದಿಗೆ ಆಟವಾಡಿದ ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.
ಈ ಘಟನೆ ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ. 15 ಅಡಿ ಉದ್ದದ ಬೃಹತ್ ಹೆಬ್ಬಾವು ಅಂಗಡಿ ನುಗ್ಗಿದಾಗ ಮಾಲೀಕ ಸೇರಿದಂತೆ ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿತ್ತು. ಆದರೆ, ಮದ್ಯದ ಅಮಲಿನಲ್ಲಿದ್ದ ಸುರೇಶ ಎಂಬ ವ್ಯಕ್ತಿ ಯಾವುದೇ ಭಯವಿಲ್ಲದೆ ಈ ಬೃಹತ್‌ ಹೆಬ್ಬಾವನ್ನು ಹಿಡಿದು ಮೈಗೆ ಸುತ್ತಿಕೊಂಡಿದ್ದಾನೆ.
ಸ್ಥಳೀಯರ ಪ್ರಕಾರ, ಬೃಹತ್ ಹೆಬ್ಬಾವು ಮಾಂಸದ ಅಂಗಡಿಯೊಳಗೆ ನುಗ್ಗಿ ಅಲ್ಲಿದ್ದ ಮೇಕೆಗಳನ್ನು ನುಂಗಲು ಹವಣಿಸುತ್ತಿತ್ತು. ಬಹುಶಃ ಅವುಗಳಲ್ಲಿ ಒಂದನ್ನು ಬೇಟೆಯಾಡಲು ಅದು ಮುಂದಾಗಿತ್ತು ಎನ್ನಲಾಗಿದೆ. ಆದರೆ, ಹೆಬ್ಬಾವು ಮೇಕೆಯನ್ನು ಹಿಡಿಯುವ ಮುನ್ನವೇ ಹೆಬ್ಬಾವು ಅಂಗಡಿ ಮಾಲೀಕನ ಕಣ್ಣಿಗೆ ಬಿದ್ದಿತ್ತು.

ಈ ವೇಳೆ ಸ್ಥಳಕ್ಕೆ ಬಂದ ಸುರೇಶ, ಯಾವುದೇ ಆತಂಕವಿಲ್ಲದೆ ನೇರವಾಗಿ ಹೆಬ್ಬಾವಿನ ಬಳಿಗೆ ತೆರಳಿದ್ದಾನೆ. ಯಾರೂ ಊಹಿಸದ ರೀತಿಯಲ್ಲಿ ಬರಿಗೈಯಿಂದಲೇ ಹೆಬ್ಬಾವನ್ನು ಹಿಡಿದುಕೊಂಡಿದ್ದಾನೆ. ಹೆಬ್ಬಾವು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾ ಸುರೇಶನ ಕೈಗೆ ಸುತ್ತಿಕೊಂಡು ಬಿಗಿಯಾಗಿ ಬಿಗಿಯಲು ಆರಂಭಿಸಿದೆ. ಅಲ್ಲದೆ, ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಸುರೇಶನ ಕೈಗೆ ಒಂದೆರಡು ಬಾರಿ ಕಚ್ಚಿದೆ. ಆದರೂ ಮದ್ಯದ ಅಮಲಿನಲ್ಲಿದ್ದ ಸುರೇಶ ಮಾತ್ರ ಯಾವುದಕ್ಕೂ ಹೆದರದೆ ಹೆಬ್ಬಾವನ್ನು ಹಿಡಿದುಕೊಂಡೇ ಇದ್ದ.
ಹೆಬ್ಬಾವು ವಿಷಕಾರಿಯಲ್ಲದ ಕಾರಣ ಅದರ ಕಡಿತದಿಂದ ವಿಷ ಏರುವ ಅಪಾಯ ಇರಲಿಲ್ಲ. ಆದರೂ, ಅಷ್ಟು ದೊಡ್ಡ ಹಾವನ್ನು ಬರಿಗೈಯಲ್ಲಿ ಹಿಡಿಯುವುದು ಅಪಾಯಕಾರಿ ಕೆಲಸವಾಗಿತ್ತು. ಸುರೇಶ ಕೊನೆಗೂ ಹೆಬ್ಬಾವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು, ಅದನ್ನು ಹೂವಿನ ಹಾರದಂತೆ ಹೆಗಲ ಮೇಲೆ ಹಾಕಿಕೊಂಡಿದ್ದಾನೆ. ಬಳಿಕ ಸಾರ್ವಜನಿಕರ ಎದುರೇ ಅದರೊಂದಿಗೆ ಆಟವಾಡಲು ಆರಂಭಿಸಿದ್ದಾನೆ.

ಈ ದೃಶ್ಯ ಕಂಡು ಸ್ಥಳದಲ್ಲಿ ಭಾರೀ ಜನಸಂದಣಿ ಸೇರಿತು. ದಾರಿಹೋಕರು ಹಾಗೂ ಸುತ್ತಮುತ್ತಲಿನ ಅಂಗಡಿಗಳ ವ್ಯಾಪಾರಿಗಳು ಅಚ್ಚರಿ ಮತ್ತು ಭಯದಿಂದ ಈ ಅಪರೂಪದ ದೃಶ್ಯವನ್ನು ನೋಡುತ್ತಾ ನಿಂತಿದ್ದರು. ಸುರೇಶ ಕೆಲಕಾಲ ಹೆಬ್ಬಾವಿನೊಂದಿಗೆ ಆಟವಾಡಿದ ಬಳಿಕ, ಕೊನೆಗೆ ಅದನ್ನು ದೊಡ್ಡದಾದ ಒಂದು ಪಾತ್ರೆಯೊಳಗೆ ಸುರಕ್ಷಿತವಾಗಿ ಇರಿಸಿದ್ದಾನೆ.
ಆ ಬಳಿಕ ಆ ಪಾತ್ರೆಯನ್ನು ತೆಗೆದುಕೊಂಡು ಹೋಗಿ ಹೆಬ್ಬಾವನ್ನು ಚರಂಡಿಯೊಂದರಲ್ಲಿ ಬಿಟ್ಟಿದ್ದಾನೆ. ಬಿಡುಗಡೆಗೊಂಡ ಹೆಬ್ಬಾವು ಕೊನೆಯದಾಗಿ ತನ್ನ ತಲೆಯನ್ನು ಸುಮಾರು ಮೂರು ಅಡಿ ಎತ್ತರಕ್ಕೆ ಎತ್ತಿ ನಿಂತು ಕೆಲಕಾಲ ಭಯ ತರಿಸುವಂತೆ ವರ್ತಿಸಿತು. ಸ್ವಲ್ಪ ಸಮಯದ ಬಳಿಕ ಅದು ಅಲ್ಲಿಂದ ಹೊರಟು ಹೋಗಿದೆ.

ಪ್ರಮುಖ ಸುದ್ದಿ :-   ಜೆನ್‌ ಝಡ್‌ನತ್ತ ಮೋದಿ ಫೋಕಸ್: 1 ಕೋಟಿ ಯುವಕರಿಗೆ ಎಐ(AI) ತರಬೇತಿ, ಉಚಿತ ಕೋಚಿಂಗ್ ಸೇರಿ 6 ಘೋಷಣೆಗಳು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement