ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳು

ಹಾರ್ಮುಜ್ ಜಲಸಂಧಿ ‘ಅಮೆರಿಕದ ಹೊಸ ಭೂಪ್ರದೇಶ’ ಎಂದು ಘೋಷಿಸಿ ನಕ್ಷೆ ಹಂಚಿಕೊಂಡ ಟ್ರಂಪ್‌

ವಾಷಿಂಗ್ಟನ್: ಇರಾನ್‌ ಜೊತೆಗೆ ಉದ್ವಿಗ್ನತೆ ಮುಂದುವರಿದಿರುವ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ (ಆಗಸ್ಟ್ 18) ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ನಕ್ಷೆಯೊಂದನ್ನು ಹಂಚಿಕೊಂಡಿದ್ದಾರೆ. ಆ ನಕ್ಷೆಯಲ್ಲಿ ಹಾರ್ಮುಜ್ ಜಲಸಂಧಿಯನ್ನು ‘ಅಮೆರಿಕದ ಹೊಸ ಭೂಪ್ರದೇಶ’ (New US Territory) ಎಂದು ಗುರುತಿಸಲಾಗಿದೆ. ಟ್ರಂಪ್ ಅವರು ತಮ್ಮ ‘ಟ್ರೂತ್ ಸೋಷಿಯಲ್’ ಖಾತೆಯಲ್ಲಿ ನಕ್ಷೆಯನ್ನು ಹಂಚಿಕೊಂಡಿದ್ದು, ಆದರೆ ಯಾವುದೇ ಹೆಚ್ಚುವರಿ ವಿವರಣೆ ನೀಡಿಲ್ಲ.
ವಿಶ್ವದ ಪ್ರಮುಖ ಇಂಧನ ಸಾಗಣೆ ಮಾರ್ಗಗಳಲ್ಲಿ ಒಂದಾಗಿರುವ ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರಕ್ಕೆ ಇರಾನ್ ನಿರ್ಬಂಧ ಮುಂದುವರಿಸಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ. ಕಳೆದ ವಾರ ಟ್ರಂಪ್, ಹಾರ್ಮುಜ್ ಜಲಸಂಧಿಯನ್ನು ಅಮೆರಿಕದ ಭೂಪ್ರದೇಶವೆಂದು ತಾವು ‘ಬಹುಬೇಗ’ ಘೋಷಿಸುವುದಾಗಿ ಹೇಳಿದ್ದರು.
ಷರತ್ತುಗಳು ಈಡೇರಿದ ಬಳಿಕವಷ್ಟೇ ಜಲಸಂಧಿ ತೆರೆಯಲಾಗುವುದು : ಇರಾನ್‌
ಇದೇ ವೇಳೆ ಇರಾನ್ ಸಂಸತ್ ಸ್ಪೀಕರ್ ಮೊಹಮ್ಮದ್ ಬಾಘೆರ್ ಘಾಲಿಬಾಫ್, ಅಮೆರಿಕದ ಜೊತೆ ಸಹಿ ಮಾಡಲಾಗಿದೆ ಎಂದು ಹೇಳಲಾದ ʼ14 ಅಂಶಗಳ ತಿಳುವಳಿಕೆ ಒಪ್ಪಂದ (MoU)ʼದಲ್ಲಿನ ಇರಾನ್‌ನ ಎಲ್ಲ ಷರತ್ತುಗಳು ಸಂಪೂರ್ಣವಾಗಿ ಈಡೇರಿಸುವವರೆಗೆ ಹಾರ್ಮುಜ್ ಜಲಸಂಧಿಯನ್ನು ಹಡಗುಗಳ ಸಂಚಾರಕ್ಕೆ ತೆರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಮೆರಿಕವು ಒಪ್ಪಂದದಡಿ ನೀಡಿರುವ ಬದ್ಧತೆಗಳನ್ನು ಜಾರಿಗೆ ತರುವವರೆಗೆ ಜಲಸಂಧಿ ತೆರೆಯುವುದಿಲ್ಲ ಎಂದು ಘಾಲಿಬಾಫ್ ಹೇಳಿದ್ದಾರೆ. ಈ ಬದ್ಧತೆಗಳಲ್ಲಿ ನಿರ್ಬಂಧ ತೆರವು, ಸ್ಥಗಿತಗೊಳಿಸಲಾದ ಇರಾನ್‌ನ ಆಸ್ತಿಗಳ ಬಿಡುಗಡೆ, ತೈಲ ನಿರ್ಬಂಧಗಳನ್ನು ತೆಗೆದುಹಾಕುವುದು, ಬೆದರಿಕೆಗಳನ್ನು ನಿಲ್ಲಿಸುವುದು ಹಾಗೂ ಎಲ್ಲ ಮುಂಚೂಣಿಗಳಲ್ಲಿನ ಸೇನಾ ಕಾರ್ಯಾಚರಣೆಗಳನ್ನು ಅಂತ್ಯಗೊಳಿಸುವುದು ಸೇರಿದಂತೆ ಹಲವು ಷರತ್ತುಗಳು ಸೇರಿವೆ ಎಂದು ಅವರು ತಿಳಿಸಿದ್ದಾರೆ.

ಪ್ರತಿಸ್ಪರ್ಧಿಗಳಿಗೆ ಎಚ್ಚರಿಕೆ ನೀಡಿದ ಘಾಲಿಬಾಫ್, ಇರಾನ್ ವಿರುದ್ಧದ ಕ್ರಮಗಳು ಮತ್ತು ಆಕ್ರಮಣಗಳನ್ನು ಮಾಡಿದರೆ ಅವರಿಗೆ ಭಾರೀ ಸೋಲು ಉಂಟು ಮಾಡುವ ಸಾಮರ್ಥ್ಯವನ್ನು ಇಸ್ಲಾಮಿಕ್ ಗಣರಾಜ್ಯ ಹೊಂದಿದೆ ಎಂದು ಎಚ್ಚರಿಸಿದ್ದಾರೆ.
ಮಾತುಕತೆ ಪ್ರಕ್ರಿಯೆಯನ್ನು ಸಮರ್ಥಿಸಿಕೊಂಡ ಅವರು, ಸೇನಾ ಸಂಘರ್ಷವನ್ನು ತಾತ್ಕಾಲಿಕವಾಗಿ ನಿಲ್ಲಿಸುವ ಮತ್ತು ನಿರ್ಬಂಧ ತೆರವುಗೊಳಿಸುವ ಅವಕಾಶವನ್ನು ಒದಗಿಸಿದ ಈ ತಿಳುವಳಿಕೆ ಒಪ್ಪಂದವು ದೇಶದ ರಾಷ್ಟ್ರೀಯ ರಕ್ಷಣಾ ಸಾಮರ್ಥ್ಯ ಹಾಗೂ ಆಂತರಿಕ ಆರ್ಥಿಕತೆಯನ್ನು ಬಲಪಡಿಸಲು ಮಹತ್ವದ ಅವಕಾಶ ಒದಗಿಸಿದೆ ಎಂದು ಹೇಳಿದ್ದಾರೆ.
ಘಾಲಿಬಾಫ್ ಅವರ ಪ್ರಕಾರ, ಒಪ್ಪಂದದ ಮೂಲಕ ದೊರೆತ ಈ ಅವಧಿಯನ್ನು ಆರ್ಥಿಕ ಪ್ರತಿರೋಧ ಸಾಮರ್ಥ್ಯ ಹೆಚ್ಚಿಸಲು ಹಾಗೂ ಇರಾನ್‌ನ ರಕ್ಷಣಾ ಶಕ್ತಿಯನ್ನು ಪುನರ್‌ನಿರ್ಮಿಸಲು ಬಳಸಿಕೊಳ್ಳಲಾಗಿದೆ.

ಹಾರ್ಮುಜ್‌ನಲ್ಲಿ ಹಡಗಿನ ಮೇಲೆ ದಾಳಿ
ಈ ಎಲ್ಲ ಬೆಳವಣಿಗೆಗಳ ನಡುವೆ ಹಾರ್ಮುಜ್ ಜಲಸಂಧಿಯಲ್ಲಿ ಸಂಚರಿಸುತ್ತಿದ್ದ ವಾಣಿಜ್ಯ ಹಡಗೊಂದರ ಮೇಲೆ ಅಪರಿಚಿತ ಪ್ರಕ್ಷೇಪಕ ಅಪ್ಪಳಿಸಿದ ಘಟನೆ ವರದಿಯಾಗಿದೆ. ಘಟನೆಯಲ್ಲಿ ಹಡಗಿನ ಎಂಜಿನ್ ಕೊಠಡಿಗೆ ಹಾನಿಯಾಗಿದ್ದು, ಒಬ್ಬ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಯುಕೆ ಮೆರಿಟೈಮ್ ಟ್ರೇಡ್ ಆಪರೇಷನ್ಸ್ (UKMTO) ತಿಳಿಸಿದೆ.
UKMTO ಬಿಡುಗಡೆ ಮಾಡಿದ ವರದಿಯ ಪ್ರಕಾರ, ಹಾರ್ಮುಜ್ ಜಲಸಂಧಿಯಿಂದ ಹೊರಹೋಗುವ ಮಾರ್ಗದಲ್ಲಿ ಸಾಗುತ್ತಿದ್ದಾಗ ಹಡಗಿಗೆ ಅಪರಿಚಿತ ಪ್ರಕ್ಷೇಪಕ ಬಡಿದಿದೆ. ಪರಿಣಾಮವಾಗಿ ಎಂಜಿನ್ ಕೊಠಡಿಗೆ ಹಾನಿಯಾಗಿದ್ದು, ಒಬ್ಬ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಹಡಗಿನ ಭದ್ರತಾ ಅಧಿಕಾರಿ ವರದಿ ಮಾಡಿದ್ದಾರೆ.

ಇರಾನ್ ಮತ್ತು ಅಮೆರಿಕ ನಡುವಿನ ಮಾತುಕತೆಗಳಿಗೆ ನಿಗದಿಪಡಿಸಲಾಗಿದ್ದ 60 ದಿನಗಳ ಅವಧಿ ಅಂತ್ಯದತ್ತ ಸಾಗುತ್ತಿರುವ ಸಂದರ್ಭದಲ್ಲಿ ಹಾರ್ಮುಜ್ ಜಲಸಂಧಿಯ ಬಿಕ್ಕಟ್ಟು ಮತ್ತಷ್ಟು ತೀವ್ರಗೊಂಡಿದೆ. ಉಭಯ ದೇಶಗಳ ನಡುವಿನ ಹಲವು ಪ್ರಮುಖ ಭಿನ್ನಾಭಿಪ್ರಾಯಗಳು ಇನ್ನೂ ಬಗೆಹರಿದಿಲ್ಲ.
ಇರಾನ್‌ ಪ್ರಕಾರ, ಹಾರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ನೌಕಾ ಸಂಚಾರವನ್ನು ಸಾಮಾನ್ಯ ಸ್ಥಿತಿಗೆ ತರಬೇಕಾದರೆ ಮೊದಲು ನಿರ್ಬಂಧವನ್ನು ಸಂಪೂರ್ಣವಾಗಿ ತೆರವುಗೊಳಿಸುವುದು, ವಿದೇಶಿ ಪಡೆಗಳನ್ನು ಹಿಂಪಡೆಯುವುದು ಮತ್ತು ಪರಿಹಾರಧನ ನೀಡುವುದು ಸೇರಿದಂತೆ ತನ್ನ ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕಾಗಿದೆ.
ಹೀಗಾಗಿ, ವಿಶ್ವದ ಪ್ರಮುಖ ಇಂಧನ ಸಾಗಣೆ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯ ಭವಿಷ್ಯದ ನೌಕಾಯಾನ, ಅಮೆರಿಕ–ಇರಾನ್ ನಡುವಿನ ಮಾತುಕತೆ ಹಾಗೂ ಎರಡೂ ರಾಷ್ಟ್ರಗಳ ಪರಸ್ಪರ ಷರತ್ತುಗಳ ಈಡೇರಿಕೆಯ ಮೇಲೆ ಅವಲಂಬಿತವಾಗಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement