400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದ ಬಹುಭಾಷಾ ನಟಿ ಸಾಹಕಾರ ಜಾನಕಿ ಇನಿಲ್ಲ

ಚೆನ್ನೈ : ದಕ್ಷಿಣ ಭಾರತದ ಹಿರಿಯ ನಟಿ, ಬಹುಭಾಷಾ ತಾರೆ ಸಾಹಕಾರ ಜಾನಕಿ ಅವರು ಶುಕ್ರವಾರ ಚೆನ್ನೈನಲ್ಲಿ ನಿಧನರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು. ತೀವ್ರ ಎದೆನೋವಿನ ಹಿನ್ನೆಲೆಯಲ್ಲಿ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮಧ್ಯಾಹ್ನ 1:59ಕ್ಕೆ ಕೊನೆಯುಸಿರೆಳೆದಿದ್ದಾರೆ ಎಂದು ನಟರ ಸಂಘದ (ನಡಿಗರ್ ಸಂಘಂ) ಅಧ್ಯಕ್ಷ ಹಾಗೂ ನಟ ನಾಸರ್ ತಿಳಿಸಿದ್ದಾರೆ.
ಅನಾರೋಗ್ಯಕ್ಕೆ ಒಳಗಾದ ಹಿನ್ನೆಲೆಯಲ್ಲಿ ಸಾಹುಕಾರ ಜಾನಕಿ ಅವರನ್ನು ಈ ವಾರದ ಆರಂಭದಲ್ಲಿ ಚೆನ್ನೈನ ಆಳ್ವಾರ್‌ಪೇಟೆಯ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗಸ್ಟ್ 19ರಂದು ನಟ ಕಯಲ್ ದೇವರಾಜ ಅವರು ಸಾಮಾಜಿಕ ಜಾಲತಾಣದ ಮೂಲಕ ಅವರ ಆರೋಗ್ಯದ ಕುರಿತು ಮಾಹಿತಿ ಹಂಚಿಕೊಂಡಿದ್ದರು. ಅವರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದರು.

ಏಳು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಸಕ್ರಿಯ
ಸಂಕರಮಂಚಿ ಜಾನಕಿ ಎಂಬ ಹೆಸರಿನಲ್ಲಿ ಜನಿಸಿದ ಅವರು 1950ರಲ್ಲಿ ನಿರ್ದೇಶಕ ಎಲ್.ವಿ. ಪ್ರಸಾದ ಅವರ ‘ಸಾಹುಕಾರು’ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಆ ಚಿತ್ರದ ಹೆಸರಿನ ಆಧಾರದ ಮೇಲೆ ಅವರಿಗೆ ‘ಸಾಹುಕಾರ’ ಜಾನಕಿ ಎಂಬ ಹೆಸರು ಪ್ರಸಿದ್ಧಿಯಾಯಿತು. 1952ರಲ್ಲಿ ವಾಲಯಪತಿ ಚಿತ್ರದ ಮೂಲಕ ತಮಿಳು ಚಿತ್ರರಂಗ ಪ್ರವೇಶಿಸಿದರು.
ಕನ್ನಡ ಚಿತ್ರರಂಗಕ್ಕೂ ಸಾಹುಕಾರ ಜಾನಕಿ ಅವರ ಕೊಡುಗೆ ಅಪಾರ. 1954ರ ‘ದೇವಕನ್ನಿಕಾ’ ಚಿತ್ರದ ಮೂಲಕ ಚಂದನವನ ಪ್ರವೇಶಿಸಿದ ಅವರು, 1959ರಲ್ಲಿ ಡಾ. ರಾಜ್‌ಕುಮಾರ್ ಅವರ ಜೊತೆ ಅಭಿನಯಿಸಿದ ‘ಮಹಿಷಾಸುರ ಮರ್ದಿನಿ’ ಚಿತ್ರವು ಅವರಿಗೆ ಜನಪ್ರಿಯತೆ ತಂದುಕೊಟ್ಟಿತ್ತು. ವರನಟ ಡಾ. ರಾಜಕುಮಾರ, ಎನ್‌ಟಿಆರ್, ಎಎನ್‌ಆರ್, ಎಂಜಿಆರ್, ಶಿವಾಜಿ ಗಣೇಶನ್, ಜೆಮಿನಿ ಗಣೇಶನ್ ಸೇರಿದಂತೆ ದಕ್ಷಿಣ ಭಾರತದ ದಿಗ್ಗಜ ನಟರೊಂದಿಗೆ ನಟಿಸಿದ್ದರು, ಆ ಕಾಲದ ಸ್ಟಾರ್‌ ನಟಿಯಾಗಿದ್ದರು. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಅವರು ತಮ್ಮ ಅದ್ಭುತ ಅಭಿನಯದಿಂದ ಕೋಟ್ಯಂತರ ಅಭಿಮಾನಿಗಳ ಮನ ಗೆದ್ದಿದ್ದರು.ನಂತರ ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಸೇರಿದಂತೆ ಹಲವು ಭಾಷೆಗಳ ಚಿತ್ರಗಳಲ್ಲಿ ಅಭಿನಯಿಸಿದ ಅವರು 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ ಎಂದು ಹೇಳಲಾಗಿದೆ. ಹಲವು ತಲೆಮಾರುಗಳ ಪ್ರಮುಖ ನಟರು, ನಿರ್ದೇಶಕರೊಂದಿಗೆ ಕೆಲಸ ಮಾಡುವ ಮೂಲಕ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.

ಪ್ರಮುಖ ಸುದ್ದಿ :-   27 ಬಾರಿ ಇರಿತ..‘ಬಾಬು’ ಎಂಬ ಕೊನೆಯ ಪದ: ಪ್ರಾಂಶುಪಾಲೆಯ ಕೊಲೆ ಪ್ರಕರಣ ಭೇದಿಸಿದ ಪೊಲೀಸರು ; ಇಬ್ಬರು ವಿದ್ಯಾರ್ಥಿಗಳ ಬಂಧನ

ಖ್ಯಾತ ನಿರ್ದೇಶಕ ಕೆ. ಬಾಲಚಂದರ ಅವರ ಜೊತೆ ಸಾಹುಕಾರ ಜಾನಕಿ ಹಲವು ಪ್ರಮುಖ ಚಿತ್ರಗಳಲ್ಲಿ ಕೆಲಸ ಮಾಡಿದ್ದರು. ನೀರ್ಕುಮಿಳಿ, ಎದಿರ್ ನೀಚಲ್, ಇರು ಕೊಡುಗಲ್‌ ಮತ್ತು ಕಾವ್ಯ ತಲೈವಿ ಸೇರಿದಂತೆ ಹಲವು ಚಿತ್ರಗಳು ಅವರ ಅಭಿನಯ ಬಾರಿ ಗಮನ ಸೆಳೆದ ಚಲನಚಿತ್ರಗಳಾಗಿವೆ.
ಇದಲ್ಲದೆ ಪುದಿಯ ಪಾರವೈ, ತಿಲ್ಲು ಮುಲ್ಲು ಮತ್ತು ಹೇ ರಾಮ್ ಸೇರಿದಂತೆ ಅನೇಕ ಗಮನಾರ್ಹ ಚಿತ್ರಗಳಲ್ಲೂ ಅವರು ಅಭಿನಯಿಸಿದ್ದರು.
2020ರಲ್ಲಿ ಬಿಡುಗಡೆಯಾದ ತಮಿಳಿನ ಬಿಸ್ಕೋತ್ ಅವರ ಕೊನೆಯ ತಮಿಳು ಚಿತ್ರವಾಗಿತ್ತು. ನಂತರ 2023ರಲ್ಲಿ ಬಿಡುಗಡೆಯಾದ ತೆಲುಗು ಚಿತ್ರ ʼಅನ್ನಿ ಮಂಚಿ ಶಕುನುಮೂಲೆʼ ನಲ್ಲಿಯೂ ಅವರು ಕಾಣಿಸಿಕೊಂಡಿದ್ದರು. ಕಿರುತೆರೆಯಲ್ಲೂ ಅವರು ತಮ್ಮ ಅಭಿನಯ ಮುಂದುವರಿಸಿದ್ದರು. ʼವರುಧಿನಿ ಪರಿಣಯಂʼ ಅವರ ನಂತರದ ಟಿವಿ ಧಾರಾವಾಹಿ/ಕಿರುತೆರೆ ಅಭಿನಯಗಳಲ್ಲಿ ಒಂದಾಗಿದೆ.
ಪದ್ಮಶ್ರೀ ಸೇರಿದಂತೆ ಹಲವು ಗೌರವಗಳು
ಭಾರತೀಯ ಚಿತ್ರರಂಗಕ್ಕೆ ಸೌಕಾರ್ ಜಾನಕಿ ನೀಡಿದ ದೀರ್ಘಕಾಲದ ಕೊಡುಗೆಗೆ ಹಲವು ಗೌರವಗಳು ಸಂದಿವೆ. 1969ರಲ್ಲಿ ಕಲೈಮಾಮಣಿ ಪ್ರಶಸ್ತಿ ಪಡೆದ ಅವರು, 2022ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದರು.
ನಾಲ್ಕು ಭಾಷೆಗಳ ಚಿತ್ರರಂಗದಲ್ಲಿ ಹಲವು ದಶಕಗಳ ಕಾಲ ಸಕ್ರಿಯವಾಗಿ ಅಭಿನಯಿಸಿದ ಅವರು, ವಿವಿಧ ತಲೆಮಾರುಗಳ ಪ್ರೇಕ್ಷಕರ ಮನದಲ್ಲಿ ಸ್ಥಾನ ಪಡೆದಿದ್ದರು. ಅವರ ನಿಧನದೊಂದಿಗೆ ಏಳು ದಶಕಗಳಿಗೂ ಹೆಚ್ಚು ಕಾಲ ಸಾಗಿದ ಸುದೀರ್ಘ ಹಾಗೂ ಬಹುಭಾಷಾ ಸಿನಿಪಯಣ ಅಂತ್ಯಗೊಂಡಿದೆ.

ಪ್ರಮುಖ ಸುದ್ದಿ :-   ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ : 43.80 ಲಕ್ಷ ಮತದಾರರಿಗೆ ನೋಟಿಸ್‌ ನೀಡಲು ಚುನಾವಣಾ ಆಯೋಗ ಸಿದ್ಧತೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement