ಕಠ್ಮಂಡು : ನೇಪಾಳ–ಟಿಬೆಟ್ ಗಡಿಭಾಗದಲ್ಲಿ ಬುಧವಾರ ಸಂಭವಿಸಿದ ಭೀಕರ ಹಠಾತ್ ಪ್ರವಾಹದ ವಿಡಿಯೊಗಳು ಇದೀಗ ದುರಂತದ ಭೀಕರತೆಯನ್ನು ಬಯಲಿಗೆಳೆಯುತ್ತಿವೆ. ಭಾರೀ ಪ್ರಮಾಣದ ಮಣ್ಣು, ಕಲ್ಲು ಮತ್ತು ನೀರಿನ ಪ್ರವಾಹವು ನದಿತೀರದಲ್ಲಿ ಮನೆಗಳಿರುವ ಸಂಪೂರ್ಣ ವಸತಿ ಪ್ರದೇಶವನ್ನೇ ನಾಶಮಾಡಿರುವ ದೃಶ್ಯಗಳು ವಿಡಿಯೊದಲ್ಲಿ ಸೆರೆಯಾಗಿವೆ. ಈ ಮಹಾದುರಂತದಲ್ಲಿ ಇದುವರೆಗೆ 538 ಮಂದಿ ಸಾವಿಗೀಡಾಗಿರುವುದು ದೃಢಪಟ್ಟಿದ್ದು, 1,400ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ.
ವಿಡಿಯೊದಲ್ಲಿ ಭೋಟೆಕೋಶಿ (Bhotekoshi) ಮತ್ತು ತ್ರಿಶೂಲಿ (Trishuli) ನದಿಗಳ ತೀರದಲ್ಲಿದ್ದ ವಸತಿ ಪ್ರದೇಶಗಳ ಮೂಲಕ ಪ್ರವಾಹದ ನೀರು ಮತ್ತು ಕೆಸರು ರಭಸವಾಗಿ ಹರಿಯುತ್ತಿರುವುದು ಕಾಣಿಸುತ್ತದೆ. ನದಿಯ ದಡಗಳನ್ನು ದಾಟಿ ಉಕ್ಕಿ ಹರಿದ ನೀರು ಅನೇಕ ಕಟ್ಟಡಗಳನ್ನು ಸುತ್ತುವರಿದು, ಸೇತುವೆಗಳು, ರಸ್ತೆಗಳು ಮತ್ತು ವಾಹನಗಳನ್ನು ಕೊಚ್ಚಿಕೊಂಡು ಹೋಗಿದೆ. ಹಲವೆಡೆ ದಪ್ಪವಾದ ಕೆಸರಿನಡಿ ಪ್ರದೇಶಗಳು ಸಂಪೂರ್ಣವಾಗಿ ಹೂತುಹೋಗಿವೆ.
ಪ್ರವಾಹದ ಅಬ್ಬರದ ನಂತರ ನದಿತೀರದ ವಸತಿ ಪ್ರದೇಶಗಳು ಸಂಪೂರ್ಣವಾಗಿ ಕೆಸರು ಮತ್ತು ಅವಶೇಷಗಳ ಮೈದಾನಗಳಾಗಿ ಮಾರ್ಪಟ್ಟಿದ್ದು, ಭಾರೀ ಮಣ್ಣಿನ ಹರಿವು ಕೆಳಭಾಗದ ಪ್ರದೇಶಗಳತ್ತ ಮುಂದುವರಿದಿರುವುದು ದೃಶ್ಯಗಳಲ್ಲಿ ಗೋಚರಿಸುತ್ತದೆ.
ಹಿಮಾಲಯ ಪರ್ವತಶ್ರೇಣಿಯ ಕೆಳಭಾಗದಲ್ಲಿರುವ ಕಡಿದಾದ ಇಳಿಜಾರುಗಳು ಮತ್ತು ಹಸಿರು ಕಣಿವೆಗಳಲ್ಲಿ ಪ್ರವಾಹ ಹಾಗೂ ಭೂಕುಸಿತಗಳು ಪದೇಪದೇ ಸಂಭವಿಸುತ್ತವೆ. ಮಾನವ ಚಟುವಟಿಕೆಗಳಿಂದ ಉಂಟಾಗುತ್ತಿರುವ ಹವಾಮಾನ ಬದಲಾವಣೆಯ ಪರಿಣಾಮವಾಗಿ ಹಿಮನದಿಗಳು ವೇಗವಾಗಿ ಕರಗುತ್ತಿರುವುದರಿಂದ ಇಂತಹ ಪ್ರಕೃತಿ ವಿಕೋಪಗಳ ಅಪಾಯ ಹೆಚ್ಚುತ್ತಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ನೇಪಾಳ ಸರ್ಕಾರದ ಅಧಿಕಾರಿಗಳ ಪ್ರಕಾರ, ಈ ದುರಂತದಲ್ಲಿ ಡಜನ್ಗಟ್ಟಲೆ ಸೇತುವೆಗಳು ನಾಶವಾಗಿದ್ದು, ಸುಮಾರು 40 ಕಿಲೋಮೀಟರ್ ರಸ್ತೆಗಳಿಗೆ ಹಾನಿಯಾಗಿದೆ. ಇದರಿಂದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳಿಗೆ ತೀವ್ರ ಅಡ್ಡಿಯಾಗಿದೆ.
ಕಠ್ಮಂಡುವಿನಲ್ಲಿರುವ ಇಂಟರ್ನ್ಯಾಷನಲ್ ಸೆಂಟರ್ ಫಾರ್ ಇಂಟಿಗ್ರೇಟೆಡ್ ಮೌಂಟನ್ ಡೆವಲಪ್ಮೆಂಟ್ (ICIMOD) ಹವಾಮಾನ ತಜ್ಞರು, ಹಿಮನದಿಯಿಂದ ಸಂಭವಿಸಿದ ಹಿಮ ಬಂಡೆಗಳ ಕುಸಿತವೇ ಈ ಹಠಾತ್ ಪ್ರವಾಹಕ್ಕೆ ಪ್ರಮುಖ ಕಾರಣವಾಗಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಸಂಸ್ಥೆ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ತ್ರಿಶೂಲಿ ನದಿಯ ಒಂದು ಭಾಗದಲ್ಲಿ ಕೇವಲ ಅರ್ಧ ಗಂಟೆಯೊಳಗೆ ನೀರಿನ ಮಟ್ಟ ಸುಮಾರು 9 ಮೀಟರ್ಗಳಷ್ಟು ಏರಿಕೆಯಾಗಿತ್ತು.
ಇದೀಗ ರಸುವಾ (Rasuwa) ಜಿಲ್ಲೆಯಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳು ಮುಂದುವರಿದಿವೆ. ಈ ನಡುವೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಗುರುವಾರ ನೀಡಿದ ಮಾಹಿತಿಯ ಪ್ರಕಾರ, 290 ಭಾರತೀಯ ಪ್ರಜೆಗಳೊಂದಿಗೆ ಇನ್ನೂ ಸಂಪರ್ಕ ಸಾಧಿಸಲಾಗಿಲ್ಲ. ಆದರೆ ಇದುವರೆಗೆ 84 ಭಾರತೀಯರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.
ಸಂಪರ್ಕಕ್ಕೆ ಸಿಗದ 290 ಭಾರತೀಯರಲ್ಲಿ ಕೈಲಾಸ ಮಾನಸಸರೋವರ ಯಾತ್ರೆಗೆ ತೆರಳಿದ್ದ ಹಲವು ಯಾತ್ರಿಕರ ಗುಂಪುಗಳು, ತ್ರಿಶೂಲಿ–1 ಜಲವಿದ್ಯುತ್ ಯೋಜನೆಯ ಕಾರ್ಮಿಕರು ಹಾಗೂ ಭಾರತದ ವಿವಿಧ ರಾಜ್ಯಗಳಿಂದ ಬಂದಿದ್ದ ಪ್ರವಾಸಿಗರು ಸೇರಿದ್ದಾರೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ನಾಪತ್ತೆಯಾಗಿರುವ ಭಾರತೀಯರ ಪತ್ತೆಗಾಗಿ ಹಾಗೂ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಿಲುಕಿರುವವರನ್ನು ಸಂಪರ್ಕಿಸಲು ಭಾರತ ಸರ್ಕಾರ ನೇಪಾಳದ ಅಧಿಕಾರಿಗಳೊಂದಿಗೆ ನಿರಂತರ ಸಮನ್ವಯ ಸಾಧಿಸುತ್ತಿದೆ ಎಂದು ತಿಳಿಸಿದ್ದಾರೆ.
‘ಭೂಮಿಯ ಮೂರನೇ ಧ್ರುವ’ (Third Pole) ಎಂದು ಕರೆಯಲ್ಪಡುವ ಹಿಮಾಲಯದ ಹಿಮಪದರ ವ್ಯವಸ್ಥೆಯ ಅಸ್ಥಿರತೆ ಈಗ ಹಿಮಾಲಯದ ಕೆಳಭಾಗದ ಪ್ರದೇಶಗಳಲ್ಲಿ ವಾಸಿಸುವ ಸುಮಾರು 200 ಕೋಟಿ ಜನರಿಗೆ ಗಂಭೀರ ಹಾಗೂ ಸರಣಿ ಪರಿಣಾಮಗಳನ್ನು ಉಂಟುಮಾಡುವ ಸಂಕಷ್ಟವಾಗಿ ಪರಿಣಮಿಸಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಇದೇ ಪ್ರದೇಶದಲ್ಲಿ 2025ರ ಆಗಸ್ಟ್ನಲ್ಲಿಯೂ ಇದೇ ರೀತಿಯ ಹಠಾತ್ ಪ್ರವಾಹ ಸಂಭವಿಸಿತ್ತು. ಟಿಬೆಟ್ನಲ್ಲಿರುವ ಒಂದು ಹಿಮನದಿ ಸರೋವರವು ಅತಿಯಾದ ತಾಪಮಾನದಿಂದ ಉಕ್ಕಿ ಹರಿದ ಪರಿಣಾಮ ಆ ಪ್ರವಾಹ ಉಂಟಾಗಿತ್ತು. ಆ ಸಂದರ್ಭದಲ್ಲಿ ಒಂಬತ್ತು ಮಂದಿ ಮೃತಪಟ್ಟಿದ್ದು, ನೇಪಾಳ–ಚೀನಾ ಸಂಪರ್ಕ ಕಲ್ಪಿಸುವ ಪ್ರಮುಖ ಸೇತುವೆ ಸೇರಿದಂತೆ ಹಲವು ಮೂಲಸೌಕರ್ಯಗಳಿಗೆ ಭಾರೀ ಹಾನಿಯಾಗಿತ್ತು.


ನಿಮ್ಮ ಕಾಮೆಂಟ್ ಬರೆಯಿರಿ