ವಿಡಿಯೋ | ನೇಪಾಳ ಪ್ರವಾಹ ; ತ್ರಿಶೂಲಿ ನದಿ 6 ಪಟ್ಟು ಅಗಲವಾಗಿ ಮನೆಗಳನ್ನೇ ನುಂಗಿದ ಭೀಕರ ಚಿತ್ರಣ ಬಿಚ್ಚಿಟ್ಟ ಉಪಗ್ರಹ ಚಿತ್ರಗಳು !

ಕಠ್ಮಂಡು : ಆಗಸ್ಟ್ 26ರ ಬೆಳಿಗ್ಗೆ ಟಿಬೆಟ್-ನೇಪಾಳ ಗಡಿಯಲ್ಲಿ ಬಂಡೆ ಮತ್ತು ಹಿಮದ ಭೀಕರ ಕುಸಿತ (ಅವಲಾಂಚ್) ಸಂಭವಿಸಿ, ರಸುವಾ ಜಿಲ್ಲೆಯ ಮನೆಗಳು, ರಸ್ತೆಗಳು, ಹಳ್ಳಿಗಳು ಹಾಗೂ ಮಾರುಕಟ್ಟೆಗಳನ್ನು ನುಂಗಿಹಾಕಿತು. ಈ ಪ್ರವಾಹದ ನೀರು ನೇಪಾಳದ ನುವಾಕೋಟ್ ಮತ್ತು ಲಲಿತಪುರ ಜಿಲ್ಲೆಗಳಿಗೂ ಹರಿಯಿತು. ಹಸಿರು ಬೆಟ್ಟಗಳು ಕೆಸರು, ಬಂಡೆ ಮತ್ತು ತ್ಯಾಜ್ಯಗಳ ವಿಶಾಲ ಮೈದಾನಗಳಾಗಿ ಮಾರ್ಪಟ್ಟವು. ಕೆಲವೇ ಗಂಟೆಗಳಲ್ಲಿ ಪ್ರವಾಹವು ನದಿ ಕಣಿವೆಗಳ ಸ್ವರೂಪವನ್ನೇ ಬದಲಾಯಿಸಿ, ನದಿ ಕಣಿವೆಗಳ ಪಾತ್ರವನ್ನು ಆರು ಪಟ್ಟು ಅಗಲವಾಗಿಸಿದೆ…!
ಟಿಬೆಟ್ ಗಡಿಯಿಂದ ಸುಮಾರು 125 ಕಿಲೋಮೀಟರ್ ದೂರದಲ್ಲಿರುವ ರಸುವಾ ಜಿಲ್ಲೆಯ ಟಿಮುರೆ ಮತ್ತು ಶ್ಯಾಬ್ರುಬೇಸಿ ಪ್ರದೇಶಗಳಲ್ಲಿ ನದಿ ನೀರು ದಿಢೀರನೆ ಏರಿದ್ದರಿಂದ ಭಾರಿ ಹಾನಿ ಸಂಭವಿಸಿದೆ ಎಂದು ನೇಪಾಳ ಸೇನೆ ಹೇಳಿಕೆಯಲ್ಲಿ ತಿಳಿಸಿದ್ದು, ಉಪಗ್ರಹ ಚಿತ್ರಗಳು ಇದಕ್ಕೆ ಸಾಕ್ಷಿಯಾಗಿವೆ.

ಉತ್ತರ ನೇಪಾಳದ ರಸುವಾ ಜಿಲ್ಲೆಯ ಗಡಿ ಪಟ್ಟಣವಾದ ಟಿಮುರೆಯಲ್ಲಿ, ತ್ರಿಶೂಲಿ ನದಿಯು ತನ್ನ ಮೂಲ ಅಗಲಕ್ಕಿಂತ ನಾಲ್ಕು ಪಟ್ಟು ಹೆಚ್ಚು ಅಗಲವಾಗಿದ್ದು ಕಂಡುಬಂದಿದೆ. ಈ ಭೀಕರ ಪ್ರವಾಹಕ್ಕೂ ಮುನ್ನ 78 ಮೀಟರ್ ಅಗಲವಿದ್ದ ನದಿಯು, ಆಗಸ್ಟ್ 26ರ ಪ್ರವಾಹದ ನಂತರ 350 ಮೀಟರ್‌ಗೆ ಅಗಲವಾಗಿದೆ.
ಶ್ಯಾಬ್ರುಬೇಸಿಯಲ್ಲಿ ನದಿ ಅಗಲ 65 ಮೀಟರ್ ಇತ್ತು. ಆದರೆ ಪ್ರವಾಹದ ನಂತರ ಅದರ ಅಗಲ 300 ಮೀಟರ್‌ಗೆ ಹೆಚ್ಚಳವಾಯಿತು. ಇಲ್ಲಿ ಭೋರ್ಗರೆದ ನೀರು ಸುಮಾರು 300 ಮನೆಗಳನ್ನು ನುಂಗಿಹಾಕಿದೆ ಎಂದು ಹೇಳಲಾಗಿದೆ.
ಅತ್ಯಂತ ಹೆಚ್ಚು ಹಾನಿಗೊಳಗಾದ ಮೂರು ಜಿಲ್ಲೆಗಳಲ್ಲಿ ಒಂದಾದ ನುವಾಕೋಟ್‌ನಲ್ಲೂ ಇಂತಹದೇ ದೃಶ್ಯಗಳು ಕಂಡುಬಂದಿವೆ. ನುವಾಕೋಟ್‌ನ ಚೌಪ್‌ಥೋಕೆ ಪ್ರದೇಶದಲ್ಲಿ ನದಿಯು ಆರು ಪಟ್ಟು ದೊಡ್ಡದಾಗಿದೆ. ಅಂದರೆ ಪ್ರವಾಹಕ್ಕೆ ಮುನ್ನ 65 ಮೀಟರ್ ಅಗಲವಿದ್ದ ನದಿ, ಪ್ರವಾಹದ ನಂತರ 443 ಮೀಟರ್‌ ಅಗಲವಾಗಿದೆ. ನುವಾಕೋಟ್ ಜಿಲ್ಲೆಯ ಬಟ್ಟಾರ್ ಪ್ರದೇಶದಲ್ಲಿ ನದಿಯು ಪ್ರವಾಹಕ್ಕೆ ಮುನ್ನ 91 ಮೀಟರ್ ಅಗಲ ಇದ್ದದ್ದು, ನಂತರ ಅದರ 309 ಮೀಟರ್‌ಗೆ ವಿಸ್ತರಿಸಿದೆ.

ರಕ್ಷಣಾ ಕಾರ್ಯಾಚರಣೆ
ನೇಪಾಳದಲ್ಲಿ ರಕ್ಷಣಾ ಕಾರ್ಯಾಚರಣೆ ಹತ್ತನೇ ದಿನಕ್ಕೆ ಕಾಲಿಟ್ಟಿದೆ. ತ್ರಿಶೂಲಿ-3 ‘ಎ’ ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ ಸಿಲುಕಿಕೊಂಡಿದ್ದ ಇಬ್ಬರು ಕಾರ್ಮಿಕರನ್ನು ಇಂದು ಜೀವಂತವಾಗಿ ಹೊರತೆಗೆಯಲಾಗಿದ್ದು, ತಜ್ಞರು ಇದನ್ನು ಪವಾಡಕ್ಕಿಂತ ಕಡಿಮೆಯಿಲ್ಲ ಎಂದು ಕರೆದಿದ್ದಾರೆ.
ನೇಪಾಳದಲ್ಲಿ 1200ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ ಹಾಗೂ 5083 ಜನರು ಇನ್ನೂ ನಾಪತ್ತೆಯಾಗಿದ್ದಾರೆ. ಚೀನಾದಲ್ಲಿ 21 ಜನರು ಸಾವಿಗೀಡಾಗಿದ್ದು, 541 ಜನರು ನಾಪತ್ತೆಯಾಗಿದ್ದಾರೆ ಎಂದು ಅಲ್ಲಿನ ಸರ್ಕಾರಿ ಮಾಧ್ಯಮ ತಿಳಿಸಿದೆ.
ಇದರಿಂದಾಗಿ ಒಟ್ಟು ಸಾವಿನ ಸಂಖ್ಯೆ 1,280ಕ್ಕೆ ತಲುಪಿದ್ದು, 5,624 ಜನರು ನಾಪತ್ತೆಯಾಗಿದ್ದಾರೆ.

ಪ್ರಮುಖ ಸುದ್ದಿ :-   ವಿಡಿಯೊ | ನೇಪಾಳ ದುರಂತ : 9 ದಿನಗಳ ಬಳಿಕ ಸುರಂಗದಿಂದ ಇಬ್ಬರ ಜೀವಂತ ರಕ್ಷಣೆ; ಒಳಗಿನಿಂದ ಕೇಳಿಬಂದ ಧ್ವನಿಗಳು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement