ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ 2025ರ ಏಪ್ರಿಲ್ 22ರಂದು ನಡೆದ ಭೀಕರ ಉಗ್ರ ದಾಳಿಯಲ್ಲಿ 26 ಮಂದಿ ನಾಗರಿಕರು ಮೃತಪಟ್ಟಿರುವುದನ್ನು ಬ್ರಿಕ್ಸ್ ರಾಷ್ಟ್ರಗಳ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ಭಯೋತ್ಪಾದನೆಯ ಎಲ್ಲ ರೂಪಗಳ ವಿರುದ್ಧ ಹೋರಾಡುವ ತಮ್ಮ ಬದ್ಧತೆಯನ್ನು ಮತ್ತೊಮ್ಮೆ ಪುನರುಚ್ಚರಿಸಿರುವ ನಾಯಕರು, ಭಯೋತ್ಪಾದನೆಗೆ ಯಾವುದೇ ರೀತಿಯ ಸಮರ್ಥನೆ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬ್ರಿಕ್ಸ್ ಶೃಂಗಸಭೆಯ ಅಂಗವಾಗಿ ಅಂಗೀಕರಿಸಲಾದ 140 ಅಂಶಗಳ ನವದೆಹಲಿ ಘೋಷಣೆಯ 40ನೇ ಅಂಶದಲ್ಲಿ ಪಹಲ್ಗಾಮ್ ದಾಳಿಯನ್ನು ಪ್ರಸ್ತಾಪಿಸಲಾಗಿದೆ. ಯಾವುದೇ ಉದ್ದೇಶ ಅಥವಾ ಪ್ರೇರಣೆಯಿದ್ದರೂ, ಯಾರೇ ನಡೆಸಿದ್ದರೂ ಎಲ್ಲ ರೀತಿಯ ಭಯೋತ್ಪಾದಕ ಕೃತ್ಯಗಳು ಅಪರಾಧ ಹಾಗೂ ಸಮರ್ಥಿಸಲಾಗದ ಕೃತ್ಯಗಳಾಗಿವೆ ಎಂದು ಬ್ರಿಕ್ಸ್ ನಾಯಕರು ಘೋಷಣೆಯಲ್ಲಿ ಹೇಳಿದ್ದಾರೆ.
“2025ರ ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ನಾವು ಅತ್ಯಂತ ತೀವ್ರವಾಗಿ ಖಂಡಿಸುತ್ತೇವೆ. ಈ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ” ಎಂದು ಬ್ರಿಕ್ಸ್ ನಾಯಕರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪಹಲ್ಗಾಮ್ನ ಬೈಸರನ್ ಕಣಿವೆಯಲ್ಲಿ ನಡೆದ ಈ ಭೀಕರ ದಾಳಿಯಲ್ಲಿ 25 ಪ್ರವಾಸಿಗರು ಹಾಗೂ ಸ್ಥಳೀಯ ಕುದುರೆ ಸವಾರಿ ನಿರ್ವಾಹಕ ಮೃತಪಟ್ಟಿದ್ದರು. ದೇಶವನ್ನು ಬೆಚ್ಚಿಬೀಳಿಸಿದ ಅತ್ಯಂತ ಭೀಕರ ಉಗ್ರ ದಾಳಿಗಳಲ್ಲೊಂದಾಗಿದ್ದ ಈ ಹತ್ಯಾಕಾಂಡದ ಹಿಂದೆ ಪಾಕಿಸ್ತಾನದಲ್ಲಿ ಬೆಂಬಲ ಹಾಗೂ ತರಬೇತಿ ಪಡೆದ ಉಗ್ರರು ಇದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.
ನವದೆಹಲಿಯ ಘೋಷಣೆಯಲ್ಲಿ ಭಯೋತ್ಪಾದನೆಗೆ ಬೆಂಬಲ ನೀಡುವ ಯಾವುದೇ ನಿರ್ದಿಷ್ಟ ರಾಷ್ಟ್ರದ ಹೆಸರನ್ನು ನೇರವಾಗಿ ಪ್ರಸ್ತಾಪಿಸದಿದ್ದರೂ ಗಡಿಯಾಚೆಗಿನ ಉಗ್ರರ ಸಂಚಾರ, ಭಯೋತ್ಪಾದನೆಗೆ ಹಣಕಾಸು ನೆರವು ಹಾಗೂ ಉಗ್ರರಿಗೆ ಸುರಕ್ಷಿತ ತಾಣಗಳ ಲಭ್ಯತೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಬ್ರಿಕ್ಸ್ ನಾಯಕರು ಕರೆ ನೀಡಿದ್ದಾರೆ.
ಭಯೋತ್ಪಾದನೆಯನ್ನು ಯಾವುದೇ ಧರ್ಮ, ರಾಷ್ಟ್ರೀಯತೆ, ನಾಗರಿಕತೆ ಅಥವಾ ಜನಾಂಗೀಯ ಸಮುದಾಯದ ಜೊತೆ ತಳುಕು ಹಾಕಬಾರದು ಎಂದು ವಿಶ್ವ ನಾಯಕರು ಒತ್ತಿಹೇಳಿದ್ದಾರೆ. ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿರುವವರು ಹಾಗೂ ಅವರಿಗೆ ಬೆಂಬಲ ನೀಡುವವರನ್ನು ಹೊಣೆಗಾರರನ್ನಾಗಿ ಮಾಡಿ, ಸಂಬಂಧಿತ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕಾನೂನುಗಳ ಅನ್ವಯ ನ್ಯಾಯದ ಮುಂದೆ ತರುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಶೂನ್ಯ ಸಹಿಷ್ಣುತೆ ನೀತಿಯನ್ನು ಅನುಸರಿಸುವಂತೆ ಬ್ರಿಕ್ಸ್ ಸದಸ್ಯ ರಾಷ್ಟ್ರಗಳಿಗೆ ನಾಯಕರು ಕರೆ ನೀಡಿದ್ದಾರೆ. ಭಯೋತ್ಪಾದನೆ ನಿಗ್ರಹದಲ್ಲಿ ದ್ವಂದ್ವ ನೀತಿಯನ್ನು ತಿರಸ್ಕರಿಸಬೇಕು ಎಂದೂ ಅವರು ಒತ್ತಿಹೇಳಿದ್ದಾರೆ. ವಿಶ್ವಸಂಸ್ಥೆ ಗುರುತಿಸಿರುವ ಎಲ್ಲ ಭಯೋತ್ಪಾದಕರು ಹಾಗೂ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಸಂಘಟಿತ ಕ್ರಮ ಕೈಗೊಳ್ಳುವಂತೆಯೂ ಸದಸ್ಯ ರಾಷ್ಟ್ರಗಳನ್ನು ಒತ್ತಾಯಿಸಿದ್ದಾರೆ.
ಭಯೋತ್ಪಾದನೆಯಷ್ಟೇ ಅಲ್ಲದೆ ಉಗ್ರವಾದ ಮತ್ತು ತೀವ್ರಗಾಮಿತ್ವವನ್ನು, ವಿಶೇಷವಾಗಿ ಯುವ ಪೀಳಿಗೆಯಲ್ಲಿ ಹೆಚ್ಚುತ್ತಿರುವ ಆಮಿಷ ಹಾಗೂ ಪ್ರಭಾವವನ್ನು ತಡೆಯುವ ಅಗತ್ಯವನ್ನೂ ಬ್ರಿಕ್ಸ್ ನಾಯಕರು ಪ್ರಸ್ತಾಪಿಸಿದ್ದಾರೆ. ಈ ನಿಟ್ಟಿನಲ್ಲಿ ಬ್ರಿಕ್ಸ್ ರಾಷ್ಟ್ರಗಳ ನಡುವೆ ಹಾಗೂ ಸಂಬಂಧಿತ ಭದ್ರತಾ ಮತ್ತು ಕಾನೂನು ಜಾರಿ ಸಂಸ್ಥೆಗಳ ನಡುವೆ ಸಹಕಾರವನ್ನು ಮತ್ತಷ್ಟು ಬಲಪಡಿಸಬೇಕು. ಪರಸ್ಪರ ಉತ್ತಮ ಪದ್ಧತಿಗಳು ಮತ್ತು ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ಸಹಕಾರ ಹೆಚ್ಚಿಸಬೇಕು ಎಂದು ನವದೆಹಲಿ ಘೋಷಣೆಯಲ್ಲಿ ತಿಳಿಸಲಾಗಿದೆ.
ಪಹಲ್ಗಾಮ್ ಉಗ್ರ ದಾಳಿಯನ್ನು ಬ್ರಿಕ್ಸ್ ರಾಷ್ಟ್ರಗಳು ಇದೇ ಮೊದಲ ಬಾರಿಗೆ ಖಂಡಿಸುತ್ತಿಲ್ಲ. 2025ರ ಜುಲೈನಲ್ಲಿ ರಿಯೋ ಡಿ ಜನೈರೊದಲ್ಲಿ ನಡೆದ ಹಿಂದಿನ ಬ್ರಿಕ್ಸ್ ಶೃಂಗಸಭೆಯಲ್ಲಿಯೂ ಪಹಲ್ಗಾಮ್ ದಾಳಿಯನ್ನು ತೀವ್ರವಾಗಿ ಖಂಡಿಸಲಾಗಿತ್ತು. ಆಗಲೂ ಎಲ್ಲ ರೀತಿಯ ಭಯೋತ್ಪಾದನೆಯ ವಿರುದ್ಧ ಹೋರಾಡುವ ಬದ್ಧತೆಯನ್ನು ಬ್ರಿಕ್ಸ್ ನಾಯಕರು ಪುನರುಚ್ಚರಿಸಿದ್ದರು.
ಇದೇ ರೀತಿಯ ಖಂಡನೆಯನ್ನು ಕಳೆದ ಸೆಪ್ಟೆಂಬರ್ನಲ್ಲಿ ಟಿಯಾಂಜಿನ್ನಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆ (SCO) ಶೃಂಗಸಭೆಯಲ್ಲಿಯೂ ವ್ಯಕ್ತಪಡಿಸಲಾಗಿತ್ತು. ಇದೀಗ ನವದೆಹಲಿ ಘೋಷಣೆಯಲ್ಲೂ ಪಹಲ್ಗಾಮ್ ದಾಳಿಯ ಖಂಡನೆಯನ್ನು ಮತ್ತೊಮ್ಮೆ ದಾಖಲಿಸುವ ಮೂಲಕ ಭಯೋತ್ಪಾದನೆ ವಿರುದ್ಧದ ತನ್ನ ಒಗ್ಗಟ್ಟಿನ ನಿಲುವನ್ನು ಬ್ರಿಕ್ಸ್ ರಾಷ್ಟ್ರಗಳು ಪುನರುಚ್ಚರಿಸಿವೆ.


ನಿಮ್ಮ ಕಾಮೆಂಟ್ ಬರೆಯಿರಿ