ಗುರುಗ್ರಾಮ: ಸ್ನೇಹಿತರ ನಡುವಿನ ಮಾತಿನ ಚಕಮಕಿ ಭಾರೀ ಆಕ್ರೋಶಕ್ಕೆ ತಿರುಗಿ, ವ್ಯಕ್ತಿಯೊಬ್ಬ ತನ್ನ ಮಹೀಂದ್ರಾ ಥಾರ್ ಕಾರನ್ನು ಸ್ನೇಹಿತರನ್ನು ಕರೆದೊಯ್ಯುತ್ತಿದ್ದ ಕ್ಯಾಬ್‌ಗೆ ಪದೇ ಪದೇ ಡಿಕ್ಕಿ ಹೊಡೆದ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಘಟನೆಯಲ್ಲಿ ಕ್ಯಾಬ್‌ನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗದಿದ್ದರೂ, ವಾಹನಕ್ಕೆ ತೀವ್ರ ಹಾನಿಯಾಗಿದೆ.
ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗುರುಗ್ರಾಮದ ಸೆಕ್ಟರ್ 89ರಲ್ಲಿ ಈ ಘಟನೆ ನಡೆದಿದೆ. ದೆಹಲಿ ನೋಂದಣಿ ಸಂಖ್ಯೆಯ ಥಾರ್ ಕಾರಿನಲ್ಲಿ ನಾಲ್ವರು ಯುವಕರು ಸ್ಥಳಕ್ಕೆ ಬಂದಿದ್ದರು. ಈ ವೇಳೆ ಅವರ ನಡುವೆ ಮಾತಿನ ಜಗಳ ಉಂಟಾಗಿದ್ದು, ಅದರಿಂದ ಬೇಸತ್ತ ಇಬ್ಬರು ಯುವಕರು ಗುಂಪಿನಿಂದ ಬೇರ್ಪಟ್ಟು ಮನೆಗೆ ತೆರಳಲು ನಿರ್ಧರಿಸಿದರು. ಅವರು ರಾಪಿಡೊ ಆ್ಯಪ್ ಮೂಲಕ ಕ್ಯಾಬ್ ಬುಕ್ ಮಾಡಿಕೊಂಡು ರಸ್ತೆ ಬದಿಯಲ್ಲಿ ಕಾಯುತ್ತಿದ್ದರು.
ಕ್ಯಾಬ್ ಬಂದ ತಕ್ಷಣ ಇಬ್ಬರೂ ಅದರಲ್ಲಿ ಕುಳಿತರು. ಇದೇ ವೇಳೆ ಅವರ ಜೊತೆ ಬಂದಿದ್ದ ಮತ್ತೊಬ್ಬ ಯುವಕ ಆಕ್ರೋಶಗೊಂಡು ತನ್ನ ಥಾರ್ ಕಾರನ್ನು ವೇಗವಾಗಿ ಚಲಾಯಿಸಿ ಕ್ಯಾಬ್‌ಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಆರೋಪಿಸಲಾಗಿದೆ. ನಂತರ ವಾಹನವನ್ನು ಹಿಂದೆ ತೆಗದುಕೊಂಡು ಪದೇ ಪದೇ ಕ್ಯಾಬ್‌ಗೆ ಬಲವಾಗಿ ಢಿಕ್ಕಿ ಹೊಡೆದಿದ್ದಾನೆ. ಕೆಲವೇ ಕ್ಷಣಗಳಲ್ಲಿ ಕ್ಯಾಬ್‌ನ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದೆ.
ಘಟನೆಯ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದು, ಡಿಕ್ಕಿಯ ತೀವ್ರತೆಗೆ ಕ್ಯಾಬ್‌ನ ಎರಡೂ ಮುಂಭಾಗದ ಏರ್‌ಬ್ಯಾಗ್‌ಗಳು ತೆರೆದುಕೊಂಡಿದ್ದು, ವಾಹನದ ಮುಂಭಾಗಕ್ಕೆ ಭಾರೀ ಹಾನಿಯಾಗಿದೆ ಎಂದು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊದಲ್ಲಿ ಥಾರ್ ಚಾಲಕ ವಾಹನದಿಂದ ಇಳಿದು ಕೂಗಾಡುತ್ತಿರುವುದು ಕಂಡುಬಂದಿದೆ. ಈ ದೃಶ್ಯವನ್ನು ಸ್ಥಳದಲ್ಲಿದ್ದ ಹಲವರು ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿದಿದ್ದಾರೆ. ಘಟನೆಯ ವೇಳೆ ಥಾರ್‌ನಲ್ಲಿದ್ದ ಯುವಕರು ಮದ್ಯದ ಅಮಲಿನಲ್ಲಿದ್ದಂತೆ ಕಂಡುಬಂದಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ. ಆದರೆ ಈ ಬಗ್ಗೆ ಪೊಲೀಸ್ ತನಿಖೆಯ ನಂತರವೇ ಅಧಿಕೃತ ಮಾಹಿತಿ ಲಭ್ಯವಾಗಲಿದೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿದರೂ, ಅವರ ಆಗಮನಕ್ಕೂ ಮುನ್ನ ಥಾರ್ ಚಾಲಕ ಹಾಗೂ ಆತನ ಸಹಚರ ಸ್ಥಳದಿಂದ ಪರಾರಿಯಾಗಿದ್ದರು. ಕ್ಯಾಬ್ ಚಾಲಕ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
“ಪ್ರಾಥಮಿಕ ತನಿಖೆಯಲ್ಲಿ ಘಟನೆಯಲ್ಲಿ ಬಳಸಲಾದ ಥಾರ್ ವಾಹನವು ದೆಹಲಿಯಲ್ಲಿ ನೋಂದಣಿಯಾಗಿರುವುದು ಪತ್ತೆಯಾಗಿದೆ. ನೋಂದಣಿ ಸಂಖ್ಯೆಯ ಆಧಾರದಲ್ಲಿ ವಾಹನದ ಮಾಲೀಕ ಹಾಗೂ ಆರೋಪಿತ ಯುವಕರನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ. ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು,” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೆಲವೇ ದಿನಗಳ ಹಿಂದೆ ಗುರುಗ್ರಾಮದಲ್ಲೇ ನಡೆದಿದ್ದ ಮತ್ತೊಂದು ಹಿಟ್ ಅಂಡ್ ರನ್ ಪ್ರಕರಣವೂ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಕಾರೊಂದು ಬೈಕ್ ಸವಾರರಾದ ಶಿವಾನಿ ಚೌಹಾಣ ಅಲಿಯಾಸ್ ಸಿಯಾ ಅವರಿಗೆ ಡಿಕ್ಕಿ ಹೊಡೆದು ಪರಾರಿಯಾಗಿತ್ತು. ಡಿಕ್ಕಿಯ ಪರಿಣಾಮ ಸಿಯಾ ಬೈಕ್‌ನಿಂದ ರಸ್ತೆಗೆ ಎಸೆಯಲ್ಪಟ್ಟಿದ್ದರೆ, ಬೈಕ್ ಕೆಲ ಮೀಟರ್‌ಗಳಷ್ಟು ದೂರ ಎಳೆದುಕೊಂಡು ಹೋಗಲ್ಪಟ್ಟಿತ್ತು.
ಇನ್‌ಸ್ಟಾಗ್ರಾಂನಲ್ಲಿ ‘rebelwheels_sia_’ ಹೆಸರಿನ ಖಾತೆ ನಡೆಸುವ ಸಿಯಾ, ಬಳಿಕ ಘಟನೆಯ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ಅಪಘಾತಕ್ಕೆ ಮುನ್ನ ನಡೆದ ಘಟನಾವಳಿಗಳ ವಿವರವನ್ನು ನೀಡಿದ್ದರು.
ಆ ಪ್ರಕರಣದಲ್ಲಿ ಆರೋಪಿಗಳಾದ ಕಲ್ಯಾಣ ಬೈನ್ಸ್ಲಾ ಹಾಗೂ ಆತನ ಸಂಬಂಧಿ ಲವ್ನಿಶ್ ಬೈನ್ಸ್ಲಾ ಅವರನ್ನು ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರಿದಿದೆ.


ನಿಮ್ಮ ಕಾಮೆಂಟ್ ಬರೆಯಿರಿ