ನವದೆಹಲಿ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸಿಕ್ಕಿಂನಲ್ಲಿ ಮತ್ತೆ ಭೂಕುಸಿತ ಸಂಭವಿಸಿದ್ದು, ಪಶ್ಚಿಮ ಸಿಕ್ಕಿಂನ ರಿಂಬಿ ಗ್ರಾಮದಲ್ಲಿ ಕನಿಷ್ಠ 30 ಮನೆಗಳು ಹಾಗೂ ಸರ್ಕಾರಿ ವಸತಿಗೃಹಗಳು ಹಾನಿಗೊಳಗಾಗಿವೆ. ಗುರುವಾರ ತಡರಾತ್ರಿ ಸಂಭವಿಸಿದ ಭೂಕುಸಿತದಲ್ಲಿ ಮಣ್ಣು, ಕಲ್ಲುಗಳು ಹಾಗೂ ಅವಶೇಷಗಳು ವಸತಿ ಪ್ರದೇಶಗಳಿಗೆ ನುಗ್ಗಿವೆ.
ಗೆಯ್ಜಿಂಗ್ ಜಿಲ್ಲೆಯ ಯುಕ್ಸೋಮ್–ತಾಶಿಡಿಂಗ್ ಪ್ರದೇಶದಲ್ಲಿ ನಿರಂತರ ಮಳೆಯ ನಡುವೆ ಈ ಭೂಕುಸಿತ ಸಂಭವಿಸಿದೆ. ರಿಂಬಿ ಗ್ರಾಮದ ಹಲವು ಮನೆಗಳಿಗೆ ಹಾನಿಯಾಗಿದ್ದು, ವಿದ್ಯುತ್ ಇಲಾಖೆಗೆ ಸೇರಿದ ಸರ್ಕಾರಿ ವಸತಿಗೃಹ ಸೇರಿದಂತೆ ಕೆಲವು ಸರ್ಕಾರಿ ಕಟ್ಟಡಗಳಿಗೂ ಹಾನಿಯಾಗಿದೆ. ರಿಂಬಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಗಸ್ಟ್ನಿಂದಲೇ ಬೆಟ್ಟದ ಇಳಿಜಾರುಗಳು ಮತ್ತು ಬಂಡೆಗಲ್ಲಿನ ಪ್ರದೇಶಗಳು ಅಸ್ಥಿರವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದರು.
ಮಳೆಯಷ್ಟೇ ಕಾರಣವಲ್ಲ
ಭಾರೀ ಮಳೆ ಭೂಕುಸಿತಕ್ಕೆ ತಕ್ಷಣದ ಕಾರಣವಾಗಿದ್ದರೂ, ಈ ಪ್ರದೇಶದ ಭೌಗೋಳಿಕ ರಚನೆಯೂ ಅಪಾಯವನ್ನು ಹೆಚ್ಚಿಸಿದೆ. ಮಳೆಯ ನೀರು, ಮಣ್ಣು ಹಾಗೂ ಬಿರುಕು ಬಿಟ್ಟಿರುವ ಬಂಡೆಗಳಲ್ಲಿ ನುಗ್ಗಿದಾಗ ನೆಲದೊಳಗಿನ ನೀರಿನ ಒತ್ತಡ ಹೆಚ್ಚುತ್ತದೆ. ಇದರಿಂದ ಬೆಟ್ಟದ ಇಳಿಜಾರನ್ನು ಹಿಡಿದಿಟ್ಟುಕೊಳ್ಳುವ ಮಣ್ಣಿನ ಸಾಮರ್ಥ್ಯ ಕುಸಿಯುತ್ತದೆ. ಪರಿಣಾಮವಾಗಿ ಮಣ್ಣು ಮತ್ತು ಬಂಡೆಗಳು ಕೆಳಭಾಗಕ್ಕೆ ಜಾರುವ ಸಾಧ್ಯತೆ ಹೆಚ್ಚುತ್ತದೆ.
ಸೆಪ್ಟೆಂಬರ್ 14ರಂದು ಸುರಿದ ಭಾರೀ ಮಳೆ ಹಾಗೂ ಉಂಟಾದ ಪ್ರವಾಹದ ಬಳಿಕ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತ್ತು. ಅಪಾಯದ ಪ್ರದೇಶಗಳಲ್ಲಿದ್ದ ರಿಂಬಿಯ 28 ಮನೆಗಳ 128 ಮಂದಿಯನ್ನು ಈಗಾಗಲೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಸಿಕ್ಕಿಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (SSDMA) ತಿಳಿಸಿದೆ.
ಒಮ್ಮೆ ಭೂಕುಸಿತ ಸಂಭವಿಸಿ ಭೂಭಾಗದ ರಚನೆಗೆ ಹಾನಿಯಾದ ಬಳಿಕ, ಅದೇ ಪ್ರದೇಶದಲ್ಲಿ ಮತ್ತೆ ಮಳೆ ಸುರಿದಾಗ ಮತ್ತಷ್ಟು ಭೂಕುಸಿತದ ಅಪಾಯ ಹೆಚ್ಚಾಗುತ್ತದೆ. ರಿಂಬಿಯಲ್ಲಿ ಈಗಾಗಲೇ ಸಂಗ್ರಹವಾಗಿರುವ ಮಣ್ಣು, ಕಲ್ಲು ಹಾಗೂ ಇತರ ಅವಶೇಷಗಳು ಮತ್ತು ನೀರಿನ ಹರಿವಿನಲ್ಲಿ ಉಂಟಾಗಿರುವ ಬದಲಾವಣೆಗಳು ಮುಂದಿನ ಮಳೆಯ ಸಂದರ್ಭದಲ್ಲಿ ಮತ್ತಷ್ಟು ಹಾನಿಗೆ ಕಾರಣವಾಗಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಮುಂದುವರಿದ ಅಪಾಯ
ಭಾರತೀಯ ಹವಾಮಾನ ಇಲಾಖೆ (IMD) ಸೆಪ್ಟೆಂಬರ್ 25ರಂದು ಸಿಕ್ಕಿಂನಲ್ಲಿ ಅತ್ಯಂತ ಭಾರೀ ಮಳೆ ಹಾಗೂ ಸೆಪ್ಟೆಂಬರ್ 26ರಂದು ಭಾರೀ ಮಳೆ ಸುರಿಯುವ ಮುನ್ಸೂಚನೆ ನೀಡಿದೆ. ಈಗಾಗಲೇ ಭೂಭಾಗ ಅಸ್ಥಿರವಾಗಿರುವ ರಿಂಬಿ ಪ್ರದೇಶದಲ್ಲಿ ಮುಂದಿನ ಮಳೆಯಿಂದ ಮತ್ತಷ್ಟು ಭೂಕುಸಿತ ಸಂಭವಿಸುವ ಆತಂಕವನ್ನು ಇದು ಹೆಚ್ಚಿಸಿದೆ.
ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ ಸಿಂಗ್ ತಮಾಂಗ್ ಅವರು ರಿಂಬಿಯ ಪರಿಸ್ಥಿತಿ ಕುರಿತು ಕಳವಳ ವ್ಯಕ್ತಪಡಿಸಿದ್ದು, ಸಂತ್ರಸ್ತರೊಂದಿಗೆ ಸರ್ಕಾರ ನಿಲ್ಲಲಿದೆ ಎಂದು ಹೇಳಿದ್ದಾರೆ. ಪರಿಸ್ಥಿತಿಯ ಮೇಲೆ ನಿರಂತರ ನಿಗಾ ವಹಿಸುವಂತೆ, ಅಧಿಕಾರಿಗಳು ಹೈ ಅಲರ್ಟ್ನಲ್ಲಿ ಇರುವಂತೆ ಹಾಗೂ ಸಾರ್ವಜನಿಕರ ಸುರಕ್ಷತೆಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಸೂಚಿಸಿದ್ದಾರೆ.
ನಿ


ನಿಮ್ಮ ಕಾಮೆಂಟ್ ಬರೆಯಿರಿ