ವಿಡಿಯೋ |“ಭಯೋತ್ಪಾದಕ ದೇಶ ನನಗೆ ಈ ಪ್ರಶ್ನೆ ಕೇಳುತ್ತಿದೆ”: ಕೆಣಕಿದ ಪಾಕ್‌ ಪತ್ರಕರ್ತನಿಗೆ ಮುಖಕ್ಕೆ ಹೊಡೆದಂತೆ ಉತ್ತರಕೊಟ್ಟ ಜೈಶಂಕರ

ನ್ಯೂಯಾರ್ಕ್: ವಿಶ್ವಸಂಸ್ಥೆಯ 81ನೇ ಮಹಾಸಭೆ (UNGA) ಸಭೆಯ ಅಂಗವಾಗಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಾಕಿಸ್ತಾನದ ಪತ್ರಕರ್ತನೊಬ್ಬ ಕೆಣಕಲು ಕೇಳಿದ ಪ್ರಶ್ನೆಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ ಅವರು ಮುಖಕ್ಕೆ ಹೊಡೆದಂತೆ ಖಡಕ್‌ ತಿರುಗೇಟು ನೀಡಿದ್ದಾರೆ.
ಲೈಬೀರಿಯಾದ ವಿದೇಶಾಂಗ ಸಚಿವೆ ಸಾರಾ ಬೈಸೊಲೋ ನ್ಯಾಂಟಿ ಅವರ ಜೊತೆಗೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಪಾಕಿಸ್ತಾನದ ಪತ್ರಕರ್ತನೊಬ್ಬ, ಪಾಕಿಸ್ತಾನದಲ್ಲಿನ ಭಯೋತ್ಪಾದನೆಗೆ ಭಾರತವೇ ಬೆಂಬಲ ಹಾಗೂ ಕುಮ್ಮಕ್ಕು ನೀಡುತ್ತಿದೆ ಎಂದು ಆರೋಪಿಸಿದರು. ಪ್ರಶ್ನೆಯ ರೂಪದಲ್ಲೇ ಆರೋಪ ಮಾಡುತ್ತಾ ಜೈಶಂಕರ ಅವರನ್ನು ಕೆಣಕಲು ಯತ್ನಿಸಿದ್ದಾರೆ.
ಆದರೆ ಕ್ಷಣವೂ ತಡಮಾಡದೆ ಪ್ರತಿಕ್ರಿಯಿಸಿದ ಜೈಶಂಕರ, “ಒಂದು ಭಯೋತ್ಪಾದಕ ದೇಶವೇ ನನಗೆ ಈ ಪ್ರಶ್ನೆಯನ್ನು ಕೇಳುತ್ತಿದೆ” ಎಂದು ತೀಕ್ಷ್ಣವಾಗಿ ಮುಖಂಕ್ಕೆ ಹೊಡೆದಂತೆ ಉತ್ತರಿಸಿದರು. ಅವರ ಈ ಪ್ರತಿಕ್ರಿಯೆ ಸಭೆಯಲ್ಲಿ ಕೆಲ ಕ್ಷಣಗಳ ಕಾಲ ಚರ್ಚೆಗೆ ಕಾರಣವಾಯಿತು.

ಇದೇ ವೇಳೆ ಜೈಶಂಕರ ಜಾಗತಿಕ ನೌಕಾಯಾನ ಮತ್ತು ನಾವಿಕರ (Seafarers) ಸುರಕ್ಷತೆ ಕುರಿತು ಕಳವಳ ವ್ಯಕ್ತಪಡಿಸಿದರು. ಇತ್ತೀಚಿನ ತಿಂಗಳುಗಳಲ್ಲಿ ವಾಣಿಜ್ಯ ಹಡಗುಗಳು ಮತ್ತು ನಾವಿಕರ ಮೇಲೆ ನಡೆದಿರುವ ದಾಳಿಗಳನ್ನು ಉಲ್ಲೇಖಿಸಿದ ಅವರು, ಹಾರ್ಮುಜ್ ಜಲಸಂಧಿ, ಕೆಂಪು ಸಮುದ್ರ (Red Sea) ಹಾಗೂ ಕಪ್ಪು ಸಮುದ್ರ (Black Sea) ಪ್ರದೇಶಗಳಲ್ಲಿ ನಡೆದಿರುವ ಘಟನೆಗಳು ಆತಂಕಕಾರಿ ಎಂದು ಹೇಳಿದರು.
“ಹಿಂಸಾಚಾರ ಮತ್ತು ಮಾನವ ಜೀವಹಾನಿಗೆ ಯಾವುದೇ ಸಮರ್ಥನೆ ಇರಲು ಸಾಧ್ಯವಿಲ್ಲ. ಸರಳವಾಗಿ ಹೇಳುವುದಾದರೆ, ಇಂತಹ ದಾಳಿಗಳು ತಕ್ಷಣ ನಿಲ್ಲಬೇಕು” ಎಂದು ಅವರು ಒತ್ತಿ ಹೇಳಿದರು.
ಭಾರತವು ಜಗತ್ತಿನ ಪ್ರಮುಖ ನಾವಿಕರನ್ನು ಒದಗಿಸುವ ರಾಷ್ಟ್ರವಾಗಿದ್ದು, ಅತಿದೊಡ್ಡ ಹಡಗು ನೋಂದಣಿ ವ್ಯವಸ್ಥೆ ಹೊಂದಿರುವ ಲೈಬೀರಿಯಾದೊಂದಿಗೆ ಕೈಜೋಡಿಸಿದೆ ಎಂದು ಜೈಶಂಕರ ತಿಳಿಸಿದರು. ನಾವಿಕರ ಸುರಕ್ಷತೆಗಾಗಿ ಸಮಾನ ಹಿತಾಸಕ್ತಿಯುಳ್ಳ ದೇಶಗಳು ಮತ್ತು ಪ್ರಮುಖ ಹಡಗು ಮಾಲೀಕರನ್ನು ಒಗ್ಗೂಡಿಸುವ ಪ್ರಯತ್ನ ನಡೆಯುತ್ತಿದೆ ಎಂದರು.

ನಾವಿಕರು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆಯೂ ಅವರು ಗಮನ ಸೆಳೆದರು. ಹಡಗುಗಳಲ್ಲೇ ದೀರ್ಘಕಾಲ ಉಳಿಯಬೇಕಾಗುವುದು, ಸಿಬ್ಬಂದಿ ಬದಲಾವಣೆಯಲ್ಲಿ ವಿಳಂಬ, ತಾಯ್ನಾಡಿಗೆ ಮರಳಲು ಆಗದಿರುವುದು, ಕುಟುಂಬಗಳಿಂದ ದೂರವಿರುವುದು ಹಾಗೂ ಮಾನಸಿಕ ಒತ್ತಡ ಅನುಭವಿಸುವಂತಹ ಸಮಸ್ಯೆಗಳು ಹೆಚ್ಚುತ್ತಿವೆ ಎಂದು ಹೇಳಿದರು.
ಇದಕ್ಕೂ ಮುನ್ನ ವಿಶ್ವಸಂಸ್ಥೆಯ ಮಹಾಸಭೆಯ ಅಂಗವಾಗಿ ಜೈಶಂಕರ ಹಾಗೂ ಲೈಬೀರಿಯಾದ ವಿದೇಶಾಂಗ ಸಚಿವೆ ಸಾರಾ ಬೈಸೊಲೋ ನ್ಯಾಂಟಿ ಅವರು ‘ಶಿಪ್ಪಿಂಗ್ ಮತ್ತು ನಾವಿಕರ ಸುರಕ್ಷತೆ ಹಾಗೂ ಭದ್ರತೆ ಕುರಿತ ಸ್ನೇಹಿತರ ಗುಂಪು’ (Group of Friends on Safety and Security of Shipping and Seafarers) ಉದ್ಘಾಟನಾ ಸಭೆಯ ಸಹ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಜೈಶಂಕರ, ಕಳೆದ ಕೆಲವು ತಿಂಗಳುಗಳಲ್ಲಿ ಪರ್ಷಿಯನ್ ಕೊಲ್ಲಿ, ಕೆಂಪು ಸಮುದ್ರ ಹಾಗೂ ಕಪ್ಪು ಸಮುದ್ರ ಸೇರಿದಂತೆ ಹಲವು ಸಮುದ್ರ ಮಾರ್ಗಗಳಲ್ಲಿ ವಾಣಿಜ್ಯ ಹಡಗುಗಳು ಮತ್ತು ನಾವಿಕರ ಮೇಲೆ ಪುನರಾವರ್ತಿತ ದಾಳಿಗಳು ನಡೆದಿವೆ ಎಂದು ಹೇಳಿದರು.
ಈ ದಾಳಿಗಳು ಜಾಗತಿಕ ಸಮುದ್ರ ವಾಣಿಜ್ಯಕ್ಕೆ ಅಡ್ಡಿಯಾಗಿರುವುದಲ್ಲದೆ, ಭಾರತೀಯರು ಸೇರಿದಂತೆ ಹಲವು ನಿರಪರಾಧಿಗಳ ಜೀವಹಾನಿಗೂ ಕಾರಣವಾಗಿವೆ ಎಂದು ಅವರು ತಿಳಿಸಿದರು.
ಸಮುದ್ರ ಮಾರ್ಗಗಳ ಸುರಕ್ಷತೆಯನ್ನು ಖಾತ್ರಿಪಡಿಸಲು ಹಾಗೂ ಇಂತಹ ದಾಳಿಗಳನ್ನು ತಡೆಯಲು ರಾಷ್ಟ್ರಗಳ ನಡುವೆ ಇನ್ನಷ್ಟು ಬಲಿಷ್ಠ ಮತ್ತು ನಿಕಟ ಅಂತರರಾಷ್ಟ್ರೀಯ ಸಹಕಾರ ಅಗತ್ಯವಾಗಿದೆ ಎಂದು ಜೈಶಂಕರ ಒತ್ತಿ ಹೇಳಿದರು.

ಪ್ರಮುಖ ಸುದ್ದಿ :-   ಮೋದಿ ಜತೆ ಮಹಿಳೆಯ ಮಾರ್ಫ್‌ ಫೋಟೊ ವಿವಾದ; ಸಿಜೆಪಿ ನಾಯಕರ ವಿರುದ್ಧದ ಅರ್ಜಿ ತುರ್ತು ವಿಚಾರಣೆಗೆ ದೆಹಲಿ ಹೈಕೋರ್ಟ್‌ ಒಪ್ಪಿಗೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement