ದುಬೈ : ದುಬೈಯಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದ ಸಹ ಪೈಲಟ್ ಹಮಾಮ್ ಅಲ್‌ಹಮ್ಮಾಮಿ ಕಾಕ್‌ಪಿಟ್‌ನಲ್ಲಿದ್ದ ‘ಕ್ರ್ಯಾಶ್ ಆ್ಯಕ್ಸ್’ (ತುರ್ತು ಕೊಡಲಿ) ಬಳಸಿ ಭಾರತೀಯ ಮೂಲದ ‘ಹೀರೋ’ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಮೇಲೆ ಹಲ್ಲೆ ನಡೆಸಿದ್ದು, ಇದು “ಭಯೋತ್ಪಾದಕ ದಾಳಿ” ಎಂದು ಸಂಯುಕ್ತ ಅರಬ್ ಎಮಿರೇಟ್ಸ್ (ಯುಎಇ) ಅಭಿಯೋಜಕರು ಶನಿವಾರ ದೃಢಪಡಿಸಿದ್ದಾರೆ.
ಅಲ್‌ಹಮ್ಮಾಮಿ ವಿಮಾನದ ನಿಯಂತ್ರಣವನ್ನು ತನ್ನ ವಶಕ್ಕೆ ಪಡೆಯಲು ಯತ್ನಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ನಿಯಮಾವಳಿಗಳ ಪ್ರಕಾರ, ಪ್ರತಿಯೊಂದು ವಾಣಿಜ್ಯ ವಿಮಾನದಲ್ಲೂ ‘ಕ್ರ್ಯಾಶ್ ಆ್ಯಕ್ಸ್’ ಕಡ್ಡಾಯವಾಗಿದ್ದು, ಅಪಘಾತ ಅಥವಾ ಇತರೆ ತುರ್ತು ಸಂದರ್ಭಗಳಲ್ಲಿ ಬಳಕೆಗಾಗಿ ಅದನ್ನು ಕಾಕ್‌ಪಿಟ್‌ನಲ್ಲಿ ಇರಿಸಲಾಗುತ್ತದೆ. 25 ವರ್ಷಗಳ ಹಿಂದೆ ಅಮೆರಿಕದಲ್ಲಿ ನಡೆದ 9/11 ಉಗ್ರ ದಾಳಿಗಳ ನಂತರ ಈ ಕೊಡಲಿಗಳನ್ನು ಪ್ರಯಾಣಿಕರ ವಿಭಾಗದಿಂದ ಕಾಕ್‌ಪಿಟ್‌ಗೆ ಸ್ಥಳಾಂತರಿಸಲಾಗಿತ್ತು.
ಈ ಘಟನೆಯಲ್ಲಿ ಅಲ್‌ಹಮ್ಮಾಮಿ ಒಬ್ಬನೇ ಕಾರ್ಯನಿರ್ವಹಿಸಿದ್ದಾನೆಯೇ ಅಥವಾ ಯಾವುದೇ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದಾನೆಯೇ ಎಂಬುದನ್ನು ಪತ್ತೆಹಚ್ಚಲು ತನಿಖೆ ಮುಂದುವರಿದಿದೆ.
ಬುಧವಾರ ಸಂಭವಿಸಿದ ಈ ಭೀಕರ ಘಟನೆಯಲ್ಲಿ, 24 ಮಕ್ಕಳನ್ನು ಒಳಗೊಂಡಂತೆ 170ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಫ್ಲೈದುಬೈ ವಿಮಾನವನ್ನು ಅಲ್‌ಹಮ್ಮಾಮಿ ನಾಶ ಮಾಡಲು ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ. ಆತನನ್ನು ತಡೆಯಲು ಮುಂದಾದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಮೇಲೆ ಆತ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
ಆ ಸಂದರ್ಭದಲ್ಲಿ ಸುಮಾರು 34,000 ಅಡಿ ಎತ್ತರದಲ್ಲಿ ಹಾರುತ್ತಿದ್ದ ಬೋಯಿಂಗ್ 737 ವಿಮಾನವು ಪ್ರತಿ ನಿಮಿಷಕ್ಕೆ ಸುಮಾರು 23,000 ಅಡಿಗಳ ವೇಗದಲ್ಲಿ ಕೆಳಕ್ಕೆ ಕುಸಿಯಲು ಆರಂಭಿಸಿತ್ತು. ವಿಮಾನವು ಸುಮಾರು 15,600 ಅಡಿ ಎತ್ತರ ತಲುಪುವವರೆಗೂ ಅಪಾಯಕಾರಿ ರೀತಿಯಲ್ಲಿ ಕುಸಿದಿತ್ತು ಎಂದು ವರದಿಗಳು ತಿಳಿಸಿವೆ.
ಗಂಭೀರವಾಗಿ ಗಾಯಗೊಂಡಿದ್ದರೂ ಕ್ಯಾಪ್ಟನ್ ಮಚ್ಚಾರ್ ಕಾಕ್‌ಪಿಟ್ ಬಾಗಿಲನ್ನು ತೆರೆಯುವಲ್ಲಿ ಯಶಸ್ವಿಯಾಗಿದ್ದರು. ಇದರಿಂದ ವಿಮಾನದ ಸಿಬ್ಬಂದಿ ಹಾಗೂ ಪ್ರಯಾಣಿಕರು ಒಳಗೆ ಪ್ರವೇಶಿಸಿ ದಾಳಿಕೋರನನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದರು.
ವಿಮಾನದೊಳಗಿನ ವಿಡಿಯೊ ದೃಶ್ಯಗಳಲ್ಲಿ ಗೊಂದಲದ ವಾತಾವರಣ ಕಂಡುಬಂದಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದ ಕ್ಯಾಪ್ಟನ್ ಮಚ್ಚಾರ್ ತಮ್ಮ ಸಹ ಪೈಲಟ್ ತಮಗೆ ಹಲ್ಲೆ ನಡೆಸಿದ್ದಾನೆ ಎಂದು ಹೇಳುತ್ತಿರುವುದು ದಾಖಲಾಗಿದೆ.
ಈ ವೇಳೆ ವಿಮಾನದಲ್ಲಿದ್ದ ಒಬ್ಬ ದಂತವೈದ್ಯರು ಕ್ಯಾಪ್ಟನ್ ಮಚ್ಚಾರ್ ಅವರಿಗೆ ಜೀವ ರಕ್ಷಕ ಪ್ರಾಥಮಿಕ ಚಿಕಿತ್ಸೆ ನೀಡಿದರು. ಮತ್ತೊಂದೆಡೆ ಕರ್ತವ್ಯದಲ್ಲಿರದ ಇಬ್ಬರು ಪರಿಹಾರ ಪೈಲಟ್‌ಗಳು ವಿಮಾನದ ನಿಯಂತ್ರಣ ವಹಿಸಿಕೊಂಡು ಅದನ್ನು ಸೌದಿ ಅರೇಬಿಯಾದತ್ತ ತಿರುಗಿಸಿದರು. ಬಳಿಕ ವಿಮಾನವನ್ನು ಸುರಕ್ಷಿತವಾಗಿ ಅಲ್ಲಿಳಿಸಲಾಯಿತು.
ಇದೀಗ ಸಹ ಪೈಲಟ್ ಹಮಾಮ್ ಅಲ್‌ಹಮ್ಮಾಮಿ ಕುರಿತು ಮತ್ತಷ್ಟು ಆತಂಕಕಾರಿ ಮಾಹಿತಿಗಳು ಬೆಳಕಿಗೆ ಬಂದಿವೆ. ಉಗ್ರವಾದಿ ವಿಚಾರಧಾರೆ ಅಳವಡಿಸಿಕೊಂಡಿದ್ದಾನೆ ಎಂಬ ಅನುಮಾನದ ಹಿನ್ನೆಲೆಯಲ್ಲಿ ಆತನಿಗೆ ಓಮನ್‌ನಲ್ಲಿ ವಿಮಾನ ಹಾರಿಸುವುದನ್ನು ನಿಷೇಧಿಸಲಾಗಿತ್ತು ಎಂದು ವರದಿಗಳು ಹೇಳಿವೆ.
2024ರಲ್ಲಿ ಓಮನ್ ಏರ್‌ನಲ್ಲಿ ಸಹ ಪೈಲಟ್ ತರಬೇತುದಾರನಾಗಿ ಕೆಲಸ ಮಾಡುತ್ತಿದ್ದಾಗ ಆತನ ಬಳಿ ಉಗ್ರವಾದಕ್ಕೆ ಸಂಬಂಧಿಸಿದ ವಸ್ತುಗಳು ಪತ್ತೆಯಾಗಿದ್ದವು ಎನ್ನಲಾಗಿದೆ. ಆದಾಗ್ಯೂ, ನಂತರ ಆತನನ್ನು ಆಡಳಿತಾತ್ಮಕ ಹುದ್ದೆಯಲ್ಲಿ ಮುಂದುವರಿಯಲು ಅವಕಾಶ ನೀಡಲಾಗಿತ್ತು. 2025ರ ಫೆಬ್ರವರಿಯಲ್ಲಿ ಆತ ಆ ಉದ್ಯೋಗ ತೊರೆದು, ಅದೇ ವರ್ಷದ ಜೂನ್‌ನಲ್ಲಿ ರಾಯಲ್ ಏರ್ ಮರೋಕ್‌ಗೆ ಸೇರಿದ್ದ. ಆದರೆ 2026ರ ಜನವರಿಯಲ್ಲಿ ಆ ಕೆಲಸವನ್ನೂ ಬಿಟ್ಟಿದ್ದಾನೆ.
ಈ ಎಲ್ಲ ಹಿನ್ನೆಲೆಯ ನಡುವೆಯೂ ಫ್ಲೈದುಬೈ ಸಂಸ್ಥೆ ಅಲ್‌ಹಮ್ಮಾಮಿಯನ್ನು ನೇಮಕ ಮಾಡಿಕೊಂಡಿತ್ತು. ಘಟನೆ ನಡೆಯುವ ಮುನ್ನ ಆತ ಸುಮಾರು ಎಂಟು ತಿಂಗಳುಗಳ ಕಾಲ ಫ್ಲೈದುಬೈಯಲ್ಲಿ ಕಾರ್ಯನಿರ್ವಹಿಸಿದ್ದ. ಇದರ ಪರಿಣಾಮವಾಗಿ ಸಂಯುಕ್ತ ಅರಬ್ ಎಮಿರೇಟ್ಸ್ ಮತ್ತು ಇಸ್ರೇಲ್ ನಡುವಿನ ಸೂಕ್ಷ್ಮ ವಿಮಾನ ಮಾರ್ಗದಲ್ಲಿ ಹಾರಾಟ ನಡೆಸುವ ಅವಕಾಶವೂ ಆತನಿಗೆ ದೊರಕಿತ್ತು.
ಕೆಲವು ವರದಿಗಳ ಪ್ರಕಾರ, ಅಲ್‌ಹಮ್ಮಾಮಿ ಫ್ಲೈದುಬೈ ವಿಮಾನವನ್ನು ಇಸ್ರೇಲ್‌ನಲ್ಲಿ ಪತನಗೊಳಿಸುವ ಉದ್ದೇಶ ಹೊಂದಿದ್ದ ಎನ್ನುವ ಶಂಕೆಯೂ ವ್ಯಕ್ತವಾಗಿದೆ. ಈ ಎಲ್ಲ ಆರೋಪಗಳ ನಿಜಾಸತ್ಯತೆ ಹಾಗೂ ಘಟನೆಯ ಹಿಂದಿನ ಉದ್ದೇಶಗಳ ಕುರಿತು ತನಿಖಾ ಸಂಸ್ಥೆಗಳು ಸಮಗ್ರ ತನಿಖೆ ನಡೆಸುತ್ತಿವೆ.


ನಿಮ್ಮ ಕಾಮೆಂಟ್ ಬರೆಯಿರಿ