ಅಬುಧಾಬಿ: ಫ್ಲೈದುಬೈ ವಿಮಾನದ ಕಾಕ್‌ಪಿಟ್‌ನಲ್ಲಿ ಭಾರತೀಯ ಮೂಲದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಮೇಲೆ ವಿಮಾನದ ಒಮಾನಿ ಸಹ ಪೈಲಟ್ ಹಮಾಮ್ ಅಲ್-ಹಮ್ಮಾಮಿ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಹೊಸ ವೈದ್ಯಕೀಯ ವಿವರಗಳು ಹೊರಬಿದ್ದಿದ್ದು, ಈ ದಾಳಿಯಿಂದ ಮಚ್ಚಾರ್ ಅವರ ತಲೆಬುರುಡೆ (ಸ್ಕಲ್) ಮುರಿದಿರುವುದು ಹಾಗೂ ತಲೆ ಮತ್ತು ಕೈಗೆ ಗಂಭೀರ ಗಾಯಗಳಾಗಿರುವುದಾಗಿ ತಿಳಿದುಬಂದಿದೆ.
ಹೊರಬರುತ್ತಿರುವ ಮಾಹಿತಿಯ ಪ್ರಕಾರ, ಆರಂಭದಲ್ಲಿ ತಿಳಿದಿದ್ದಕ್ಕಿಂತ ಈ ದಾಳಿ ಬಹಳ ಹೆಚ್ಚು ತೀವ್ರವಾಗಿತ್ತು. ವಿಮಾನದ ನಿಯಂತ್ರಣದಲ್ಲಿದ್ದ ಕ್ಯಾಪ್ಟನ್ ಮಚ್ಚಾರ್ ಅವರನ್ನು ಅಂಗವಿಕಲಗೊಳಿಸುವ ಅಥವಾ ಕೊಲ್ಲುವ ಉದ್ದೇಶವೇ ಸಹ ಪೈಲಟ್‌ಗೆ ಇದ್ದಿರಬಹುದೆಂಬ ಅನುಮಾನಗಳು ವ್ಯಕ್ತವಾಗಿವೆ.
ವರದಿಗಳ ಪ್ರಕಾರ, ಕೊಡಲಿ ದಾಳಿಯಿಂದ ಸ್ಮಿತ್ ಮಚ್ಚಾರ್ ಅವರ ತಲೆಬುರುಡೆ ಮುರಿದಿದ್ದು, ಆ ಹೊಡೆತವು ಅವರ ದೃಷ್ಟಿನರಗಳ (ಆಪ್ಟಿಕ್ ನರಗಳು) ಮೇಲೂ ಪರಿಣಾಮ ಬೀರಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಜೊತೆ ನಡೆದ ಇತ್ತೀಚಿನ ಸಂಭಾಷಣೆಯಲ್ಲಿ ಮಚ್ಚಾರ್, “ನಾನು ಅವನನ್ನು ತಡೆಯಲು ಪ್ರಯತ್ನಿಸಿದೆ. ಆದರೆ ಆರಂಭಿಕ ಹೊಡೆತಗಳ ನಂತರ ನನಗೆ ಬಹುತೇಕ ಏನೂ ಕಾಣಿಸುತ್ತಿರಲಿಲ್ಲ. ಎಲ್ಲವೂ ಮಸುಕಾಗಿ ಕಾಣಿಸುತ್ತಿತ್ತು” ಎಂದು ಹೇಳಿದ್ದರು.
ಈ ಬೆಳವಣಿಗೆಗಳ ಬಗ್ಗೆ ಮಾಹಿತಿ ಹೊಂದಿರುವ ಮೂಲಗಳ ಪ್ರಕಾರ, ಫ್ಲೈದುಬೈ ವಿಮಾನ ಸೌದಿ ಅರೇಬಿಯಾದಲ್ಲಿ ತುರ್ತು ಭೂಸ್ಪರ್ಶ ಮಾಡಿದಾಗ ಮಚ್ಚಾರ್ ಅವರ ತಲೆ ಮತ್ತು ಕೈಗೆ ಗಂಭೀರ ಗಾಯಗಳಾಗಿದ್ದವು. ಸೌದಿ ಅಧಿಕಾರಿಗಳು ಮೊದಲು ಅವರ ತಲೆಬುರುಡೆ ಮುರಿತಕ್ಕೆ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಅವರನ್ನು ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ (ಯುಎಇ) ಕಳುಹಿಸಿದ್ದರು.
ಈ ಗಾಯಗಳು ಕ್ಯಾಪ್ಟನ್ ಮಚ್ಚಾರ್ ಅವರ ನೆನಪಿನ ಶಕ್ತಿಯ ಮೇಲೂ ಪರಿಣಾಮ ಬೀರಿವೆ. “ಈಗಲೂ ನನ್ನ ನೆನಪುಗಳು ತುಣುಕು-ತುಣುಕಾಗಿ ಮಾತ್ರ ಇವೆ. ಆದರೆ ಆ ಸಮಯದ ಬಗ್ಗೆ ನನಗೆ ನೆನಪಿರುವುದು ಇಷ್ಟೇ” ಎಂದು ಅವರು ನೆತನ್ಯಾಹು ಅವರಿಗೆ ತಿಳಿಸಿದ್ದರು.
ಮೂಲಗಳ ಪ್ರಕಾರ, ಮಚ್ಚಾರ್ ಅವರು ತೀವ್ರ ತಲೆನೋವಿನಿಂದ ಬಳಲುತ್ತಿದ್ದು, ಅವರಿಗೆ ಹೆಚ್ಚಿನ ಪ್ರಮಾಣದ ನಿದ್ರಾಜನಕ ಔಷಧಿಗಳು ಮತ್ತು ನೋವು ನಿವಾರಕ ಔಷಧಿಗಳನ್ನು ನೀಡಲಾಗುತ್ತಿದೆ. ಅಲ್ಲದೆ ಅವರ ನರಮಂಡಲದ ಸ್ಥಿತಿಯನ್ನು ಪರಿಶೀಲಿಸಲು ನರವೈಜ್ಞಾನಿಕ ಮೌಲ್ಯಮಾಪನವೂ (ನ್ಯೂರೋಲಾಜಿಕಲ್ ಅಸೆಸ್ಮೆಂಟ್) ನಡೆಯುತ್ತಿದೆ. ಅವರು ಇನ್ನೂ ವೈದ್ಯಕೀಯ ನಿಗಾದಲ್ಲಿಯೇ ಇದ್ದಾರೆ.
“ಅವರು ಈಗ ನಡೆಯಲು ಆರಂಭಿಸಿದ್ದಾರೆ. ಕೆಲವು ಹೆಜ್ಜೆಗಳನ್ನು ಇಡುತ್ತಿದ್ದಾರೆ. ಸ್ವಲ್ಪ ಆಹಾರ ಸೇವನೆಯನ್ನೂ ಆರಂಭಿಸಿದ್ದಾರೆ. ಹೀಗಾಗಿ ಅವರು ಚೇತರಿಕೆಯ ಹಾದಿಯಲ್ಲಿದ್ದಾರೆ ಎನ್ನಬಹುದು” ಎಂದು ಅವರ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ಹೊಂದಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಸ್ತುತ ಮಚ್ಚಾರ್ ಅವರಿಗೆ ಅಬುಧಾಬಿಯ ವಿಶೇಷ ವೈದ್ಯಕೀಯ ಕೇಂದ್ರವೊಂದರಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲಿನ ವೈದ್ಯಕೀಯ ಸೇವೆಗಳ ಬಗ್ಗೆ ಅವರ ಕುಟುಂಬವೂ ತೃಪ್ತಿ ವ್ಯಕ್ತಪಡಿಸಿದೆ.
ಟೆಲ್ ಅವೀವ್‌ಗೆ ತೆರಳುತ್ತಿದ್ದ ‘ಫ್ಲೈದುಬೈ’ (flydubai) ವಿಮಾನವನ್ನು ಅಪ್ಪಳಿಸುವ ಸಂಭಾವ್ಯ ಉದ್ದೇಶದಿಂದ ಒಮಾನಿ ಸಹ-ಪೈಲಟ್ ಮಚ್ಚಾರ್ ಮೇಲೆ ನಡೆಸಿದ ‘ಕ್ರಾಶ್ ಆಕ್ಸ್’ (ವಿಮಾನದ ತುರ್ತು ಬಳಕೆಯ ಕೊಡಲಿ) ದಾಳಿಯಿಂದಾಗಿ ತಲೆಬುರುಡೆಯ ಮೂಳೆ ಮುರಿತಕ್ಕೆ (skull fracture) ಒಳಗಾಗಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿದ ವರದಿಗಳು ತಿಳಿಸಿವೆ. ಈ ವಿಮಾನದಲ್ಲಿ 170ಕ್ಕೂ ಹೆಚ್ಚು ಪ್ರಯಾಣಿಕರು ಮತ್ತು ಸಿಬ್ಬಂದಿ ಇದ್ದರು
38 ವರ್ಷದ ಪೈಲಟ್, ತೀವ್ರ ನೋವು ಮತ್ತು ರಕ್ತಸ್ರಾವದ ನಡುವೆಯೂ ಹೋರಾಡಿ ಕಾಕ್‌ಪಿಟ್‌ನ ಬಾಗಿಲನ್ನು ತೆರೆಯುವಲ್ಲಿ ಯಶಸ್ವಿಯಾದರು. ಇದರಿಂದಾಗಿ ಸಿಬ್ಬಂದಿ ಮತ್ತು ಪ್ರಯಾಣಿಕರು ಒಳಗೆ ನುಗ್ಗಿ, ಸಹ-ಪೈಲಟ್ ಅನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಮತ್ತು ವಿಮಾನವನ್ನು ಸ್ಥಿರಗೊಳಿಸಲು ಸಹಾಯ ಮಾಡಲು ಸಾಧ್ಯವಾಯಿತು. ನಂತರ, ವಿಮಾನವು ಸೌದಿ ಅರೇಬಿಯಾದ ತಬುಕ್‌ನಲ್ಲಿರುವ ಪ್ರಿನ್ಸ್ ಸುಲ್ತಾನ್ ಬಿನ್ ಅಬ್ದುಲಜೀಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತು.
ಮೂಲಗಳ ಪ್ರಕಾರ, ಯುಎಇಯ ತನಿಖಾ ಸಂಸ್ಥೆಗಳು ಮಚ್ಚಾರ್ ಅವರ ಪ್ರಾಥಮಿಕ ಹೇಳಿಕೆಯನ್ನು ದಾಖಲಿಸಿಕೊಂಡಿವೆ.
ಇದರ ನಡುವೆ, ಕ್ಯಾಪ್ಟನ್ ಮಚ್ಚಾರ್ ಮತ್ತೆ ವಿಮಾನ ಹಾರಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಅವರ ದೃಷ್ಟಿ ಸಂಪೂರ್ಣವಾಗಿ ಪುನಃಸ್ಥಾಪನೆಯಾಗುವಂತೆ ಮಾಡಲು ಹಾಗೂ ಭವಿಷ್ಯದಲ್ಲಿ ಪೈಲಟ್ ವೃತ್ತಿಗೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳಲು ವೈದ್ಯರು ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
“ಅವರ ಸಕಾರಾತ್ಮಕ ಮನೋಭಾವವೇ ದೊಡ್ಡ ಶಕ್ತಿ. ಇಷ್ಟೆಲ್ಲ ಕಷ್ಟಗಳ ನಡುವೆಯೂ ಅವರು ನಗುತ್ತಲೇ ಇದ್ದಾರೆ” ಎಂದು ಮೂಲವೊಂದು ತಿಳಿಸಿದೆ. ಗುಜರಾತಿ ಭಾಷೆಯಲ್ಲಿ ‘ಸ್ಮಿತ್’ ಎಂದರೆ ‘ನಗು’ ಎಂಬ ಅರ್ಥವಾಗಿದ್ದು, ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ತಮ್ಮ ಹೆಸರಿಗೆ ತಕ್ಕಂತೆಯೇ ಈ ಸಂಕಷ್ಟದ ಸಂದರ್ಭದಲ್ಲೂ ಧೈರ್ಯ ಮತ್ತು ನಗುವನ್ನು ಉಳಿಸಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.


ನಿಮ್ಮ ಕಾಮೆಂಟ್ ಬರೆಯಿರಿ