ಭಾರತದ ಐಟಿ ಕಂಪನಿಗಳಿಗೆ ಅಮೆರಿಕದಿಂದ ಬಿಗ್ ಶಾಕ್ : ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು

ವಾಷಿಂಗ್ಟನ್: ಭಾರತೀಯ ಐಟಿ ದಿಗ್ಗಜ ಕಂಪನಿಗಳಿಗೆ ಭಾರಿ ಶಾಕ್‌ ನೀಡಿರುವ ಅಮೆರಿಕ ಸರ್ಕಾರ, ಎಚ್‌-1ಬಿ (H-1B) ವೀಸಾ ಹೊಂದಿರುವ ವಿದೇಶಿ ಉದ್ಯೋಗಿಗಳಿಗೆ ಗ್ರೀನ್‌ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡುವ ಪರ್ಮನೆಂಟ್ ಲೇಬರ್ ಸರ್ಟಿಫಿಕೇಶನ್‌ (Permanent Labour Certification Programme–PERM) ಕಾರ್ಯಕ್ರಮದಿಂದ ಹಲವು ಪ್ರಮುಖ ಕಂಪನಿಗಳನ್ನು ಅಮಾನತುಗೊಳಿಸಿದೆ. ಈ ಕಂಪನಿಗಳು ಅಮೆರಿಕನ್ನರ ಉದ್ಯೋಗಾವಕಾಶಗಳನ್ನು ಕಸಿದುಕೊಳ್ಳುತ್ತಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಅಮಾನತುಗೊಂಡಿರುವ ಕಂಪನಿಗಳಲ್ಲಿ ಭಾರತೀಯ ಮೂಲದ ಕಾಗ್ನಿಜೆಂಟ್, ಇನ್ಫೋಸಿಸ್, ಟಿಸಿಎಸ್‌, ವಿಪ್ರೋ, ಎಚ್‌ಸಿಎಲ್‌,  ಕ್ಯಾಪ್‌ಜೆಮಿನಿ, ಮೈಕ್ರೋಸಾಫ್ಟ್ ಮತ್ತು ಅಡೋಬ್‌ ಸೇರಿವೆ. ಅಮೆರಿಕ ಕಾರ್ಮಿಕ ಸಚಿವ ಕೀತ್ ಸೊಂಡರ್ಲಿಂಗ್ ಅವರು ಈ ಕ್ರಮವನ್ನು ಪ್ರಕಟಿಸಿದರು. ಈ ವೇಳೆ ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಹಾಗೂ ಅಮೆರಿಕ ಆ್ಯಂಟಿ-ಫ್ರಾಡ್ ಟಾಸ್ಕ್‌ಫೋರ್ಸ್‌ನ ಮುಖ್ಯಸ್ಥರು ಉಪಸ್ಥಿತರಿದ್ದರು.
“ವಿಶ್ವದ ಅತಿದೊಡ್ಡ ಐಟಿ ಹೊರಗುತ್ತಿಗೆ ಕಂಪನಿಗಳಲ್ಲಿ ಕೆಲವು ಸಂಸ್ಥೆಗಳಾದ ಕಾಗ್ನಿಜೆಂಟ್, ಇನ್ಫೋಸಿಸ್, ಟಾಟಾ, ವಿಪ್ರೋ, ಎಚ್‌ಸಿಎಲ್ ಮತ್ತು ಕ್ಯಾಪ್‌ಜೆಮಿನಿಯನ್ನು ಪರ್ಮನೆಂಟ್ ಲೇಬರ್ ಸರ್ಟಿಫಿಕೇಶನ್‌ ಕಾರ್ಯಕ್ರಮದಿಂದ ಅಮಾನತುಗೊಳಿಸುತ್ತಿದ್ದೇನೆ” ಎಂದು ಸೊಂಡರ್ಲಿಂಗ್ ಪ್ರಕಟಿಸಿದರು.
ಅಮಾನತಿನ ಪರಿಣಾಮವಾಗಿ ಈ ಕಂಪನಿಗಳಿಗೆ ಸಂಬಂಧಿಸಿದ ಯಾವುದೇ ಹೊಸ ಪರ್ಮನೆಂಟ್ ಲೇಬರ್ ಸರ್ಟಿಫಿಕೇಶನ್‌ ಅರ್ಜಿಗಳನ್ನು ಅಮೆರಿಕ ಸರ್ಕಾರ ಸ್ವೀಕರಿಸುವುದಿಲ್ಲ. ಈಗಾಗಲೇ ಸಲ್ಲಿಕೆಯಾಗಿರುವ ಬಾಕಿ ಅರ್ಜಿಗಳ ಪ್ರಕ್ರಿಯೆಯನ್ನೂ ಮುಂದುವರಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
2009ರಿಂದ ಈ ಕಂಪನಿಗಳು ಒಟ್ಟಾಗಿ ಸುಮಾರು 30 ಲಕ್ಷ ವಿದೇಶಿ ಉದ್ಯೋಗಿಗಳಿಗಾಗಿ ಮನವಿ ಸಲ್ಲಿಸಿವೆ. ಅವುಗಳಿಗೆ 2.30 ಲಕ್ಷಕ್ಕೂ ಹೆಚ್ಚು ಎಚ್‌-1ಬಿ ವೀಸಾಗಳ ಅನುಮೋದನೆ ದೊರೆತಿದ್ದು, 1 ಲಕ್ಷಕ್ಕೂ ಹೆಚ್ಚು ಪರ್ಮನೆಂಟ್ ಲೇಬರ್ ಸರ್ಟಿಫಿಕೇಶನ್‌ಗಳು ಮಂಜೂರಾಗಿವೆ ಎಂದು ಸೊಂಡರ್ಲಿಂಗ್ ಹೇಳಿದರು. ಈ ಪ್ರಕ್ರಿಯೆಯಿಂದ ಅಮೆರಿಕದ ಕಾರ್ಮಿಕರಿಗೆ ಸೇರಿದ ನೂರಾರು ಸಾವಿರ ಉದ್ಯೋಗಗಳುನಷ್ಟವಾಗಿದೆ ಎಂಬ ಆರೋಪವನ್ನೂ ಅವರು ಮಾಡಿದರು.
ಪರ್ಮನೆಂಟ್ ಲೇಬರ್ ಸರ್ಟಿಫಿಕೇಶನ್‌ ಕಾರ್ಯಕ್ರಮದ ಮೂಲಕ ಕಂಪನಿಗಳು ವಿದೇಶಿ ಉದ್ಯೋಗಿಗಳನ್ನು ಶಾಶ್ವತ ಉದ್ಯೋಗಕ್ಕೆ ಪ್ರಾಯೋಜಿಸಲು ಹಾಗೂ ಅಮೆರಿಕದಲ್ಲಿ ಶಾಶ್ವತ ನಿವಾಸದ ಹಕ್ಕು ಪಡೆಯುವ ಪ್ರಕ್ರಿಯೆಗೆ ಮುಂದುವರಿಯಲು ಅವಕಾಶವಿದೆ.
ಮೈಕ್ರೋಸಾಫ್ಟ್ ವಿರುದ್ಧ ವ್ಯಾನ್ಸ್ ಗಂಭೀರ ಆರೋಪ
ಮೈಕ್ರೋಸಾಫ್ಟ್‌ ವಿರುದ್ಧವೂ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ತೀವ್ರ ಆರೋಪ ಮಾಡಿದರು. ಈ ವ್ಯವಸ್ಥೆಯನ್ನು ಅತ್ಯಂತ ಹೆಚ್ಚು ದುರುಪಯೋಗಪಡಿಸಿಕೊಂಡಿರುವ ಕಂಪನಿ ಮೈಕ್ರೋಸಾಫ್ಟ್ ಎಂದು ಅವರು ಹೇಳಿದರು.
2025ರಲ್ಲಿ ಮೈಕ್ರೋಸಾಫ್ಟ್ 6,000 ಅಮೆರಿಕನ್ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿತ್ತು. ಅರ್ಹ ಅಮೆರಿಕನ್ ಉದ್ಯೋಗಿಗಳು ಸಿಗುತ್ತಿಲ್ಲ ಎಂದು ಕಂಪನಿ ಪ್ರಮಾಣೀಕರಿಸಿದ್ದರೂ, ಅದೇ ಅವಧಿಯಲ್ಲಿ 6,000ಕ್ಕೂ ಹೆಚ್ಚು ಎಚ್‌-1ಬಿ ವೀಸಾಗಳಿಗೆ ಅನುಮೋದನೆ ಪಡೆದಿತ್ತು. ಅಲ್ಲದೆ, ಕಂಪನಿ 3,682 ಪರ್ಮನೆಂಟ್ ಲೇಬರ್ ಸರ್ಟಿಫಿಕೇಶನ್‌ ಅರ್ಜಿಗಳನ್ನು ಸಲ್ಲಿಸಿತ್ತು. ಈ ಪೈಕಿ ಸುಮಾರು 1,000 ಅರ್ಜಿಗಳು ಕೆಲಸದಿಂದ ತೆಗೆದುಹಾಕಲಾದ ಅಮೆರಿಕನ್ ಉದ್ಯೋಗಿಗಳದ್ದೇ ಹುದ್ದೆಗಳಿಗೆ ಸಂಬಂಧಿಸಿದ್ದವು ಎಂದು ವ್ಯಾನ್ಸ್ ಆರೋಪಿಸಿದರು.
ವಿದೇಶಿ ಉದ್ಯೋಗಿಗಳನ್ನು ಅಮೆರಿಕಕ್ಕೆ ಕರೆತರುವ ಎಚ್‌-1ಬಿ ಕಾರ್ಯಕ್ರಮವು ಅಮೆರಿಕದಲ್ಲಿ ಲಭ್ಯವಿಲ್ಲದ ಅಥವಾ ಸೂಕ್ತ ಅರ್ಹತೆ ಹೊಂದಿರುವ ಉದ್ಯೋಗಿಗಳು ಸಿಗದ ಹುದ್ದೆಗಳಿಗೆ ಅತ್ಯುತ್ತಮ ಪ್ರತಿಭೆಗಳನ್ನು ನೇಮಿಸಿಕೊಳ್ಳಲು ರೂಪಿಸಲಾಗಿತ್ತು. ಆದರೆ ಈ ವ್ಯವಸ್ಥೆಯನ್ನು ಬಳಸಿಕೊಂಡು ಅಮೆರಿಕನ್ನರ ವೇತನ ಮತ್ತು ಉದ್ಯೋಗಾವಕಾಶಗಳನ್ನು ಕುಗ್ಗಿಸಲಾಗುತ್ತಿದೆ ಎಂದು ವ್ಯಾನ್ಸ್ ಆರೋಪಿಸಿದರು.
‘ವಿದೇಶಿ ಒಪ್ಪಂದದ ಕಾರ್ಮಿಕರು, ವೀಸಾ ಕಾರ್ಖಾನೆಗಳು’
ಎಚ್‌-1ಬಿ ವೀಸಾದಡಿ ನೇಮಕಗೊಳ್ಳುವ ವಿದೇಶಿ ಉದ್ಯೋಗಿಗಳನ್ನು ವ್ಯಾನ್ಸ್ “ವಿದೇಶಿ ಒಪ್ಪಂದದ ಕಾರ್ಮಿಕರು” (foreign indentured servants) ಎಂದು ಕರೆದರು. ಈ ವ್ಯವಸ್ಥೆಯನ್ನು ವ್ಯಾಪಕವಾಗಿ ಬಳಸುತ್ತಿರುವ ಕಂಪನಿಗಳನ್ನು “ವೀಸಾ ಕಾರ್ಖಾನೆಗಳು” (visa mills) ಎಂದು ಅವರು ಟೀಕಿಸಿದರು.
ಜೆ-1 ವೀಸಾ ಕಾರ್ಯಕ್ರಮದ ಮೂಲಕ ಸಂಶೋಧನಾ ವಿದ್ಯಾರ್ಥಿಗಳನ್ನು ಪ್ರಾಯೋಜಿಸುವ ಅಮೆರಿಕದ ವಿಶ್ವವಿದ್ಯಾಲಯಗಳಲ್ಲಿಯೂ “ಏನೋ ವಿಚಿತ್ರ” ನಡೆಯುತ್ತಿದೆ ಎಂದು ವ್ಯಾನ್ಸ್ ಆರೋಪಿಸಿದರು. “ಈ ವಿಶ್ವವಿದ್ಯಾಲಯಗಳಲ್ಲಿ ಏನೋ ವಿಚಿತ್ರ ನಡೆಯುತ್ತಿದೆ. ಅವರು ಈ ವೀಸಾಗಳನ್ನು ಅಗತ್ಯಕ್ಕಿಂತ ಹೆಚ್ಚು ಬಳಸುತ್ತಿದ್ದಾರೆ. ಅಮೆರಿಕದ ಪದವಿ ವಿದ್ಯಾರ್ಥಿಗಳು ಮತ್ತು ಅಮೆರಿಕದ ಸಂಶೋಧಕರ ವೇತನವನ್ನು ಕಡಿಮೆ ಮಾಡಲು ಈ ವೀಸಾಗಳನ್ನು ಬಳಸಲಾಗುತ್ತಿದೆ” ಎಂದು ವ್ಯಾನ್ಸ್ ಹೇಳಿದರು.
“ಇದು ಅಮೆರಿಕದ ಕಾರ್ಮಿಕರಿಗೆ ಮತ್ತು ಅಮೆರಿಕದ ಜೀವನ ವಿಧಾನಕ್ಕೆ ಮೂಲಭೂತ ಅವಮಾನ. ಅಮೆರಿಕದ ಕಂಪನಿಗಳಿಗೆ ಅತ್ಯುತ್ತಮ ಮತ್ತು ಪ್ರತಿಭಾವಂತ ವ್ಯಕ್ತಿಗಳನ್ನು ನೇಮಿಸಿಕೊಳ್ಳಲು ಅವಕಾಶ ನೀಡುವ ಉದ್ದೇಶದಿಂದ ರೂಪಿಸಲಾದ ವೀಸಾ ಕಾರ್ಯಕ್ರಮಗಳನ್ನು ಅಮೆರಿಕದ ಕಾರ್ಮಿಕರ ವೇತನವನ್ನು ಕುಗ್ಗಿಸಲು ಬಳಸುವುದನ್ನು ನಾವು ಅನುಮತಿಸಲು ಸಾಧ್ಯವಿಲ್ಲ” ಎಂದು ಅವರು ಹೇಳಿದರು.
ಅಮೆರಿಕದ ಉದ್ಯೋಗಗಳ ಜಾಹೀರಾತಿನಲ್ಲೂ ಅಕ್ರಮದ ಆರೋಪ
ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಮುಂದಾಗುವ ಕಂಪನಿಗಳು ಮೊದಲು ಅಮೆರಿಕದಲ್ಲೇ ಆ ಹುದ್ದೆಗಳಿಗೆ ಉದ್ಯೋಗ ಜಾಹೀರಾತು ನೀಡಬೇಕು. ಬಳಿಕ ಸೂಕ್ತ ಅಮೆರಿಕನ್ ಉದ್ಯೋಗಿಗಳು ಸಿಗಲಿಲ್ಲ ಎಂದು ಅಮೆರಿಕ ಕಾರ್ಮಿಕ ಇಲಾಖೆಗೆ ತಿಳಿಸಿ ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಅರ್ಜಿ ಸಲ್ಲಿಸಬೇಕೆಂಬ ನಿಯಮವಿದೆ ಎಂದು ವ್ಯಾನ್ಸ್ ವಿವರಿಸಿದರು.
ಆದರೆ ಕೆಲವು ಕಂಪನಿಗಳು ಸಣ್ಣ ಪಟ್ಟಣದ ಪತ್ರಿಕೆಯಲ್ಲಿ ಉದ್ಯೋಗದ ಜಾಹೀರಾತು ಪ್ರಕಟಿಸಿ, “ನಾವು ನಮ್ಮ ಕಂಪನಿಯಲ್ಲಿನ ಹುದ್ದೆಗೆ ಜಾಹೀರಾತು ನೀಡಿದ್ದೇವೆ. ಆದರೆ ಯಾರೂ ಪ್ರತಿಕ್ರಿಯಿಸಿಲ್ಲ” ಎಂದು ತೋರಿಸುತ್ತವೆ. ಬಳಿಕ ಯಾರೂ ಪ್ರತಿಕ್ರಿಯಿಸದಿರುವುದನ್ನೇ ಕಾರಣವನ್ನಾಗಿ ಮಾಡಿಕೊಂಡು ಅಮೆರಿಕನ್ ಉದ್ಯೋಗಿಗಳ ಬದಲಿಗೆ ವಿದೇಶಿ ಕಾರ್ಮಿಕರನ್ನು ನೇಮಿಸಿಕೊಳ್ಳುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಈ ರೀತಿಯ ಕ್ರಮವು ವಾಸ್ತವವಾಗಿ ಅಮೆರಿಕನ್ ಉದ್ಯೋಗಿಗಳ ಬದಲಿಗೆ “ವಿದೇಶಿ ಒಪ್ಪಂದದ ಕಾರ್ಮಿಕರನ್ನು” ನೇಮಿಸಿಕೊಳ್ಳುವ ಪ್ರಯತ್ನವಾಗಿದೆ ಎಂದು ವ್ಯಾನ್ಸ್ ದೂರಿದರು.
ಅಮೆರಿಕದಲ್ಲಿ ಉದ್ಯೋಗಾವಕಾಶಗಳನ್ನು ರಕ್ಷಿಸುವ ಉದ್ದೇಶದಿಂದ ವಿದೇಶಿ ಕಾರ್ಮಿಕರ ನೇಮಕಾತಿ ಮತ್ತು ಎಚ್‌-1ಬಿ ವೀಸಾ ವ್ಯವಸ್ಥೆಯ ಮೇಲಿನ ನಿಯಂತ್ರಣವನ್ನು ಬಿಗಿಗೊಳಿಸುವ ಕ್ರಮಗಳ ಭಾಗವಾಗಿ ಟ್ರಂಪ್ ಆಡಳಿತದ ಈ ನಿರ್ಧಾರ ಬಂದಿದೆ. ಅಮೆರಿಕದಲ್ಲಿ ಅನುಮೋದನೆಯಾಗುವ ಎಚ್‌-1ಬಿ ವೀಸಾಗಳಲ್ಲಿ ಭಾರತೀಯ ಐಟಿ ವೃತ್ತಿಪರರು ಪ್ರತಿವರ್ಷ ದೊಡ್ಡ ಪಾಲು ಪಡೆಯುತ್ತಾರೆ.
ಈ ಹಿನ್ನೆಲೆಯಲ್ಲಿ ಭಾರತ ಮತ್ತು ಇತರ ದಕ್ಷಿಣ ಏಷ್ಯಾ ದೇಶಗಳಿಂದ ಕಡಿಮೆ ವೆಚ್ಚದಲ್ಲಿ ಪ್ರತಿಭಾವಂತ ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ಕಂಪನಿಗಳಿಗೆ ಅಮೆರಿಕದಲ್ಲಿ ಕಠಿಣ ನಿಯಮಗಳನ್ನು ಜಾರಿಗೊಳಿಸುವ ಕ್ರಮಗಳನ್ನು ಡೊನಾಲ್ಡ್ ಟ್ರಂಪ್ ಆಡಳಿತ ಕೈಗೊಳ್ಳುತ್ತಿದೆ. ಕಳೆದ ತಿಂಗಳು ಎಚ್‌-1ಬಿ ವಲಸೆರಹಿತ ವೀಸಾಗಳಿಗೆ 1 ಲಕ್ಷ ಡಾಲರ್ ಶುಲ್ಕ ವಿಧಿಸುವ ಕಾರ್ಯಕಾರಿ ಆದೇಶವನ್ನು ಮತ್ತೊಂದು ವರ್ಷ ವಿಸ್ತರಿಸಲಾಗಿತ್ತು.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement