ಜರ್ಮನಿಯ ಕಲೋನ್‌ನಲ್ಲಿ ಮಧ್ಯರಾತ್ರಿ ಮಾನವರೂಪಿ ರೋಬೋಟ್ ಒಂದು 16 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ ನೀಡಿದೆ ಎಂಬ ಆರೋಪ ಕೇಳಿಬಂದಿದ್ದು, ಪೊಲೀಸರು ರೋಬೋಟ್ ಅನ್ನು ವಶಕ್ಕೆ ಪಡೆದಿದ್ದಾರೆ. ಬಾಲಕಿಯನ್ನು ಅನುಚಿತವಾಗಿ ಮುಟ್ಟಿ, ಲೈಂಗಿಕ ಚಲನೆಗಳನ್ನು ಹೋಲುವ ರೀತಿಯಲ್ಲಿ ವರ್ತಿಸಿದೆ ಎನ್ನಲಾದ ರೋಬೋಟ್‌ನ ಚಲನವಲನಗಳನ್ನು ಉದ್ದೇಶಪೂರ್ವಕವಾಗಿ ನಿಯಂತ್ರಿಸಲಾಗಿತ್ತೇ ಎಂಬ ಬಗ್ಗೆಯೂ ಪೊಲೀಸರು ಕ್ರಿಮಿನಲ್ ತನಿಖೆ ಆರಂಭಿಸಿದ್ದಾರೆ.
ಜರ್ಮನಿಯ ಕಲಾನ್ ನಗರದ ಜನನಿಬಿಡ ಹೋಹೆನ್‌ಜೊಲ್ಲರ್ನ್‌ರಿಂಗ್ ರಸ್ತೆಯಲ್ಲಿ ಭಾನುವಾರ ರಾತ್ರಿ ಸುಮಾರು 11:45ರ ವೇಳೆಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಡೈಲಿ ಮೇಲ್ ವರದಿಯ ಪ್ರಕಾರ, 16 ವರ್ಷದ ಬಾಲಕಿ ತನ್ನ ಸ್ನೇಹಿತರೊಂದಿಗೆ ಫಾಸ್ಟ್‌ಫುಡ್ ರೆಸ್ಟೋರೆಂಟ್‌ವೊಂದರ ಹೊರಗೆ ನಿಂತಿದ್ದಳು. ಈ ವೇಳೆ ಕೆಂಪು ಮತ್ತು ಚಿನ್ನದ ಬಣ್ಣ ಹೊಂದಿದ್ದ, ಸುಮಾರು 1.2 ಮೀಟರ್ ಎತ್ತರದ ಮಾನವರೂಪಿ ರೋಬೋಟ್‌ನ ಅನುಚಿತ ವರ್ತನೆಯನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ನೇರಪ್ರಸಾರ ಮಾಡಲಾಗಿದೆ ಎನ್ನಲಾಗಿದೆ.
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಕಲೋನ್ ಪೊಲೀಸ್ ವಕ್ತಾರರು, “ರೋಬೋಟ್ 16 ವರ್ಷದ ಬಾಲಕಿಯ ಹಿಂಭಾಗವನ್ನು ಮುಟ್ಟಿ, ಸೊಂಟವನ್ನು ಮುಂದಕ್ಕೆ ತಳ್ಳುವ ಚಲನೆಗಳನ್ನು ಮಾಡಿದೆ ಎಂದು ಆರೋಪಿಸಲಾಗಿದೆ” ಎಂದು ತಿಳಿಸಿದ್ದಾರೆ.
ರೋಬೋಟ್‌ನ ಮಾಲೀಕನಾಗಿರುವ 16 ವರ್ಷದ ಬಾಲಕ ಮತ್ತು ಆತನ 19 ವರ್ಷದ ಸ್ನೇಹಿತ ಘಟನೆ ನಡೆದ ಸಂದರ್ಭದಲ್ಲಿ ದೃಶ್ಯಗಳನ್ನು ಚಿತ್ರೀಕರಿಸಿ, ನಡೆಯುತ್ತಿದ್ದ ಘಟನೆಯ ಕುರಿತು ಕಾಮೆಂಟ್ ಮಾಡುತ್ತಿದ್ದರು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ರೋಬೋಟ್‌ನ ಮಾಲೀಕ ಜರ್ಮನಿಯ ವೇಗ್‌ಬರ್ಗ್‌ನಲ್ಲಿ ವಾಸಿಸುತ್ತಿದ್ದಾನೆ ಎನ್ನಲಾಗಿದೆ. ಆದರೆ, ಈ ಆರೋಪಗಳು ಇನ್ನೂ ಸಾಬೀತಾಗಿಲ್ಲ.
ಘಟನೆಯ ಕುರಿತು ಮಾಹಿತಿ ದೊರೆತ ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಶಂಕಿತರಿಗೆ ಸಂಬಂಧಿಸಿದ ವೋಕ್ಸ್‌ವ್ಯಾಗನ್ ಸೆಡಾನ್ ಕಾರಿನ ಡಿಕ್ಕಿಯಲ್ಲಿ ರೋಬೋಟ್ ಅನ್ನು ಪತ್ತೆಹಚ್ಚಿದ್ದಾರೆ. ಬಳಿಕ ಅದನ್ನು ವಶಕ್ಕೆ ಪಡೆದಿದ್ದು, ಇಬ್ಬರು ಯುವಕರ ಮೊಬೈಲ್ ಫೋನ್‌ಗಳನ್ನೂ ಜಪ್ತಿ ಮಾಡಿದ್ದಾರೆ.
ಲೈಂಗಿಕ ಕಿರುಕುಳದ ಶಂಕೆಯ ಹಿನ್ನೆಲೆಯಲ್ಲಿ ಅಪರಾಧ ತನಿಖಾ ವಿಭಾಗವು ಪ್ರಕರಣದ ಕುರಿತು ಪರಿಶೀಲನೆ ನಡೆಸುತ್ತಿದೆ ಎಂದು ಪೊಲೀಸರು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಘಟನೆ ನಡೆದ ಸಂದರ್ಭದಲ್ಲಿ ರೋಬೋಟ್ ಹೇಗೆ ಕಾರ್ಯನಿರ್ವಹಿಸುತ್ತಿತ್ತು ಎಂಬುದನ್ನು ಪತ್ತೆಹಚ್ಚುವುದು ತನಿಖೆಯ ಪ್ರಮುಖ ಉದ್ದೇಶವಾಗಿದೆ. ಅದರ ಚಲನವಲನಗಳನ್ನು ಯಾರಾದರೂ ದೂರದಿಂದ ನಿಯಂತ್ರಿಸುತ್ತಿದ್ದರೇ ಅಥವಾ ಬೇರೆ ಯಾವುದಾದರೂ ರೀತಿಯಲ್ಲಿ ಅದರ ವರ್ತನೆಯನ್ನು ಉದ್ದೇಶಪೂರ್ವಕವಾಗಿ ಬದಲಾಯಿಸಲಾಗಿತ್ತೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.
ರೋಬೋಟ್‌ಗಳ ಸುರಕ್ಷತೆ ಕುರಿತು ಹೆಚ್ಚುತ್ತಿರುವ ಆತಂಕ
ಕಲೋನ್‌ನಲ್ಲಿ ನಡೆದಿರುವ ಈ ಘಟನೆ, ಸಾರ್ವಜನಿಕ ಸ್ಥಳಗಳು, ತಂತ್ರಜ್ಞಾನ ಪ್ರದರ್ಶನಗಳು ಮತ್ತು ವಾಣಿಜ್ಯ ಉದ್ದೇಶದ ಕಾರ್ಯಕ್ರಮಗಳಲ್ಲಿ ಮಾನವರೂಪಿ ರೋಬೋಟ್‌ಗಳನ್ನು ಬಳಸುವಾಗ ಅವುಗಳ ವರ್ತನೆ ಮತ್ತು ಸುರಕ್ಷತೆಯನ್ನು ಹೇಗೆ ಖಚಿತಪಡಿಸಬೇಕು ಎಂಬ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ.
ರೋಬೋಟ್‌ಗಳ ತಾಂತ್ರಿಕ ವಿನ್ಯಾಸವನ್ನು ಸುಧಾರಿಸುವುದಷ್ಟೇ ಸಾಕಾಗುವುದಿಲ್ಲ ಎಂಬ ಪ್ರಶ್ನೆಯನ್ನು ಈ ಘಟನೆಗಳು ಮುಂದಿಡುತ್ತಿವೆ. ರೋಬೋಟ್‌ನ ವರ್ತನೆಗೆ ಯಾರು ಹೊಣೆಗಾರರು? ಸಾರ್ವಜನಿಕರ ನಡುವೆ ಅವುಗಳನ್ನು ಯಾವ ಷರತ್ತುಗಳ ಅಡಿಯಲ್ಲಿ ಕಾರ್ಯನಿರ್ವಹಿಸಲು ಅನುಮತಿಸಬೇಕು? ಅವುಗಳಿಂದ ಅನಿರೀಕ್ಷಿತ ಘಟನೆಗಳು ಸಂಭವಿಸಿದರೆ ಹೊಣೆಗಾರಿಕೆಯನ್ನು ಹೇಗೆ ನಿರ್ಧರಿಸಬೇಕು? ಎಂಬ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಕಂಡುಕೊಳ್ಳುವ ಅಗತ್ಯವಿದೆ.


ನಿಮ್ಮ ಕಾಮೆಂಟ್ ಬರೆಯಿರಿ