

ಛತ್ತೀಸ್ಗಢ: ಸಾಮಾಜಿಕ ಜಾಲತಾಣಗಳ ಪ್ರಭಾವಕ್ಕೆ ಒಳಗಾಗಿ ತ್ವರಿತವಾಗಿ ಹಣ ಸಂಪಾದಿಸುವ ಉದ್ದೇಶದಿಂದ ನಾಲ್ಕು ವರ್ಷದ ಬಾಲಕನನ್ನು ಕೊಲೆ ಮಾಡಿ, ಆತನ ಕಿಡ್ನಿ (ಮೂತ್ರಪಿಂಡ), ಶ್ವಾಸಕೋಶ ಹಾಗೂ ಕಣ್ಣುಗಳನ್ನು ಕಿತ್ತು ಆನ್ಲೈನ್ನಲ್ಲಿ ಮಾರಾಟ ಮಾಡಲು ಯತ್ನಿಸಿದ ಭೀಕರ ಘಟನೆ ಛತ್ತೀಸ್ಗಢದ ಜಶ್ಪುರ ಜಿಲ್ಲೆಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 27 ವರ್ಷದ ಆರೋಪಿಯನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬಸುದೇವ ಅಲಿಯಾಸ್ ತಂಗ್ನು ಎಂದು ಗುರುತಿಸಲಾಗಿದೆ. ಈತ ತನ್ನ ಸಂಬಂಧಿಯ ನಾಲ್ಕು ವರ್ಷದ ಪುತ್ರ ಜಿತೇಂದ್ರ ರಾಮ ಎಂಬ ಬಾಲಕನನ್ನು ಕೊಲೆ ಮಾಡಿ, ದೇಹದ ಅಂಗಾಂಗಗಳನ್ನು ಕತ್ತರಿಸಿ ತೆಗೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಶ್ಪುರ ಜಿಲ್ಲೆಯ ಲೋಧೆನಾಪಥ ಮಹುವಾ ಗ್ರಾಮದ ಜಮೀನಿನಲ್ಲಿದ್ದ ನೀರು ತುಂಬಿದ ಗುಂಡಿಯಲ್ಲಿ ಚೀಲವೊಂದರೊಳಗೆ ತುಂಬಿ ಎಸೆಯಲಾಗಿದ್ದ ಬಾಲಕನ ಮೃತದೇಹ ಪತ್ತೆಯಾದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ಬಾಲಕ ನವೆಂಬರ್ 5ರಿಂದ ನಾಪತ್ತೆಯಾಗಿದ್ದ. ಈ ಹಿನ್ನೆಲೆಯಲ್ಲಿ ಆತನ ತಂದೆ 36 ವರ್ಷದ ರಾಮ್ಜೀತ್ ರಾಮ್ ಅವರು ಶನಿವಾರ ಸನ್ನಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು ಎಂದು ಜಶ್ಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಎಸ್ಪಿ) ಲಾಲ್ ಉಮೇದ್ ಸಿಂಗ್ ತಿಳಿಸಿದ್ದಾರೆ.
ಕೆಲಸಕ್ಕಾಗಿ ಸುಮಾರು ಒಂದು ವರ್ಷದ ಹಿಂದೆ ರಾಮಜೀತ್ ರಾಮ ಅವರು ಕುಟುಂಬ ಸಮೇತ ಸನ್ನಾ ಗ್ರಾಮಕ್ಕೆ ಬಂದು ನೆಲೆಸಿದ್ದರು. ಆಮಟ್ಚುವಾ ನದಿ ಅಣೆಕಟ್ಟಿನ ಸಮೀಪದ ಗುಡಿಸಲಿನಲ್ಲಿ ಕುಟುಂಬ ವಾಸವಾಗಿತ್ತು. ಆರೋಪಿ ಬಸುದೇವ, ದೂರುದಾರ ರಾಮಜೀತ್ ಅವರ ತಾಯಿಯ ಕಡೆಯ ಸಂಬಂಧಿಯಾಗಿದ್ದು, ಆಗಾಗ ಅವರ ಮನೆಗೆ ಭೇಟಿ ನೀಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ ಕುಟುಂಬದ ಸದಸ್ಯರ ಜೊತೆ ನಾಪತ್ತೆಯಾಗಿದ್ದ ಮಗನಿಗಾಗಿ ಹುಡುಕಾಟ ನಡೆಸುತ್ತಿದ್ದ ತಂದೆಗೆ, ಜೋಳದ ಹೊಲದ ಸಮೀಪ ನೀರು ತುಂಬಿದ್ದ ಗುಂಡಿಯಲ್ಲಿ ಏನೋ ಕಂಡುಬಂದಿದೆ. ಪರಿಶೀಲಿಸಿದಾಗ ಕಂಬಳಿ ಮತ್ತು ರಜಾಯಿಯಲ್ಲಿ ಸುತ್ತಿ, ಚೀಲದೊಳಗೆ ತುಂಬಿ ಭಾಗಶಃ ಮಣ್ಣಿನಿಂದ ಮುಚ್ಚಲಾಗಿದ್ದ ಮಗನ ಮೃತದೇಹ ಪತ್ತೆಯಾಗಿದೆ.ಈ ಸಂಬಂಧ ತನಿಖೆ ಕೈಗೊಂಡ ಪೊಲೀಸರು, ಸಮೀಪದ ಚಲ್ನಿ ಗೋರ್ರಾಪಥ್ ಗ್ರಾಮದ ನಿವಾಸಿ ಬಸುದೇವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.


ತ್ವರಿತ ಹಣ ಗಳಿಸುವ ಆಸೆಯಿಂದ ಕೃತ್ಯ
ವಿಚಾರಣೆ ವೇಳೆ ಆರೋಪಿ ಬಸುದೇವ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಎಸ್ಎಸ್ಪಿ ತಿಳಿಸಿದ್ದಾರೆ. ದಿನಗೂಲಿ ಕೆಲಸದಿಂದ ಬರುತ್ತಿದ್ದ ಆದಾಯದಿಂದ ತೃಪ್ತನಾಗದ ಆತ, ಹೆಚ್ಚಿನ ಹಣ ಸಂಪಾದಿಸುವ ಆಸೆ ಹೊಂದಿದ್ದ ಎನ್ನಲಾಗಿದೆ.
ತ್ವರಿತವಾಗಿ ಹಣ ಗಳಿಸುವ ಮಾರ್ಗಗಳಿಗಾಗಿ ಆರೋಪಿ ಸಾಮಾಜಿಕ ಜಾಲತಾಣಗಳನ್ನು ನಿರಂತರವಾಗಿ ವೀಕ್ಷಿಸುತ್ತಿದ್ದ. ಈ ಸಂದರ್ಭದಲ್ಲಿ ಚಿಕ್ಕ ಮಕ್ಕಳ ಅಂಗಾಂಗಗಳನ್ನು ದೇಹದಿಂದ ಬೇರ್ಪಡಿಸಿ ಮಾರಾಟ ಮಾಡುವ ಆಲೋಚನೆ ಆತನಲ್ಲಿ ಮೂಡಿತ್ತು ಎಂದು ಪೊಲೀಸ್ ವಿಚಾರಣೆಯಲ್ಲಿ ತಿಳಿದುಬಂದಿದೆ.
ನವೆಂಬರ್ 5ರಂದು ಬಾಲಕ ಜಿತೇಂದ್ರನನ್ನು ಪುಸಲಾಯಿಸಿ ತನ್ನೊಂದಿಗೆ ಕರೆದೊಯ್ದಿದ್ದ ಆರೋಪಿ, ವಿವಿಧ ಸ್ಥಳಗಳಿಗೆ ಸುತ್ತಾಡಿಸಿದ್ದಾನೆ. ಬಳಿಕ ಮದ್ಯ ಮತ್ತು ಕೋಳಿ ಮಾಂಸ ಖರೀದಿಸಿ, ಬಾಲಕನಿಗೆ ಮದ್ಯ ಕುಡಿಸಿದ್ದಾನೆ. ಮದ್ಯದ ಅಮಲಿನಿಂದ ಬಾಲಕ ನಿದ್ರೆಗೆ ಜಾರಿದ ಬಳಿಕ ಚಾಕುವಿನಿಂದ ಆತನ ಕತ್ತು ಸೀಳಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಳಿಕ ಬಾಲಕನ ದೇಹವನ್ನು ಸೀಳಿ ಕಿಡ್ನಿ, ಶ್ವಾಸಕೋಶ ಹಾಗೂ ಕಣ್ಣುಗಳನ್ನು ಕತ್ತರಿಸಿ ತೆಗೆದಿದ್ದಾನೆ. ಕಿತ್ತು ತೆಗೆದ ಅಂಗಾಂಗಗಳನ್ನು ಪ್ಲಾಸ್ಟಿಕ್ ಬಕೆಟ್ನಲ್ಲಿ ಸಂಗ್ರಹಿಸಿಟ್ಟಿದ್ದ. ನಂತರ ಬಾಲಕನ ಮೃತದೇಹವನ್ನು ಕಂಬಳಿ ಮತ್ತು ರಜಾಯಿಯಲ್ಲಿ ಸುತ್ತಿ, ಚೀಲದೊಳಗೆ ತುಂಬಿದ್ದಾನೆ. ಬಳಿಕ ಜಮೀನಿನಲ್ಲಿದ್ದ ನೀರು ತುಂಬಿದ ಗುಂಡಿಗೆ ಎಸೆದು, ಅದರ ಮೇಲೆ ಮಣ್ಣು ಹಾಕಿ ಮುಚ್ಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಯುಧಗಳು, ಅಂಗಾಂಗಗಳಿದ್ದ ಬಕೆಟ್ ವಶಕ್ಕೆ
ಆರೋಪಿಯ ವಿಚಾರಣೆಯಲ್ಲಿ ನೀಡಿದ ಮಾಹಿತಿಯ ಆಧಾರದ ಮೇಲೆ ಪೊಲೀಸರು ಕೃತ್ಯಕ್ಕೆ ಬಳಸಲಾಗಿದೆ ಎನ್ನಲಾದ ಆಯುಧಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ಗುಂಡಿಯೊಂದರಲ್ಲಿ ಇರಿಸಲಾಗಿದ್ದ ಪ್ಲಾಸ್ಟಿಕ್ ಬಕೆಟ್ನಲ್ಲಿ ಬಾಲಕನ ದೇಹದಿಂದ ಕತ್ತರಿಸಿ ತೆಗೆದ ಅಂಗಾಂಗಗಳು ಹಾಗೂ ಕೃತ್ಯಕ್ಕೆ ಸಂಬಂಧಿಸಿದ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.



ನಿಮ್ಮ ಕಾಮೆಂಟ್ ಬರೆಯಿರಿ