

ಕಾಸರಗೋಡು: ರಾಷ್ಟ್ರಗೀತೆಯಷ್ಟೇ ಮಹತ್ವ ಹೊಂದಿರುವ ರಾಷ್ಟ್ರೀಯ ಗೀತೆ ವಂದೇ ಮಾತರಂ ಹಾಡುವಿಕೆ ಪೂರ್ಣಗೊಳ್ಳುವ ಮೊದಲೇ ಕೇರಳದ ಆರೋಗ್ಯ ಸಚಿವ ಕೆ. ಮುರಳೀಧರನ್ ವೇದಿಕೆಯಲ್ಲಿ ಕುಳಿತುಕೊಂಡಿರುವುದು ವಿವಾದಕ್ಕೆ ಕಾರಣವಾಗಿದೆ. ಸಚಿವರ ಜೊತೆಗೆ ಜಿಲ್ಲಾಧಿಕಾರಿ, ಸಂಸದರು ಹಾಗೂ ಶಾಸಕರೂ ಕುಳಿತಿದ್ದು, ಈ ದೃಶ್ಯಗಳ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ, ಕೆಲ ನಾಯಕರು ಮತ್ತು ಅಧಿಕಾರಿಗಳು ವಂದೇ ಮಾತರಂ ಪೂರ್ಣಗೊಳ್ಳುವವರೆಗೂ ಎದ್ದು ನಿಂತಿದ್ದರು.
ಕೇರಳದ ಕಾಸರಗೋಡು ಜಿಲ್ಲೆಯ ಸರ್ಕಾರಿ ಮಲ್ಲೇರಿಯಾ ಕುಟುಂಬ ಆರೋಗ್ಯ ಕೇಂದ್ರದಲ್ಲಿ ನೂತನ ಪ್ರಯೋಗಾಲಯದ ಉದ್ಘಾಟನಾ ಸಮಾರಂಭದಲ್ಲಿ ಈ ಘಟನೆ ನಡೆದಿದೆ. ಕಾರ್ಯಕ್ರಮದ ವೇಳೆ ವಂದೇ ಮಾತರಂ ಹಾಡುತ್ತಿದ್ದಾಗ, ಹಾಡು ಪೂರ್ಣಗೊಳ್ಳುವ ಮೊದಲೇ ಆರೋಗ್ಯ ಸಚಿವರು ವೇದಿಕೆಯಲ್ಲಿದ್ದ ತಮ್ಮ ಆಸನದಲ್ಲಿ ಕುಳಿತುಕೊಂಡಿರುವುದು ಕಂಡುಬಂದಿದೆ. ಸಚಿವರ ಜೊತೆ ಜಿಲ್ಲಾಧಿಕಾರಿ, ಸಂಸದ, ಶಾಸಕರೂ ಕುಳಿತದ್ದು ಕಂಡುಬಂದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊದಲ್ಲಿ ಕಾಸರಗೋಡು ಜಿಲ್ಲಾಧಿಕಾರಿ, ಕಾಸರಗೋಡು ಸಂಸದ ರಾಜಮೋಹನ ಉನ್ನಿತ್ತನ್ ಹಾಗೂ ಶಾಸಕ ಕೆ. ಮಹಿನ್ ಅವರು ಸಚಿವರ ಪಕ್ಕದಲ್ಲೇ ಕುಳಿತಿರುವುದು ಕಂಡುಬಂದಿದೆ.
ವರದಿಗಳ ಪ್ರಕಾರ, ವಂದೇ ಮಾತರಂನ ಮೊದಲ ಎರಡು ಚರಣಗಳು ಮುಗಿದ ಬಳಿಕ ಸಚಿವರು ಮತ್ತು ಅವರೊಂದಿಗೆ ಇದ್ದವರು ಕುಳಿತುಕೊಳ್ಳಲು ಮುಂದಾಗಿದ್ದರು. ಆದರೆ, ಹಾಡುಗಾರಿಕೆ ಮುಂದುವರಿದ ಹಿನ್ನೆಲೆಯಲ್ಲಿ ಬಳಿಕ ಅವರು ತಮ್ಮ ಆಸನಗಳಲ್ಲಿ ಕುಳಿತುಕೊಂಡಿದ್ದಾರೆ. ಈ ಸಂದರ್ಭದಲ್ಲಿ ವಂದೇ ಮಾತರಂ ಹಾಡುತ್ತಿದ್ದರೂ ಸಚಿವರು ತಮ್ಮ ಸಮೀಪ ಕುಳಿತಿದ್ದವರೊಂದಿಗೆ ಮಾತನಾಡುತ್ತಿರುವ ದೃಶ್ಯವೂ ವಿಡಿಯೊದಲ್ಲಿದೆ.
ಕೊನೆಯವರೆಗೂ ಎದ್ದು ನಿಂತ ಶಾಸಕ, ಕಾಂಗ್ರೆಸ್ ಜಿಲ್ಲಾಧ್ಯಕ್ಷ
ಇದೇ ವೇಳೆ ಶಾಸಕ ಕೆ. ನೀಲಕಂಠನ್ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ (ಡಿಸಿಸಿ) ಅಧ್ಯಕ್ಷ ಪಿ.ಕೆ. ಫೈಸಲ್ ಅವರು ವಂದೇ ಮಾತರಂ ಸಂಪೂರ್ಣವಾಗಿ ಮುಗಿಯುವವರೆಗೂ ಎದ್ದು ನಿಂತಿದ್ದರು. ಸಚಿವರು ಹಾಗೂ ಇತರರು ಕುಳಿತಿದ್ದರೆ, ಈ ಇಬ್ಬರು ನಾಯಕರು ಮಾತ್ರ ಹಾಡು ಮುಗಿಯುವವರೆಗೂ ಎದ್ದು ನಿಂತಿರುವುದು ವಿಡಿಯೊದಲ್ಲಿ ಕಾಣಿಸಿದೆ.


ಸರ್ಕಾರಿ ಕಾರ್ಯಕ್ರಮಗಳಲ್ಲಿ ವಂದೇ ಮಾತರಂನ ಪೂರ್ಣ ಆವೃತ್ತಿಯನ್ನು ಹಾಡಬೇಕು ಎಂಬ ಕೇಂದ್ರ ಸರ್ಕಾರದ ನಿರ್ದೇಶನದ ಕುರಿತು ದೇಶಾದ್ಯಂತ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ಈ ಘಟನೆ ನಡೆದಿದೆ. ವಂದೇ ಮಾತರಂನ ಮೊದಲ ಎರಡು ಚರಣಗಳನ್ನು ಹಾಡಿದರೆ ಸಾಕು ಎಂಬುದು ಕಾಂಗ್ರೆಸ್ ಪಕ್ಷದ ನಿಲುವಾಗಿದೆ.
ಈ ಹಿಂದೆ ಕೇರಳದಲ್ಲಿ ಸರ್ಕಾರಿ ಕಾರ್ಯಕ್ರಮಗಳಲ್ಲಿ ವಂದೇ ಮಾತರಂನ ಪೂರ್ಣ ಆವೃತ್ತಿಯನ್ನು ಹಾಡುವುದಿಲ್ಲ. ಕೇವಲ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಲಾಗುವುದು ಎಂದು ಸಚಿವ ಮುರಳೀಧರನ್ ಹೇಳಿಕೆ ನೀಡಿದ್ದರು. ಈಗ ಕೇರಳದ ಸರ್ಕಾರಿ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವರು ವಂದೇ ಮಾತರಂ ಪೂರ್ಣಗೊಳ್ಳುವ ಮೊದಲೇ ಕುಳಿತುಕೊಂಡಿರುವ ಘಟನೆ ಮತ್ತೊಂದು ರಾಜಕೀಯ ವಿವಾದಕ್ಕೆ ನಾಂದಿ ಹಾಡಿದೆ.



ನಿಮ್ಮ ಕಾಮೆಂಟ್ ಬರೆಯಿರಿ