

ಭೋಪಾಲ : ಕುಟುಂಬದವರ ಜೊತೆ ಮನೆಯ ಅಂಗಳದಲ್ಲಿ ಬೆಂಕಿ ಕಾಯಿಸುತ್ತ ಕುಳಿತಿದ್ದ ವ್ಯಕ್ತಿಯೊಬ್ಬರಿಗೆ ನೆರೆಮನೆಯಾತ ರಸಗುಲ್ಲಾ ಎಂದು ಹೇಳಿನೀಡಿದ ಸಿಹಿತಿಂಡಿ ಬಾಯಿಗೆ ಹಾಕಿ ಕಚ್ಚಿದ ಕ್ಷಣದಲ್ಲೇ ಸ್ಫೋಟಗೊಂಡಿದ್ದು, ತೀವ್ರವಾಗಿ ಗಾಯಗೊಂಡ ವ್ಯಕ್ತಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಸಿಹಿತಿಂಡಿಯೊಳಗೆ ಕಾಡುಹಂದಿಗಳನ್ನು ಕೊಲ್ಲಲು ಬಳಸುವ ಕಚ್ಚಾ ಸ್ಫೋಟಕವನ್ನು ಅಡಗಿಸಿಟ್ಟಿದ್ದೇ ಈ ದುರಂತಕ್ಕೆ ಕಾರಣ ಎಂಬುದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.
ಈ ಘಟನೆ ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯ ಪಡಾರಿಯಾ ಛಾಂಟಾ ಗ್ರಾಮದಲ್ಲಿ ಮಂಗಳವಾರ (ನ.10) ರಾತ್ರಿ ಸುಮಾರು 8 ಗಂಟೆಗೆ ನಡೆದಿದೆ ಎನ್ನಲಾಗಿದ್ದು, ಮೃತಪಟ್ಟ ವ್ಯಕ್ತಿಯನ್ನು 35 ವರ್ಷದ ರಾಜೇಂದ್ರ ಬರೌತಿಯಾ ಎಂದು ಗುರುತಿಸಲಾಗಿದೆ. ಸ್ಫೋಟಕವನ್ನು ರಸಗುಲ್ಲಾ ಎಂದು ಹೇಳಿ ರಾಜೇಂದ್ರ ಅವರಿಗೆ ನೀಡಿದ ಆರೋಪದ ಮೇಲೆ ಅದೇ ಗ್ರಾಮದ ರಾಮಭಗತ್ ಬರೌತಿಯಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳವಾರ ರಾತ್ರಿ ಊಟ ಮುಗಿಸಿದ ಬಳಿಕ ರಾಜೇಂದ್ರ ಅವರು ತಮ್ಮ ಕುಟುಂಬದವರ ಜೊತೆ ಮನೆಯ ಅಂಗಳದಲ್ಲಿ ಬೆಂಕಿ ಕಾಯಿಸುತ್ತ ಕುಳಿತಿದ್ದರು. ಈ ಸಂದರ್ಭದಲ್ಲಿ ಪಕ್ಕದಲ್ಲೇ ವಾಸಿಸುತ್ತಿದ್ದ ರಾಮಭಗತ್ ಎಂಬಾತ ಬಂದಿದ್ದಾನೆ. ಬಳಿಕ ಇಬ್ಬರೂ ಬೆಂಕಿಯ ಬಳಿ ಕುಳಿತು ಚಳಿ ಕಾಯಿಸುತ್ತ ಮಾತನಾಡುತ್ತಿದ್ದರು.
ಮಾತುಕತೆಯ ನಡುವೆ ರಾಮಭಗತ್, ರಾಜೇಂದ್ರ ಅವರಿಗೆ ತಿನ್ನಲು ಒಂದು ವಸ್ತುವನ್ನು ನೀಡಿ, ಅದು ರಸಗುಲ್ಲಾ ಎಂದು ಹೇಳಿದ್ದಾನೆ. ಅದನ್ನು ಸಿಹಿತಿಂಡಿ ಎಂದು ನಂಬಿದ ರಾಜೇಂದ್ರ ಬಾಯಿಗೆ ಹಾಕಿ ಕಚ್ಚುತ್ತಿದ್ದಂತೆ ಅದು ಸ್ಫೋಟಗೊಂಡಿದೆ. ವಾಸ್ತವವಾಗಿ ಅದು ಕಾಡುಹಂದಿಗಳನ್ನು ಕೊಲ್ಲಲು ಬಳಸುವ ಸ್ಫೋಟಕವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ದಿಂಡೋರಿ ಕೊತ್ವಾಲಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಅವರು, “ರಾಜೇಂದ್ರ ತಮ್ಮ ಕುಟುಂಬದವರ ಜೊತೆ ಮನೆಯ ಅಂಗಳದಲ್ಲಿ ಬೆಂಕಿ ಕಾಯಿಸುತ್ತ ಕುಳಿತಿದ್ದರು. ಆಗ ಪಕ್ಕದಲ್ಲೇ ವಾಸಿಸುತ್ತಿದ್ದ ರಾಮಭಗತ್ ಅಲ್ಲಿಗೆ ಬಂದಿದ್ದ. ಇಬ್ಬರೂ ಬೆಂಕಿಯ ಬಳಿ ಕುಳಿತು ಚಳಿ ಕಾಯಿಸುತ್ತ ಮಾತನಾಡುತ್ತಿದ್ದರು. ಈ ವೇಳೆ ರಾಮಭಗತ್ ರಾಜೇಂದ್ರ ಅವರಿಗೆ ತಿನ್ನಲು ಏನನ್ನೋ ನೀಡಿ, ಅದು ರಸಗುಲ್ಲಾ ಎಂದು ಹೇಳಿದ್ದಾನೆ. ರಾಜೇಂದ್ರ ಅದನ್ನು ಬಾಯಿಗೆ ಹಾಕಿ ಕಚ್ಚಿದ ತಕ್ಷಣ ಸ್ಫೋಟ ಸಂಭವಿಸಿದೆ. ಅದು ಕಾಡುಹಂದಿಗಳನ್ನು ಕೊಲ್ಲಲು ಬಳಸುವ ಬಾಂಬ್ ಆಗಿತ್ತು” ಎಂದು ತಿಳಿಸಿದ್ದಾರೆ.
ಸ್ಫೋಟದ ತೀವ್ರತೆಗೆ ರಾಜೇಂದ್ರ ಅವರ ಬಾಯಿ ಮತ್ತು ದವಡೆಗೆ ಗಂಭೀರ ಗಾಯಗಳಾಗಿದ್ದವು. ತಕ್ಷಣವೇ ಕುಟುಂಬದವರು ಆಟೋರಿಕ್ಷಾದಲ್ಲಿ ಅವರನ್ನು ದಿಂಡೋರಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗಲೇ ಅವರು ಮೃತಪಟ್ಟಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್)ಯ ಸೆಕ್ಷನ್ 105ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಸೆಕ್ಷನ್ ಕೊಲೆ ಎಂದು ಪರಿಗಣಿಸಲಾಗದ ಅಪರಾಧಿಕ ನರಹತ್ಯೆಗೆ ಸಂಬಂಧಿಸಿದೆ. ಇದರ ಜತೆಗೆ ಸ್ಫೋಟಕ ವಸ್ತುಗಳ ಕಾಯ್ದೆಯ ಸೆಕ್ಷನ್ 3 ಮತ್ತು 4ರ ಅಡಿಯಲ್ಲಿಯೂ ಪ್ರಕರಣ ದಾಖಲಿಸಲಾಗಿದೆ.
ಸಾಮಾನ್ಯವಾಗಿ ಕಾಡುಹಂದಿಗಳನ್ನು ಕೊಲ್ಲಲು ಕೆಲವರು ಇಂತಹ ಕಚ್ಚಾ ಸ್ಫೋಟಕಗಳನ್ನು ಬಳಸುತ್ತಾರೆ. ಇವುಗಳನ್ನು ‘ಪಿಗ್ ಕಿಲ್ಲರ್ ಬಾಂಬ್’ ಅಥವಾ ‘ಪಿಗ್ ಬಾಂಬ್’ ಎಂದು ಕರೆಯಲಾಗುತ್ತದೆ. ಸ್ಫೋಟಕವನ್ನು ಸ್ಪರ್ಶಿಸಿದಾಗ ಅಥವಾ ಅದರ ಮೇಲೆ ಒತ್ತಡ ಬಿದ್ದಾಗ ಸ್ಫೋಟಗೊಳ್ಳುವ ರೀತಿಯಲ್ಲಿ ಇವುಗಳನ್ನು ಸಿದ್ಧಪಡಿಸಲಾಗುತ್ತದೆ. ಇಂತಹ ಸ್ಫೋಟಗಳು ಸಂಭವಿಸಿದರೆ ಗಂಭೀರ ಗಾಯಗಳಾಗುವುದಲ್ಲದೆ, ಪ್ರಾಣಹಾನಿಯೂ ಉಂಟಾಗಬಹುದು.
ಬಂಧಿತ ಆರೋಪಿ ರಾಮಭಗತ್ ಈ ಸ್ಫೋಟಕವನ್ನು ಎಲ್ಲಿಂದ ಪಡೆದುಕೊಂಡಿದ್ದಾನೆ? ಅದು ಆತನ ಕೈಗೆ ಹೇಗೆ ಬಂತು? ರಾಜೇಂದ್ರ ಅವರಿಗೆ ಸ್ಫೋಟಕವನ್ನೇ ಸಿಹಿತಿಂಡಿ ಎಂದು ನೀಡಿ ಹತ್ಯೆಗೈಯಲು ಯತ್ನಿಸಿದ್ದರ ಹಿಂದಿನ ಉದ್ದೇಶವೇನು? ಈ ಕೃತ್ಯದಲ್ಲಿ ಬೇರೆಯವರ ಪಾತ್ರವೂ ಇದೆಯೇ? ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಸ್ಫೋಟಕವನ್ನು ಸಂಗ್ರಹಿಸಿ ಆರೋಪಿಗೆ ಒದಗಿಸಿದವರು ಯಾರಾದರೂ ಇದ್ದಾರೆಯೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.





ನಿಮ್ಮ ಕಾಮೆಂಟ್ ಬರೆಯಿರಿ