ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

ʼಎಲ್ ನಿನೊʼದಿಂದ ಆರೋಗ್ಯ ತೊಂದರೆ ಭೀತಿ : ʼತುರ್ತು ಎಚ್ಚರಿಕೆ ಮಟ್ಟʼವನ್ನು ಗರಿಷ್ಠಕ್ಕೇರಿಸಿದ ಡಬ್ಲ್ಯುಎಚ್‌ಒ ; ಭಾರತಕ್ಕೂ ಹೆಚ್ಚಿನ ಅಪಾಯ!

ನವದೆಹಲಿ: ಎಲ್ ನಿನೊ (El Nino) ಹವಾಮಾನ ವಿದ್ಯಮಾನದಿಂದ ಜಗತ್ತಿನಾದ್ಯಂತ ಉಂಟಾಗಬಹುದಾದ ಬದಲಾವಣೆಗಳು ಕೇವಲ ಮಳೆ ಮತ್ತು ಬಿಸಿಲಿಗೆ ಸಂಬಂಧಿಸಿದ ಸಮಸ್ಯೆಗಳಲ್ಲ. ಅತಿವೃಷ್ಟಿ, ಅನಾವೃಷ್ಟಿ ಹಾಗೂ ತೀವ್ರ ಬಿಸಿಗಾಳಿಯ ಜತೆಗೆ ಜನರ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಎಚ್ಚರಿಕೆ ನೀಡಿದೆ.
2026ರ ಅಕ್ಟೋಬರ್‌ನಿಂದ 2027ರ ಸೆಪ್ಟೆಂಬರ್‌ವರೆಗಿನ ಅವಧಿಯಲ್ಲಿ ಎಲ್ ನಿನೊ ಪರಿಣಾಮದಿಂದ ಜಗತ್ತಿನ ಹಲವು ಪ್ರದೇಶಗಳಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ತನ್ನ ಜಾಗತಿಕ ತುರ್ತು ಎಚ್ಚರಿಕೆಯನ್ನು ಅತ್ಯುನ್ನತ ಮಟ್ಟವಾದ ‘ಗ್ರೇಡ್ 3’ಕ್ಕೆ ಏರಿಸಿದೆ.
2026ರ ಸೆಪ್ಟೆಂಬರ್ 5ರಂದು ಡಬ್ಲ್ಯುಎಚ್‌ಒ ಬಿಡುಗಡೆ ಮಾಡಿರುವ ಜಾಗತಿಕ ಆರೋಗ್ಯ ಅಪಾಯದ ಮೌಲ್ಯಮಾಪನದಲ್ಲಿ ಭಾರತವನ್ನೂ ಹೆಚ್ಚಿನ ಆರೋಗ್ಯ ಅಪಾಯ ಎದುರಿಸಬಹುದಾದ ದೇಶಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ದಕ್ಷಿಣ ಏಷ್ಯಾದ ಬಹುತೇಕ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ ಮತ್ತು ಕಡಿಮೆ ಮಳೆಯಾಗುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.
ಇದರ ಪರಿಣಾಮವಾಗಿ ಭಾರತದಲ್ಲಿ ಬಿಸಿಗಾಳಿ ಹೆಚ್ಚಾಗಬಹುದು. ಕುಡಿಯುವ ನೀರಿನ ಕೊರತೆ ಉಂಟಾಗಬಹುದು. ಸಾಂಕ್ರಾಮಿಕ ರೋಗಗಳು ಹರಡುವ ಅಪಾಯವೂ ಹೆಚ್ಚಬಹುದು. ಆಹಾರದ ಕೊರತೆಯಿಂದ ಅಪೌಷ್ಟಿಕತೆ ಸಮಸ್ಯೆ ಎದುರಾಗಬಹುದು. ಇದರಿಂದ ಈಗಾಗಲೇ ಹಲವು ಸವಾಲುಗಳನ್ನು ಎದುರಿಸುತ್ತಿರುವ ಆರೋಗ್ಯ ವ್ಯವಸ್ಥೆಯ ಮೇಲೂ ಹೆಚ್ಚಿನ ಒತ್ತಡ ಬೀಳುವ ಸಾಧ್ಯತೆಯಿದೆ.

ಎಲ್ ನಿನೊ ಎಂದರೇನು? ಡಬ್ಲ್ಯುಎಚ್‌ಒ ಎಚ್ಚರಿಕೆಯನ್ನು ಗ್ರೇಡ್ 3ಕ್ಕೆ ಏರಿಸಿದ್ದೇಕೆ?
ಎಲ್ ನಿನೊ ಎಂಬುದು ಪೆಸಿಫಿಕ್ ಮಹಾಸಾಗರದ ಮಧ್ಯ ಮತ್ತು ಪೂರ್ವ ಭಾಗಗಳಲ್ಲಿ ಸಮುದ್ರದ ಮೇಲ್ಮೈ ನೀರಿನ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಾಗುವ ನೈಸರ್ಗಿಕ ಹವಾಮಾನ ವಿದ್ಯಮಾನ.
ಸಮುದ್ರದ ನೀರು ಹೆಚ್ಚು ಬೆಚ್ಚಗಾದಾಗ ವಾತಾವರಣದ ಸಹಜ ಚಲನೆ ಬದಲಾಗುತ್ತದೆ. ಇದರಿಂದ ಮಳೆಯ ಪ್ರಮಾಣ ಮತ್ತು ಹಂಚಿಕೆಯಲ್ಲೂ ವ್ಯತ್ಯಾಸ ಉಂಟಾಗುತ್ತದೆ. ಜಗತ್ತಿನ ಹಲವು ಪ್ರದೇಶಗಳ ಹವಾಮಾನದ ಮೇಲೆ ಇದರ ಪರಿಣಾಮ ಬೀರುತ್ತದೆ. ಕೆಲವು ಕಡೆ ಮಳೆಯಾಗದೆ ಬರ ಪರಿಸ್ಥಿತಿ ಉಂಟಾಗಬಹುದು. ತೀವ್ರ ಬಿಸಿಗಾಳಿ ಬೀಸಬಹುದು. ಇನ್ನು ಕೆಲವು ಪ್ರದೇಶಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗಿ ಪ್ರವಾಹ ಸಂಭವಿಸಬಹುದು.
ಈ ಹಿನ್ನೆಲೆಯಲ್ಲಿ 2026ರ ನವೆಂಬರ್ 2ರಂದು ಬಿಡುಗಡೆ ಮಾಡಿರುವ ಕಾರ್ಯತಂತ್ರದ ಸಿದ್ಧತೆ ಮತ್ತು ಯೋಜನೆಯಲ್ಲಿ, 2026ರ ಅಕ್ಟೋಬರ್‌ನಿಂದ 2027ರ ಸೆಪ್ಟೆಂಬರ್‌ವರೆಗೆ ಜಾಗತಿಕ ಮಟ್ಟದಲ್ಲಿ ಗ್ರೇಡ್ 3 ತುರ್ತು ಎಚ್ಚರಿಕೆಯನ್ನು ಡಬ್ಲ್ಯುಎಚ್‌ಒ ನೀಡಿದೆ.
ಆದರೆ, ಎಲ್ ನಿನೊ ನೇರವಾಗಿ ಯಾವುದೇ ಕಾಯಿಲೆಯನ್ನು ಉಂಟುಮಾಡುವುದಿಲ್ಲ. ಆದರೆ, ಇದರಿಂದ ಉಂಟಾಗುವ ಹವಾಮಾನ ಮತ್ತು ಪರಿಸರ ಬದಲಾವಣೆಗಳು ಕೆಲವು ಕಾಯಿಲೆಗಳು ಹರಡಲು ಅನುಕೂಲಕರ ವಾತಾವರಣ ನಿರ್ಮಿಸುತ್ತವೆ.
ಉದಾಹರಣೆಗೆ, ತೀವ್ರ ಶಾಖದಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಬಹುದು. ಪ್ರವಾಹ ಅಥವಾ ನೀರಿನ ಕೊರತೆಯಿಂದ ಆರೋಗ್ಯ ಸೇವೆಗಳಿಗೆ ಅಡ್ಡಿಯಾಗಬಹುದು. ಹೀಗಾಗಿ ಎಲ್ ನಿನೊವನ್ನು ಕೇವಲ ಹವಾಮಾನಕ್ಕೆ ಸಂಬಂಧಿಸಿದ ವಿದ್ಯಮಾನವಾಗಿ ನೋಡದೆ, ಸಾರ್ವಜನಿಕ ಆರೋಗ್ಯಕ್ಕೂ ಸವಾಲಾಗಬಲ್ಲ ಸಮಸ್ಯೆಯಾಗಿ ಪರಿಗಣಿಸಬೇಕಿದೆ.

ಭಾರತದಲ್ಲಿ ಯಾವೆಲ್ಲ ಆರೋಗ್ಯ ಸಮಸ್ಯೆಗಳು ಎದುರಾಗಬಹುದು?
ತಾಪಮಾನ ಹೆಚ್ಚಳ, ಮಳೆಯಲ್ಲಿನ ಬದಲಾವಣೆ ಮತ್ತು ನೀರು, ಆಹಾರದಂತಹ ಅಗತ್ಯ ಸಂಪನ್ಮೂಲಗಳ ಕೊರತೆಯಿಂದ ಭಾರತದಲ್ಲಿ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಎಂದು ಡಬ್ಲ್ಯುಎಚ್‌ಒ ಗುರುತಿಸಿದೆ.
ಬಿಸಿಗಾಳಿ: ನಿರ್ಜಲೀಕರಣ ಮತ್ತು ಹೀಟ್ ಸ್ಟ್ರೋಕ್ ಅಪಾಯ
ತಾಪಮಾನ ಹೆಚ್ಚಾಗಿ ದೀರ್ಘಕಾಲ ಬಿಸಿಗಾಳಿ ಬೀಸಿದರೆ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಬಹುದು. ಇದರಿಂದ ನಿರ್ಜಲೀಕರಣ, ಶಾಖದ ಬಳಲಿಕೆ (ಹೀಟ್ ಎಕ್ಸಾಸ್ಟನ್) ಮತ್ತು ಹೀಟ್ ಸ್ಟ್ರೋಕ್ ಸಮಸ್ಯೆಗಳು ಉಂಟಾಗಬಹುದು. ವಿಶೇಷವಾಗಿ ಹೃದಯ, ಮೂತ್ರಪಿಂಡ, ಉಸಿರಾಟ ಮತ್ತು ಚಯಾಪಚಯ ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ತೀವ್ರ ಬಿಸಿಗಾಳಿ ಹೆಚ್ಚು ಅಪಾಯಕಾರಿ. ಇಂತಹವರ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆಯಿದೆ.
ಡೆಂಗ್ಯೂ ಮತ್ತು ಮಲೇರಿಯಾ ಹರಡುವ ಆತಂಕ
ತಾಪಮಾನ ಮತ್ತು ಮಳೆಯ ಪ್ರಮಾಣದಲ್ಲಿ ಬದಲಾವಣೆಯಾದರೆ ಸೊಳ್ಳೆಗಳ ಸಂತಾನೋತ್ಪತ್ತಿಯೂ ಹೆಚ್ಚಾಗಬಹುದು. ಇದರಿಂದ ಸೊಳ್ಳೆಗಳಿಂದ ಹರಡುವ ಕಾಯಿಲೆಗಳ ಅಪಾಯ ಹೆಚ್ಚಬಹುದು.
ಭಾರತದಲ್ಲಿ ಡೆಂಗ್ಯೂ ಹೆಚ್ಚಿನ ಆರೋಗ್ಯ ಅಪಾಯ ಹೊಂದಿರುವ ಕಾಯಿಲೆಯಾಗಿದೆ ಎಂದು ಡಬ್ಲ್ಯುಎಚ್‌ಒ ಗುರುತಿಸಿದೆ. ಈಶಾನ್ಯ ಭಾರತದ ಕೆಲವು ಪ್ರದೇಶಗಳಲ್ಲಿ ಮಲೇರಿಯಾ ಕೂಡ ಆತಂಕಕಾರಿ ಕಾಯಿಲೆಯಾಗಿದೆ.
ನೀರಿನ ಕೊರತೆಯಾದಾಗ ಜನರು ಮನೆಗಳ ಸುತ್ತಮುತ್ತ ಪಾತ್ರೆ, ಡಬ್ಬಿ ಮತ್ತು ಇತರ ತೊಟ್ಟಿಗಳಲ್ಲಿ ನೀರು ಸಂಗ್ರಹಿಸಿಡುತ್ತಾರೆ. ಇಂತಹ ಪಾತ್ರೆಗಳಲ್ಲಿ ನೀರು ನಿಂತರೆ ಸೊಳ್ಳೆಗಳು ಮೊಟ್ಟೆಯಿಟ್ಟು ಸಂತಾನೋತ್ಪತ್ತಿ ಮಾಡಲು ಅನುಕೂಲವಾಗುತ್ತದೆ. ಇದರಿಂದ ಡೆಂಗ್ಯೂ ಸೇರಿದಂತೆ ಸೊಳ್ಳೆಗಳಿಂದ ಹರಡುವ ಕಾಯಿಲೆಗಳ ಅಪಾಯ ಹೆಚ್ಚಬಹುದು.
ಕಲುಷಿತ ನೀರಿನಿಂದ ಸೋಂಕು ಹರಡುವ ಸಾಧ್ಯತೆ
ಭಾರಿ ಮಳೆ ಮತ್ತು ಪ್ರವಾಹ ಉಂಟಾದಾಗ ಜನರು ಕಲುಷಿತ ನೀರಿನ ಸಂಪರ್ಕಕ್ಕೆ ಬರುವ ಸಾಧ್ಯತೆ ಹೆಚ್ಚುತ್ತದೆ. ಮಳೆ ಮತ್ತು ಪ್ರವಾಹದ ಜತೆಗೆ ನೈರ್ಮಲ್ಯ ವ್ಯವಸ್ಥೆ ಹದಗೆಟ್ಟರೆ ಲೆಪ್ಟೊಸ್ಪೈರೋಸಿಸ್ ಸೋಂಕು ಹರಡುವ ಅಪಾಯವೂ ಇದೆ.
ಪ್ರವಾಹದ ನೀರು ಕುಡಿಯುವ ನೀರಿನ ಮೂಲಗಳಿಗೆ ಸೇರಿದರೆ ನೀರು ಕಲುಷಿತಗೊಳ್ಳಬಹುದು. ಇದರಿಂದ ಇತರ ಜಲಜನ್ಯ ಕಾಯಿಲೆಗಳೂ ಹರಡುವ ಸಾಧ್ಯತೆಯಿದೆ.
ಆಹಾರದ ಕೊರತೆ ಮತ್ತು ಅಪೌಷ್ಟಿಕತೆ
ಮಳೆ ಕಡಿಮೆಯಾಗಿ ಬರ ಪರಿಸ್ಥಿತಿ ಎದುರಾದರೆ ಆಹಾರದ ಉತ್ಪಾದನೆ ಕುಸಿಯಬಹುದು. ಇದರಿಂದ ಆಹಾರ ಪೂರೈಕೆ ಮತ್ತು ಜನರ ಜೀವನೋಪಾಯದ ಮೇಲೂ ಪರಿಣಾಮ ಬೀರುತ್ತದೆ.
ಆಹಾರದ ಲಭ್ಯತೆ ಕಡಿಮೆಯಾದರೆ ಐದು ವರ್ಷದೊಳಗಿನ ಮಕ್ಕಳು, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು ಅಪೌಷ್ಟಿಕತೆಗೆ ಹೆಚ್ಚು ತುತ್ತಾಗುವ ಸಾಧ್ಯತೆಯಿದೆ.
ಆಸ್ಪತ್ರೆಗಳ ಮೇಲೆ ಹೆಚ್ಚಿನ ಒತ್ತಡ
ತೀವ್ರ ಬಿಸಿಗಾಳಿ, ಬರ ಮತ್ತು ಪ್ರವಾಹದಿಂದ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳ ಮೂಲಸೌಕರ್ಯಕ್ಕೆ ಹಾನಿಯಾಗಬಹುದು. ಔಷಧಗಳ ಪೂರೈಕೆಯಲ್ಲೂ ವ್ಯತ್ಯಯ ಉಂಟಾಗಬಹುದು. ಇದರಿಂದ ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯುವುದು ಕಷ್ಟವಾಗಬಹುದು.
ವಿಶೇಷವಾಗಿ ಮಧುಮೇಹ, ಹೃದಯ ಕಾಯಿಲೆ ಮತ್ತು ಮೂತ್ರಪಿಂಡದ ಸಮಸ್ಯೆಗಳಿಂದ ಬಳಲುತ್ತಿರುವವರು ತಮ್ಮ ನಿಯಮಿತ ಚಿಕಿತ್ಸೆಯನ್ನು ಮುಂದುವರಿಸಲು ತೊಂದರೆ ಅನುಭವಿಸಬಹುದು.

ಪ್ರಮುಖ ಸುದ್ದಿ :-   ಅಂಡರ್-19 ಏಷ್ಯಾಕಪ್ : ರೋಚಕ ಫೈನಲ್‌ನಲ್ಲಿ ಪಾಕಿಸ್ತಾನಕ್ಕೆ ಮಣ್ಣುಮುಕ್ಕಿಸಿ ಪ್ರಶಸ್ತಿ ಗೆದ್ದ ಭಾರತ : ಕೊನೆಯ ಎಸೆತದಲ್ಲಿ ಭಾರತ ಗೆಲ್ಲಿಸಿದ ಬೌಲರ್‌ಗಳು

ಭಾರತದ ಮುಂಗಾರು ಮಳೆಯ ಮೇಲೂ ಎಲ್ ನಿನೊ ಪರಿಣಾಮ
ಭಾರತದ ಕೃಷಿ ಮತ್ತು ಜನಜೀವನ ಬಹುಮಟ್ಟಿಗೆ ನೈಋತ್ಯ ಮುಂಗಾರು ಮಳೆಯನ್ನೇ ಅವಲಂಬಿಸಿದೆ. ಹೀಗಾಗಿ ಮುಂಗಾರು ಮಳೆಯ ಪ್ರಮಾಣದಲ್ಲಿ ಬದಲಾವಣೆಯಾದರೆ ಕೃಷಿ ಉತ್ಪಾದನೆ, ಕುಡಿಯುವ ನೀರಿನ ಪೂರೈಕೆ ಮತ್ತು ಜನರ ಆರೋಗ್ಯದ ಮೇಲೂ ಪರಿಣಾಮ ಉಂಟಾಗಬಹುದು.
2026ರ ಆಗಸ್ಟ್‌ನಲ್ಲಿ ಸಂಸತ್ತಿನಲ್ಲಿ ಹಂಚಿಕೊಳ್ಳಲಾದ ಕೇಂದ್ರ ಸರ್ಕಾರದ ಮೌಲ್ಯಮಾಪನದ ಪ್ರಕಾರ, 2026ರ ನೈಋತ್ಯ ಮುಂಗಾರು ಮಳೆ ವಾಡಿಕೆಗಿಂತ ಕಡಿಮೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿತ್ತು.
ಬಳಿಕ ಪರಿಷ್ಕೃತ ಅಂದಾಜಿನಲ್ಲಿ ಋತುಮಾನದ ಒಟ್ಟು ಮಳೆಯ ಪ್ರಮಾಣ ದೀರ್ಘಾವಧಿ ಸರಾಸರಿಯ (LPA) ಶೇ.90ರಷ್ಟು ಇರಬಹುದು ಎಂದು ತಿಳಿಸಲಾಗಿತ್ತು. ಈ ಅಂದಾಜಿನಲ್ಲಿ ಶೇ.4ರಷ್ಟು ಮಾದರಿ ದೋಷದ ಮಿತಿಯನ್ನೂ ಉಲ್ಲೇಖಿಸಲಾಗಿತ್ತು.
ಆದರೆ, ಎಲ್ ನಿನೊ ಕಾಣಿಸಿಕೊಂಡರೆ ಭಾರತದ ಮುಂಗಾರು ಮಳೆ ಖಚಿತವಾಗಿ ವಿಫಲವಾಗುತ್ತದೆ ಎಂದರ್ಥವಲ್ಲ. ಎಲ್ ನಿನೊ ಎಷ್ಟು ಪ್ರಬಲವಾಗಿದೆ ಮತ್ತು ಯಾವ ಸಮಯದಲ್ಲಿ ಕಾಣಿಸಿಕೊಳ್ಳುತ್ತದೆ ಎಂಬುದರ ಜತೆಗೆ ಹಿಂದೂ ಮಹಾಸಾಗರದ ದ್ವಿಧ್ರುವಿ (Indian Ocean Dipole) ಸೇರಿದಂತೆ ಇತರ ಹವಾಮಾನ ಅಂಶಗಳೂ ಮುಂಗಾರು ಮಳೆಯ ಮೇಲೆ ಪರಿಣಾಮ ಬೀರುತ್ತವೆ.
ಅಂದರೆ, ದೇಶದ ಎಲ್ಲ ಭಾಗಗಳಲ್ಲೂ ಒಂದೇ ರೀತಿಯ ಹವಾಮಾನ ಇರುವುದಿಲ್ಲ. ಒಂದು ಪ್ರದೇಶದಲ್ಲಿ ಬರ ಮತ್ತು ನೀರಿನ ಕೊರತೆ ಎದುರಾದರೆ, ಮತ್ತೊಂದು ಪ್ರದೇಶದಲ್ಲಿ ಭಾರಿ ಮಳೆ ಮತ್ತು ಪ್ರವಾಹ ಉಂಟಾಗಬಹುದು. ಈ ಎರಡೂ ಪರಿಸ್ಥಿತಿಗಳು ವಿಭಿನ್ನ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಪ್ರಮುಖ ಸುದ್ದಿ :-   ಮೋದಿ ನನ್ನ ಫೋನ್‌ ಟ್ಯಾಪ್ ಮಾಡುತ್ತಿದ್ದಾರೆ" : ಪ್ರಧಾನಿ ವಿರುದ್ಧ ರಾಹುಲ್ ಗಾಂಧಿ ಆರೋಪ ; ಮುಖಾಮುಖಿ ಚರ್ಚೆಗೆ ಬರುವಂತೆ ಸವಾಲು

ಎಲ್ ನಿನೊ ಆರೋಗ್ಯ ಅಪಾಯಕ್ಕೆ ಯಾರು ಹೆಚ್ಚು ತುತ್ತಾಗಬಹುದು?
ಎಲ್ ನಿನೊದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳು ಎಲ್ಲರ ಮೇಲೂ ಒಂದೇ ರೀತಿಯ ಪರಿಣಾಮ ಬೀರುವುದಿಲ್ಲ. ಮಕ್ಕಳು, ಗರ್ಭಿಣಿಯರು, ವೃದ್ಧರು, ಅಂಗವಿಕಲರು ಮತ್ತು ಈಗಾಗಲೇ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರು ಹೆಚ್ಚಿನ ಅಪಾಯ ಎದುರಿಸಬಹುದು ಎಂದು ಡಬ್ಲ್ಯುಎಚ್‌ಒ ಎಚ್ಚರಿಸಿದೆ.
ಆರ್ಥಿಕವಾಗಿ ದುರ್ಬಲ ಕುಟುಂಬಗಳು, ನಗರಗಳ ಕೊಳಗೇರಿ ಪ್ರದೇಶಗಳಲ್ಲಿ ವಾಸಿಸುವವರು ಮತ್ತು ದೂರದ ಗ್ರಾಮೀಣ ಪ್ರದೇಶಗಳ ಜನರೂ ಹೆಚ್ಚು ತೊಂದರೆ ಅನುಭವಿಸಬಹುದು.
ಹೊರಾಂಗಣದಲ್ಲಿ ಕೆಲಸ ಮಾಡುವವರಿಗೂ ಅಪಾಯ ಹೆಚ್ಚು. ರೈತರು, ಕಟ್ಟಡ ಕಾರ್ಮಿಕರು ಮತ್ತು ರಸ್ತೆ ಕಾಮಗಾರಿಗಳಲ್ಲಿ ದುಡಿಯುವವರು ಬಿಸಿಲಿನಲ್ಲಿ ಹಲವು ಗಂಟೆಗಳ ಕಾಲ ಕೆಲಸ ಮಾಡಬೇಕಾಗುತ್ತದೆ. ಹೀಗಾಗಿ ತೀವ್ರ ಉಷ್ಣತೆಗೆ ನೇರವಾಗಿ ಒಡ್ಡಿಕೊಳ್ಳುವುದರಿಂದ ಅವರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗಬಹುದು.
ಇದರ ಪರಿಣಾಮ ದೈಹಿಕ ಆರೋಗ್ಯಕ್ಕೆ ಮಾತ್ರ ಸೀಮಿತವಾಗುವುದಿಲ್ಲ. ಉದ್ಯೋಗ ನಷ್ಟ, ಮನೆ-ಮಠ ತೊರೆಯಬೇಕಾದ ಪರಿಸ್ಥಿತಿ ಮತ್ತು ಆಹಾರದ ಕೊರತೆಯಿಂದ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಉಂಟಾಗಬಹುದು. ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಇಂತಹ ಸಮಸ್ಯೆಗಳು ಮತ್ತಷ್ಟು ಮಾನಸಿಕ ಒತ್ತಡ ಉಂಟುಮಾಡಬಹುದು.

ಭಾರತಕ್ಕೆ ಮುನ್ನೆಚ್ಚರಿಕೆ ಏಕೆ ಮುಖ್ಯ?
ಎಲ್ ನಿನೊ ಕುರಿತು ಡಬ್ಲ್ಯುಎಚ್‌ಒ ನೀಡಿರುವ ಗ್ರೇಡ್ 3 ಎಚ್ಚರಿಕೆಯು ಹವಾಮಾನ ವೈಪರೀತ್ಯಗಳು ಕೇವಲ ಪರಿಸರಕ್ಕೆ ಸಂಬಂಧಿಸಿದ ಸಮಸ್ಯೆಗಳಲ್ಲ ಎಂಬುದನ್ನು ತೋರಿಸುತ್ತದೆ. ಇವು ಜನರ ಆರೋಗ್ಯ, ಆಹಾರ ಮತ್ತು ಕುಡಿಯುವ ನೀರಿನ ಲಭ್ಯತೆ ಹಾಗೂ ಆರೋಗ್ಯ ಸೇವೆಗಳ ಮೇಲೂ ಗಂಭೀರ ಪರಿಣಾಮ ಬೀರಬಹುದು.
ಭಾರತದಲ್ಲಿ ಒಂದೇ ಅವಧಿಯಲ್ಲಿ ತೀವ್ರ ಬಿಸಿಗಾಳಿ, ಕುಡಿಯುವ ನೀರಿನ ಕೊರತೆ, ಸಾಂಕ್ರಾಮಿಕ ರೋಗಗಳ ಹರಡುವಿಕೆ, ಆಹಾರದ ಅಭದ್ರತೆ ಮತ್ತು ಆಸ್ಪತ್ರೆಗಳ ಮೇಲೆ ಹೆಚ್ಚಿನ ಒತ್ತಡ ಉಂಟಾಗುವ ಸಾಧ್ಯತೆಯಿದೆ.
ಆದರೆ, ದೇಶದ ಎಲ್ಲ ಭಾಗಗಳಲ್ಲೂ ಆರೋಗ್ಯ ತುರ್ತು ಪರಿಸ್ಥಿತಿ ಎದುರಾಗಲಿದೆ ಎಂದರ್ಥವಲ್ಲ. ಸ್ಥಳೀಯ ಹವಾಮಾನ, ಭೌಗೋಳಿಕ ಪರಿಸ್ಥಿತಿ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಅವಲಂಬಿಸಿ ಎಲ್ ನಿನೊದ ಪರಿಣಾಮ ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯಾಗಿರಬಹುದು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement