

ಅಮೆರಿಕದ ಲೂಸಿಯಾನಾ ರಾಜ್ಯದ ನ್ಯೂ ಓರ್ಲಿಯನ್ಸ್ನಲ್ಲಿ ಶುಕ್ರವಾರ ನಿಲುಗಡೆ ಮಾಡಲಾಗಿದ್ದ ಕ್ರೂಸ್ ಹಡಗಿಗೆ ಸರಕು ಸಾಗಣೆ ಹಡಗು ಡಿಕ್ಕಿ ಹೊಡೆದ ಪರಿಣಾಮ ಕ್ರೂಸ್ ಹಡಗು ಮಿಸ್ಸಿಸ್ಸಿಪ್ಪಿ ನದಿಗೆ ಮಗುಚಿ ಬಿದ್ದಿದೆ. ಹಡಗಿನಲ್ಲಿದ್ದ ಸುಮಾರು 130 ಮಂದಿಯನ್ನು ರಕ್ಷಿಸಲಾಗಿದ್ದು, ಸಣ್ಣಪುಟ್ಟ ಗಾಯಗಳಾದ ಕನಿಷ್ಠ 32 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಘಟನೆಯಲ್ಲಿ ಯಾರೊಬ್ಬರೂ ನಾಪತ್ತೆಯಾಗಿಲ್ಲ.
ಅಪಘಾತದಿಂದಾಗಿ ‘ಅಮೆರಿಕನ್ ಹೆರಿಟೇಜ್’ (American Heritage) ಹೆಸರಿನ ನದಿ ಕ್ರೂಸ್ ಹಡಗು ಮಿಸ್ಸಿಸ್ಸಿಪ್ಪಿ ನದಿಯಲ್ಲಿ ಒಂದು ಬದಿಗೆ ವಾಲಿ ಮಲಗಿದೆ. ಭಾರೀ ಅನಾಹುತ ಸಂಭವಿಸುವ ಸಾಧ್ಯತೆಯಿದ್ದರೂ ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ರಕ್ಷಿಸಿರುವ ಕಾರ್ಯಾಚರಣೆಯನ್ನು ಅಧಿಕಾರಿಗಳು ‘ಮಿಸ್ಸಿಸ್ಸಿಪ್ಪಿಯ ಪವಾಡ’ (Miracle on the Mississippi) ಎಂದು ಬಣ್ಣಿಸಿದ್ದಾರೆ.
ಅಪಘಾತದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಟ್ಯಾಂಕರ್ ಡಿಕ್ಕಿ ಹೊಡೆದ ಬಳಿಕ ಅಮೆರಿಕನ್ ಹೆರಿಟೇಜ್ ಹಡಗಿನೊಳಗೆ ನೀರು ನುಗ್ಗುತ್ತಿರುವುದು, ಕ್ರಮೇಣ ಹಡಗು ಒಂದು ಬದಿಗೆ ವಾಲಿ ನದಿಯಲ್ಲಿ ಮಗುಚಿಕೊಳ್ಳುತ್ತಿರುವುದು ವಿಡಿಯೊಗಳಲ್ಲಿ ಕಂಡುಬಂದಿದೆ.
‘ನಮ್ಮ ಲೆಕ್ಕಾಚಾರದ ಪ್ರಕಾರ ಯಾರೊಬ್ಬರೂ ನಾಪತ್ತೆಯಾಗಿಲ್ಲ. ಇದು ನಿಜಕ್ಕೂ ಮಿಸ್ಸಿಸ್ಸಿಪ್ಪಿಯಲ್ಲಿ ನಡೆದ ಪವಾಡವೇ ಸರಿ’ ಎಂದು ನ್ಯೂ ಓರ್ಲಿಯನ್ಸ್ ಮೇಯರ್ ಹೆಲೆನಾ ಮೊರೆನೊ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಅಪಘಾತ ಸಂಭವಿಸಿದ್ದು ಹೇಗೆ?
ನ್ಯೂ ಓರ್ಲಿಯನ್ಸ್ನಲ್ಲಿ ನಿಲುಗಡೆ ಮಾಡಲಾಗಿದ್ದ ಅಮೆರಿಕನ್ ಹೆರಿಟೇಜ್ ಕ್ರೂಸ್ ಹಡಗಿಗೆ ‘ಅಟ್ಲಾಂಟಿಕ್ ಅಸ್ಫಾಲ್ಟ್’ (Atlantic Asphalt) ಹೆಸರಿನ ಸರಕು ಸಾಗಣೆ ಹಡಗು ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮ ಹಡಗು ಅಪಾಯಕಾರಿಯಾಗಿ ವಾಲತೊಡಗುತ್ತಿದ್ದಂತೆ ಅದರಲ್ಲಿದ್ದ ಪ್ರಯಾಣಿಕರು ಜೀವ ಉಳಿಸಿಕೊಳ್ಳಲು ಹೊರಬರಲು ಧಾವಿಸಿದರು. ಈ ವೇಳೆ ಸ್ಥಳೀಯರು ಕೂಡ ಪ್ರಯಾಣಿಕರ ರಕ್ಷಣೆಗೆ ಧಾವಿಸಿದ್ದರು ಎಂದು ನ್ಯೂ ಓರ್ಲಿಯನ್ಸ್ ಬಂದರಿನ ಮುಖ್ಯಸ್ಥೆ ಮೆಲಾನಿ ಮಾಂಟ್ರೋಲ್ ಬಿಬಿಸಿಗೆ ತಿಳಿಸಿದ್ದಾರೆ.
ಬಂದರು ಪ್ರಾಧಿಕಾರದ ಮಾಹಿತಿಯ ಪ್ರಕಾರ, ಅಪಘಾತ ಸಂಭವಿಸಿದಾಗ ಅಮೆರಿಕನ್ ಹೆರಿಟೇಜ್ ಹಡಗಿನಲ್ಲಿ ಸಿಬ್ಬಂದಿ ಸೇರಿದಂತೆ ಸುಮಾರು 129 ಪ್ರಯಾಣಿಕರಿದ್ದರು. ಅಮೆರಿಕನ್ ಕ್ರೂಸ್ ಲೈನ್ಸ್ ಸಂಸ್ಥೆ ನಿರ್ವಹಿಸುತ್ತಿರುವ ಈ ಪ್ಯಾಡಲ್ವೀಲ್ ಮಾದರಿಯ ನೌಕೆಯು ಮೊದಲು ಒಂದು ಬದಿಗೆ ವಾಲತೊಡಗಿದ್ದು, ಬಳಿಕ ಸಂಪೂರ್ಣವಾಗಿ ಪಕ್ಕಕ್ಕೆ ಉರುಳಿದೆ. ಹೀಗಾಗಿ ಪ್ರಯಾಣಿಕರು ತುರ್ತಾಗಿ ಹಡಗಿನಿಂದ ಹೊರಬರಬೇಕಾಯಿತು ಎಂದು ಮೇಯರ್ ಹೆಲೆನಾ ಮೊರೆನೊ ವಿವರಿಸಿದ್ದಾರೆ.
ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಟಗ್ಬೋಟ್ಗಳ ನಿರ್ವಾಹಕರು, ಪೊಲೀಸರು ಹಾಗೂ ಇತರ ತುರ್ತು ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಆರಂಭಿಸಿದರು. ರಕ್ಷಣಾ ಕಾರ್ಯಕ್ಕೆ ಅನುಕೂಲವಾಗುವಂತೆ ಮಿಸ್ಸಿಸ್ಸಿಪ್ಪಿ ನದಿಯಲ್ಲಿ ಹಡಗುಗಳ ಸಂಚಾರವನ್ನೂ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.


ಪ್ರಯಾಣಿಕರ ರಕ್ಷಣೆ ಬಳಿಕವೇ ಚಿಕಿತ್ಸೆ ಪಡೆಯಲು ಮುಂದಾದ ಹಡಗಿನ ಕ್ಯಾಪ್ಟನ್
ಅಪಘಾತದಲ್ಲಿ ಹಡಗಿನ ಕ್ಯಾಪ್ಟನ್ ಕೂಡ ಗಾಯಗೊಂಡಿದ್ದರು. ಆದರೆ ಹಡಗಿನಲ್ಲಿದ್ದ ಎಲ್ಲ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಲೆಕ್ಕಹಾಕಿ ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳುವವರೆಗೂ ಅವರು ವೈದ್ಯಕೀಯ ಚಿಕಿತ್ಸೆ ಪಡೆಯಲು ನಿರಾಕರಿಸಿದ್ದರು ಎಂದು ಮೇಯರ್ ಮೊರೆನೊ ತಿಳಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆಯ ಯಶಸ್ಸಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಮ್ಮ ‘ಟ್ರೂತ್ ಸೋಷಿಯಲ್’ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಅವರು, ರಕ್ಷಣಾ ಸಿಬ್ಬಂದಿ ‘ಅದ್ಭುತ ಕೆಲಸ ಮಾಡಿದ್ದಾರೆ’ ಎಂದು ಶ್ಲಾಘಿಸಿದ್ದಾರೆ.
ಲೂಸಿಯಾನಾ ರಾಜ್ಯದ ಗವರ್ನರ್ ಜೆಫ್ ಲ್ಯಾಂಡ್ರಿ ಕೂಡ ರಕ್ಷಣಾ ಕಾರ್ಯಾಚರಣೆಯನ್ನು ‘ಮಿಸ್ಸಿಸ್ಸಿಪ್ಪಿಯ ಪವಾಡ’ ಎಂದು ಬಣ್ಣಿಸಿದ್ದಾರೆ. ಕ್ರೂಸ್ ಹಡಗಿನಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯ ಜನರಿದ್ದರೂ ಅವರೆಲ್ಲರೂ ಸುರಕ್ಷಿತವಾಗಿ ಪಾರಾಗಿರುವುದು ನಿಜಕ್ಕೂ ಅಚ್ಚರಿಯ ಸಂಗತಿ ಎಂದು ಅವರು ಹೇಳಿದ್ದಾರೆ.
150 ಪ್ರಯಾಣಿಕರನ್ನು ಕರೆದೊಯ್ಯುವ ಸಾಮರ್ಥ್ಯ ಹೊಂದಿದ್ದ ಹಡಗು
ಅಮೆರಿಕನ್ ಹೆರಿಟೇಜ್ ಹಡಗನ್ನು ಅಮೆರಿಕನ್ ಕ್ರೂಸ್ ಲೈನ್ಸ್ ಸಂಸ್ಥೆ ನಿರ್ವಹಿಸುತ್ತಿದ್ದು, ಇದರಲ್ಲಿ ಗರಿಷ್ಠ 150 ಮಂದಿ ಪ್ರಯಾಣಿಸಬಹುದಾಗಿದೆ. ಸಂಸ್ಥೆಯ ವೆಬ್ಸೈಟ್ನಲ್ಲಿರುವ ಮಾಹಿತಿಯ ಪ್ರಕಾರ, ಹಡಗಿನಲ್ಲಿ ಗಾಜಿನಿಂದ ಆವೃತವಾದ ರೆಸ್ಟೋರೆಂಟ್, ವ್ಯಾಯಾಮ ಕೇಂದ್ರ ಹಾಗೂ ಅತಿಥಿಗಳಿಗಾಗಿ ಮೂರು ವಿಶ್ರಾಂತಿ ಕೊಠಡಿಗಳಿವೆ.
2015ರಲ್ಲಿ ನಿರ್ಮಿಸಲಾದ ಈ ನದಿ ಹಡಗು ಕನಿಷ್ಠ ನಾಲ್ಕು ಮಹಡಿಗಳನ್ನು ಹೊಂದಿದೆ. ಮಿಸ್ಸಿಸ್ಸಿಪ್ಪಿ ನದಿ ಸೇರಿದಂತೆ ಅಮೆರಿಕದ ಇತರ ಜಲಮಾರ್ಗಗಳಲ್ಲಿ ಪ್ರವಾಸಿ ಸಂಚಾರ ನಡೆಸುತ್ತದೆ.
ಅಪಘಾತ ಸಂಭವಿಸುವ ಸಂದರ್ಭದಲ್ಲಿ ಹಡಗು ಎಂಟು ದಿನಗಳ ಪ್ರವಾಸವನ್ನು ಪೂರ್ಣಗೊಳಿಸುವ ಹಂತದಲ್ಲಿತ್ತು. ಈ ಪ್ರವಾಸದ ಭಾಗವಾಗಿ ಲೂಸಿಯಾನಾ ಮತ್ತು ಮಿಸ್ಸಿಸ್ಸಿಪ್ಪಿ ರಾಜ್ಯಗಳ ವಿವಿಧ ಪ್ರವಾಸಿ ತಾಣಗಳಲ್ಲಿ ನಿಲುಗಡೆ ನಿಗದಿಪಡಿಸಲಾಗಿತ್ತು.
ಸ್ಟೀರಿಂಗ್ ವ್ಯವಸ್ಥೆ ವೈಫಲ್ಯ ಶಂಕೆ
ಅಪಘಾತಕ್ಕೆ ನಿಖರವಾದ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಈ ಕುರಿತು ತನಿಖೆ ಮುಂದುವರಿದಿದೆ. ಆದರೆ ಸರಕು ಸಾಗಣೆ ಹಡಗಿನ ಸ್ಟೀರಿಂಗ್ ವ್ಯವಸ್ಥೆಯಲ್ಲಿ ವೈಫಲ್ಯ ಸಂಭವಿಸಿರುವ ಸಾಧ್ಯತೆ ಕಂಡುಬಂದಿದೆ ಎಂದು ಅಮೆರಿಕದ ಕರಾವಳಿ ರಕ್ಷಣಾ ಪಡೆಯ ಕ್ಯಾಪ್ಟನ್ ಮೆಲಾನಿ ಬರ್ನ್ಹ್ಯಾಮ್ ಬಿಬಿಸಿಗೆ ತಿಳಿಸಿದ್ದಾರೆ.
ಸ್ಟೀರಿಂಗ್ ವ್ಯವಸ್ಥೆಯಲ್ಲಿನ ತಾಂತ್ರಿಕ ದೋಷದಿಂದಲೇ ಟ್ಯಾಂಕರ್ ಮತ್ತು ಕ್ರೂಸ್ ಹಡಗಿನ ನಡುವೆ ಡಿಕ್ಕಿ ಸಂಭವಿಸಿತೇ ಎಂಬುದು ತನಿಖೆಯಿಂದಷ್ಟೇ ಸ್ಪಷ್ಟವಾಗಬೇಕಿದೆ. ಸದ್ಯಕ್ಕೆ ಘಟನೆಯ ಸಂಪೂರ್ಣ ಕಾರಣದ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.



ನಿಮ್ಮ ಕಾಮೆಂಟ್ ಬರೆಯಿರಿ