ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

ಅರಣ್ಯ ಸಿಬ್ಬಂದಿಗೆ ಕಾದು ಕಾದು ಬೇಸತ್ತು ಕೊನೆಗೆ ಮೊಸಳೆ ಹಿಡಿದು ತಾನೇ ತಂದು ಅರಣ್ಯ ಇಲಾಖೆಗೆ ಒಪ್ಪಿಸಿದ ರೈತ ಮಹಿಳೆ !

ಜಬಲ್ಪುರ: ಜಮೀನಿನಲ್ಲಿರುವ ಕೆರೆಯಲ್ಲಿ ನಾಲ್ಕು ಅಡಿ ಉದ್ದದ ಮೊಸಳೆಯೊಂದು ಕಾಣಿಸಿಕೊಂಡರೂ ಅದನ್ನು ಹಿಡಿಯಲು ಅರಣ್ಯ ಇಲಾಖೆಯ ಅಧಿಕಾರಿಗಳು ಬಾರದ ಹಿನ್ನೆಲೆಯಲ್ಲಿ ರೈತ ಮಹಿಳೆಯೊಬ್ಬರು ತಾವೇ ಮೊಸಳೆಯನ್ನು ಹಿಡಿದು ಅರಣ್ಯ ಇಲಾಖೆ ಸಿಬ್ಬಂದಿಗೆ ಒಪ್ಪಿಸಿರುವ ಘಟನೆ ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಜಬಲ್ಪುರ ಜಿಲ್ಲೆಯ ಖಮಾರಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಸುನ್‌ಪುರ ಘನಾ ಗ್ರಾಮದಲ್ಲಿ ರೈತ ಲಕಪತ್ ಯಾದವ್ ಮತ್ತು ಅವರ ಪತ್ನಿ ವಾಸವಾಗಿದ್ದಾರೆ. ಇವರ ಜಮೀನಿನಲ್ಲಿರುವ ಗ್ರಾಮದ ಕೆರೆಯಲ್ಲಿ ಮೊಸಳೆಯೊಂದು ಕಾಣಿಸಿಕೊಂಡಿದ್ದು, ಇದರಿಂದ ಗ್ರಾಮಸ್ಥರಲ್ಲಿ ಆತಂಕ ಉಂಟಾಗಿತ್ತು.
ಕೆರೆಯಲ್ಲಿ ಮೊಸಳೆ ಇರುವುದನ್ನು ಗಮನಿಸಿದ ಲಕಪತ್ ಯಾದವ್ ಅವರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿ, ಮೊಸಳೆಯನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಂತೆ ಮನವಿ ಮಾಡಿದ್ದರು. ಆದರೆ, ಮಾಹಿತಿ ನೀಡಿದರೂ ಅರಣ್ಯ ಇಲಾಖೆಯ ಯಾವುದೇ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿರಲಿಲ್ಲ ಎನ್ನಲಾಗಿದೆ.

ಅಧಿಕಾರಿಗಳಿಗಾಗಿ ಕಾದು ಕಾದು ಸುಸ್ತಾದ ದಂಪತಿ ಕೊನೆಗೆ ತಾವೇ ಮೊಸಳೆಯನ್ನು ಹಿಡಿಯಲು ನಿರ್ಧರಿಸಿದರು. ಅದರಂತೆ ಕೆರೆಯಲ್ಲಿ ಬಲೆ ಹಾಕಿ ಮೊಸಳೆಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾದರು. ಆದರೆ, ಬಳಿಕ ನಡೆದ ಘಟನೆಯಂತೂ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಸೆರೆಸಿಕ್ಕ ನಾಲ್ಕು ಅಡಿ ಉದ್ದದ ಮೊಸಳೆಯನ್ನು ರೈತ ಮಹಿಳೆ ತನ್ನ ಕೈಗಳಲ್ಲಿಯೇ ಎತ್ತಿಕೊಂಡು ಅರಣ್ಯ ಇಲಾಖೆಯ ಸಿಬ್ಬಂದಿ ಬಳಿಗೆ ಕೊಂಡೊಯ್ದು ಒಪ್ಪಿಸಿದ್ದಾರೆ. ಮೊಸಳೆಯನ್ನು ಮಹಿಳೆ ಎತ್ತಿಕೊಂಡು ಹೋಗುತ್ತಿರುವ ದೃಶ್ಯ ಅಚ್ಚರಿ ಮೂಡಿಸಿದೆ.

ಪ್ರಮುಖ ಸುದ್ದಿ :-   ಬದುಕಿರುವಾಗಲೇ ತನ್ನದೇ ತಿಥಿ ಕಾರ್ಯ ನೆರವೇರಿಸಿದ 80 ವರ್ಷದ ವೃದ್ಧ ! 900 ಮಂದಿಗೆ ಭರ್ಜರಿ ಭೋಜನ

ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಯಾವುದೇ ರಕ್ಷಣಾ ತಂಡ ಸ್ಥಳಕ್ಕೆ ಬಾರದ ಕಾರಣ ದಂಪತಿಯೇ ಅಪಾಯವನ್ನು ಮೈಮೇಲೆ ಎಳೆದುಕೊಳ್ಳಬೇಕಾಯಿತು ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವನ್ಯಜೀವಿಗಳ ರಕ್ಷಣೆಗೆ ಸಂಬಂಧಿಸಿದ ತುರ್ತು ಕರೆಗಳಿಗೆ ಅರಣ್ಯ ಇಲಾಖೆ ಸ್ಪಂದಿಸುವ ರೀತಿಯ ಬಗ್ಗೆಯೂ ಈ ಘಟನೆ ಪ್ರಶ್ನೆಗಳನ್ನು ಎತ್ತಿದೆ.
ಇದೇ ವೇಳೆ, ಮೊಸಳೆಯಂತಹ ಅಪಾಯಕಾರಿ ವನ್ಯಜೀವಿಗಳನ್ನು ಹಿಡಿಯಲು ತರಬೇತಿ ಇಲ್ಲದ ಸಾರ್ವಜನಿಕರು ಮುಂದಾಗುವುದು ಅತ್ಯಂತ ಅಪಾಯಕಾರಿ ಎಂಬ ಎಚ್ಚರಿಕೆಯೂ ಈ ಘಟನೆಯಿಂದ ವ್ಯಕ್ತವಾಗಿದೆ. ಮೊಸಳೆಯನ್ನು ಹಿಡಿಯುವ ಕಾರ್ಯಾಚರಣೆಯಲ್ಲಿ ಸಣ್ಣ ತಪ್ಪು ಸಂಭವಿಸಿದರೂ ಜೀವಕ್ಕೆ ಅಪಾಯ ಎದುರಾಗುವ ಸಾಧ್ಯತೆಯಿದೆ. ಇಂತಹ ಕಾರ್ಯಾಚರಣೆಗಳನ್ನು ಸಾರ್ವಜನಿಕರು ಕೈಗೆತ್ತಿಕೊಳ್ಳದೆ, ತರಬೇತಿ ಪಡೆದ ತಜ್ಞರ ತಂಡವೇ ನಿರ್ವಹಿಸಬೇಕು ಎಂಬುದು ವನ್ಯಜೀವಿ ರಕ್ಷಣಾ ಕಾರ್ಯಕರ್ತರ ಅಭಿಪ್ರಾಯವಾಗಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement