

ಮಂಗಳೂರು: ಮೊಟ್ಟೆ ಸಾಗಾಟ ವಾಹನದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಜಾಲವನ್ನು ಮಂಗಳೂರು ಪೊಲೀಸರು ಪತ್ತೆ ಹಚ್ಚಿದ್ದು ಕೇರಳದ ಕಸಾಯಿಖಾನೆಗೆ ಒಯ್ಯುತ್ತಿದ್ದ 16 ಎತ್ತುಗಳನ್ನು ರಕ್ಷಣೆ ಮಾಡಲಾಗಿದೆ. ಲಾರಿ ಚಾಲಕ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಖಚಿತ ಮಾಹಿತಿ ದಾಳಿ ನಡೆಸಿದ ಮಂಗಳೂರು ಪೊಲೀಸರು ಬೆಳಗಾವಿ ಜಿಲ್ಲೆಯ ಯಮಕನಮರಡಿಯಿಂದ ಕೇರಳದ ಕಾಸರಗೋಡಿಗೆ ಎತ್ತುಗಳನ್ನು ಸಾಗಿಸುತ್ತಿದ್ದ ವಾಹನವನ್ನು ಪತ್ತೆ ಮಾಡಿದ್ದಾರೆ. ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಕ್ರಮವಾಗಿ ಜಾನುವಾರುಗಳ ಸಾಗಾಟದ ಬಗ್ಗೆ ಮಾಹಿತಿ ಆಧಾರದ ಮೇಲೆ ಕಂಕನಾಡಿ ನಗರ ಠಾಣೆಯ ಪೊಲೀಸರು ಮೊಟ್ಟೆ ಸಾಗಾಟದ ಕಂಟೇನರ್ ಲಾರಿಯನ್ನು ಪಂಪ್ ವೆಲ್ ಬಳಿಯಲ್ಲಿ ತಡೆದು ಪರಿಶೀಲನೆ ನಡೆಸಿದರು.
ಈ ವೇಳೆ, ಲಾರಿಯ ಹಿಂಬದಿ ಮೊಟ್ಟೆ ಟ್ರೇಗಳನ್ನು ಇಟ್ಟು ಒಳಗಿನ ಕ್ಯಾಬಿನ್ನಲ್ಲಿ 16 ಎತ್ತುಗಳನ್ನು ತುಂಬಿಸಿದ್ದರು. ಯಮಕನಮರಡಿ ನಿವಾಸಿ ದಸ್ತಗಿರ್ ಎಂಬವರಿಗೆ ಸೇರಿದ 16 ಎತ್ತುಗಳು ಇದಾಗಿದ್ದು ಕೇರಳಕ್ಕೆ ಸಾಗಾಟ ಮಾಡುತ್ತಿದ್ದರು.
ಲಾರಿ ಚಾಲಕ ಮೈಸೂರಿನ ರಫೀಕ್ ( 52) ಮತ್ತು ರೆಹಮಾನ್ ಎಂಬವರನ್ನು ಬಂಧಿಸಿದ್ದು 16 ಎತ್ತುಗಳನ್ನು ಕೋಣಾಜೆ ಪಜೀರ್ ನ ಗೋಶಾಲೆಗೆ ಸಾಗಿಸಿದ್ದಾರೆ. ಅಕ್ರಮ ಜಾನುವಾರು ಸಾಗಾಟದ ಜಾಲದಲ್ಲಿ ಹೆಚ್ಚಿನ ಮಂದಿ ಶಾಮಿಲಾಗಿರುವ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.





ನಿಮ್ಮ ಕಾಮೆಂಟ್ ಬರೆಯಿರಿ