ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

ಕಾಂಗ್ರೆಸ್‌ ಪ್ರಾದೇಶಿಕ ಪಕ್ಷಗಳನ್ನೇ ಶತ್ರುಗಳೆಂದು ನೋಡುತ್ತಿದೆ, ಸಿಜೆಪಿ ಹೋರಾಟ ದುರ್ಬಲಗೊಳಿಸಿದೆ ; ಕಾಂಗ್ರೆಸ್ ವಿರುದ್ಧ ಮಾಜಿ ಮಿತ್ರನ ವಾಗ್ದಾಳಿ

ನವದೆಹಲಿ: ಅಸ್ಸಾಂನಲ್ಲಿ ಕಾಂಗ್ರೆಸ್ ತನ್ನ ಪಕ್ಷದ ಜೊತೆ ರಾಜಕೀಯ ಸಂಬಂಧ ಕಡಿದುಕೊಂಡ ಎರಡು ತಿಂಗಳ ಬಳಿಕ, ಕಾಂಗ್ರೆಸ್ ವಿರುದ್ಧ ಪ್ರಾದೇಶಿಕ ಪಕ್ಷಗಳ ನಾಯಕ ಹಾಗೂ ರೈಜೋರ್ ದಳದ ಮುಖ್ಯಸ್ಥ ಅಖಿಲ್ ಗೊಗೊಯ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಯನ್ನು ಪ್ರಮುಖ ಎದುರಾಳಿ ಪಕ್ಷವಾಗಿ ಪರಿಗಣಿಸುವ ಬದಲು, ಕಾಂಗ್ರೆಸ್‌ ಪಕ್ಷವು ಪ್ರಾದೇಶಿಕ ಪಕ್ಷಗಳು ಮತ್ತು ನೈಜ ಜನಾಂದೋಲನಗಳನ್ನೇ ತನ್ನ ಪ್ರಮುಖ ಶತ್ರುಗಳೆಂದು ಭಾವಿಸಿದೆ ಎಂದು ಅವರು ಆರೋಪಿಸಿದ್ದಾರೆ.
ಈ ಸಂಬಂಧ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ರಾಜಕೀಯ ಕಾರ್ಯಕರ್ತ ಯೋಗೇಂದ್ರ ಯಾದವ್ ಅವರಿಗೆ ಪ್ರತ್ಯೇಕ ಪತ್ರಗಳನ್ನು ಬರೆದಿರುವ ಗೊಗೊಯ್, ಕಾಂಗ್ರೆಸ್‌ನ ರಾಜಕೀಯ ನಡೆಗಳು ಮತ್ತು ವಿಪಕ್ಷಗಳ ಒಗ್ಗಟ್ಟಿನ ಪ್ರಯತ್ನಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ರಾಹುಲ್ ಗಾಂಧಿಗೆ ಬರೆದ ಪತ್ರದಲ್ಲಿ, ಕಾಕ್ರೋಚ್‌ ಜನತಾ ಪಾರ್ಟಿ (ಸಿಜೆಪಿ) ನಡೆಸುತ್ತಿದ್ದ ಹೋರಾಟವನ್ನು ಕಾಂಗ್ರೆಸ್ ಪ್ರತ್ಯೇಕ ಪ್ರತಿಭಟನೆಗಳನ್ನು ಆಯೋಜಿಸುವ ಮೂಲಕ ದುರ್ಬಲಗೊಳಿಸಿದೆ ಎಂದು ಆರೋಪಿಸಿದ್ದಾರೆ.
“ನೈಜ ಜನಾಂದೋಲನದ ಜೊತೆಗೆ ಸ್ಪರ್ಧಿಸುವ ಮೂಲಕ ಮತ್ತು ಬೀದಿಗಳಲ್ಲಿ ಹೋರಾಟವನ್ನು ವಿಭಜಿಸುವ ಮೂಲಕ ಕಾಂಗ್ರೆಸ್ ಪಕ್ಷ ಸಿಜೆಪಿ ಚಳವಳಿಯನ್ನು ದುರ್ಬಲಗೊಳಿಸಿತು. ಇದರಿಂದ ಆಡಳಿತಾರೂಢ ಸರ್ಕಾರಕ್ಕೆ ಚಳವಳಿಯನ್ನು ನಿಯಂತ್ರಿಸಲು ಅವಕಾಶ ಮಾಡಿಕೊಟ್ಟಂತಾಯಿತು. ನಿರ್ಣಾಯಕ ಹೋರಾಟಕ್ಕೆ ದೇಶಕ್ಕೆ ದೊರೆತಿದ್ದ ಅತ್ಯುತ್ತಮ ಅವಕಾಶವನ್ನು ಕಾಂಗ್ರೆಸ್ ಹಾಳು ಮಾಡಿತು” ಎಂದು ಗೊಗೊಯ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಈ ವರ್ಷ ಅಸ್ಸಾಂನ ಶಿವಸಾಗರ ವಿಧಾನಸಭಾ ಕ್ಷೇತ್ರದಿಂದ ಎರಡನೇ ಬಾರಿಗೆ ಆಯ್ಕೆಯಾಗಿರುವ ಗೊಗೊಯ್, 2029ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕಾದರೆ ಸ್ವತಂತ್ರ ಜನಾಂದೋಲನಕ್ಕೆ ವಿಪಕ್ಷಗಳು ಬೆಂಬಲ ನೀಡುವುದು ಅನಿವಾರ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ. ಸಿಜೆಪಿ ಅಥವಾ ಅದರ ನಾಯಕರ ಬಗ್ಗೆ ಕಾಂಗ್ರೆಸ್‌ಗೆ ಭಿನ್ನಾಭಿಪ್ರಾಯಗಳಿದ್ದರೂ, ಅಂತಹ ಜನಾಂದೋಲನದ ಹಿಂದೆ ವಿಪಕ್ಷಗಳನ್ನು ಒಗ್ಗೂಡಿಸುವ ಜವಾಬ್ದಾರಿಯನ್ನು ರಾಹುಲ್ ಗಾಂಧಿ ವಹಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪ್ರಾದೇಶಿಕ ಪಕ್ಷಗಳನ್ನೇ ಗುರಿಯಾಗಿಸಿಕೊಂಡಿದೆ
ಯೋಗೇಂದ್ರ ಯಾದವ್ ಅವರಿಗೆ ಬರೆದ ಪ್ರತ್ಯೇಕ ಪತ್ರದಲ್ಲಿಯೂ ಗೊಗೊಯ್ ಕಾಂಗ್ರೆಸ್ ವಿರುದ್ಧ ಇದೇ ರೀತಿಯ ಆರೋಪ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷವು ಬಿಜೆಪಿಗಿಂತ ಹೆಚ್ಚಾಗಿ ಪ್ರಾದೇಶಿಕ ಪಕ್ಷಗಳು ಮತ್ತು ನೈಜ ಜನಾಂದೋಲನಗಳನ್ನೇ ತನ್ನ ಪ್ರಮುಖ ಎದುರಾಳಿಗಳೆಂದು ಪರಿಗಣಿಸುತ್ತಿದೆ ಎಂದು ಹೇಳಿದ್ದಾರೆ.
“ಕಾಂಗ್ರೆಸ್ ಪಕ್ಷವು ಬಿಜೆಪಿಗಿಂತ ಪ್ರಾದೇಶಿಕ ಪಕ್ಷಗಳು ಮತ್ತು ನೈಜ ಜನಾಂದೋಲನಗಳನ್ನೇ ತನ್ನ ಪ್ರಮುಖ ಶತ್ರುಗಳೆಂದು ನೋಡುತ್ತಿದೆ ಎಂಬುದು ದಿನದಿಂದ ದಿನಕ್ಕೆ ಸ್ಪಷ್ಟವಾಗುತ್ತಿದೆ. ಕಾಂಗ್ರೆಸ್ ಬಿಜೆಪಿಯನ್ನು ತನ್ನ ಸೈದ್ಧಾಂತಿಕ ಎದುರಾಳಿ ಎಂದು ಬಿಂಬಿಸಿಕೊಳ್ಳುತ್ತದೆ. ಆದರೆ, ಮತ್ತೊಂದೆಡೆ ಪ್ರಾದೇಶಿಕ ಮೈತ್ರಿಕೂಟದ ಪಕ್ಷಗಳು ಮತ್ತು ಸ್ವತಂತ್ರವಾಗಿ ಜನಮಟ್ಟದಲ್ಲಿ ನಡೆಯುವ ಹೋರಾಟಗಳನ್ನು ದುರ್ಬಲಗೊಳಿಸಲು ಅದು ನಿರಂತರವಾಗಿ ಪ್ರಯತ್ನಿಸುತ್ತದೆ” ಎಂದು ಪತ್ರದಲ್ಲಿ ಆರೋಪಿಸಿದ್ದಾರೆ.

ಪ್ರಮುಖ ಸುದ್ದಿ :-   ಅಪ್ಪ-ಅಮ್ಮ ಮೊದಲ ಸಲ ಭೇಟಿಯಾಗಿದ್ದ ರೆಸ್ಟೋರೆಂಟ್‌ಗೆ ಗರ್ಲ್‌ಪ್ರೆಂಡ್‌ ಜೊತೆ ಹೋಗಿದ್ದರ ಬಗ್ಗೆ ಹೇಳಿದ ರಾಹುಲ್ ಗಾಂಧಿ

ಸೆಪ್ಟೆಂಬರ್ 3ರಂದು ಅಸ್ಸಾಂ ಕಾಂಗ್ರೆಸ್, ರೈಜೋರ್ ದಳದ ಜೊತೆಗಿನ ಎಲ್ಲ ರಾಜಕೀಯ ಸಂಬಂಧಗಳನ್ನು ಕಡಿದುಕೊಳ್ಳುವುದಾಗಿ ಘೋಷಿಸಿತ್ತು. ಮೈತ್ರಿಕೂಟದ ನೈತಿಕ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬ ಕಾರಣವನ್ನು ನೀಡಿದ್ದ ಕಾಂಗ್ರೆಸ್, ತನ್ನ ಪಕ್ಷದ ನಾಯಕರ ವಿರುದ್ಧ ಅಪಪ್ರಚಾರ ಮಾಡಿರುವುದಲ್ಲದೆ, ಮೈತ್ರಿಕೂಟದ ಇತರ ಪಕ್ಷಗಳ ನಾಯಕರ ಬಗ್ಗೆಯೂ ರೈಜೋರ್ ದಳದ ನಾಯಕರು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿತ್ತು.
ಅಸ್ಸಾಂನಲ್ಲಿ ಏಪ್ರಿಲ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆಗೆ ಸುಮಾರು ಮೂರು ವಾರಗಳ ಮೊದಲು ಕಾಂಗ್ರೆಸ್ ಮತ್ತು ರೈಜೋರ್ ದಳದ ನಡುವೆ ಕ್ಷೇತ್ರ ಹಂಚಿಕೆ ಒಪ್ಪಂದವಾಗಿತ್ತು. ರೈಜೋರ್ ದಳ ಸ್ಪರ್ಧಿಸಿದ್ದ 13 ಕ್ಷೇತ್ರಗಳ ಪೈಕಿ ಧಿಂಗ್ ಮತ್ತು ಶಿವಸಾಗರ ಸೇರಿದಂತೆ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಕಾಂಗ್ರೆಸ್ 19 ಸ್ಥಾನಗಳನ್ನು ಗೆದ್ದಿದ್ದರೆ, 126 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 102 ಸ್ಥಾನಗಳನ್ನು ಪಡೆದುಕೊಂಡಿತ್ತು.

ರಾಮಲೀಲಾ ಮೈದಾನದ ಪ್ರತಿಭಟನೆ ಐತಿಹಾಸಿಕ ಪ್ರಮಾದ
ನವೆಂಬರ್ 1ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಇಂಡಿಯಾ ಮೈತ್ರಿಕೂಟದ ಪ್ರತಿಭಟನಾ ರ‍್ಯಾಲಿಯ ಬಗ್ಗೆಯೂ ಗೊಗೊಯ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಗೆ ಸಂಬಂಧಿಸಿದಂತೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ಅವರನ್ನು ಹುದ್ದೆಯಿಂದ ತೆಗೆದುಹಾಕಬೇಕೆಂದು ಒತ್ತಾಯಿಸಿ ವಿಪಕ್ಷಗಳು ಈ ರ‍್ಯಾಲಿ ನಡೆಸಿದ್ದವು.
ಈ ರ‍್ಯಾಲಿಯನ್ನು “ಐತಿಹಾಸಿಕ ಪ್ರಮಾದ” ಎಂದು ಬಣ್ಣಿಸಿರುವ ಗೊಗೊಯ್, ಯೋಗೇಂದ್ರ ಯಾದವ್, ಅಖಿಲ ಭಾರತ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ನೇಹಾ ಬೋರಾ ಹಾಗೂ ಎಡಪಕ್ಷಗಳ ನಾಯಕರು ಕಾಂಗ್ರೆಸ್‌ನ ಕೈಗೊಂಬೆಗಳಾಗಿ ಬಳಕೆಯಾಗಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ಅವರ ರಾಜೀನಾಮೆಗೆ ಒತ್ತಾಯಿಸಿ ಕಾಕ್ರೋಚ್ ಜನತಾ ಪಾರ್ಟಿ ಪ್ರತ್ಯೇಕವಾಗಿ ಅಭಿಯಾನ ನಡೆಸುತ್ತಿತ್ತು. ಸಿಜೆಪಿಯ ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ರಾಮಲೀಲಾ ಮೈದಾನದ ರ‍್ಯಾಲಿಗೆ ಬೆಂಬಲ ವ್ಯಕ್ತಪಡಿಸಿದ್ದರೂ, ತಮ್ಮ ಸಂಘಟನೆಯ ಸ್ವತಂತ್ರ ಅಸ್ತಿತ್ವವನ್ನು ಉಳಿಸಿಕೊಳ್ಳುವ ಉದ್ದೇಶದಿಂದ ರ‍್ಯಾಲಿಯಿಂದ ದೂರ ಉಳಿಯುವುದಾಗಿ ತಿಳಿಸಿದ್ದರು.
“ವ್ಯಾಪಕವಾದ ವಿಪಕ್ಷಗಳ ಮೈತ್ರಿಕೂಟದಲ್ಲಿ ಕಾಂಗ್ರೆಸ್ ಅನ್ನು ಸಮಾನ ಪಾಲುದಾರನಾಗಿ ಮಾತ್ರ ಜನರು ಒಪ್ಪಿಕೊಳ್ಳುತ್ತಾರೆ. ಇಡೀ ಮೈತ್ರಿಕೂಟದ ಮೇಲೆ ಪ್ರಾಬಲ್ಯ ಸಾಧಿಸುವ ಪಕ್ಷವಾಗಿ ಕಾಂಗ್ರೆಸ್ ಅನ್ನು ಒಪ್ಪಿಕೊಳ್ಳುವುದಿಲ್ಲ” ಎಂದು ಗೊಗೊಯ್ ಯೋಗೇಂದ್ರ ಯಾದವ್ ಅವರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.
ರಾಹುಲ್ ಗಾಂಧಿಯವರನ್ನು ಮಾತ್ರ ಮುಂದಿನ ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸುವುದರಲ್ಲೇ ಕಾಂಗ್ರೆಸ್ ಹೆಚ್ಚು ಆಸಕ್ತಿ ಹೊಂದಿದೆ ಎಂದೂ ಅವರು ಟೀಕಿಸಿದ್ದಾರೆ.

ಪ್ರಮುಖ ಸುದ್ದಿ :-   ಐಪಿಎಲ್‌ 2027 ಆಟಗಾರರ ರಿಟೆನ್ಷನ್‌: ಎಲ್ಲ ತಂಡಗಳು ಉಳಿಸಿಕೊಂಡ ಆಟಗಾರರ ಪಟ್ಟಿ

ಕ್ಷೇತ್ರಗಳಲ್ಲಿ ಸಂಘಟನೆ ಬಲಪಡಿಸಲು ಕಾಂಗ್ರೆಸ್‌ಗೆ ಸಲಹೆ
ರಾಹುಲ್ ಗಾಂಧಿಗೆ ಬರೆದ ಪತ್ರದಲ್ಲಿ ಗೊಗೊಯ್, ಕಾಂಗ್ರೆಸ್ ನಾಯಕರು ಕ್ಷೇತ್ರಗಳಿಗೆ ಭೇಟಿ ನೀಡಿ ಪಕ್ಷದ ಸಂಘಟನೆಯನ್ನು ಬಲಪಡಿಸಬೇಕು ಎಂದು ಸಲಹೆ ನೀಡಿದ್ದಾರೆ. ಬೂತ್ ಮಟ್ಟದಲ್ಲಿ ಸಮಿತಿಗಳನ್ನು ರಚಿಸುವುದರ ಜೊತೆಗೆ ಯುವಕರ ನೇತೃತ್ವದಲ್ಲಿ ನಡೆಯುತ್ತಿರುವ ಜನಾಂದೋಲನಕ್ಕೆ ಅಗತ್ಯವಾದ ವ್ಯವಸ್ಥಾಪನಾ ಮತ್ತು ಸಂಘಟನಾತ್ಮಕ ನೆರವು ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಅಸ್ಸಾಂನಲ್ಲಿ ಒಟ್ಟು 14 ಲೋಕಸಭಾ ಕ್ಷೇತ್ರಗಳಿದ್ದು, ಕಾಂಗ್ರೆಸ್ ತನ್ನ ಸ್ವಂತ ಬಲದಿಂದ ಕನಿಷ್ಠ ಒಂದು ಅಥವಾ ಎರಡು ಕ್ಷೇತ್ರಗಳಲ್ಲಿಯೂ ಗೆಲುವು ಸಾಧಿಸುವ ಸ್ಥಿತಿಯಲ್ಲಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
“ಮೈತ್ರಿಕೂಟದ ಬಗ್ಗೆ ಕಾಂಗ್ರೆಸ್ ನಾಯಕತ್ವ ನೈಜ ಬದ್ಧತೆಯನ್ನು ಪ್ರದರ್ಶಿಸಬೇಕು. ಹಿಂದಿನ ತಪ್ಪುಗಳು ಮರುಕಳಿಸದಂತೆ ನೋಡಿಕೊಳ್ಳಲು ಮುಂದಿನ ಲೋಕಸಭಾ ಚುನಾವಣೆಗೆ ಕನಿಷ್ಠ ಒಂದು ವರ್ಷದ ಮೊದಲೇ ಮೈತ್ರಿಕೂಟದ ಪಕ್ಷಗಳೊಂದಿಗೆ ಕ್ಷೇತ್ರ ಹಂಚಿಕೆ ಒಪ್ಪಂದವನ್ನು ಅಂತಿಮಗೊಳಿಸಬೇಕು” ಎಂದು ಅವರು ಪತ್ರದಲ್ಲಿ ಸಲಹೆ ನೀಡಿದ್ದಾರೆ.

ಭೂಹಕ್ಕು ಹೋರಾಟದಿಂದ ರಾಜಕೀಯ ಪ್ರವೇಶ
ಅಖಿಲ್ ಗೊಗೊಯ್ ಅಸ್ಸಾಂನಲ್ಲಿ ಭೂಹಕ್ಕು ಮತ್ತು ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಕಾರ್ಯಕರ್ತರಾಗಿ ಗುರುತಿಸಿಕೊಂಡು ಸಾರ್ವಜನಿಕ ಜೀವನದಲ್ಲಿ ಮುನ್ನೆಲೆಗೆ ಬಂದವರು. ರೈತರ ಸಂಘಟನೆಯಾದ ಕೃಷಕ್ ಮುಕ್ತಿ ಸಂಗ್ರಾಮ ಸಮಿತಿಯನ್ನು ಸ್ಥಾಪಿಸಿದ್ದ ಅವರು, ಬೃಹತ್ ಅಣೆಕಟ್ಟುಗಳ ನಿರ್ಮಾಣದ ವಿರುದ್ಧ ನಡೆದ ಪ್ರತಿಭಟನೆಗಳ ನೇತೃತ್ವ ವಹಿಸಿದ್ದರು.
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಅಸ್ಸಾಂನಲ್ಲಿ ನಡೆದ ತೀವ್ರ ಪ್ರತಿಭಟನೆಯ ಪ್ರಮುಖ ಮುಖವಾಗಿಯೂ ಅವರು ಗುರುತಿಸಿಕೊಂಡಿದ್ದರು. ಈ ಹೋರಾಟದ ಹಿನ್ನೆಲೆಯಲ್ಲಿ 2019ರ ಡಿಸೆಂಬರ್‌ನಲ್ಲಿ ಅವರನ್ನು ಬಂಧಿಸಲಾಗಿತ್ತು. ಅವರು ಜೈಲಿನಲ್ಲಿದ್ದ ಸಂದರ್ಭದಲ್ಲೇ 2020ರಲ್ಲಿ ರೈಜೋರ್ ದಳ ಪಕ್ಷ ಸ್ಥಾಪನೆಯಾಗಿತ್ತು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement