

ನವದೆಹಲಿ: ರಾಜಸ್ಥಾನದ ವ್ಯಕ್ತಿಯೊಬ್ಬನನ್ನು ಡೇಟಿಂಗ್ ಆ್ಯಪ್ ಮೂಲಕ ಪರಿಚಯಿಸಿಕೊಂಡು, ಆತನೊಂದಿಗೆ ಮದುವೆಯಾಗುವ ಆಸೆಯಿಂದ ಭಾರತಕ್ಕೆ ಬಂದಿದ್ದ ಕೆನಡಾ ಮಹಿಳೆಯ ಕನಸಿಗೆ ವಯಸ್ಸಿನ ಅಡ್ಡಿ ಎದುರಾಗಿದೆ. ಮದುವೆಯಾಗುವುದಾಗಿ ಭರವಸೆ ನೀಡಿದ್ದ ವ್ಯಕ್ತಿ, ಮಹಿಳೆಯ ವಯಸ್ಸು ತಿಳಿದ ಬಳಿಕ ಮದುವೆಗೆ ನಿರಾಕರಿಸಿದ್ದಾನೆ ಎನ್ನಲಾಗಿದ್ದು, ಇಬ್ಬರ ನಡುವಿನ ವಿವಾದ ಕೆನಡಾ ರಾಯಭಾರ ಕಚೇರಿಯ ಮೆಟ್ಟಿಲೇರಿದೆ. ಕೊನೆಗೆ ಪೊಲೀಸರು ಮಧ್ಯಪ್ರವೇಶಿಸಿ ಮಹಿಳೆಯನ್ನು ಆರೈಕೆ ಕೇಂದ್ರಕ್ಕೆ ಸ್ಥಳಾಂತರಿಸಿದ್ದಾರೆ.
ರಾಜಸ್ಥಾನದ ನೀಮ್ರಾಣಾದಲ್ಲಿ ಈ ಘಟನೆ ನಡೆದಿದೆ. ಕೆನಡಾ ರಾಯಭಾರ ಕಚೇರಿಯಿಂದ ಬಂದ ಮಾಹಿತಿ ಆಧರಿಸಿ ನವೆಂಬರ್ 13ರಂದು ಮುಂಜಾನೆ ಸುಮಾರು 4 ಗಂಟೆಗೆ ನೀಮ್ರಾಣಾ ಪೊಲೀಸರು ಇಲ್ಲಿನ ಬಿಬಿ ಬಿಲ್ಡರ್ಸ್ ಸೊಸೈಟಿಗೆ ತೆರಳಿದ್ದರು. ಮಹಿಳೆ ಇದೇ ಸೊಸೈಟಿಯಲ್ಲಿರುವ ಫ್ಲ್ಯಾಟ್ನಲ್ಲಿ ವ್ಯಕ್ತಿಯೊಂದಿಗೆ ವಾಸವಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ನೀಮ್ರಾಣಾ ಪೊಲೀಸ್ ಠಾಣೆಯ ಠಾಣಾಧಿಕಾರಿ (ಎಸ್ಎಚ್ಒ) ಸುರೇಂದ್ರ ಯಾದವ್ ನೀಡಿರುವ ಮಾಹಿತಿ ಪ್ರಕಾರ, ಹರಿಯಾಣದ ಪಾಣಿಪತ್ ಮೂಲದ ನಿತಿನ್ ಎಂಬಾತನಿಗೆ ಸುಮಾರು ಒಂದು ವರ್ಷದ ಹಿಂದೆ ಡೇಟಿಂಗ್ ಆ್ಯಪ್ ಮೂಲಕ ಕೆನಡಾದ ಮಹಿಳೆಯ ಪರಿಚಯವಾಗಿತ್ತು. ಆರಂಭದಲ್ಲಿ ಸ್ನೇಹದಿಂದ ಆರಂಭವಾದ ಇವರ ಪರಿಚಯ ಕ್ರಮೇಣ ಪ್ರೇಮ ಸಂಬಂಧವಾಗಿ ಬೆಳೆದಿತ್ತು. ಬಳಿಕ ಇಬ್ಬರೂ ವಿವಾಹವಾಗಲು ನಿರ್ಧರಿಸಿದ್ದರು ಎನ್ನಲಾಗಿದೆ.


ಈ ಹಿನ್ನೆಲೆಯಲ್ಲಿ ಮಹಿಳೆ ನವೆಂಬರ್ 11ರಂದು ಪ್ರವಾಸಿ ವೀಸಾದಲ್ಲಿ ದೆಹಲಿಗೆ ಆಗಮಿಸಿದ್ದರು. ವಿಮಾನ ನಿಲ್ದಾಣಕ್ಕೆ ಬಂದಿದ್ದ ನಿತಿನ್, ಆಕೆಯನ್ನು ಬರಮಾಡಿಕೊಂಡು ತನ್ನ ಮಾವ ಮತ್ತು ಅತ್ತೆ ವಾಸವಿದ್ದ ನೀಮ್ರಾಣಾದ ಬಿಬಿ ಬಿಲ್ಡರ್ಸ್ ಸೊಸೈಟಿಯ ಫ್ಲ್ಯಾಟ್ಗೆ ಕರೆದೊಯ್ದಿದ್ದ. ಅಲ್ಲಿ ಇಬ್ಬರೂ ಎರಡು ದಿನಗಳ ಕಾಲ ಒಟ್ಟಿಗೆ ವಾಸವಿದ್ದರು.
ಆದರೆ, ಮದುವೆಯ ಮಾತುಕತೆ ಮುಂದುವರಿದಂತೆ ಪರಿಸ್ಥಿತಿ ಬದಲಾಗಿದೆ. ಮಹಿಳೆಗೆ ಸುಮಾರು 61 ವರ್ಷ ವಯಸ್ಸಾಗಿದೆ ಎಂಬುದು ತಿಳಿದ ಬಳಿಕ ನಿತಿನ್ ಮದುವೆಯಾಗುವ ನಿರ್ಧಾರದಿಂದ ಹಿಂದೆ ಸರಿದಿದ್ದಾನೆ ಎನ್ನಲಾಗಿದೆ. ಇದೇ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ಉಂಟಾಗಿದ್ದು, ವಿವಾದ ತೀವ್ರಗೊಂಡಿದೆ.
ಇದರಿಂದ ಅಸಮಾಧಾನಗೊಂಡ ಮಹಿಳೆ ಕೆನಡಾ ರಾಯಭಾರ ಕಚೇರಿಗೆ ದೂರು ನೀಡಿದ್ದರು. ರಾಯಭಾರ ಕಚೇರಿಯಿಂದ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಧಾವಿಸಿ, ಇಬ್ಬರನ್ನೂ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಸದ್ಯ ಮಹಿಳೆಯನ್ನು ಕೊಟ್ಪುಟ್ಲಿಯಲ್ಲಿರುವ ಆರೈಕೆ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಅಲ್ಲದೆ, ಆಕೆಯನ್ನು ಸುರಕ್ಷಿತವಾಗಿ ಮರಳಿ ಕೆನಡಾಕ್ಕೆ ಕಳುಹಿಸಿಕೊಡಲು ಪೊಲೀಸರು ಅಗತ್ಯ ವ್ಯವಸ್ಥೆಗಳನ್ನು ಮಾಡುತ್ತಿದ್ದಾರೆ.
ಈ ಪ್ರಕರಣದ ಕುರಿತು ತನಿಖೆ ಮುಂದುವರಿದಿದ್ದು, ಘಟನೆಯ ಎಲ್ಲ ಆಯಾಮಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಠಾಣಾಧಿಕಾರಿ ಸುರೇಂದ್ರ ಯಾದವ್ ತಿಳಿಸಿದ್ದಾರೆ.



ನಿಮ್ಮ ಕಾಮೆಂಟ್ ಬರೆಯಿರಿ