ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

ಪಶ್ಚಿಮ ಘಟ್ಟಗಳಲ್ಲಿ ಮೀನಿನ ಎರಡು ಹೊಸ ಪ್ರಭೇದಗಳು ಪತ್ತೆ

ಕೊಚ್ಚಿ: ಕೇರಳದ ಪಶ್ಚಿಮ ಘಟ್ಟಗಳಲ್ಲಿ ಹೊಸದಾಗಿ ಎರಡು ಸಿಹಿನೀರಿನ ಮೀನು ಪ್ರಭೇದಗಳನ್ನು ಪತ್ತೆಹಚ್ಚಲಾಗಿದೆ. ಕೇರಳ ಮೀನುಗಾರಿಕೆ ಮತ್ತು ಸಾಗರ ಅಧ್ಯಯನ ವಿಶ್ವವಿದ್ಯಾಲಯ (KUFOS) ಹಾಗೂ ನವದೆಹಲಿಯ ಶಿವ ನಾಡಾರ್ ಇನ್‌ಸ್ಟಿಟ್ಯೂಷನ್ ಆಫ್ ಎಮಿನೆನ್ಸ್‌ನ ಸಂಶೋಧಕರ ತಂಡ ಪಶ್ಚಿಮ ಘಟ್ಟಗಳಲ್ಲಿ ಹಿಂದೆ ಗುರುತಿಸದ ಎರಡು ಹೊಸ ಸಿಹಿನೀರಿನ ಮೀನು ಪ್ರಭೇದಗಳನ್ನು ಪತ್ತೆಹಚ್ಚಿದೆ.
ಈ ಮಹತ್ವದ ಸಂಶೋಧನೆಯ ವರದಿ ಶುಕ್ರವಾರ ಬ್ರಿಟನ್ ಮೂಲದ, ಮೀನು ಜೀವಶಾಸ್ತ್ರ ಮತ್ತು ಮೀನುಗಾರಿಕೆ ವಿಜ್ಞಾನ ಕ್ಷೇತ್ರದ ಜಗತ್ತಿನ ಪ್ರಮುಖ ನಿಯತಕಾಲಿಕೆಗಳಲ್ಲಿ ಒಂದಾದ ʼಜರ್ನಲ್ ಆಫ್ ಫಿಶ್ ಬಯಾಲಜಿʼಯಲ್ಲಿ ಪ್ರಕಟವಾಗಿದೆ.
ಈ ಹೊಸ ಆವಿಷ್ಕಾರದೊಂದಿಗೆ ಕಳೆದ ಹತ್ತು ವರ್ಷಗಳಲ್ಲಿಕೇರಳ ಮೀನುಗಾರಿಕೆ ಮತ್ತು ಸಾಗರ ಅಧ್ಯಯನ ವಿಶ್ವವಿದ್ಯಾಲಯದ ಸಂಶೋಧಕರ ತಂಡಗಳು ಪತ್ತೆಹಚ್ಚಿದ ಹೊಸ ಮೀನು ಮತ್ತಿತರ ಜಲಚರ ಪ್ರಭೇದಗಳ ಸಂಖ್ಯೆ 22ಕ್ಕೇರಿದೆ. ಪಶ್ಚಿಮ ಘಟ್ಟಗಳ ಪೆರಿಯಾರ್–ಏಲಕ್ಕಿ ಬೆಟ್ಟಗಳ (ಕಾರ್ಡಮಮ್ ಹಿಲ್ಸ್) ಪ್ರದೇಶದಲ್ಲಿ ಈ ಎರಡು ಹೊಸ ಮೀನು ಪ್ರಭೇದಗಳು ಪತ್ತೆಯಾಗಿರುವುದು, ಕೇರಳದ ಸಿಹಿನೀರಿನ ಪರಿಸರ ವ್ಯವಸ್ಥೆಯಲ್ಲಿರುವ ಇನ್ನೂ ಅನಾವರಣಗೊಳ್ಳದ ಜೀವವೈವಿಧ್ಯದ ಮಹತ್ವವನ್ನು ಎತ್ತಿ ತೋರಿಸಿದೆ ಎಂದು ಕೇರಳ ಮೀನುಗಾರಿಕೆ ಮತ್ತು ಸಾಗರ ಅಧ್ಯಯನ ವಿಶ್ವವಿದ್ಯಾಲಯ (KUFOS)ದ ಮೀನುಗಾರಿಕೆ ಸಂಪನ್ಮೂಲ ನಿರ್ವಹಣಾ ವಿಭಾಗದ ಸಹಾಯಕ ಪ್ರಾಧ್ಯಾಪಕ ರಾಜೀವ ರಾಘವನ್ ತಿಳಿಸಿದ್ದಾರೆ.

ಕೇರಳ ಮೀನುಗಾರಿಕೆ ಮತ್ತು ಸಾಗರ ಅಧ್ಯಯನ ವಿಶ್ವವಿದ್ಯಾಲಯದ ವಿ.ಕೆ. ಅನೂಪ್ ಮತ್ತು ರಾಜೀವ ರಾಘವನ್ ಹಾಗೂ ನವದೆಹಲಿಯ ಶಿವ ನಾಡಾರ್ ಇನ್‌ಸ್ಟಿಟ್ಯೂಷನ್ ಆಫ್ ಎಮಿನೆನ್ಸ್‌ನ ನೀಲೇಶ್ ದಹಾನುಕರ್ ನೇತೃತ್ವದ ಸಂಶೋಧಕರ ತಂಡ ಈ ಎರಡು ಹೊಸ ಮೀನು ಪ್ರಭೇದಗಳನ್ನು ಪತ್ತೆಹಚ್ಚಿದೆ.
ಈ ಸಂಶೋಧನೆಯ ಮತ್ತೊಂದು ವಿಶೇಷವೆಂದರೆ, ಹೊಸದಾಗಿ ಪತ್ತೆಯಾದ ಎರಡು ಮೀನು ಪ್ರಭೇದಗಳಿಗೆ ಸ್ಥಳೀಯ ಬುಡಕಟ್ಟು ಸಮುದಾಯ ಹಾಗೂ ಅವು ಪತ್ತೆಯಾದ ಬೆಟ್ಟಪ್ರದೇಶದ ಹೆಸರನ್ನೇ ಇಡಲಾಗಿದೆ. ಈ ಮೂಲಕ ಸಂಶೋಧಕರು ಸ್ಥಳೀಯ ಸಮುದಾಯದ ಜ್ಞಾನ ಮತ್ತು ಪ್ರದೇಶದ ನೈಸರ್ಗಿಕ ಪರಂಪರೆಗೆ ಗೌರವ ಸಲ್ಲಿಸಿದ್ದಾರೆ.
ಮನ್ನಾನ್ ಬುಡಕಟ್ಟು ಸಮುದಾಯದ ಹೆಸರಿನಲ್ಲಿ ಒಂದು ಮೀನು ಪ್ರಭೇದ
ಹೊಸದಾಗಿ ಪತ್ತೆಯಾದ ಮೊದಲ ಮೀನು ಪ್ರಭೇದಕ್ಕೆ ‘ಮೆಸೊನಿಮಾಕೈಲಸ್ ಮನ್ನಾನೊರಮ್’ (Mesonoemacheilus mannanorum) ಎಂದು ಹೆಸರಿಡಲಾಗಿದೆ. ಪೆರಿಯಾರ್–ಕಾರ್ಡಮಮ್ ಹಿಲ್ಸ್ ಪ್ರದೇಶದ ಪ್ರಮುಖ ಬುಡಕಟ್ಟು ಸಮುದಾಯಗಳಲ್ಲಿ ಒಂದಾದ ಮನ್ನಾನ್ ಸಮುದಾಯದ ಹೆಸರನ್ನು ಈ ಮೀನು ಪ್ರಭೇದಕ್ಕೆ ಇಡಲಾಗಿದೆ.
ಸ್ಥಳೀಯ ನದಿಗಳು ಮತ್ತು ಸಿಹಿನೀರಿನ ತೊರೆಗಳಲ್ಲಿ ಕಂಡುಬರುವ ಪ್ರತಿಯೊಂದು ಮೀನು ಪ್ರಭೇದಗಳ ನಡುವಿನ ವ್ಯತ್ಯಾಸವನ್ನು ಗುರುತಿಸುವ ವಿಶಿಷ್ಟ ಜ್ಞಾನವನ್ನು ಮನ್ನಾನ್ ಸಮುದಾಯದ ಜನರು ಹೊಂದಿದ್ದಾರೆ. ಅವರ ಈ ಸಾಂಪ್ರದಾಯಿಕ ಜ್ಞಾನವನ್ನು ಗೌರವಿಸುವ ಉದ್ದೇಶದಿಂದ ಅವರ ಹೆಸರನ್ನೇ ಹೊಸ ಮೀನು ಪ್ರಭೇದಕ್ಕೆ ಇಡಲಾಗಿದೆ ಎಂದು ರಾಜೀವ್ ರಾಘವನ್ ವಿವರಿಸಿದ್ದಾರೆ.

ಪ್ರಮುಖ ಸುದ್ದಿ :-   ಬಿಸ್ಲೆರಿ ನೀರು ಅಸುರಕ್ಷಿತ ; ಕಾನೂನು ಕ್ರಮಕ್ಕೆ ಎಫ್‌ಎಸ್‌ಎಸ್‌ಎಐ ಅನುಮತಿ

ಶಬರಿ ಬೆಟ್ಟದ ಹೆಸರಿನಲ್ಲಿ ಮತ್ತೊಂದು ಪ್ರಭೇದ
ಎರಡನೇ ಹೊಸ ಮೀನು ಪ್ರಭೇದಕ್ಕೆ ‘ಮೆಸೊನಿಮಾಕೈಲಸ್ ಶಬರಿಯೆನ್ಸಿಸ್’ (Mesonoemacheilus sabariensis) ಎಂದು ಹೆಸರಿಡಲಾಗಿದೆ. ಇದು ಪಂಪಾ ನದಿ ವ್ಯವಸ್ಥೆಯ ಭಾಗವಾಗಿರುವ ಅಂಗಮೂಳಿ ಸಮೀಪದ ತೊರೆಗಳಲ್ಲಿ ಪತ್ತೆಯಾಗಿದೆ. ಈ ಪ್ರದೇಶದ ಶಬರಿ ಬೆಟ್ಟಗಳ ಹೆಸರನ್ನೇ ಈ ಮೀನು ಪ್ರಭೇದಕ್ಕೆ ಇಡಲಾಗಿದೆ.
ಪೆರಿಯಾರ್–ಕಾರ್ಡಮಮ್ ಹಿಲ್ಸ್ ಪ್ರದೇಶದಿಂದ ಹರಿದುಬರುವ ವಿವಿಧ ಪರ್ವತ ತೊರೆಗಳಲ್ಲಿ ಕನಿಷ್ಠ 15 ಪ್ರಭೇದಗಳ ಸಿಹಿನೀರಿನ ಮೀನುಗಳು ಸ್ಥಳೀಯವಾಗಿ ಮಾತ್ರ ಕಂಡುಬರುತ್ತವೆ. ಅಂದರೆ, ಈ ಮೀನು ಪ್ರಭೇದಗಳು ಜಗತ್ತಿನ ಬೇರೆ ಯಾವುದೇ ಪ್ರದೇಶದಲ್ಲಿ ನೈಸರ್ಗಿಕವಾಗಿ ಕಂಡುಬರುವುದಿಲ್ಲ. ಪೆರಿಯಾರ್ ಹುಲಿ ಸಂರಕ್ಷಿತ ಪ್ರದೇಶವೊಂದರಲ್ಲೇ ಇಂತಹ 10 ವಿಶಿಷ್ಟ ಮೀನು ಪ್ರಭೇದಗಳಿವೆ ಎಂದು ರಾಜೀವ ರಾಘವನ್ ತಿಳಿಸಿದ್ದಾರೆ.
ಹಿಂದೆ ಬ್ರಿಟಿಷ್ ವಿಜ್ಞಾನಿಗಳು ಈ ವಿಭಿನ್ನ ಮೀನುಗಳನ್ನು ಒಂದೇ ಪ್ರಭೇದಕ್ಕೆ ಸೇರಿದವುಗಳೆಂದು ವರ್ಗೀಕರಿಸಿದ್ದರು. ಅಂದಿನ ಕಾಲದಲ್ಲಿ ಜೀವಿಗಳ ಬಗ್ಗೆ ಆಳವಾದ ಅಧ್ಯಯನ ನಡೆಸಲು ಅಗತ್ಯವಾದ ತಾಂತ್ರಿಕ ಸೌಲಭ್ಯಗಳು ಇರಲಿಲ್ಲ. ಹೀಗಾಗಿ ಅವುಗಳ ದೇಹದ ಆಕಾರ ಮತ್ತು ಬಾಹ್ಯ ಲಕ್ಷಣಗಳನ್ನು (Morphology) ಆಧರಿಸಿಯೇ ಪ್ರಭೇದಗಳನ್ನು ಗುರುತಿಸಲಾಗುತ್ತಿತ್ತು. ಆದರೆ ಈಗಿನ ತಂತ್ರಜ್ಞಾನದಿಂದ ತಳೀಯ ಮಟ್ಟದಲ್ಲಿ (Genetic level) ವಿಶ್ಲೇಷಣೆ ನಡೆಸಿ, ಒಂದೇ ರೀತಿಯಾಗಿ ಕಾಣುವ ಮೀನುಗಳ ನಡುವಿನ ಸೂಕ್ಷ್ಮ ವ್ಯತ್ಯಾಸಗಳನ್ನೂ ಗುರುತಿಸಲು ಸಾಧ್ಯವಾಗಿದೆ ಎಂದು ಅವರು ವಿವರಿಸಿದ್ದಾರೆ.

ಪ್ರಮುಖ ಸುದ್ದಿ :-   ರಸ್ತೆಬದಿಯಲ್ಲಿದ್ದ 7 ಹಸಿದ ನಾಯಿ ಮರಿಗಳಿಗೆ ಹಾಲುಣಿಸಿದ ಗೋವು: ವಿಡಿಯೋ ವೈರಲ್‌

ಅಳಿವಿನಂಚಿನ ಅಪಾಯದಲ್ಲಿರುವ ಹೊಸ ಮೀನು ಪ್ರಭೇದಗಳು
ಸಂಶೋಧನಾ ವರದಿಯ ಪ್ರಕಾರ, ಈ ಎರಡೂ ಹೊಸ ಮೀನು ಪ್ರಭೇದಗಳ ವ್ಯಾಪ್ತಿ ಅತ್ಯಂತ ಸೀಮಿತವಾಗಿದೆ. ಪೆರಿಯಾರ್ ಮತ್ತು ಪಂಪಾ ನದಿಗಳ ಮೇಲ್ಭಾಗದ ಸಣ್ಣ ಉಪನದಿಗಳು ಹಾಗೂ ತೊರೆಗಳಲ್ಲಿ ಮಾತ್ರ ಇವು ಕಂಡುಬರುತ್ತವೆ. ಈ ಮೀನುಗಳ ಆವಾಸಸ್ಥಾನಗಳಿಗೆ ಹೊರಗಿನಿಂದ ಪರಿಚಯಿಸಲಾದ ಅನ್ಯ ಮೀನು ಪ್ರಭೇದಗಳಿಂದ (Alien fish species) ಅಪಾಯ ಎದುರಾಗಿದೆ. ಇಂತಹ ಅನ್ಯ ಮೀನುಗಳ ಉಪಸ್ಥಿತಿಯು ಸ್ಥಳೀಯ ಮೀನುಗಳ ಉಳಿವಿಗೆ ಧಕ್ಕೆ ಉಂಟುಮಾಡುತ್ತಿದ್ದು, ಅವುಗಳ ಅಳಿವಿನ ಸಾಧ್ಯತೆಯನ್ನೂ ಹೆಚ್ಚಿಸಿದೆ.
ಈ ಮೀನುಗಳ ವಾಸಸ್ಥಳದ ಸೀಮಿತ ವ್ಯಾಪ್ತಿ ಹಾಗೂ ಅವು ಎದುರಿಸುತ್ತಿರುವ ಅಪಾಯಗಳನ್ನು ಪರಿಗಣಿಸಿದರೆ, ‘ಮೆಸೊನಿಮಾಕೈಲಸ್ ಮನ್ನಾನೊರಮ್’ ಮತ್ತು ‘ಮೆಸೊನಿಮಾಕೈಲಸ್ ಶಬರಿಯೆನ್ಸಿಸ್’ ಪ್ರಭೇದಗಳು ಪ್ರಕೃತಿ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಗಾಗಿ ಇರುವ ಅಂತಾರಾಷ್ಟ್ರೀಯ ಒಕ್ಕೂಟದ (IUCN) ಕೆಂಪು ಪಟ್ಟಿಯಲ್ಲಿ ಅಳಿವಿನಂಚಿನಲ್ಲಿರುವ ಪ್ರಭೇದಗಳ (Endangered) ವರ್ಗಕ್ಕೆ ಸೇರುವ ಸಾಧ್ಯತೆಯಿದೆ ಎಂದು ಸಂಶೋಧನಾ ವರದಿ ಹೇಳಿದೆ.
ಪಶ್ಚಿಮ ಘಟ್ಟಗಳ ಸಿಹಿನೀರಿನ ಪರಿಸರ ವ್ಯವಸ್ಥೆಯಲ್ಲಿ ಇನ್ನೂ ಅನೇಕ ಜೀವಿಗಳು ವೈಜ್ಞಾನಿಕವಾಗಿ ಗುರುತಿಸಲ್ಪಡದೆ ಉಳಿದಿವೆ ಎಂಬುದಕ್ಕೆ ಈ ಎರಡು ಹೊಸ ಮೀನು ಪ್ರಭೇದಗಳ ಆವಿಷ್ಕಾರ ಮತ್ತೊಂದು ಮಹತ್ವದ ಸಾಕ್ಷಿಯಾಗಿದೆ. ಸ್ಥಳೀಯ ಬುಡಕಟ್ಟು ಸಮುದಾಯಗಳ ಸಾಂಪ್ರದಾಯಿಕ ಜ್ಞಾನ, ಆಧುನಿಕ ತಳೀಯ ಸಂಶೋಧನೆ ಮತ್ತು ಜೀವವೈವಿಧ್ಯ ಅಧ್ಯಯನಗಳು ಒಂದಾಗಿ ಕಾರ್ಯನಿರ್ವಹಿಸಿದಾಗ ಪ್ರಕೃತಿಯಲ್ಲಿರುವ ಇಂತಹ ಅಪರೂಪದ ಸಂಪತ್ತು ಜಗತ್ತಿಗೆ ಪರಿಚಯವಾಗಲು ಸಾಧ್ಯ ಎಂಬುದನ್ನೂ ಈ ಸಂಶೋಧನೆ ತೋರಿಸಿಕೊಟ್ಟಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement