ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

ಪೊಲೀಸರ ಎಡವಟ್ಟು : ಸುಪ್ರೀಂಕೋರ್ಟ್ ನ್ಯಾಯಮೂರ್ತಿಯ ಬದಲು ಓವೈಸಿಗೆ ಗಾರ್ಡ್ ಆಫ್ ಆನರ್ ! ತನಿಖೆ ಆದೇಶ

ಸಹರಾನ್‌ಪುರ: ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಶನಿವಾರ ಪೊಲೀಸರ ಪ್ರೋಟೋಕಾಲ್ ಎಡವಟ್ಟೊಂದು ನಡೆದಿದ್ದು, ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಯೊಬ್ಬರಿಗೆ ನೀಡಬೇಕಿದ್ದ ಗೌರವ ವಂದನೆಯನ್ನು ಎಐಎಂಐಎಂ (AIMIM) ಮುಖ್ಯಸ್ಥ, ಸಂಸದ ಅಸಾದುದ್ದೀನ್ ಓವೈಸಿಗೆ ನೀಡಲಾಗಿದೆ. ಈ ಘಟನೆ ಪೊಲೀಸರನ್ನು ಮುಜುಗರಕ್ಕೀಡು ಮಾಡಿದ್ದು, ಇದೀಗ ಪ್ರಕರಣದ ಕುರಿತು ತನಿಖೆಗೆ ಆದೇಶಿಸಲಾಗಿದೆ.
ಸಹರಾನ್‌ಪುರದ ಸರ್ಕ್ಯೂಟ್ ಹೌಸ್‌ನಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯೊಬ್ಬರ ಆಗಮಿಸುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರು ಗೌರವ ವಂದನೆ ಸಲ್ಲಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ನ್ಯಾಯಮೂರ್ತಿಗಳು ಸ್ಥಳಕ್ಕೆ ಆಗಮಿಸುವ ಮೊದಲೇ ಅಸಾದುದ್ದೀನ್ ಓವೈಸಿ ತಮ್ಮ ಭದ್ರತಾ ಸಿಬ್ಬಂದಿಯೊಂದಿಗೆ ಸರ್ಕ್ಯೂಟ್ ಹೌಸ್‌ಗೆ ಬಂದಿದ್ದಾರೆ. ಈ ವೇಳೆ ಕರ್ತವ್ಯದಲ್ಲಿದ್ದ ಪೊಲೀಸರು ಓವೈಸಿಯವರನ್ನೇ ನ್ಯಾಯಮೂರ್ತಿಯೆಂದು ತಪ್ಪಾಗಿ ಭಾವಿಸಿ ಅವರಿಗೆ ಗೌರವ ವಂದನೆ ಸಲ್ಲಿಸಿದ್ದಾರೆ.
ಪೊಲೀಸರು ಗೌರವ ವಂದನೆ ಸಲ್ಲಿಸುತ್ತಿದ್ದಂತೆ ಓವೈಸಿ ಕೂಡ ಅಲ್ಲಿಯೇ ನಿಂತು ಅದನ್ನು ಸ್ವೀಕರಿಸಿದ್ದಾರೆ. ಬಳಿಕ ಸರ್ಕ್ಯೂಟ್ ಹೌಸ್ ಒಳಗೆ ತೆರಳಿದ್ದಾರೆ. ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ಪೊಲೀಸರ ಎಡವಟ್ಟು ಸಾರ್ವಜನಿಕರ ಗಮನ ಸೆಳೆದಿದೆ.

ಓವೈಸಿಯನ್ನೇ ನ್ಯಾಯಮೂರ್ತಿಯೆಂದು ಪೊಲೀಸರು ಭಾವಿಸಿದ್ದೇಕೆ?
ಸುಪ್ರೀಂಕೋರ್ಟ್ ನ್ಯಾಯಮೂರ್ತಿಯ ಆಗಮನದ ಹಿನ್ನೆಲೆಯಲ್ಲಿ ಬೆಳಗ್ಗೆಯೇ ಸರ್ಕ್ಯೂಟ್ ಹೌಸ್‌ಗೆ ಆಗಮಿಸಿದ್ದ ಪೊಲೀಸರು ಸ್ವಾಗತದ ಸಿದ್ಧತೆಯಲ್ಲಿದ್ದರು. ಆದರೆ, ನ್ಯಾಯಮೂರ್ತಿಗಳು ಇನ್ನೂ ಸ್ಥಳಕ್ಕೆ ಬಂದಿರಲಿಲ್ಲ. ಇದೇ ಸಂದರ್ಭದಲ್ಲಿ ಓವೈಸಿ ತಮ್ಮ ಬೆಂಗಾವಲು ವಾಹನಗಳು ಹಾಗೂ ಭದ್ರತಾ ಸಿಬ್ಬಂದಿಯೊಂದಿಗೆ ಅಲ್ಲಿಗೆ ಆಗಮಿಸಿದ್ದಾರೆ. ಅವರ ವಾಹನಗಳ ಸಾಲು ಮತ್ತು ಭದ್ರತಾ ವ್ಯವಸ್ಥೆಯನ್ನು ಕಂಡು ಗೊಂದಲಕ್ಕೊಳಗಾದ ಕರ್ತವ್ಯನಿರತ ಪೊಲೀಸರು, ನ್ಯಾಯಮೂರ್ತಿಗಳ ಬದಲಿಗೆ ಓವೈಸಿಯವರಿಗೆ ಗೌರವ ವಂದನೆ ಸಲ್ಲಿಸಿದ್ದಾರೆ ಎನ್ನಲಾಗಿದೆ.
ಈ ಘಟನೆಯನ್ನು ಸಹರಾನ್‌ಪುರ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ತನಿಖೆಗೆ ಆದೇಶಿಸಿದ್ದಾರೆ. ತನಿಖೆಯಲ್ಲಿ ಲಭ್ಯವಾಗುವ ವಾಸ್ತವಾಂಶಗಳು ಮತ್ತು ಸಾಕ್ಷ್ಯಗಳ ಆಧಾರದ ಮೇಲೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ಹೇಳಿಕೆ ನೀಡಿದೆ.
ಒಟ್ಟಿನಲ್ಲಿ, ಸಹರಾನ್‌ಪುರದಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗೆ ಸಲ್ಲಿಸಬೇಕಿದ್ದ ಗೌರವ ವಂದನೆಯನ್ನು ಅಸಾದುದ್ದೀನ್ ಓವೈಸಿಗೆ ಸಲ್ಲಿಸಿದ ಪೊಲೀಸರ ಪ್ರೋಟೋಕಾಲ್ ಎಡವಟ್ಟು ಚರ್ಚೆಗೆ ಗ್ರಾಸವಾಗಿದೆ.

ಪ್ರಮುಖ ಸುದ್ದಿ :-   ಮಕ್ಕಳ ಆಟದ ನೋಟು ನೀಡಿ ವ್ಯಾಪಾರಿಗೆ 40 ಲಕ್ಷ ರೂ. ವಂಚನೆ ; ಪ್ರತಿತಂತ್ರದಿಂದ ವಂಚಕರನ್ನೇ ಖೆಡ್ಡಾಕ್ಕೆ ಬೀಳಿಸಿದ ವ್ಯಾಪಾರಿ ಕುಟುಂಬ !

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement